ಸಕ್ಕರೆ ನಮ್ಮ ದೇಹಕ್ಕೆ ಎಷ್ಟೊಂದು ಅಪಾಯಕಾರಿ; ಸಕ್ಕರೆಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಸಕ್ಕರೆ ನಮ್ಮ ದೇಹಕ್ಕೆ ಎಷ್ಟೊಂದು ಅಪಾಯಕಾರಿ; ಸಕ್ಕರೆಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ಸಕ್ಕರೆ ನಮ್ಮ ದೇಹಕ್ಕೆ ಎಷ್ಟೊಂದು ಅಪಾಯಕಾರಿ; ಸಕ್ಕರೆಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ರುಚಿಯಲ್ಲಿ ಅಪರಿಮಿತ ಸಿಹಿಯಿದ್ದರೂ, ಆರೋಗ್ಯದ ಮೇಲೆ ಯಾವುದೇ ಪ್ರಯೋಜನವಿಲ್ಲದ ಸಕ್ಕರೆ ಕೇವಲ ಸಿಹಿಯನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿ ಆರೋಗ್ಯಕ್ಕೆ ಮಾರಕವಾಗಿರುವ ಒಂದು ಪದಾರ್ಥ ಎನ್ನುವುದು ತಜ್ಞರ ಅಭಿಪ್ರಾಯ.

ಸಕ್ಕರೆ ಕೇವಲ ಸಿಹಿಯನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿ ಆರೋಗ್ಯಕ್ಕೆ ಮಾರಕ
ಸಕ್ಕರೆ ಕೇವಲ ಸಿಹಿಯನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿ ಆರೋಗ್ಯಕ್ಕೆ ಮಾರಕ (Pixabay)

ಬೆಳಗ್ಗೆ ಎದ್ದ ಕೂಡಲೇ ಕುಡಿಯುವ ಚಹಾ ಕಾಫಿಗಳಿಂದ ಹಿಡಿದು, ಮಕ್ಕಳು ಇಷ್ಟಪಟ್ಟು ತಿನ್ನುವ ಚಾಕೊಲೇಟ್, ಹುಟ್ಟುಹಬ್ಬಗಳಲ್ಲಿ ಕಡ್ಡಾಯವಾಗಿ ಇರುವ ಕೇಕ್ ಗಳವರೆಗೆ ಸಕ್ಕರೆಯು ಬಹುತೇಕ ಜನರ ದಿನನಿತ್ಯದ ಆಹಾರಗಳಲ್ಲಿ ಕಡ್ಡಾಯ ಪದಾರ್ಥವಾಗಿ ಬಿಟ್ಟಿದೆ. ನಾಲಗೆಗೆ ಅದ್ಭುತ ರುಚಿ ಕೊಡುವ ಈ ಸಕ್ಕರೆ ಆರೋಗ್ಯದ ಮೇಲೆ ಎಷ್ಟು ದೊಡ್ಡ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾ? ತಜ್ಞರು ಇದರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಮುಂದಕ್ಕೆ ಓದಿ.

ತೂಕ ಹೆಚ್ಚಳ ಮತ್ತು ಬೊಜ್ಜು

ಸಕ್ಕರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪ್ರಯೋಜನವಿಲ್ಲದ ಖಾಲಿ ಕ್ಯಾಲೋರಿಗಳೇ ಹೆಚ್ಚಾಗಿರುವ ಪದಾರ್ಥವಲ್ಲದೆ ಬೇರೇನೂ ಅಲ್ಲ ಎನ್ನುವುದು ಪೌಷ್ಟಿಕತಜ್ಞರೊಬ್ಬರ ಅಭಿಪ್ರಾಯ. ಇದರ ಅತಿಯಾದ ಸೇವನೆ ದೇಹದಲ್ಲಿ ಕೊಬ್ಬಿನ ಶೇಖರಣೆ ಕಾರಣವಾಗುತ್ತದೆ, ಅದರಲ್ಲೂ ಹೊಟ್ಟೆಯ ಸುತ್ತಲೂ ಕೊಬ್ಬನ್ನು ಹೆಚ್ಚಿಸುವಲ್ಲಿ ಸಕ್ಕರೆಯ ಪಾಲು ಹೆಚ್ಚು. ಇದು ಅತಿಯಾದ ತಿನ್ನುವ ಬಯಕೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ

ಅತಿಯಾದ ಸಕ್ಕರೆ ಸೇವನೆಯು ದೇಹವು ಇನ್ಸುಲಿನ್‌‌ಗೆ ಕಡಿಮೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ, ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ಇದು ಮಹಿಳೆಯರಲ್ಲಿ ಟೈಪ್ 2 ಮಧುಮೇಹ ಮತ್ತು ಪಿಸಿಒಎಸ್‌‌ನಂತಹ ಅರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ

ಸಕ್ಕರೆ ಸೇವನೆಯು ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ದೀರ್ಘಕಾಲದ ಉರಿಯೂತಕ್ಕೆ ಸಂಬಂಧಿಸಿದೆ ಎಂದು ಆಹಾರ ತಜ್ಞೆ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಣ ತಜ್ಞೆ ಡಾ.ಅರ್ಚನಾ ಹೇಳುತ್ತಾರೆ. ಇವೆಲ್ಲವೂ ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಾಗಿವೆ. ಅಧಿಕ ಸಕ್ಕರೆ ಸೇವನೆಯಿಂದ ಉಂಟಾಗುವ ದೀರ್ಘಕಾಲದ ಉರಿಯೂತವು ರಕ್ತನಾಳಗಳನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ

ನಾವು ಆಗಾಗ್ಗೆ ಸಕ್ಕರೆ ಮತ್ತು ಜಂಕ್ ಫುಡ್ ಅನ್ನು ನಮ್ಮ ಉತ್ಸಾಹ ಮತ್ತು ಮನಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಸೇವನೆ ಮಾಡಿದರೂ, ಅತಿಯಾದ ಸಕ್ಕರೆ ಸೇವನೆಯು ಮನಸ್ಥಿತಿಯ ಬದಲಾವಣೆಗಳು, ಆತಂಕ ಮತ್ತು ಖಿನ್ನತೆಯನ್ನು ಪ್ರಚೋದಿಸುತ್ತದೆ ಎಂದು ಹಿರಿಯ ಆಹಾರ ತಜ್ಞೆ ಡಾ.ಅಂಜಲಿ ಎಚ್ಚರಿಸುತ್ತಾರೆ.

ಅಕಾಲಿಕ ಚರ್ಮದ ಸುಕ್ಕು

ಸಕ್ಕರೆ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಎಂದು ಡಾ.ಶ್ರೀವಾಸ್ತವ್ ವಿವರಿಸುತ್ತಾರೆ. ಅತಿಯಾದ ಸಕ್ಕರೆ ಸೇವನೆ ತಾರುಣ್ಯದ, ಹೈಡ್ರೇಟೆಡ್ ಚರ್ಮಕ್ಕೆ ಅಗತ್ಯವಾದ ಪ್ರೊಟೀನ್‌‌ಗಳಾದ ಕೊಲ್ಯಾಜಿನ್ ಮತ್ತು ಎಲಾಸ್ಟಿನ್ ಅನ್ನು ಹಾನಿಗೊಳಿಸುತ್ತದೆ. ಕಾಲಾನಂತರದಲ್ಲಿ, ಇದು ಸುಕ್ಕುಗಳು ಹೆಚ್ಚಲು ಕಾರಣವಾಗಬಹುದು.

ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ

ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವ ಮೂಲಕ ಸಕ್ಕರೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಫಿಟ್ನೆಸ್ ತಜ್ಞ ಸುನಿಲ್ ಲೋಬೊ ಹೇಳುತ್ತಾರೆ. ಇದು ಸೋಂಕುಗಳ ವಿರುದ್ಧ ದೇಹ ಹೋರಾಡುವುದನ್ನು ಕಷ್ಟಕರವಾಗಿಸುತ್ತದೆ.

ಸಕ್ಕರೆ ಸೇವಿಸಲು ಕೆಟ್ಟ ಸಮಯ

ಖಾಲಿ ಹೊಟ್ಟೆಯಲ್ಲಿ: ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಮತ್ತು ಕುಸಿತಗೊಳಿಸಲುಕಾರಣವಾಗಬಹುದು, ಇದು ಆಯಾಸ ಮತ್ತು ಮನಸ್ಥಿತಿಯ ಬದಲಾವಣೆಗಳಿಗೆ ಕಾರಣವಾಗುತ್ತದೆ.

ತಡರಾತ್ರಿ: ಮಲಗುವ ಮೊದಲು ಸಕ್ಕರೆ ಸೇವನೆ ನಿದ್ರೆಗೆ ಭಂಗ ತರಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.

ವ್ಯಾಯಾಮದ ಮೊದಲು: ಸಕ್ಕರೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆಯಾದರೂ, ವ್ಯಾಯಾಮದ ಮಧ್ಯದಲ್ಲಿ ಬಳಲಿಕೆಗೆ ಕಾರಣವಾಗಬಹುದು.

ಕಹಿ ಸತ್ಯ

ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ದಿನನಿತ್ಯದ ನಮ್ಮ ಆಹಾರದಲ್ಲಿ ಪ್ರಧಾನವಾಗಿರುವ ಸಕ್ಕರೆಯ ಅತಿಯಾದ ಸೇವನೆಯು ಎಷ್ಟೆಲ್ಲಾ ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರಲ್ಲಾ. ಚಿಂತಿಸಬೇಡಿ ಇನ್ನೂ ತಡವಾಗಿಲ್ಲ. ಇಂದಿನಿಂದಲೇ ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಿ. ಪ್ರತೀ ಬಾರಿ ಸಕ್ಕರೆ ಸೇವಿಸುವ ಮುನ್ನ ಎರಡು ಬಾರಿ ಯೋಚಿಸಿ!

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner