ಪುಸ್ತಕಗಳನ್ನು ಓದುವ ಅಭ್ಯಾಸ ನಿಮಗಿಲ್ಲವೇ: ಓದುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿದ್ರೆ ಇಂದೇ ಹೊತ್ತಿಗೆ ಕೈಗೆತ್ತಿಕೊಳ್ಳುವಿರಿ
ನಿಮಗೆ ಪುಸ್ತಕಗಳನ್ನು ಓದುವ ಅಭ್ಯಾಸ ಇದೆಯೇ?ಇಲ್ಲವಾದಲ್ಲಿ ಇಂದಿನಿಂದಲೇ ಶುರು ಮಾಡಿ.ಪುಸ್ತಕಗಳನ್ನು ಓದುವುದರಿಂದ ನಿಮ್ಮ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಗಮನಿಸಬಹುದು. ದಿನಕ್ಕೆ ಕೆಲವು ಪುಟಗಳನ್ನು ಓದುವ ಮೂಲಕ ನಿಮ್ಮ ದೈನಂದಿನ ಒತ್ತಡವನ್ನು ನೀವು ಸುಲಭವಾಗಿ ತೊಡೆದುಹಾಕಬಹುದು.

ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದ ಮೇಲೆ ಬಹುತೇಕ ಮಂದಿ ಪುಸ್ತಕ ಓದುವುದನ್ನೇ ನಿಲ್ಲಿಸಿದ್ದಾರೆ. ಪುಸಕ್ತವನ್ನು ಓದುವುದರಿಂದ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಲೋಚನಾ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ನಮಗೆ ಗೊತ್ತಿಲ್ಲದ ಹೊಸ ವಿಷಯಗಳನ್ನು ಸಹ ಕಲಿಸುತ್ತದೆ. ಉತ್ತಮ ಪುಸ್ತಕಗಳನ್ನು ಓದಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಗಂಟೆಗಟ್ಟಲೆ ಫೋನ್ ನೋಡುವುದನ್ನು ಇಷ್ಟಪಡುತ್ತಾರೆ. ಆದರೆ, ಪುಸ್ತಕವನ್ನು 10 ನಿಮಿಷವೂ ಓದಲು ಇಷ್ಟಪಡುವುದಿಲ್ಲ.
ಪುಸ್ತಕಗಳನ್ನು ಓದುವಾಗ ನಮ್ಮ ಮೆದುಳು ವಿಭಿನ್ನ ದೃಶ್ಯಗಳನ್ನು ಮತ್ತು ಪರಿಕಲ್ಪನೆಗಳನ್ನು ಸೃಷ್ಟಿಸುತ್ತದೆ. ಇದರಿಂದ ಅದು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಪುಸ್ತಕಗಳು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಪುಸ್ತಕವನ್ನು ಓದುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗಿ, ಉತ್ತಮ ನಿದ್ದೆ ಪಡೆಯಬಹುದು.
ಓದುವುದು ಹೇಗೆ?: ಪುಸ್ತಕವನ್ನು ಸರಾಗವಾಗಿ ಓದಲು ಒಂದು ನಿರ್ದಿಷ್ಟ ಯೋಜನೆ ಅಗತ್ಯ. ಪುಸ್ತಕವನ್ನು ಓದುವಾಗ, ಪ್ರಮುಖ ಅಂಶಗಳನ್ನು ಗಮನಿಸಬೇಕು. ವಿಶೇಷವಾಗಿ ನಿಮ್ಮ ಆಸಕ್ತಿಗಳು ಮತ್ತು ಗುರಿಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಆಯ್ಕೆ ಮಾಡುವುದು ಉತ್ತಮ. ನಿಮಗೆ ಪುಸ್ತಕ ಓದುವ ಅಭ್ಯಾಸವಿಲ್ಲದಿದ್ದರೆ, ನೀವು ಮೊದಲು ನಿಧಾನವಾಗಿ ಓದಬೇಕು. ಗ್ರಹಿಕೆಯೊಂದಿಗೆ ಓದುವುದು ಸಹ ಮುಖ್ಯವಾಗಿದೆ ಎಂಬುದನ್ನು ನೆನಪಿಡಿ. ಪುಸ್ತಕವನ್ನು ಓದಲು ಪ್ರತಿದಿನ ಒಂದು ನಿರ್ದಿಷ್ಟ ಸಮಯವನ್ನು ವಿನಿಯೋಗಿಸುವ ಮೂಲಕ, ನೀವು ಅದನ್ನು ಅಭ್ಯಾಸ ಮಾಡಬಹುದು.
ಯಾವಾಗ ಓದಬೇಕು?: ಬೆಳಿಗ್ಗೆ ಅಥವಾ ರಾತ್ರಿ ಸಮಯದಲ್ಲಿ ಪುಸ್ತಕವನ್ನು ಓದುವುದು ಉತ್ತಮ. ವಿಶ್ರಾಂತಿ ಸಮಯದಲ್ಲಿ ಅಥವಾ ಮಲಗುವ ಮುನ್ನ ಓದುವುದರಿಂದ ನಿಮ್ಮ ಆಲೋಚನಾ ಶಕ್ತಿಯನ್ನು ಸುಧಾರಿಸುತ್ತದೆ. ವಾರಕ್ಕೆ ಕನಿಷ್ಠ ಒಂದು ಪುಸ್ತಕವನ್ನು ಓದುವ ಗುರಿಯನ್ನು ಹೊಂದಬೇಕು ಹಾಗೂ ಶಿಸ್ತಿನಿಂದ ಪುಸ್ತಕವನ್ನು ಓದಬೇಕು.
ದಿನಕ್ಕೆ ಎಷ್ಟು ಪುಟಗಳು ಓದಬೇಕು?: ಪ್ರತಿದಿನ ಕನಿಷ್ಠ 20 ರಿಂದ 30 ಪುಟಗಳನ್ನು ಓದುವುದು ಉತ್ತಮ ಆರಂಭ. ನಿಮ್ಮ ಸಮಯವನ್ನು ಅವಲಂಬಿಸಿ ಇದು 50 ಪುಟಗಳವರೆಗೆ ವಿಸ್ತರಿಸಬಹುದು. ವಾರಾಂತ್ಯದಲ್ಲಿ ಈ ಪುಟಗಳನ್ನು ದ್ವಿಗುಣಗೊಳಿಸಲು ಮತ್ತು ಪುಸ್ತಕವನ್ನು ಓದಿ ಮುಗಿಸಲು ಪ್ರಯತ್ನಿಸಿ. ನೀವು ಒಂದು ವಾರ ಇಂತಹ ಪುಸ್ತಕವನ್ನು ಓದಿದರೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೋಡುವಿರಿ.
ವಾರದ ಯೋಜನೆ ಹೊಂದಿಸಿ: ನಿಮ್ಮ ವೇಳಾಪಟ್ಟಿಯನ್ನು ಅವಲಂಬಿಸಿ ನೀವು ವಾರಕ್ಕೆ 200 ರಿಂದ 250 ಪುಟಗಳನ್ನು ಯೋಜಿಸಬಹುದು. ಈ ಪುಟಗಳನ್ನು ವಾರದ ಏಳು ದಿನಗಳಾಗಿ ವಿಂಗಡಿಸಿ ಮತ್ತು ಅವುಗಳನ್ನು ನಿಯಮಿತವಾಗಿ ಓದಿ. ಬೆಳಿಗ್ಗೆ, ರಾತ್ರಿ, ಸಾಧ್ಯವಾದರೆ ಮಧ್ಯಾಹ್ನವೂ ಒಂದಷ್ಟು ಪುಟಗಳನ್ನು ಓದಲು ಪ್ರಯತ್ನಿಸಿ.
ವ್ಯತ್ಯಾಸವನ್ನು ಪರಿಶೀಲಿಸಿ: ಪ್ರತಿ ವಾರ ಒಂದೇ ಪ್ರಕಾರದ ಪುಸ್ತಕಗಳನ್ನು ಓದುವ ಬದಲು ವಾರಕ್ಕೆ ಒಂದೊಂದು ಪ್ರಕಾರದ ಪುಸ್ತಕಗಳನ್ನು ಓದುವುದರಿಂದ ಹೊಸ ಅನುಭವವಾಗುತ್ತದೆ. ಕಾಲ್ಪನಿಕ ಪುಸ್ತಕಗಳು ಮತ್ತು ಆತ್ಮಚರಿತ್ರೆಗಳನ್ನು ಓದುವ ಮೂಲಕ ನಿಮ್ಮ ಕೌಶಲ್ಯಗಳನ್ನು ನೀವು ಸುಧಾರಿಸಬಹುದು.
ಮಲಗುವ ಕೋಣೆಯಲ್ಲಿ ಪುಸ್ತಕಗಳು: ಮಲಗುವ ಕೋಣೆಯಲ್ಲಿ ಪುಸ್ತಕಗಳನ್ನು ಇಡಬೇಕು. ರಾತ್ರಿ ಮಲಗುವ ಮುನ್ನ ಪುಸ್ತಕದ ಕೆಲವು ಪುಟಗಳನ್ನು ಓದಿದರೆ ತಾನಾಗಿಯೇ ನಿದ್ದೆ ಬರುತ್ತದೆ. ಓದುವಾಗ ಟಿವಿ, ಮೊಬೈಲ್ ಫೋನ್‌ಗಳಿಂದ ದೂರವಿದ್ದರೆ ಪುಸ್ತಕ ಓದುವುದನ್ನು ತುಂಬಾ ಆನಂದಿಸಬಹುದು.
ಇನ್ನು ಮುಖ್ಯವಾದ ವಿಚಾರ ಏನು ಅಂದರೆ, ಪುಸ್ತಕಗಳನ್ನು ಓದುವವರು ಅರ್ಥಪೂರ್ಣವಾಗಿ ಮಾತನಾಡಬಲ್ಲರು. ಅಷ್ಟೇ ಅಲ್ಲ ಅರ್ಥಪೂರ್ಣವಾಗಿ ಬರೆಯುವ ಶಕ್ತಿಯನ್ನೂ ಪಡೆಯುತ್ತಾರೆ. ಹಾಗಿದ್ದರೆ ಇನ್ನೇಕೆ ತಡ, ಇಂದಿನಿಂದಲೇ ಪುಸ್ತಕ ಓದಲು ಆರಂಭಿಸಿ, ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ವಿಭಾಗ