Viral Monalisa: ಮೋನಾ ಎಂಬ ಯುವತಿ ನೆಟ್ಟಿಗರ ಮೊನಾಲಿಸಾ ಆಗಿದ್ದು ಹೇಗೆ? ವೈರಲ್ ಹಿಂದಿನ ವಾಸ್ತವ ತಿಳಿಸಿದ ಸೈಕಾಲಜಿಸ್ಟ್ ರೂಪಾ ರಾವ್‌
ಕನ್ನಡ ಸುದ್ದಿ  /  ಜೀವನಶೈಲಿ  /  Viral Monalisa: ಮೋನಾ ಎಂಬ ಯುವತಿ ನೆಟ್ಟಿಗರ ಮೊನಾಲಿಸಾ ಆಗಿದ್ದು ಹೇಗೆ? ವೈರಲ್ ಹಿಂದಿನ ವಾಸ್ತವ ತಿಳಿಸಿದ ಸೈಕಾಲಜಿಸ್ಟ್ ರೂಪಾ ರಾವ್‌

Viral Monalisa: ಮೋನಾ ಎಂಬ ಯುವತಿ ನೆಟ್ಟಿಗರ ಮೊನಾಲಿಸಾ ಆಗಿದ್ದು ಹೇಗೆ? ವೈರಲ್ ಹಿಂದಿನ ವಾಸ್ತವ ತಿಳಿಸಿದ ಸೈಕಾಲಜಿಸ್ಟ್ ರೂಪಾ ರಾವ್‌

Viral Monalisa: ಕುಂಭಮೇಳದಲ್ಲಿ ವೈರಲ್‌ ಆಗಿರುವ ಮೊನಾಲಿಸಾ ಎಂಬ ಯುವತಿ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಸೈಕಾಲಜಿಸ್ಟ್ ರೂಪಾ ರಾವ್‌ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದು ಗಮನ ಸೆಳೆಯುತ್ತದೆ. ಕೆಲವು ವ್ಯಕ್ತಿಗಳು ವೈರಲ್‌ ಆಗುವ ಹಿಂದಿನ ಮನಃಶಾಸ್ತ್ರೀಯ ಅಂಶಗಳನ್ನು ಈ ಲೇಖನದಲ್ಲಿ ತಿಳಿಸಿದ್ದಾರೆ.

Viral Monalisa: ಮೋನಾ ಎಂಬ ಯುವತಿ ನೆಟ್ಟಿಗರ ಮೊನಾಲಿಸಾ ಆಗಿದ್ದು ಹೇಗೆ?
Viral Monalisa: ಮೋನಾ ಎಂಬ ಯುವತಿ ನೆಟ್ಟಿಗರ ಮೊನಾಲಿಸಾ ಆಗಿದ್ದು ಹೇಗೆ?

ಸೈಕಾಲಜಿಸ್ಟ್ ರೂಪಾ ರಾವ್‌ ಲೇಖನ: ತೆಳು ಎಣ್ಣೆಗೆಂಪು ಬಣ್ಣ, ಸೆಳೆಯುವ ಹಾವಿನ ಕಣ್ಣು, ಸಣ್ಣ‌ದಾಗಿ ಜೋಡಿಸಿದ ಮುತ್ತಿನಂತಹ‌ ಹಲ್ಲುಗಳು ಸಾಲುಗಳು, ಒಂದು ಮುಗ್ಧ ನಗು ಇಷ್ಟು ಸಾಕಾ ವೈರಲ್ ಆಗಲು ? ಅಥವಾ ಒಬ್ಬರನ್ನು ಇದ್ದಕ್ಕಿದ್ದಂತೆ ಸಿಂಹಾಸನಕ್ಕೆ ಕೂರಿಸಿಬಿಡಲು? ಇದೇ ರೀತಿ ನೆನಪಿಸಿಕೊಳ್ಳಿ. ರಾನು ಮಂಡಲ್, ಕಡ್ಲೆ ಕಾಯಿ‌ಮಾರಾಟಗಾರ ಕಚ್ಚಾ ಬಾದಾಮ್ ಬುಬಾನ್ ಬಾಡ್ಯೇಕರ್, ನಮ್ಮವನೇ ದ್ರೋಣ್ ಪ್ರತಾಪ್‌, ಹಳ್ಳಿ‌ಹೈದ ಪ್ಯಾಟೆಗೆ ಬಂದ ರಾಜೇಶ್‌. ಇವರೆಲ್ಲರನ್ನೂ ಗಮನಿಸಿ ನೋಡಿ ಎಲ್ಲರಲ್ಲೂ ಒಂದೇ ಪ್ಯಾಟರ್ನ್ ಅದು ಇವರ ಹಿನ್ನಲೆ‌. ಅಷ್ಟಕ್ಕೂ ಯಾವುದೇ ವಿಷಯ ಜನರ ಬುದ್ದಿಗಿಂತ ಮನಸಿಗೆ ವೈರಲ್ ತಟ್ಟಿ ವೈರಲ್ ಆಗಬೇಕಾದರೆ ಬೇಕಾಗಿರುವುದು ಕಣ್ಣೀರು, ಸಹಾನುಭೂತಿ ಅಥವಾ ಯಾವುದೋ ಸಾಮಾನ್ಯ ವಿಷಯವನ್ನೇ ಅಸಾಮಾನ್ಯ ಎನ್ನುವಂತೆ‌ ಹೇಳುವ ಕಲೆ. (ಒಂದು ಸುಳ್ಳು ಅಥವಾ ಭ್ರಮೆ ಮತ್ತೆ‌ ಮತ್ತೆ ಪುನರಾವರ್ತಿಸಿ ಹೃದಯದಲ್ಲಿ ನಿಜವೇ ಎಂದು ನಂಬಿಸುವುದೇ ಪ್ರಸರಣದ ವಿಪರ್ಯಾಸ).

ಜನರ ಈ ಬುದ್ದಿಗಿಂತ ಮನಸನ್ನು ತಟ್ಟುವ ಮಾನಸಿಕ ಚಳಕವನ್ನು ಆಗಿನಿಂದಲೂ ರಾಜಕಾರಣಿಗಳು, ಕಥೆಗಾರರು, ಮಾಧ್ಯಮದವರು ಬಳಸುತ್ತಲೇ ಬರುತ್ತಿದ್ದಾರೆ. ಇದನ್ನು ಈ ರೀಲ್ ಮತ್ತು ಇನ್ಸ್ಟಾಗ್ರಾಮ್ ಕ್ರಿಯೇಟರ್ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಎಮೋಷನಲ್ ಕಂಟಾಜಿಯನ್ . (ಇದರ ಬಗ್ಗೆ ಈಗಾಗಲೇ‌ ಬರೆದಿರುವೆ) ಮತ್ತು ವಿವಿಧ ಬಗೆಯ ಬಯಾಸ್‌ಗಳು. ಅಂತಹ‌ ಕೆಲವು ಬಯಸ್‌ಗಳು ಇಲ್ಲಿವೆ.

  • ಬಡತನ, ಶೋಷಿತ ವರ್ಗ , ಹೆಣ್ಣು, ಕಣ್ಣೀರು
  • ಸುಂದರಿ, ಹೆಣ್ಣು, ಚಿಕ್ಕವಯಸ್ಸಿನ ಹೆಣ್ಣು .
  • ರೈತ, ಸೈನಿಕ, ಜಾನಪದ ಹಾಡುಗಾರ, ಹಳ್ಳಿಯವ.
  • ಸ್ವ ಕೋಮಿನವರ, ದೇವರು ಧರ್ಮ ಆಚರಣೆ
  • ಮನೆಯಲ್ಲಿ ಹಾಡು‌ಹಸೆ‌, ಅಡುಗೆ ಮಾಡಿಕೊಂಡು ಸೀರೆ ಉಟ್ಟು ಕಾಸಗಲ ಕುಂಕುಮ ಇಟ್ಟ ಹೆಣ್ಣು ಎಲ್ಲಕ್ಕೂ ಹೌದೌದು ಎನ್ನುವ ಹೆಣ್ಣು.
  • ದುಡ್ಡೇ ಎಲ್ಲಾ ಅಲ್ಲ , ಹಣ ಬಿಟ್ಟು ಬದುಕುವುದು ಎಷ್ಟು ಒಳ್ಳೆಯದು ಎಂಬ ಉಪದೇಶಗಳು.

ಕೆಳಗಿನವರ ವಿರುದ್ಧ ಏನೇ ಕಂಟೆಂಟ್ ಬರೆದರೂ‌ ಅದು ನಿಜವಿರಲಿ‌ ಸುಳ್ಳಿರಲಿ‌ ಅದು ವೈರಲ್ ಆಗುತ್ತದೆ.

  • ಹಲವರ ಕೆಂಗಣ್ಣಿಗೆ ಗುರಿಯಾದ ವರ್ಗಗಳು ಬ್ರಾಹ್ಮಣರು , ಶ್ರೀಮಂತರು , ಸ್ಟಾರ್ ನಟ ನಟಿಯರು ಅವರ ವೈಭವ, ಅವರ ಮಕ್ಕಳು ಇತ್ಯಾದಿ.
  • ಬೇರೆ ಬೇರೆ ಕೋಮಿನವರು, ಅವರ ದೇವರುಗಳ , ಆಚರಣೆಗಳನ್ನು ಹೀಯಾಳಿಸುವಿಕೆ
  • ಮನೆಯಲ್ಲಿ ಕೆಲಸ‌ ಮಾಡದ ಹೆಣ್ಣು , ಗಂಡಿನ ವಿರುದ್ದ ದನಿ ಎತ್ತುವ ಹೆಣ್ಣು, ಪ್ಯಾಂಟ್ ಶರ್ಟ್ ಧರಿಸಿದ ಹೆಣ್ಣು.
  • ಇನ್ನೊಂದು ವರ್ಗವಿದೆ ಅದು‌ ಮೇಲಿನ ಎರಡೂ ಬಗೆಯ ಜನರು ಶೇರ್ ಮಾಡಿದ್ದನ್ನೇ‌ ಮಾಡಿಬಿಡುವ ವರ್ಗ‌‌. ಮಕ್ಕಿಕಾಮಕ್ಕಿ ಅಷ್ಟೇ. ಇದು‌ ಕುರುಡು ಫಾಲೋವರ್‌ಗಳು.

ಈಗ ನೀವೆಲ್ಲಾ ವೈರಲ್ ಮಾಡಿದ ಕಂಟೆಂಟ್‌ಗಳನ್ನು ನೋಡಿ ಬನ್ನಿ‌. ನಿಮ್ಮ ಪಾಲು ಎಷ್ಟಿದೆ ಇಲ್ಲಿ ಅಂತ. ಈ ಮಾಧ್ಯಮಗಳ ವೈರಲ್ ಮಾಡುವ ಅರಚಾಟದ, ಅಬ್ಬರದ ವಿಡಿಯೋಗಳೂ ಇಷ್ಟೇ. ಇಲ್ಲದ್ದನ್ನು ಇದೆ ಎಂದು ಹೇಳುವ ಕಲೆ ಒಂದು ಕೌಶಲ್ಯ ಬಹುಶಃ ಈಗಿನ ಜರ್ನಲಿಸಂನಲ್ಲಿ ಇದನ್ನೇ‌ ಹೇಳಿಕೊಡುತ್ತಾರೆನೋ. ಎತ್ತರದ ದನಿಯಲ್ಲಿ ಇದೇ‌ ಸತ್ಯ ಎಂದು‌ ಸಾಧಿಸಿ ಹೇಳಿದ್ದೇ ಸತ್ಯ ಎಂದು ನಂಬುವ ಜನ‌ರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವರು ದ್ವೇಷದ ಭಾವನೆ ಬರಿಸುವದಕ್ಕಿಂತ ಗೆಲ್ಲಲು ಅತ್ಯುತ್ತಮ ಸಾಧನ ಇನ್ನೊಂದಿಲ್ಲ ಎಂಬ ಮಾತನ್ನು ಅಕ್ಷರಶಃ ಸತ್ಯ ಮಾಡಿಕೊಂಡಿದ್ದಾರೆ. ಮಾಧ್ಯಮಗಳು ಬಹುತೇಕ ಜನರ ಮನಸ್ಥಿತಿಯನ್ನು ಅವರ ಚಿಂತನೆಯನ್ನು ಬದಲಾಯಿಸುವಂತಹ‌ ತಂತ್ರಗಳನ್ನೇ ಬಳಸಿಕೊಳ್ಳುತ್ತವೆ.

"By the skillful and sustained use of propaganda, one can make a people see even heaven as hell or an extremely wretched life as paradise" ಎನ್ನುವುದು ಹಿಟ್ಲರ್ ಮಾತು. ಮನುಷ್ಯನ ಬಲಹೀನತೆ ಅವನ/ಳ ಭಾವನಾತ್ಮಕತೆ. ಇದರ ನಾಡಿಮಿಡಿತವನ್ನು ಹಿಡಿದವರೇ ಸಿಕಂದರ್. ಅವರೇ ಈ ಜಗತ್ತಿನ ಜನರ ಗಮನ ಎಲ್ಲಿ ತಿರುಗಿಸಬೇಕು, ಎಲ್ಲಿಂದ ವಿಮುಖವಾಗಿಸಬೇಕು ಎನ್ನುವುದರ ರಿಮೋಟ್ ಹಿಡಿದಿರುತ್ತಾರೆ. ನಾವು ಅವರ ರಿಮೋಟಿಗೆ‌ ಸಿಕ್ಕರೆ ಮುಗಿಯಿತು.‌ ಹಿಟ್ಲರ್ ಹೇಳುತ್ತಾನೆ, ಚತುರ ಸುಳ್ಳುಗಾರರು ಜಾದೂಗಾರರೂ ಕೂಡ ಆಗಿರುತ್ತಾರೆ.‌

ಆದರೆ ನಾ ಹೇಳುವುದೇನೆಂದರೆ ಈ ವೈರಲ್ ಮಾಡಲೆಂದೇ ಸುಳ್ಳು ಪೋಣಿಸುವವರು ಜನರನ್ನು ನಂಬಿಸುವ ಕಲೆಯನ್ನು ಕಲಿತಿರುತ್ತಾರೆ. ಅದೊಂದು ವಶೀಕರಣ‌ ಕಲೆ.( ಹಿಂದೆ ಡ್ರೋನ್‌ ಪ್ರತಾಪ್ ಬಗ್ಗೆ ಬರೆದಾಗ ಈ ಮಾತುಗಾರಿಕೆಯ ತಂತ್ರಗಳನ್ನು ಬರೆದಿದ್ದೆ). ಎಂತಾಹುದೇ ಮಾಹಿತಿಜಾಲದಿಂದ ಭಾವನಾತ್ಮಕ ಧಾಳಿ ಆಗುವಾಗ‌ ಒಂದು ಕ್ಷಣ‌ಯೋಚಿಸಬೇಕು ಇದು ನಿಜವೇ ಆದರೂ ಆಗು ಹೋಗು‌ಗಳು‌ ಸಾಧ್ಯವೆ ಅಂತ. ನಮ್ಮ ತಾಯೀ ಹೇಳುತ್ತಿದ್ದರು ಎತ್ತು ಈಯೀತು ಎಂದರೆ ಕೊಟ್ಟಿಗೆಯಲ್ಲಿ ಕೊಟ್ಟು ಎಂಬ ಗಾದೆ. ಅಂತಹುದೇ ಗಾದೆ ನೆನಪಿಗೆ ಬರುತ್ತಿದೆ. ಇದೀಗ ಬಿಗ್‌ಬಾಸ್‌ ಎಂಬ‌ ನಾಟಕದ್ಲಲಿ ಹನುಮಂತು ಎಂಬುವವರನ್ನೂ ಹೀಗೇ ಮೇಲಿನ ಬಯಾಸ್‌ಗಳನ್ನು ಬಳಸಿ ವೈರಲ್ ಮಾಡಲಾಗುತ್ತಿದೆ‌. ಇರಲಿ ಮತ್ತೆ‌ಮೋನಾಲೀಸಾಗೆ ಬರುವ.

ಮೊನಾಲಿಸಾ ಏನೂ ಮುಗ್ಧೆ ಆಗಿರಲಿಲ್ಲ. ಆಕೆಗೂ ಇಂಟರ್ ನೆಟ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳ ಪರಿಚಯ ಇತ್ತು‌. ಮೊದಲ ಬಾರಿ ಸಂದರ್ಶಕ ಕೇಳಿದಾಗ ಹೇಳುತ್ತಾಳೆ‌ ತನ್ನದೂ ಇನ್‌ಸ್ಟಾಗ್ರಾಂ ಅಕೌಂಟ್ ಇದೆ‌ ಎಂದು. ಆಗ ಆತ ಹೇಳುತ್ತಾನೆ‌ ನಿಮಗೆ ಫಾಲೋವರ್‌ಗಳು ಜಾಸ್ತಿ ಆಗಬಾರದಾ ಅಂತ. ನಿಜ ಆಕೆ‌ ಕಣ್ಣು , ನಗು ಅದ್ಭುತ ಸುಂದರಿಯೇ. ಆದರೆ ಸೌಂದರ್ಯದ ಮಾನದಂಡ ಅಷ್ಟೇ ಅಲ್ಲ. ಆದರೆ ಅಷ್ಟೇ ಎನ್ನುವ ಭ್ರಮೆಯ ನಗಾರಿ ಬಾರಿಸಿ ಬುದ್ದಿಯ ದಾರಿ ತಪ್ಪಿಸಿದ್ದೇಕೆ ಈ ಕಂಟೆಂಟ್ ಕ್ರಿಯೇಟರ್‌ಗಳು. ವೈರಲ್ ಮಾಡಿದ್ದು ಇವಳ‌ ಈ ಹವಾದಲ್ಲಿ ತಮ್ಮದೂ ವೈರಲ್ ಆಗಲಿ ಎಂಬ‌ ಗುಂಪಿನಲ್ಲಿ ಗೋವಿಂದನ ಮನಸ್ಥಿತಿಯವರು. ಅವಳೇನೋ ಬೆಟ್ಟದ ಮೇಲಿನ ಹಳ್ಳಿಯಿಂದ ಇದ್ದಕ್ಕಿದಂತೆ ಉದಯಿಸಿದಳೇನೋ ಎಂದು ನಂಬಿದ ಜನರು, ನಿಜ ಹೇಳಬೇಕೆಂದರೆ ಅವರೇ‌ ಮುಗ್ಧರು.

ಈಗ ಲಾಭ ಅವಳನ್ನು ಬಳಸಿಕೊಂಡು ತಮ್ಮ ಬೇಳೆ‌ಬೇಯಿಸಿಕೊಳ್ಳುವವರಿಗೆ‌, ಒಂದೆರೆಡು ಸಿನಿಮಾಗಳಲ್ಲಿ ಅವಕಾಶ ದೊರಕಬಹುದು. ಈಕೆಯ ವರ್ತನೆ ತಮಗೆ ಅನುಕೂಲವಾಗಿದ್ದಲ್ಲಿ ಅವಳನ್ನು ಸಿಂಹಾಸನದಲ್ಲಿ ಕೂರಿಸುತ್ತಾರೆ. ಇವಳು ತಿರುಗಿ ಬಿದ್ದಾಗ ಅವಳನ್ನು ಅಲ್ಲಿಂದ ಬೀಳಿಸುತ್ತಾರೆ. ಮತ್ತೊಂದು ರಾನು ಮಂಡಲ್ ರಾಜೇಶ್ ಕಥೆ ‌ಆಗುತ್ತದೆ.

ಯಶಸ್ಸು ತಣ್ಣನೆಯ ಹಿಮದಲ್ಲಿ ಬೆರೆತು ಅದರಲ್ಲಿ ಲೀನವಾಗಿ ಕ್ರಮೇಣ ತಾನೂ‌ ಹಿಮಾಲಯವೇ ಆಗಿಬಿಡುವ ಪ್ರಕ್ರಿಯೆ.‌ ಏಕಾ ಏಕಿ ಹಿಮಾಲಯವಾಗಿಸುವುದು ಕೃತಕ ಸ್ನೋ ಹೌಸಿನಂತೆ. ಇಲ್ಲಿ ಎದ್ದು‌ಬಿದ್ದು ನಿಧಾನವಾಗಿ ಆ ಎತ್ತರ ತಲುಪಿದಾಗ ಸಿಗುವ ಶ್ರಮದ ಸಾರ್ಥಕತೆ ಮತ್ತೆ ಅಲ್ಲಿಂದ ಬಿದ್ದರೂ ಯಾವುದೇ ಹತಾಶೆಯನ್ನು ತೋರುವುದಿಲ್ಲ. ಮತ್ತೆ ಅಲ್ಲಿ ತಲುಪಬಲ್ಲೆವೆಂಬ ನಂಬಿಕೆಯನ್ನು ಹುಟ್ಟಿಸುತ್ತದೆ. ಅದು ನಿಜವಾದ ಯಶಸ್ಸು.

  • ಲೇಖನ: ಡಾ. ರೂಪಾ ರಾವ್

Whats_app_banner