Cleaning Tips: ಮನೆಯಲ್ಲಿ ಧೂಳಿನ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಧೂಳು ಬರದಂತೆ ತಡೆಯಲು ಇಲ್ಲಿದೆ 15 ಸಿಂಪಲ್ ಟಿಪ್ಸ್
ಬೇಸಿಗೆ ಆರಂಭವಾದಾಕ್ಷಣ ಧೂಳು ಹೆಚ್ಚುವುದು ಸಹಜ. ನಿಮ್ಮ ಮನೆಯಲ್ಲೂ ಧೂಳಿನ ಸಮಸ್ಯೆ ಕಾಡ್ತಿದ್ಯಾ? ಇದು ಮನೆ-ಮಂದಿಯಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಅರ್ಲಜಿಯಂತಹ ತೊಂದರೆಗಳನ್ನು ಉಂಟು ಮಾಡ್ತಾ ಇದ್ಯಾ. ಧೂಳು ಬರದಂತೆ ತಡೆಯಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ.
ಮನೆಗೆ ಬೇಡವೆಂದರೂ ಕರೆಯದೇ ಬರುವ ಅತಿಥಿ ಧೂಳು. ಅದೆಷ್ಟು ಬಾರಿ ಸ್ವಚ್ಛ ಮಾಡಿದರೂ, ತಿರುಗಿ ಬಾರದು ಅಂದುಕೊಂಡರೂ ಮತ್ತೆ ಮತ್ತೆ ಮನೆಯ ಸಂದಿಗಳಲ್ಲಿ ಸದ್ದಿಲ್ಲದೆ ಬಂದು ಕುಳಿತು ಬಿಡುತ್ತದೆ. ಅಷ್ಟಕ್ಕೇ ಸುಮ್ಮನಿರದೆ ಅಸ್ತಮಾ, ಅಲರ್ಜಿಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಹಾಗಾದರೆ ಧೂಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಈ ಪ್ರಶ್ನೆ ನಿಮ್ಮನ್ನೂ ಕಾಡದೇ ಇರದು. ಚಿಂತಿಸಬೇಡಿ, ಸಂಪೂರ್ಣ ಧೂಳುಮುಕ್ತ ಮನೆಯನ್ನು ಹೊಂದುವುದು ಕಷ್ಟವಾದರೂ, ಈ 15 ಸಲಹೆಗಳು ಮನೆಯಲ್ಲಿರುವ ಧೂಳನ್ನು ಕಡಿಮೆ ಮಾಡಲು ನೆರವಾಗಲಿದೆ. ಅಲ್ಲದೇ ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಚಿಂತೆಯಿಲ್ಲದೆ ಉಸಿರಾಡಬಹುದು.
ಮನೆಯಲ್ಲಿ ಧೂಳನ್ನು ಕಡಿಮೆ ಮಾಡಲು ಸಲಹೆಗಳು
1. ಆಗಿಂದಾಗಲೇ ಧೂಳು ತೆಗೆಯುತ್ತಿರಿ: ಕೆಲವೊಮ್ಮೆ ಗಾಳಿಯ ಮೂಲಕ ಧೂಳು ತಾನಾಗಿಯೇ ಮನೆಯನ್ನು ಸೇರಿಕೊಳ್ಳುತ್ತದೆ, ಮತ್ತೆ ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗುವ ನಾವು ಧೂಳನ್ನು ಹೊತ್ತು ಮನೆಗೆ ವಾಪಾಸ್ಸಾಗುತ್ತೇವೆ. ಹೀಗೆ ಮನೆಯನ್ನು ಸೇರುವ ಧೂಳನ್ನು ಆಗಿಂದಾಗಲೇ ಸ್ವಚ್ಛಗೊಳಿಸುತ್ತಿರಬೇಕು. ಇಲ್ಲವಾದರೆ ಒಮ್ಮೆಲೇ ಧೂಳು ತೆಗೆಯುವ ಕೆಲಸ ಕಷ್ಟಕರವಾಗಿಬಿಡುತ್ತದೆ.
2. ವಾರಕ್ಕೆರಡು ಬಾರಿ ವ್ಯಾಕ್ಯೂಮ್ ಮಾಡಿ: ನಿಯಮಿತವಾಗಿ ಅಂದರೆ ವಾರಕ್ಕೆ ಒಂದೋ, ಎರಡೋ ಬಾರಿ ವ್ಯಾಕ್ಯೂಮ್ ಮಾಡುವುದರಿಂದ ನಿಮ್ಮ ಮನೆಯಲ್ಲಿ ತುಂಬಿಕೊಳ್ಳುವ ಧೂಳಿನ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು. ನೀವು ವೇಗವಾಗಿ ವ್ಯಾಕ್ಯೂಮ್ ಮಾಡುವುದರಿಂದ ಯಾವುದೇ ಲಾಭವಾಗದು. ಬದಲಾಗಿ ಧೂಳು ತುಂಬಿಕೊಳ್ಳುವ ಜಾಗವನ್ನು ಗಮನಿಸಿ ಆ ಪ್ರದೇಶವನ್ನು ಹಲವಾರು ಬಾರಿ ನಿಧಾನವಾಗಿ ವ್ಯಾಕ್ಯೂಮ್ ಮಾಡುವುದರಿಂದ ಧೂಳಿನ ಸಣ್ಣ ಕಣವೂ ಉಳಿದುಕೊಳ್ಳದು.
3. ಧೂಳು ತೆಗೆಯಲು ಪೊರಕೆ ಬಳಸಿ: ವಾರಕ್ಕೊಮ್ಮೆ ವ್ಯಾಕ್ಯೂಮ್ ಮಾಡುವುದು ಒಳ್ಳೆಯದು. ಆದರೂ ಎರಡನೇ ಆಯ್ಕೆಯಾಗಿ ಕಸಪೊರಕೆಯನ್ನು ಬಳಸಿಯೂ ಕೂಡ ಧೂಳನ್ನು ತೆಗೆಯಬಹುದು. ಯಾಕಂದರೆ ಅದೆಷ್ಟೇ ಶಕ್ತಿಯುತವಾದ ವ್ಯಾಕ್ಯೂಮ್ ಕ್ಲೀನರ್ ಬಳಸಿ ಧೂಳು ತೆಗೆದರೂ ಸ್ವಲ್ಪ ಪ್ರಮಾಣದ ಧೂಳು ಉಳಿಯುತ್ತದೆ. ಪೊರಕೆಯನ್ನು ಬಳಸಿ ಧೂಳು ತೆಗೆಯುವುದರಿಂದ ಸಂಧಿಗಳಲ್ಲಿ ಕೂರುವ ಧೂಳನ್ನು ಸುಲಭದಲ್ಲಿ ನಿವಾರಿಸಬಹುದು.
4. ರಗ್, ಮ್ಯಾಟ್‌ಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನವಹಿಸಿ: ನೀವು ಬಳಸುವ ರಗ್, ಮ್ಯಾಟ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಧೂಳು ತುಂಬಿಕೊಳ್ಳುತ್ತದೆ. ಆದ್ದರಿಂದ ವಾರಕ್ಕೊಮ್ಮೆ ವ್ಯಾಕ್ಯೂಮಿಂಗ್ ಮಾಡುವ ವೇಳೆ, ರಗ್ ಹಾಗೂ ಮ್ಯಾಟನ್ನೂ ಸ್ವಚ್ಛಗೊಳಿಸಬೇಕು. ಅಲ್ಲದೆ ಮ್ಯಾಟ್‌ಗಳನ್ನು ತಿಂಗಳಿಗೆ ಒಂದು ಅಥವಾ ಎರಡು ಬಾರಿಯಾದರೂ ಮನೆಯಿಂದ ಹೊರತಂದು ಧೂಳನ್ನು ತೆಗೆಯಬೇಕು, ಗಂಟೆಗಳ ಕಾಲ ಬಿಸಿಲಿನಲ್ಲಿಟ್ಟರೆ ಇನ್ನೂ ಉತ್ತಮ.
5. ಕಾರ್ಪೆಟ್ ಅನ್ನು ನೀಟಾಗಿ ಸ್ವಚ್ಛಗೊಳಿಸಿ: ಮನೆಯ ಅಂದವನ್ನು ಹೆಚ್ಚಿಸುವುದಕ್ಕಾಗಿ ನೀವು ಕಾರ್ಪೆಟ್ ಬಳಸುತ್ತಿದ್ದರೆ ವರ್ಷಕ್ಕೊಮ್ಮೆ ವೃತ್ತಿಪರರಿಂದ ಅದನ್ನು ಸ್ವಚ್ಛಗೊಳಿಸಿ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿದರೂ ಕಡಿಮೆಯೇ. ಧೂಳು ತುಂಬಿಕೊಳ್ಳುವ ಪ್ರಮುಖ ಜಾಗ ಕಾರ್ಪೆಟ್ ಆಗಿದ್ದು, ಅದನ್ನು ಎಷ್ಟು ಬಾರಿ ಶುಚಿಗೊಳಿಸಿದರೂ ಸಂಪೂರ್ಣವಾಗಿ ಶುಚಿಯಾಗದು. ಆದ್ದರಿಂದ ತಜ್ಞರನ್ನು ಕರೆಸಿ, ಅದನ್ನು ಸ್ವಚ್ಛಗೊಳಿಸುವುದು ಉತ್ತಮ ಆಯ್ಕೆ.
6. ಕಾರ್ಪೆಟ್ ಬದಲಿಸಲು ಮರೆಯಬೇಡಿ: ಕಾರ್ಪೆಟನ್ನು ಬದಲಿಸುವುದು ಸುಲಭದ ಮಾತಲ್ಲ. ಆದರೂ ನೀವು ಆರ್ಥಿಕವಾಗಿ ಸಬಲರಾಗಿದ್ದರೆ ಇಲ್ಲವೇ ಅಲರ್ಜಿಯ ಸಮಸ್ಯೆಯುಳ್ಳವರಾಗಿದ್ದರೆ, ಕಾರ್ಪೆಟ್‌ಗೆ ಬದಲಾಗಿ ಸುಲಭವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವಂತಹ ಪ್ಲೋರ್ ಅಳವಡಿಸಿಕೊಳ್ಳಿ.
7. ದಿಂಬುಗಳು ಮತ್ತು ಹಾಸಿಗೆಯನ್ನು ಸ್ವಚ್ಛಗೊಳಿಸಿ: ನೀವು ಪ್ರತಿ ರಾತ್ರಿ ನಿಮ್ಮ ಹಾಸಿಗೆಯಲ್ಲಿ ಬಹಳಷ್ಟು ಗಂಟೆಗಳ ಕಾಲ ಕಳೆಯುತ್ತೀರಿ. ಅಂದರೆ ನಿಮ್ಮ ಹಾಸಿಗೆಯು ಬೆವರು, ಚರ್ಮದ ಕೋಶಗಳು, ಕೂದಲು ಮತ್ತು ನಿಮ್ಮೊಂದಿಗೆ ಹಾಸಿಗೆಗೆ ಬರುವ ಧೂಳಿನ ಪ್ರಮಾಣವೂ ಹೆಚ್ಚಿಗೆಯೇ ಇರುತ್ತದೆ. ಆದ್ದರಿಂದ ವಾರಕ್ಕೆ ಒಮ್ಮೆಯಾದರೂ ನೀವು ದಿಂಬುಗಳು ಹಾಗೂ ಹಾಸಿಗೆಯನ್ನು ಸ್ವಚ್ಛಗೊಳಿಸಿ, ದಿಂಬು ಹಾಗೂ ಹಾಸಿಗೆಯ ಕವರ್‌ಗಳನ್ನು ತೊಳೆಯಲು ಹಾಕಿ. ಪ್ರತಿ ತಿಂಗಳು ನಿಗದಿತ ದಿನದಂದು ಕೋಣೆಯೊಳಗಿನ ದಿಂಬು, ಹಾಸಿಗೆಯನ್ನು ಹೊರಗೆ ತಂದು ಕೊಡವಿ, ಧೂಳನ್ನು ತೆಗೆಯುವ ರೂಢಿ ಮಾಡಿಕೊಳ್ಳಿ. ನೀವು ಚರ್ಮದ ಪೀಠೋಪಕರಣಗಳನ್ನು ಹೊಂದಿದ್ದರೆ, ಅದನ್ನು ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಒರೆಸಿಕೊಳ್ಳಿ.
8. ನಿಮ್ಮ ಸಸ್ಯಗಳನ್ನು ಸಹ ಪರಿಶೀಲಿಸಿ: ನಿಮ್ಮ ಮನೆಯೊಳಗೆ ನೈಜ ಇಲ್ಲವೇ ಪ್ಲಾಸ್ಟಿಕ್ ಗಿಡಗಳಿದ್ದರೆ, ಪ್ರತಿ ವಾರವೂ ಒದ್ದೆ ಟವೆಲ್ ಅಥವಾ ಬಟ್ಟೆಯಿಂದ ನಿಮ್ಮ ಸಸ್ಯಗಳ ಎಲೆಗಳನ್ನು ಒರೆಸುತ್ತಿರಿ. ಹಾಗೆ ಮಾಡುವುದರಿಂದ ನಿಮ್ಮ ಸಸ್ಯಗಳು ಅಂದವಾಗಿ ಕಾಣಿಸುವುದರೊಂದಿಗೆ, ಧೂಳು ಮುಕ್ತಗೊಂಡು ಮನೆಯ ಅಂದವನ್ನೂ ಹೆಚ್ಚಿಸುತ್ತದೆ.
9. ಕ್ಲೀನಿಂಗ್ ಪ್ರಾರಂಭ ಎಲ್ಲಿಂದ ಎಂಬುದನ್ನು ತಿಳಿಯಿರಿ: ಧೂಳನ್ನು ಸ್ವಚ್ಛಗೊಳಿಸಲು ಮೊದಲು ಮೇಲಿನ ಮಹಡಿಯಿಂದ ಪ್ರಾರಂಭಿಸಬೇಕು. ಇಲ್ಲವಾದರೆ ಧೂಳಿನ ಕಣಗಳು ಮತ್ತೆ ಮತ್ತೆ ಮನೆಯೊಳಗೇ ಸುತ್ತು ಹೊಡೆಯುತ್ತಿರುತ್ತವೆ. ಗುರುತ್ವಾಕರ್ಷಣೆಗೆ ಒಳಪಟ್ಟು ಧೂಳಿನ ಕಣಗಳು ಮೇಲಿನಿಂದ ಕೆಳಭಾಗಕ್ಕೆ ಬರುವಂತಾದರೆ ಸ್ವಚ್ಛಗೊಳಿಸುವುದು ಸುಲಭವಾಗಿಬಿಡುತ್ತದೆ.
10. ಏರ್ ಪ್ಯೂರಿಫೈಯರ್ ಬಳಸಿ: ನೀವು ವಾರಕ್ಕೊಮ್ಮೆ ಮನೆಯ ಧೂಳನ್ನು ತೆಗೆಯುವ ಎಲ್ಲ ಕಸರತ್ತುಗಳನ್ನು ಮಾಡಿಯೂ ಧೂಳು ಸಂಪೂರ್ಣವಾಗಿ ಹೋಗುತ್ತಿಲ್ಲ ಎಂದಾದರೆ ಏರ್ ಪ್ಯೂರಿಫೈಯರ್ ಬಳಕೆಯನ್ನು ಪ್ರಾರಂಭಿಸಿ. ಇದು ಧೂಳನ್ನು ತಡೆಯಲು ಸಹಾಯ ಮಾಡುತ್ತದೆ.
11. ಉತ್ತಮ ಏರ್ ಫಿಲ್ಟರ್‌ಗೆ ಹೂಡಿಕೆ ಮಾಡಿ: ಉತ್ತಮ ಗುಣಮಟ್ಟದ ಏರ್ ಫಿಲ್ಟರ್ ಬಳಕೆ ಮಾಡುವುದರಿಂದ ಅದು ಧೂಳನ್ನು ಹಿಡಿದಿಟ್ಟುಕೊಳ್ಳಲು ಮತ್ತು ಅದನ್ನು ಮನೆಯಿಂದ ಹೊರಹಾಕಲು ಸಹಾಯ ಮಾಡುತ್ತದೆ.
12. ಡೋರ್ ಮ್ಯಾಟ್ ಸ್ವಚ್ಛಗೊಳಿಸುತ್ತಿರಿ: ಇದು ಸಣ್ಣ ವಿಷಯವೆಂದು ಕಂಡರೂ ಗಂಭೀರವಾಗಿ ಪರಿಗಣಿಸಲೇಬೇಕು. ಡೋರ್ ಮ್ಯಾಟ್‌ಗಳು ನಿಜವಾಗಿಯೂ ನಿಮ್ಮ ಮನೆಗೆ ತರುವ ಕೊಳಕು ಮತ್ತು ಧೂಳಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಅದನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ.
13. ಮನೆಯೊಳಗೆ ಶೂ, ಚಪ್ಪಲಿ ಹಾಕದಿರಿ: ಶೂಗಳು ಬಹಳಷ್ಟು ಕೊಳಕು ಮತ್ತು ಧೂಳನ್ನು ಮನೆಯೊಳಗೆ ತರುತ್ತವೆ. ಆದ್ದರಿಂದ ಮನೆಯೊಳಗೆ ಶೂ ಹಾಕಿಕೊಂಡು ಬರದಂತೆ ನೋಡಿಕೊಳ್ಳಬೇಕು. ಶೂಗಳಿಗೆ ಮನೆಯ ಹೊರಗೆ ಅದರದೇ ಆದ ಜಾಗವನ್ನು ನಿಗದಿಪಡಿಸಬೇಕು. ಮನೆಯ ಒಳಗೆ ಹಾಕಲು ಬೇರೆಯದೇ ಚಪ್ಪಲಿಯನ್ನು ಇರಿಸಿಕೊಳ್ಳಿ.
14. ಸಾಕುಪ್ರಾಣಿಗಳನ್ನು ನಿಯಮಿತವಾಗಿ ಗ್ರೂಮ್ ಮಾಡಿ: ಸಾಕುಪ್ರಾಣಿಗಳು ಸಾಮಾನ್ಯವಾಗಿ ಮನೆಯಲ್ಲಿ ಧೂಳು ಹೆಚ್ಚಲು ಪ್ರಮುಖ ಕಾರಣ. ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡುವುದು ಮಾತ್ರವಲ್ಲದೆ ಶುಚಿಯಾಗಿರಿಸಿದರೆ ಮನೆಯ ವಾತಾವರಣವೂ ಸುಧಾರಿಸಲಿದೆ.
15. ವಸ್ತುಗಳನ್ನು ಸರಿಯಾದ ಜಾಗದಲ್ಲಿರಿಸಿ: ಯಾವುದೇ ವಸ್ತು ಇಲ್ಲವೇ ಸಾಮಾಗ್ರಿಗಳನ್ನು ಸರಿಯಾದ ಜಾಗದಲ್ಲಿಡದೆ ಹರಡಿಕೊಂಡರೆ ಅದರ ಮೇಲ್ಮೈಯಲ್ಲಿ ಧೂಳು ತುಂಬಿಕೊಳ್ಳುತ್ತದೆ. ಆದ್ದರಿಂದ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಾಮಾಗ್ರಿಗಳು ತುಂಬದಂತೆ ನೋಡಿಕೊಳ್ಳಿ. ಒಂದು ವೇಳೆ ತುಂಬಿಕೊಂಡಿದ್ದೇ ಆದರೆ ಅವುಗಳಿಗೆ ಸೂಕ್ತ ಜಾಗವನ್ನು ಕಲ್ಪಿಸಿಕೊಡಿ.
ಪರಿಹಾರ ಕಾಣಲು ಕಷ್ಟಸಾಧ್ಯವಿರುವ ಸಮಸ್ಯೆಗಳ ಪೈಕಿ ಧೂಳಿನ ಕಿರಿಕಿರಿಯೂ ಒಂದು. ಆದರೆ ನಿಯಮಿತವಾದ ಧೂಳನ್ನು ಶುಚಿಗೊಳಿಸುವ ದಿನಚರಿಯನ್ನು ನೀವು ರೂಢಿಸಿಕೊಂಡು, ಮೇಲಿನ ಸಲಹೆಯನ್ನು ಅನುಸರಿಸುವ ಮೂಲಕ ಅದನ್ನು ನಿಯಂತ್ರಣದಲ್ಲಿಡಲು ಖಂಡಿತವಾಗಿಯೂ ಸಾಧ್ಯ.
ಬರಹ: ಭಾಗ್ಯಾ ದಿವಾಣ