Google Map: ಗೂಗಲ್ ಮ್ಯಾಪ್‌ನ ಪ್ರಯೋಜನಗಳು ಏನು ಮತ್ತು ನಕ್ಷೆಯಲ್ಲಿ ಹೆಸರು ಸರಿಪಡಿಸಲು ನೀವೇನು ಮಾಡಬಹುದು ನೋಡಿ
ಗೂಗಲ್‌ನ ಜನಪ್ರಿಯ ಸೇವೆ ಮ್ಯಾಪ್‌ನಲ್ಲಿ ಹಲವು ಪ್ರಯೋಜನಗಳಿವೆ. ಸ್ಥಳಗಳ ಹುಡುಕಾಟ, ಮ್ಯಾಪ್ ವೀಕ್ಷಣೆ ಮಾತ್ರವಲ್ಲದೇ, ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಊರಿನ ಹೆಸರು ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಇಲ್ಲಿದೆ ಟಿಪ್ಸ್.

ಗೂಗಲ್‌ನ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ಮ್ಯಾಪ್, ಇಂದು ಹತ್ತು ಹಲವು ಯೋಜನೆಗಳಲ್ಲಿ ಬಳಕೆಯಾಗುತ್ತಿದೆ. ಅಲ್ಲದೆ, ಬಹಳಷ್ಟು ಕಂಪನಿಗಳು, ಉದ್ಯಮಗಳು, ಮಾರುಕಟ್ಟೆಯಲ್ಲಿ ಗೂಗಲ್ ಮ್ಯಾಪ್ ಬಳಕೆಯಲ್ಲಿದೆ. ಗೂಗಲ್ ಮ್ಯಾಪ್‌ನಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲವೂ ಇರುವುದರಿಂದ, ಜನರು ಯಾವುದೇ ಭಾಷಾ ಸಮಸ್ಯೆಯಿಲ್ಲದೇ ಬಳಸಲು ಅನುಕೂಲ. ಆದರೆ ಗೂಗಲ್‌ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್‌ನ ಪರಿಣಾಮ, ಅದರಲ್ಲಿನ ಹೆಸರುಗಳನ್ನು ಕನ್ನಡ ಅಥವಾ ಬೇರೆ ಪ್ರಾದೇಶಿಕ ಭಾಷೆಗೆ ಇಂಗ್ಲಿಷ್‌ನಿಂದ ಭಾಷಾಂತರಿಸುವಾಗ ಕೆಲವೊಂದು ಸಮಸ್ಯೆಗಳು ಉಂಟಾಗಿವೆ. ಸ್ಥಳ, ಊರಿನ ಹೆಸರನ್ನು ಗೂಗಲ್ ತಪ್ಪಾಗಿ ಉಚ್ಚರಿಸಿದೆ. ಅಥವಾ ತಪ್ಪಾಗಿ ಅರ್ಥೈಸಿಕೊಂಡಿದೆ. ಆದರೆ ಅದನ್ನು ಸರಿಪಡಿಸಲು ಅವಕಾಶಗಳಿವೆ.
Google Maps ನಮಗೆ ಚಾಲನೆ, ನಡಿಗೆ, ಬೈಕಿಂಗ್ ಮತ್ತು ಸಾರ್ವಜನಿಕ ಸಾರಿಗೆಗಾಗಿ ನಿಖರವಾದ ಮಾರ್ಗಗಳು, ನೈಜ ಸಮಯದ ಟ್ರಾವೆಲ್ ಅಪ್‌ಡೇಟ್ ಮತ್ತು ರೂಟ್ ಪ್ಲಾನಿಂಗ್ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಇದು ವರ್ಚುವಲ್ ಪರಿಶೋಧನೆಗಾಗಿ ಸ್ಟ್ರೀಟ್ ವ್ಯೂ ಆಯ್ಕೆ ಒದಗಿಸುತ್ತದೆ. ಅದರ ಜತೆಗೆ, ಗೂಗಲ್ ಮ್ಯಾಪ್‌ನಲ್ಲಿ ಬ್ಯುಸಿನೆಸ್ ಸಮಯ, ವಿಮರ್ಶೆಗಳಂತಹ ವ್ಯವಹಾರ ವಿವರಗಳನ್ನು ಪ್ರದರ್ಶಿಸುತ್ತದೆ ಮತ್ತು ಆಫ್‌ಲೈನ್ ನಕ್ಷೆಯ ಬಳಕೆಯನ್ನು ಅನುಮತಿಸುತ್ತದೆ. ಬಳಕೆದಾರರು ತಮಗೆ ಬೇಕಾದ ಮಾರ್ಗಗಳನ್ನು ಕಸ್ಟಮೈಸ್ ಮಾಡಬಹುದು, ಸ್ಥಳಗಳನ್ನು ಹಂಚಿಕೊಳ್ಳಬಹುದು ಮತ್ತು ಹತ್ತಿರದ ಸ್ಥಳಗಳನ್ನು ಅನ್ವೇಷಿಸಬಹುದು. ಹೆಚ್ಚುವರಿಯಾಗಿ, ಇದು ಇತರ Google ಸೇವೆಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಪ್ರಯಾಣದ ಸಂದರ್ಭದಲ್ಲಿ ಅಪಾಯದ ಎಚ್ಚರಿಕೆಗ ಮತ್ತು ವೇಗ ಮಿತಿಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಹೀಗೆ ಗೂಗಲ್ ಮ್ಯಾಪ್ ವಿವಿಧ ಸಂದರ್ಭದಲ್ಲಿ ಪ್ರಯೋಜನಕಾರಿಯಾಗಿದೆ.
ಗೂಗಲ್ ನಮ್ಮ ಬಳಕೆಗೆ ಒದಗಿಸಿದ ಜನಪ್ರಿಯ ಮ್ಯಾಪಿಂಗ್ ಸೇವೆಯು ಜನರಿಗೆ ಮಾತ್ರವಲ್ಲದೇ, ವ್ಯವಹಾರಗಳಿಗೆ ಕೂಡ ಉಪಯುಕ್ತವಾಗಬಹುದಾದ ವಿವಿಧ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
Google Maps ನ ಕೆಲವು ಅನುಕೂಲಗಳು ಇವು
ಗೂಗಲ್ ಮ್ಯಾಪ್ಸ್ ಬಳಕೆ ಉಚಿತ
ಬಳಸಲು ಮತ್ತು ನ್ಯಾವಿಗೇಟ್ ಮಾಡಲು ಸುಲಭ
ಗೂಗಲ್ ಮ್ಯಾಪ್ ನಿರ್ದೇಶನಗಳು, ರಸ್ತೆ ವೀಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಮಾಹಿತಿ ನೀಡುತ್ತದೆ.
ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸಾಧನಗಳಲ್ಲಿ ಲಭ್ಯ
ಹೆಚ್ಚಿನ ನಿಖರತೆ ಮತ್ತು ವಿಶ್ವಾಸಾರ್ಹತೆ
ಹೊಸ ವೈಶಿಷ್ಟ್ಯಗಳು ಮತ್ತು ಡೇಟಾದೊಂದಿಗೆ ನಿರಂತರವಾಗಿ ಅಪ್‌ಡೇಟ್
ಹಲವು ಭಾಷೆಗಳಲ್ಲಿ ಲಭ್ಯ
ಉದ್ಯಮ ಮತ್ತು ವ್ಯವಹಾರಗಳಿಗೆ ಪ್ರಬಲ ಮಾರ್ಕೆಟಿಂಗ್ ಸಾಧನ
ಗೂಗಲ್ ಮ್ಯಾಪ್ ಪ್ರಯಾಣ, ಹೊಸ ಸ್ಥಳ ಪರಿಶೋಧನೆ ಮತ್ತು ದೈನಂದಿನ ಕಾರ್ಯಗಳನ್ನು ಸುಲಭವಾಗಿಸುವ ಬಹೂಪಯೋಗಿ ಅಪ್ಲಿಕೇಶನ್ ಆಗಿದೆ. ಆದರೆ ಅದರಲ್ಲಿನ ಹೆಸರುಗಳನ್ನು ಕನ್ನಡ ಅಥವಾ ಬೇರೆ ಪ್ರಾದೇಶಿಕ ಭಾಷೆಗೆ ಇಂಗ್ಲಿಷ್‌ನಿಂದ ಭಾಷಾಂತರಿಸುವಾಗ ಕೆಲವೊಂದು ಸಮಸ್ಯೆಗಳು ಉಂಟಾಗಿವೆ, ಅದನ್ನು ಸರಿಪಡಿಸಲು ಸಾಧ್ಯವಿದೆ. ಗೂಗಲ್ ಮ್ಯಾಪ್‌ನಲ್ಲಿ ಕರ್ನಾಟಕದ ಹಳ್ಳಿಗಳ ಹೆಸರು ಗಮನಿಸಲು ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಗೂಗಲ್‌ಗೆ ಸರಿಯಾದ ಹೆಸರು ತಿಳಿಸುವುದು ಹೇಗೆ?
Google ನಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ನಿಮ್ಮ ಪ್ರಾದೇಶಿಕ ಭಾಷೆಗೆ ಬದಲಾಯಿಸಲು, ಈ ಸರಳ ಹಂತಗಳನ್ನು ಅನುಸರಿಸಿ:
Google Maps ಓಪನ್ ಮಾಡಿ,
Google Mapsನಲ್ಲಿ ಸಂಪಾದನೆ ಅಥವಾ ಎಡಿಟ್ ಆಯ್ಕೆ ಮಾಡಿ.
Google Maps ತೆರೆಯಿರಿ.
ನಿಮ್ಮ ಹಳ್ಳಿಯ ಹೆಸರನ್ನು ಹುಡುಕಿ.
ನಕ್ಷೆಯಲ್ಲಿ ಹೆಸರು ಅಥವಾ ಸ್ಥಳದ ಮೇಲೆ ಕ್ಲಿಕ್ ಮಾಡಿ.
ಬಳಿಕ ಅಲ್ಲಿ, ಸಜೆಸ್ಟ್ ಎಡಿಟ್ ಅಥವಾ ಸಂಪಾದನೆಯನ್ನು ಸೂಚಿಸಿ ಕ್ಲಿಕ್ ಮಾಡಿ, ನಂತರ ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ ಕ್ಲಿಕ್ ಮಾಡಿ.
ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಸರಿಯಾದ ಹೆಸರನ್ನು ನಮೂದಿಸಿ.
ಗೂಗಲ್‌ಗೆ ವಿನಂತಿಯನ್ನು ಸಲ್ಲಿಸಿ ಮತ್ತು ಅನುಮೋದನೆಗಾಗಿ ಕಾಯಿರಿ.
Google Maps ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ವರದಿ ಮಾಡಲು ಈ ಹಂತ ಅನುಸರಿಸಿ.
Google Maps ತೆರೆಯಿರಿ ಮತ್ತು ಸ್ಥಳಕ್ಕೆ ಹೋಗಿ.
ಫೀಡ್‌ಬ್ಯಾಕ್ ಅಥವಾ ಪ್ರತಿಕ್ರಿಯೆ ಎಂದಿರುವಲ್ಲಿ ಕ್ಲಿಕ್ ಮಾಡಿ, ಸಾಮಾನ್ಯವಾಗಿ ಕೆಳಭಾಗದಲ್ಲಿ ಇರುತ್ತದೆ, ಅದನ್ನು ಗಮನಿಸಿ.
ರಾಂಗ್ ಇನ್ಫೋ ಎಂದಿರುವುದು ಅಥವಾ ತಪ್ಪು ಮಾಹಿತಿ ಎಂದಿರುವಲ್ಲಿ ಆಯ್ಕೆ ಮಾಡಿ ಮತ್ತು ಸಮಸ್ಯೆಯನ್ನು ವಿವರಿಸಿ.
ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಸರಿಯಾದ ಹೆಸರನ್ನು ಒದಗಿಸಿ.
Google ಸರ್ಚ್ ಮತ್ತು Google ಬ್ಯುಸಿನೆಸ್ ಪ್ರೊಫೈಲ್‌ಗಳು ಇದ್ದರೆ,
Google ಹುಡುಕಾಟ ಅಥವಾ Google ವ್ಯಾಪಾರದಲ್ಲಿ ಗ್ರಾಮದ ಹೆಸರು ತಪ್ಪಾಗಿ ಕಂಡುಬಂದರೆ, Googleನ ಜಿಯೋ ಡೇಟಾ ಸಹಾಯದ ಮೂಲಕ ತಪ್ಪಾದ ಹೆಸರನ್ನು ವರದಿ ಮಾಡಿ.
ನೀವು ಸೂಚಿಸಿದ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಅನ್ವಯಿಸಲು ಗೂಗಲ್ ಕೆಲವು ದಿನಗಳು ಅಥವಾ ವಾರಗಳನ್ನು ತೆಗೆದುಕೊಳ್ಳಬಹುದು. ಅದನ್ನು ಪರಿಶೀಲಿಸಿ, ಸರಿಯಾಗಿದ್ದರೆ, ನಿಮ್ಮ ಕೋರಿಕೆಯಂತೆ ಪರಿಷ್ಕೃತ ಪದ, ವಿವರ ಗೂಗಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

