ಕನ್ನಡ ಸುದ್ದಿ  /  Lifestyle  /  Home Remedies For Dark Neck

Home Remedies for Dark Neck: ಮನೆಯಲ್ಲಿರುವ ಪದಾರ್ಥಗಳಿಂದಲೇ ಕುತ್ತಿಗೆ ಸುತ್ತಲಿನ ಕಪ್ಪನ್ನು ಹೋಗಲಾಡಿಸಿ

ಕಪ್ಪು ಚರ್ಮ ಬೇಗ ತಿಳಿಯಾಗಬೇಕೆಂಬ ಆಸೆಯಿಂದ ಹೆಚ್ಚಿನ ಪ್ರಮಾಣದ ನಿಂಬೆರಸ ಬಳಸಬೇಡಿ. ಏಕೆಂದರೆ ನಿಂಬೆ ರಸವು ಬ್ಲೀಚಿಂಗ್ ಏಜೆಂಟ್ ಮತ್ತು ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಜೀವಕೋಶಗಳು, ಎಣ್ಣೆ ಮತ್ತು ಕೊಳೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಕಪ್ಪು ಕುತ್ತಿಗೆ ಸಮಸ್ಯೆಗೆ ಮನೆಮದ್ದು
ಕಪ್ಪು ಕುತ್ತಿಗೆ ಸಮಸ್ಯೆಗೆ ಮನೆಮದ್ದು

ಸುಂದರವಾಗಿ ಕಾಣಬೇಕು, ನೋಡಿದವರು ನಮ್ಮ ಸೌಂದರ್ಯವನ್ನು ಹೊಗಳಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಕೂಡಾ ಮಾಡುತ್ತಾರೆ. ಕೆಲವರು ದುಬಾರಿ ಉತ್ಪನ್ನಗಳ ಮೊರೆ ಹೋದರೆ, ಇನ್ನೂ ಕೆಲವರು ನೈಸರ್ಗಿಕ ವಿಧಾನದ ಮೂಲಕ ಅಂದವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಹಲವರು, ಮುಖಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕುತ್ತಿಗೆಗೆ ನೀಡುವುದಿಲ್ಲ.

ಕೆಲವರು ಮುಖ ತೊಳೆಯುವಾಗ ಆಗಲೀ, ಫೇಸ್‌ ಪ್ಯಾಕ್‌ ಹಚ್ಚುವಾಗ ಆಗಲೀ ಗಲ್ಲದವರೆಗೂ ಮಾತ್ರ ತೊಳೆಯುತ್ತಾರೆ. ಆದರೆ ಕತ್ತು ಹಾಗೂ ಕುತ್ತಿಗೆ ಕಡೆ ಗಮನಿಸುವುದೇ ಇಲ್ಲ. ಈ ನಿರ್ಲಕ್ಷ್ಯದಿಂದ ಬಹಳಷ್ಟು ಜನರ ಕುತ್ತಿಗೆ ಕಪ್ಪಾಗಿರುತ್ತದೆ. ಸೂರ್ಯನ ಬೆಳಕಿಗೆ ಹೋದಾಗ ಮುಖಕ್ಕೆ ಹೇಗೆ ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳುವಿರೋ, ಕುತ್ತಿಗೆ ಬಗ್ಗೆ ಕೂಡಾ ಜಾಗ್ರತೆ ವಹಿಸುವುದು ಅಷ್ಟೇ ಮುಖ್ಯ. ಹಾಗೇ ಮುಖ ತೊಳೆಯುವಾಗ, ಮೇಕಪ್‌ ಮಾಡುವಾಗ ಕೂಡಾ ಕುತ್ತಿಗೆ ಕಡೆಗೆ ಗಮನ ಹರಿಸಬೇಕು. ಒಂದು ವೇಳೆ ನಿಮ್ಮ ಕುತ್ತಿಗೆ ಕಪ್ಪಾಗಿದ್ದರೆ ನೀವು ಮನೆಯಲ್ಲೇ ದೊರೆಯುವ ಪದಾರ್ಥಗಳಿಂದ ಸಮಸ್ಯೆಯಿಂದ ಹೊರ ಬರಬಹುದು. ಕುತ್ತಿಗೆಯ ಕತ್ತನ್ನು ಹೋಗಲಾಡಿಸಲು ಸಹಾಯವಾಗುವ ಕೆಲವೊಂದು ಮನೆ ಮದ್ದುಗಳು ಇಲ್ಲಿವೆ.

ಕಾಫಿಪುಡಿ ಹಾಗೂ ಸಕ್ಕರೆ ಪ್ಯಾಕ್: ಕಾಫಿ ಪುಡಿ ಕೇವಲ ಕಾಫಿ ಮಾಡಲು ಮಾತ್ರವಲ್ಲ, ನಿಮ್ಮ ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು ಕೂಡಾ ಬಹಳ ಸಹಾಯಕಾರಿಯಾಗಿದೆ. ಒಂದು ಚಮಚ ಕಾಫಿ ಪುಡಿಗೆ ಒಂದು ಚಮಚ ಸಕ್ಕರೆ, ಒಂದು ಚಮಚ ನಿಂಬೆ ರಸ, ಒಂದು ಚಮಚ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪಾಗಿರುವ ಕುತ್ತಿಗೆಗೆ ಹಚ್ಚಿ ಮತ್ತು ಮೇಲ್ಮುಖವಾಗಿ ನಿಮ್ಮ ಬೆರಳಿನಿಂದ 5-10 ನಿಮಿಷಗಳ ಕಾಲ ಮಸಾಜ್ ಮಾಡಿ ಒಣಗಲು ಬಿಡಿ. ನಂತರ ಮೃದುವಾಗಿ ಉಜ್ಜಿ ನೀರಿನಿಂದ ತೊಳೆದು ನಂತರ ಮಾಯಿಶ್ಚರೈಸರ್‌ ಹಚ್ಚಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡಿದರೆ ಕುತ್ತಿಗೆಯ ಕಪ್ಪು ಖಂಡಿತ ಕಡಿಮೆಯಾಗುತ್ತದೆ. ಕಾಫಿ ಪುಡಿ, ಚರ್ಮಕ್ಕೆ ಉತ್ತಮ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಕುತ್ತಿಗೆಯ ಮೇಲಿನ ಸುಕ್ಕುಗಳನ್ನು ಕೂಡಾ ಹೋಗಲಾಡಿಸುತ್ತದೆ.

ಟೊಮ್ಯಾಟೋ ಹಾಗೂ ನಿಂಬೆರಸ: ಟೊಮ್ಯಾಟೋ ರಸದಲ್ಲಿ ಬ್ಲೀಚಿಂಗ್ ಗುಣಗಳಿದ್ದು ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಸ್ವಲ್ಪ ಟೊಮ್ಯಾಟೋ ರಸಕ್ಕೆ ಕೆಲವು ಹನಿ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ 5 ನಿಮಿಷ ಮಸಾಜ್‌ ಮಾಡಿ. ಒಣಗಿದ ನಂತರ, ನೀರಿನಿಂದ ತೊಳೆಯಿರಿ. ಟೊಮ್ಯಾಟೋ ಮತ್ತು ನಿಂಬೆ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಸಿ, ಕಪ್ಪಾಗಿರುವ ಚರ್ಮವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ. ಜೇನುತುಪ್ಪವು ಚರ್ಮವನ್ನು ಮೃದುಗೊಳಿಸುತ್ತದೆ.

ಆಲೂಗಡ್ಡೆ ಹಾಗೂ ನಿಂಬೆರಸ: ಆಲೂಗಡ್ಡೆಯನ್ನು ತುರಿದು ರಸ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ. ಒಣಗಿದ ನಂತರ, ನೀರಿನಿಂದ ತೊಳೆಯಿರಿ. ಆಲೂಗಡ್ಡೆ ಉತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಇದು ಕಪ್ಪು ಕುತ್ತಿಗೆಯನ್ನು ಹೋಗಲಾಡಿಸುತ್ತದೆ. ನಿಂಬೆರಸ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇತರ ಯಾವ ವಸ್ತುಗಳನ್ನು ಸೇರಿಸದೆ, ನಿಂಬೆರಸವನ್ನು ಕೂಡಾ ಕುತ್ತಿಗೆಗೆ ಹಚ್ಚಬಹುದು. ಕೆಲವು ಹನಿ ನಿಂಬೆ ರಸಕ್ಕೆ ಹತ್ತಿಯನ್ನು ಅದ್ದಿ ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ (ಡ್ಯಾಬ್‌ ಮಾಡಿ) 20 ನಿಮಿಷಗಳ ನಂತರ ತೊಳೆಯಿರಿ. ಆದರೆ ನಿಂಬೆ ರಸವನ್ನು ಹಚ್ಚಿದ ನಂತರ, ಸೂರ್ಯನ ಬೆಳಕಿಗೆ ಹೋಗಬೇಡಿ. ಹಾಗೇ ಕಪ್ಪು ಚರ್ಮ ಬೇಗ ತಿಳಿಯಾಗಬೇಕೆಂಬ ಆಸೆಯಿಂದ ಹೆಚ್ಚಿನ ಪ್ರಮಾಣದ ನಿಂಬೆರಸ ಬಳಸಬೇಡಿ. ಏಕೆಂದರೆ ನಿಂಬೆ ರಸವು ಬ್ಲೀಚಿಂಗ್ ಏಜೆಂಟ್ ಮತ್ತು ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಜೀವಕೋಶಗಳು, ಎಣ್ಣೆ ಮತ್ತು ಕೊಳೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಸೌತೆಕಾಯಿ ಸ್ಪೈಸ್‌: ಸೌತೆಕಾಯಿಯನ್ನು ತೆಳು, ಗುಂಡಗಿನ ತುಂಡುಗಳನ್ನಾಗಿ ಕತ್ತರಿಸಿ. ಇದರಿಂದ ಕುತ್ತಿಗೆಯನ್ನು 15 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ. ಸೌತೆಕಾಯಿ, ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕುತ್ತಿಗೆಯ ಮೇಲಿನ ಕಪ್ಪು ಬಣ್ಣವನ್ನು ತೆಗೆದುಹಾಕುತ್ತದೆ. ಪ್ರತಿದಿನ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕುತ್ತಿಗೆ ಕಪ್ಪು ತೊಲಗಿ ಚರ್ಮ ತಿಳಿಯಾಗುತ್ತದೆ.

ಹಾಲಿನ ಕೆನೆ: ಹಾಲಿನ ಕೆನೆ ಕೂಡಾ ಕುತ್ತಿಗೆ ಕಪ್ಪನ್ನು ಹೋಗಲಾಡಿಸುತ್ತದೆ. ಹಾಲಿನ ಕೆನೆಗೆ ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ. 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈ ಮಿಶ್ರಣಕ್ಕೆ ಸ್ವಲ್ಪ ಕಡ್ಲೆಹಿಟ್ಟನ್ನು ಕೂಡಾ ಸೇರಿಸಬಹುದು.

ಇಲ್ಲಿ ತಿಳಿಸಿದ ಯಾವುದೇ ರೆಮಿಡಿಯನ್ನು ನೀವು ಪ್ರಯತ್ನಿಸಬಹುದು. ಆದರೆ ಎಲ್ಲವೂ ದಿನಬೆಳಗಾಗುವುದರಲ್ಲಿ ಸರಿ ಆಗುವುದಿಲ್ಲ. ಸಮಸ್ಯೆ ಪರಿಹಾರಕ್ಕೆ ಒಂದೆರಡು ತಿಂಗಳು ಕಾಯಲೇಬೇಕು.

ವಿಭಾಗ