Home Remedies: ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಪರಿಣಾಮಕಾರಿ ಮನೆಮದ್ದುಗಳಿವು; ನೀವೂ ಇದನ್ನು ಬಳಸುತ್ತೀರಾ?
ಕನ್ನಡ ಸುದ್ದಿ  /  ಜೀವನಶೈಲಿ  /  Home Remedies: ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಪರಿಣಾಮಕಾರಿ ಮನೆಮದ್ದುಗಳಿವು; ನೀವೂ ಇದನ್ನು ಬಳಸುತ್ತೀರಾ?

Home Remedies: ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಪರಿಣಾಮಕಾರಿ ಮನೆಮದ್ದುಗಳಿವು; ನೀವೂ ಇದನ್ನು ಬಳಸುತ್ತೀರಾ?

Home Remedies: ವೈದ್ಯಕೀಯ ವಿಜ್ಞಾನ ಇಷ್ಟೆಲ್ಲ ಅಭಿವೃದ್ಧಿ ಹೊಂದುವುದಕ್ಕಿಂತಲೂ ಮುಂಚೆ ಜನರು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದುಗಳ ರೂಪದಲ್ಲಿಯೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಕೆಲವು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು
ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು (PC: unsplash)

Home Remedies: ಗಾಯವಾದರೆ ಸಾಕು ಡೆಟಾಲ್‌ನಿಂದ ಗಾಯವನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ನಮ್ಮ ಬಾಲ್ಯದಲ್ಲಿ ಹೀಗಿರಲಿಲ್ಲ. ಗಾಯವನ್ನು ಗುಣಪಡಿಸಬೇಕು ಎಂದು ನಿಮ್ಮ ತಾಯಿ ನಿಮಗೆ ಗಾಯವಾದ ಜಾಗದಲ್ಲಿ ಅರಿಶಿಣ ಪುಡಿ ಹಚ್ಚುತ್ತಾ ಇದ್ದದ್ದು ನಿಮಗೆ ನೆನಪಿದ್ದಿರಬಹುದು.

ಶೀತವಾದಾಗ ತುಳಸಿ, ಶುಂಠಿ ಹಾಗೂ ಜೇನುತುಪ್ಪವನ್ನು ನೀಡುತ್ತಿದ್ದುದು ನೆನಪುಂಟೇ...? ಇಂಥಾ ಔಷಧಿಗಳನ್ನು ಬಳಕೆ ಮಾಡಿ ಬಹುಷಃ ವರ್ಷಗಳೇ ಉರುಳಿರಬಹುದು. ಈಗ ವೈದ್ಯಕೀಯ ವಿಜ್ಞಾನ ಮುಂದುವರಿದಿದೆ. ಎಲ್ಲದಕ್ಕೂ ಔಷಧಿ ಸಿಗುತ್ತದೆ. ಆದರೆ ಇಂದಿಗೂ ಅನೇಕ ಮನೆಗಳಲ್ಲಿ ಯಾರಿಗಾದರೂ ಜ್ವರ ಬಂದಾಗ ಸೀದಾ ಮಾತ್ರೆ ನುಂಗುವ ಮೊದಲು ಪ್ರಾಚೀನ ಕಾಲದ ನೈಸರ್ಗಿಕ ಮದ್ದುಗಳ ಮೂಲಕವೇ ಅದನ್ನು ವಾಸಿಮಾಡಲು ಯತ್ನಿಸುವವರಿದ್ದಾರೆ.

ಸಾಕಷ್ಟು ಕಾಯಿಲೆಗಳಿಗೆ ತರಹೇವಾರು ರೀತಿಯ ಮನೆಮದ್ದುಗಳಿವೆ. ಇವುಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಕೂಡ..! ಅಂತಹ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ

ಸುಟ್ಟ ಗಾಯಗಳಿಗೆ ಅಲೋವೆರಾ

ತೀರಾ ಗಂಭೀರವಲ್ಲದ ಸುಟ್ಟ ಗಾಯಗಳಿಗೆ ಪರ್ಯಾಯ ಚಿಕಿತ್ಸೆಯ ರೂಪದಲ್ಲಿ ಅಲೋವೆರಾ ಬಳಕೆ ಮಾಡಬಹುದು ಎಂಬುದನ್ನು ಅಧ್ಯಯನಗಳೇ ತಿಳಿಸಿವೆ. ಆದರೆ ಸುಟ್ಟ ಗಾಯಗಳ ಮೇಲೆ ನೀವು ಲೇಪಿಸಿಕೊಳ್ಳುವ ಅಲೊವೆರಾ ಪರಿಶುದ್ಧವಾಗಿದೆಯೇ ಎಂಬುದನ್ನು ನೀವು ಮೊದಲು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿಯೇ ಅಲೋವೆರಾ ಗಿಡಗಳಿದ್ದರೆ ತುಂಬಾನೇ ಒಳ್ಳೆಯದು. ಇದರಿಂದ ಜೆಲ್‌ ಹೊರತೆಗೆದು ಸುಟ್ಟ ಗಾಯಕ್ಕೆ ಅಲೋವೆರಾ ಲೇಪಿಸಿಕೊಳ್ಳಬೇಕು. ಆದರೆ ಗಾಯ ತುಂಬಾ ಗಾಢವಾಗಿದ್ದರೆ ನೀವು ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳುವುದು ಅಗತ್ಯ.

ಅತಿಸಾರ ಸಮಸ್ಯೆಗೆ ಬಾಳೆಹಣ್ಣು

ಬಾಳೆಹಣ್ಣನ್ನು ಸೇವಿಸುವುದರಿಂದ ಅತಿಸಾರ ಸಮಸ್ಯೆಗೆ ನೈಸರ್ಗಿಕವಾಗಿ ನೀವು ಪರಿಹಾರ ಕಂಡುಕೊಳ್ಳಬಹುದಾಗಿದೆ. ಬಾಳೆಹಣ್ಣಿನಲ್ಲಿರುವ ಅಮೈಲೇಸ್ ನಿರೋಧಕ ಹಾಗೂ ಪಿಷ್ಠ ಮತ್ತು ಪೊಟ್ಯಾಷಿಯಂ ಅಂಶವನ್ನು ಹೊಂದಿರುದರಿಂದ ಅತಿಸಾರದಿಂದ ಪರಿಹಾರ ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.

ಸೈನಸ್ ಸಮಸ್ಯೆಗೆ ನೀಲಗಿರಿ ಎಣ್ಣೆ

ಸೈನಸ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸ್ವಲ್ಪ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಇದನ್ನು ಕುದಿಸಿ. ಈಗ ನಿಮ್ಮ ಮುಖವನ್ನು ಬೆಡ್‌ಶೀಟ್‌ ನಿಂದ ಮುಚ್ಚಿಕೊಂಡು ಇದರ ಗಾಳಿಯನ್ನು ಉಸಿರಾಡಿ. ನೀಲಗಿರಿ ಎಣ್ಣೆಯಲ್ಲಿ ಉಸಿರಾಡಿದಂತೆಲ್ಲಾ ನೀವು ಸೈನಸ್ ಸಮಸ್ಯೆಯಿಂದ ನಿರಾಳತೆಯನ್ನು ಅನುಭವಿಸಲಿದ್ದೀರಿ.

ಹಲ್ಲು ನೋವಿಗೆ ಲವಂಗ ಎಣ್ಣೆ

ಲವಂಗ ಎಣ್ಣೆಯು ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಶತ ಶತಮಾನಗಳಿಂದ ಹಲ್ಲು ಹಾಗೂ ವಸಡುಗಳಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರದ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಲವಂಗದಲ್ಲಿ ನೈಸರ್ಗಿಕ ಅರವಳಿಕೆ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹೀಗಾಗಿ ಹಲ್ಲು ನೋವು ಉಂಟಾದ ಜಾಗದಲ್ಲಿ ಲವಂಗ ಎಣ್ಣೆಯನ್ನು ಹಾಕುವುದರಿಂದ ನಿಮಗೆ ನೋವಿನಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಆದರೆ ಇದನ್ನೇ ಶಾಶ್ವತ ಪರಿಹಾರ ಎಂದುಕೊಳ್ಳಬಾರದು. ಹಲ್ಲು ನೋವಿಗೆ ಶೀಘ್ರ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ಮಲಬದ್ಧತೆ ಸಮಸ್ಯೆಗೆ ಅಗಸೆ ಬೀಜ

ಅಗಸೆ ಬೀಜದಲ್ಲಿ ಫೈಬರ್ ಅಂಶ ಅತಿಯಾಗಿದ್ದು ಇವುಗಳು ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ನೀಡುತ್ತದೆ. ಇದು ಕರುಳಿನ ಆರೋಗ್ಯವನ್ನು ಕಾಪಾಡುವ ಜೊತೆಯಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪ್ರತಿದಿನ 1 ರಿಂದ 4 ಚಮಚ ಅಗಸೆ ಬೀಜವನ್ನು ಸೇವಿಸಿದರೆ ಕರುಳಿನ ಆರೋಗ್ಯ ಸುಧಾರಿಸಲಿದೆ ಎಂದು ಅಧ್ಯಯನಗಳು ತಿಳಿಸಿವೆ.

ಕಣ್ಣಿಗೆ ಸೌತೆಕಾಯಿ

ಸೌತೆಕಾಯಿಯು ಕಪ್ಪು ವರ್ತುಲಗಳನ್ನು ತೆಗೆಯಲು ಸಹಾಯ ಮಾಡುತ್ತದೆ ಎಂಬ ವಿಚಾರದ ಬಗ್ಗೆ ಈಗಲೂ ಪರ ವಿರೋಧದ ಚರ್ಚೆಯಿದೆ. ಆದರೆ ಸೌತೆಕಾಯಿಯು ಖಂಡಿತವಾಗಿಯೂ ಕಣ್ಣಿನ ಆಯಾಸಕ್ಕಂತೂ ಪರಿಹಾರ ನೀಡುತ್ತದೆ. ಸೌತೆಕಾಯಿಯಲ್ಲಿ ಆಂಟಿಆಕ್ಸಿಡಂಟ್ ಗುಣಗಳಿವೆ,. ಸೌತೆಕಾಯಿಯು ಕಣ್ಣಿನ ನೋವು ಹಾಗೂ ಊತವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಪ್ರತಿದಿನ 15 ನಿಮಿಷಗಳ ಕಾಲ ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ನಿಜಕ್ಕೂ ಆರಾಮದಾಯಕ ಎನಿಸಲಿದೆ.

ದೇಹದ ದುರ್ಗಂಧ ಹೋಗಲಾಡಿಸಲು ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆಯು ಆಹ್ಲಾದಕಾರ ಸುವಾಸನೆ ಹೊಂದಿರುತ್ತದೆ. ಇದು ಮಾತ್ರವಲ್ಲ ಲ್ಯಾವೆಂಡರ್ ಎಣ್ಣೆಗಳಲ್ಲಿ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುವಂತಹ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುತ್ತದೆ. ಮಲಗುವ ಮುನ್ನ ನಿಮ್ಮ ಪಾದಗಳಿಗೆ ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಲ್ಯಾವೆಂಡರ್ ಎಣ್ಣೆಯು ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಪರಿಣಾಮಕಾರಿಯಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಗಾಯಗಳಿಗೆ ಜೇನುತುಪ್ಪ

ಜೇನುತುಪ್ಪವು ಆಂಟಿ ಆಕ್ಸಿಡಂಟ್ , ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಗಾಯಗಳನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಧುಮೇಹಿಗಳಲ್ಲಿ ಕಾಣಿಸುವ ಹುಣ್ಣುಗಳು, ಸುಟ್ಟ ಗಾಯಗಳು ಹಾಗೂ ಶಸ್ತ್ರಚಿಕಿತ್ಸೆಯ ಗಾಯಗಳು ಸೇರಿದಂತೆ ವಿವಿಧ ರೀತಿಯ ಗಾಯಗಳಿಗೆ ತ್ವರಿತ ಹಾಗೂ ಸುಧಾರಿತ ಪರಿಹಾರವನ್ನು ನೀಡುತ್ತದೆ.

Whats_app_banner