Working Women: ದುಡಿಯುವ ಹೆಣ್ಣುಮಕ್ಕಳ ಬವಣೆಗಳು ಮತ್ತು ಮನೆಗೆಲಸದ ಮತ್ತೊಂದು ಮುಖ: ರೇಣುಕಾ ಮಂಜುನಾಥ್ ಬರಹ
ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ ಮಾಡಿಕೊಡುವ ಮಹಿಳಾ ಸಹಾಯಕರಿಗೆ ಬಹಳಷ್ಟು ಬೇಡಿಕೆ ಇದೆ. ಇಂಥವರ ದುಡಿಮೆಯ ಬವಣೆ ಬಗ್ಗೆ ಲೇಖಕಿ ರೇಣುಕಾ ಮಂಜುನಾಥ್ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಬೆಳಕು ಚೆಲ್ಲಿದ್ದಾರೆ. ಅವರ ಬರಹ ಇಲ್ಲಿದೆ.

ಹೆಣ್ಣುಮಕ್ಕಳು ಕೆಲಸಕ್ಕೆಂದು ಹೊರಗೆ ಹೋಗುತ್ತಾರೆ ಎಂದರೆ ಅವರ ಬಗ್ಗೆ ಸಮಾಜದ ಕೆಲವರಲ್ಲಿ ಇಂದಿಗೂ ಒಂದು ರೀತಿಯ ಭಾವನೆಯಿರುತ್ತದೆ. ಹೆಣ್ಣುಮಕ್ಕಳು ಮನೆಯಲ್ಲೇ ಇರಬೇಕು ಅಥವಾ ಮನೆಗೆಲಸವನ್ನಷ್ಟೇ ಮಾಡಬೇಕು ಎಂದುಕೊಂಡಿರುತ್ತಾರೆ. ಅಲ್ಲದೇ, ಸಾಮಾಜಿಕ ಕಟ್ಟುಪಾಡುಗಳು ಒಂದೆಡೆಯಾದರೆ, ಮತ್ತೊಂದೆಡೆ ಗಂಡನ ಮನೆ ಮತ್ತು ಗಂಡನ ಕಿರುಕುಳ, ಕಿರಿಕಿರಿಯೂ ಸಾಕಷ್ಟು ಇರುತ್ತದೆ. ಹೀಗಾಗಿ ಅವರು ಎಲ್ಲವನ್ನೂ ಸಹಿಸಿಕೊಂಡು, ಎದುರಿಸಿಕೊಂಡು ಬದುಕುವ ದಿನಗಳೂ ಇರುತ್ತವೆ. ಅಂಥವರ ಬಗ್ಗೆ ಕಾಳಜಿ ವಹಿಸುವವರೂ ಕಡಿಮೆ. ಅವರ ಕಷ್ಟ ಕೇಳುವವರೂ ಅಷ್ಟಕಷ್ಟೇ.
ಹೆಣ್ಣುಮಗಳೊಬ್ಬಳು ಹೆರಿಗೆಯಾಗಿ ಪುಟ್ಟ ಮಗು ಇದ್ದರೂ, ವಿಶ್ರಾಂತಿ ಪಡೆಯದೇ, ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿರುತ್ತದೆ. ಅದರಿಂದಾಗಿ ಅವಳು ಮನೆಗೆಲಸಕ್ಕೆ ಹೋಗುವಾಗ, ಅಲ್ಲಿ ಮಗುವನ್ನು ಕೂಡ ಕರೆದುಕೊಂಡು ಹೋಗುತ್ತಾಳೆ. ಮಗುವನ್ನು ಅಲ್ಲಿಯೇ ಮಲಗಿಸಿಕೊಂಡು ಮನೆಗೆಲಸ ಮುಂದುವರಿಸುತ್ತಾಳೆ. ಇಂತಹ ಬಹಳಷ್ಟು ಹೆಣ್ಣುಮಕ್ಕಳ ಬವಣೆಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಾಣಲು ಸಿಗುತ್ತದೆ. ಒಂದೆಡೆ ಬಡತನ ಸಮಸ್ಯೆಯಾದರೆ, ಮತ್ತೊಂದೆಡೆ ಮದುವೆಯಾದ ಬಳಿಕ ಹೆಗಲೇರಿದ ಜವಾಬ್ದಾರಿ, ಗಂಡನ ಕಿರುಕುಳ ಮತ್ತು ಇತರ ಸಮಸ್ಯೆಗಳು ಕೂಡ ಅವಳು ಹೀಗೆ ಕಷ್ಟಪಡುವಂತೆ ಮಾಡುತ್ತವೆ.
ಇಂಥ ಮಹಿಳೆಯರ ಬದುಕಿನ ಬಗ್ಗೆ ಲೇಖಕಿ ರೇಣುಕಾ ಮಂಜುನಾಥ್ ತಮ್ಮ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಬೆಳಕು ಚೆಲ್ಲಿದ್ದಾರೆ. ಅವರ ಪೋಸ್ಟ್ ಅನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.
ಇದು ಮನೆಗೆಲಸಕ್ಕೆ ಬರುವ ಹೆಣ್ಣುಮಕ್ಕಳ ವಿಷಯ
“ಗಂಡ ಸಹಕರಿಸೋಲ್ಲ, ದುಡಿದು ತರೋಲ್ಲ. ಸಣ್ಣ ಮಗು, ಬಾಣಂತಿ. ದುಡಿದು ತಿನ್ನಲು ಸುಲಭಕ್ಕೆ ಸಿಗುವ ಕೆಲಸ 'ಮನೆಗೆಲಸ' . ಆ ಮನೆಯವರಲ್ಲಿ ಮಾನವೀಯತೆ ಇದ್ದರೆ, ಮಗುವನ್ನೂ ಕರೆತಂದು ಒಂದು ಕೋಣೆಯಲ್ಲಿ ಮಲಗಿಸಿ, ಕೆಲಸ ಮಾಡಿ ಅಲ್ಲೇ ತಿಂದು ಕುಡಿಯಲು ಏನಾದರೂ ಕೊಟ್ಟರೆ ಹೊಟ್ಟೆಪಾಡು ನಡೆದುಹೋಗುತ್ತೆ.…ಇಷ್ಟರ ಮಧ್ಯೆ ನಾನು ಗಮನಿಸಿದ್ದು… ಅವನು ಇವಳು ಎಷ್ಟೊತ್ತಿಗೆ ಎಷ್ಟುಮನೆ ಮುಗಿಸಿ ಎಲ್ಲಿದ್ದಾಳೆಂದು ಪ್ರಶ್ನಿಸುವನು!! ಬಹಳಷ್ಟು ಅಶಿಕ್ಷಿತ ಬಡಜನರ ಮಧ್ಯೆ ಈ ದಾದಾಗಿರಿ ಅವ್ಯಾಹತವಾಗಿ ನಡೆದಿದೆ. 'ಗಂಡನ' ಪೋಸ್ಟ್ ಅಂದರೆ ಹಾಗೆ” ಒಂದು ಚಿತ್ರ, ಎರಡು ವಿಡಿಯೊದೊಂದಿಗೆ ಇರುವ ಈ ಒಕ್ಕಣೆ ಇಷ್ಟೇ ಸಂಕ್ಷಿಪ್ತವಾಗಿ ಮುಗಿಯುತ್ತದೆ. ಆದರೆ ಹಲವು ಓದುಗರ ಮನಸ್ಸನ್ನು ಈ ಪೋಸ್ಟ್ ಕಲಕಿದೆ.
ಒಬ್ಬೊಬ್ಬರ ಕಥೆ ಒಂದೊಂದು ಥರ
ರೇಣುಕಾ ಮಂಜುನಾಥ್ ಅವರ ಬರಹಕ್ಕೆ ಬಹಳಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಕಲಾ ಮಂಜುನಾಥ್ ಎಂಬುವವರ ಪ್ರತಿಕ್ರಿಯೆ ಗಮನ ಸೆಳೆಯುವಂತಿದೆ.
“ಮನೆ ಕೆಲಸದ ಸಹಾಯಕಿಯರ ಕಥೆಗಳು ಬಹಳಷ್ಟು ಹೀಗೆ ಇರುತ್ತವೆ. ನಮ್ಮ ಮನೆಗೆ ಬರುವವರಿಗೆ 3 ಜನ ಹೆಣ್ಣು ಮಕ್ಕಳು, ಒಬ್ಬ ಮಗ. ಮೂರೂ ಜನಕ್ಕೂ ಮದುವೆಯಾಗಿ ಮಕ್ಕಳಿದ್ದಾರೆ. ಮಗ ಓದುತ್ತಿದ್ದಾನೆ. ಇವರೆಲ್ಲರೂ ಬದುಕು ಕಟ್ಟಿಕೊಳ್ಳಲೆಂದು ಬಾಗೇಪಲ್ಲಿ ಕಡೆಯಿಂದ ವಲಸೆ ಬಂದವರು. ದೊಡ್ಡ ಮಗಳು ಊರಿನಲ್ಲಿ ತಕ್ಕ ಮಟ್ಟಿಗೆ ತೊಂದರೆಯಿಲ್ಲದೆ ಜೀವನ ನಡೆಸುತ್ತಿದ್ದಾಳೆ. ಉಳಿದ ಇಬ್ಬರು ಹೆಣ್ಣು ಮಕ್ಕಳದ್ದು ವಿಪರೀತ ಸಮಸ್ಯೆ. ಅದರಲ್ಲಿ ಕೊನೆಯವಳು ಚುರುಕು. ನಮ್ಮ ಮನೆ ಕೆಲಸದ ಸಹಾಯಕಿಯ ಗಂಡ ಒಳ್ಳೆಯವರಂತೆ. ದುಷ್ಚಟಗಳು ಇಲ್ಲವಂತೆ. ಹಾಗಾಗಿ ಹೆಣ್ಣುಮಕ್ಕಳಿಗೆ ಬೆಂಗಾವಲಾಗಿ ನಿಂತಿದ್ದಾರೆ. ಕೆಲವೊಮ್ಮೆ ನೆನ್ನೆ ಮೊಮ್ಮಗನ ಬರ್ತ್ ಡೇ ಇತ್ತು ಅಂತ ಫೋಟೋ ತೋರಿಸ್ತಾಳೆ. ಆಕೆ ಹೇಳುವ ಕಥೆಗಳನ್ನು ನಾನು ನಿರ್ಲಿಪ್ತಳಾಗಿ ಕೇಳುತ್ತೇನೆ ಅಷ್ಟೇ. ಆಕೆಯ ಜೊತೆ ಒಮ್ಮೊಮ್ಮೆ ಆಕೆಯ ಮಗಳೂ ಆಗಾಗ ಬರುತ್ತಾಳೆ ಮನೆಗೆ. ಇಬ್ಬರೂ ಒಟ್ಟಿಗೆ ಇಬ್ಬರ ಹಂಚಿಕೆಯ ಮನೆಗಳ ಕೆಲಸ ಮಾಡಿದರೆ ಬೇಗ ಮುಗಿಯುತ್ತೆ ಅಂತ”.
ಹೀಗೆ ಬಹಳಷ್ಟು ಪೋಸ್ಟ್‌ಗೆ ಕಾಮೆಂಟ್ ಮಾಡಿ ಮಂದಿ ಅವರವರ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೆ, ಹೇಗೆ ಇಂತಹ ಕಷ್ಟಗಳನ್ನು ಎದುರಿಸಿ ಹೆಣ್ಣುಮಕ್ಕಳು ಪಾರಾಗುತ್ತಾರೆ ಎನ್ನುವ ಬಗ್ಗೆಯೂ ವಿವರಿಸಿದ್ದಾರೆ.
ಚೀಟಿ (ಅ)ವ್ಯವಹಾರದಲ್ಲಿ ಮೋಸ
“ತುಂಬಾ ಬೇಸರವಾಗೋದು ಕೆಲವರ ಚೀಟಿ ವ್ಯವಹಾರ ಕೇಳಿ. ನಮ್ಮ ಮನೆಯ ಹೆಲ್ಪರ್ ಕಷ್ಟಪಟ್ಟು (single mother) ದುಡಿದು, ಎಲ್ಲಾ ದುಡ್ಡನ್ನು ಅದ್ಯಾರೋ ಒಬ್ಬರಲ್ಲಿ ಚೀಟಿ ಕಟ್ಟುತ್ತಿದ್ದಳು. ಅವರು ರಾತ್ರೋರಾತ್ರಿ ತಲೆಮರೆಸಿಕೊಂಡಿದ್ದಾರೆ. ಸುಮಾರು 2 ಲಕ್ಷದಷ್ಟು ದುಡ್ಡು ಕಳೆದು ಕೊಂಡಿದ್ದಾಳೆ. ಬ್ಯಾಂಕ್ ಅಲ್ಲಿ ಇಟ್ಟರೆ ಕಮ್ಮಿ ಬಡ್ಡಿ, ಸಾಲ ಸಿಗಲ್ಲ ಬೇಗ ಹೇಳಿ ಎಲ್ಲವನ್ನೂ ಕಳೆದುಕೊಂಡಳು. ಅವಳಂತೆ ಎಷ್ಟೋ ಮಂದಿ ಈ ರೀತಿ ದುಡ್ಡು ಕಳೆದುಕೊಂಡಿದ್ದರಂತೆ” ಎಂದು ಸುಷ್ಮಾ ಹೆಗಡೆ ಎನ್ನುವವರು ಎಚ್ಚರ ಹೇಳಿದ್ದಾರೆ.
