ಜಪಾನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆಯೇ; MEXT ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆ ಹೀಗಿದೆ
ಜಪಾನ್ ಸರ್ಕಾರದ ಧನಸಹಾಯದೊಂದಿಗೆ ನೀಡಲಾಗುವ MEXT ಸ್ಕಾಲರ್‌ಶಿಪ್, ಜಪಾನ್ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆಯಿರುವವರ ಕನಸು ನನಸಾಗಿಸಲು ನೆರವಾಗುತ್ತದೆ. ಈ ವಿದ್ಯಾರ್ಥಿವೇತನವು ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದೇಶಗಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ.

2026 ರ ಶೈಕ್ಷಣಿಕ ವರ್ಷದಲ್ಲಿ ಜಪಾನ್ ಸರ್ಕಾರದ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (MEXT)ದ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ವಿವಿಧ ದೇಶಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಮೂಲಕ ಜಪಾನ್ ದೇಶದಲ್ಲಿ ಸಂಪೂರ್ಣ ಆರ್ಥಿಕ ಬೆಂಬಲದೊಂದಿಗೆ ಉನ್ನತ ಶಿಕ್ಷಣವನ್ನು ಪಡೆಯುವ ಕನಸು ನನಸಾಗಿಸಲು ಈ ಸ್ಕಾಲರ್‌ಶಿಪ್ ಮೂಲಕ ಅವಕಾಶ ಪಡೆಯಬಹುದು. ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿರುವ ಜಪಾನ್‌ನಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ, MEXT ವಿದ್ಯಾರ್ಥಿವೇತನವು ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ಅಮೂಲ್ಯ ಅವಕಾಶವನ್ನು ನೀಡುತ್ತದೆ.
ಜಪಾನ್ ಸರ್ಕಾರದ ಧನಸಹಾಯದೊಂದಿಗೆ ಈ ವಿದ್ಯಾರ್ಥಿವೇತನವು ಪದವಿಪೂರ್ವ, ಸ್ನಾತಕೋತ್ತರ ಪದವಿ ಮಾತ್ರವಲ್ಲದೆ ಡಾಕ್ಟರೇಟ್ ಹಾಗೂ ವಿಶೇಷ ತರಬೇತಿ ಮತ್ತು ಸಂಶೋಧನಾ ಅಧ್ಯಯನಗಳು ಸೇರಿದಂತೆ ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದೇಶಗಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ.
MEXT 2025-2026 ಅರ್ಜಿಸಲ್ಲಿಸಲಿ ಅರ್ಹತಾ ಮಾನದಂಡಗಳು
- ಅರ್ಜಿದಾರರು ಜಪಾನ್ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳ ಪ್ರಜೆಯಾರಬೇಕು.
- ಸಂಶೋಧನಾ ವಿದ್ಯಾರ್ಥಿಯಾಗಿ ಅರ್ಜಿ ಸಲ್ಲಿಸುವವರು 1990ರ ಏಪ್ರಿಲ್ 2ರಂದು ಅಥವಾ ನಂತರ ಜನಿಸಿರಬೇಕು.
- ಅರ್ಜಿದಾರರು ಜಪಾನ್‌ನಲ್ಲಿ ಅಪೇಕ್ಷಿತ ಕೋರ್ಸ್ ಪ್ರವೇಶಕ್ಕೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಸಂಶೋಧನಾ ವಿದ್ಯಾರ್ಥಿಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಅಥವಾ ಹೆಚ್ಚಿನ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.
- ಜಪಾನ್‌ನಲ್ಲಿ ಅಧ್ಯಯನ ಮಾಡಲು ಅರ್ಜಿದಾರರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರಬೇಕು.
- ಆಯಾ ಕೋರ್ಸ್ ಅವಲಂಬಿಸಿ ಜಪಾನೀಸ್ ಅಥವಾ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆಯು ಹೆಚ್ಚಾಗಿ ಅಗತ್ಯವಾಗಿರುತ್ತದೆ.
ಅಗತ್ಯ ದಾಖಲೆಗಳು
ಅರ್ಜಿದಾರರು ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ. ಶೈಕ್ಷಣಿಕ ಪ್ರಮಾಣಪತ್ರಗಳು, ಪದವಿ ಪ್ರಮಾಣಪತ್ರ, ಶಿಫಾರಸು ಪತ್ರ, ವೈದ್ಯಕೀಯ ಪ್ರಮಾಣಪತ್ರ, ಸಂಶೋಧನಾ ಪ್ರಸ್ತಾವನೆ ಅಥವಾ ಅಧ್ಯಯನ ಯೋಜನೆ (ಸಂಶೋಧನಾ ಅರ್ಜಿದಾರರಿಗೆ), ಭಾಷಾ ಪ್ರಾವೀಣ್ಯತೆಯ ಪುರಾವೆ (ಅಗತ್ಯವಿದ್ದರೆ ಮಾತ್ರ). ಇವಿಷ್ಟೂ ನಿಖರ ಮಾಹಿತಿ ಅಲ್ಲ. ರಾಯಭಾರ ಕಚೇರಿಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಾಗ ಹೆಚ್ಚುವರಿ ದಾಖಲೆಗಳನ್ನು ಕೂಡಾ ಕೇಳಬಹುದು.
MEXT 2025-2026 ಸ್ಕಾಲರ್ಶಿಪ್ ಅರ್ಜಿಗೆ ಕೊನೆಯ ದಿನಾಂಕ
ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿ ಘೋಷಿಸಿದಂತೆ, MEXT 2025ಕ್ಕೆ (2026ರಲ್ಲಿ ಅಡ್ಮಿಶನ್) ಅರ್ಜಿ ಸಲ್ಲಿಸಲು ನಾಲ್ಕು ವಿಭಾಗಗಳಲ್ಲಿ ಅವಕಾಶವಿದೆ.
ವರ್ಗ | ವಿದ್ಯಾರ್ಥಿವೇತನಗಳ ಸಂಖ್ಯೆ | ಅರ್ಜಿ ಸಲ್ಲಿಕೆ ಅವಧಿ |
---|---|---|
ಸಂಶೋಧನಾ ವಿದ್ಯಾರ್ಥಿಗಳು (ಸ್ನಾತಕೋತ್ತರ/ಪಿಎಚ್‌ಡಿ ಮುಂದುವರಿಸುವ ಆಯ್ಕೆಯೊಂದಿಗೆ) | - | 14 ಏಪ್ರಿಲ್ - 13 ಮೇ, 2025 |
ಪದವಿಪೂರ್ವ ವಿದ್ಯಾರ್ಥಿಗಳು (ಪದವಿಪೂರ್ವ ಹಂತ) | 12 | 22 ಏಪ್ರಿಲ್ - 26 ಮೇ |
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಪದವಿ ಪೂರ್ವ ಹಂತ) | 12 | 22 ಏಪ್ರಿಲ್ - 26 ಮೇ |
ವಿಶೇಷ ತರಬೇತಿ ಕಾಲೇಜು (ಪ್ರಮಾಣಪತ್ರ ಸಿಗುವ ಪದವಿಪೂರ್ವ ಹಂತ) | 12 | 22 ಏಪ್ರಿಲ್ - 26 ಮೇ |
ಅರ್ಜಿ ಸಲ್ಲಿಕೆ ಹಂತಗಳು
- ಅರ್ಜಿದಾರರು ಅಗತ್ಯ ದಾಖಲೆಗಳನ್ನು ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ ಅಥವಾ ದೂತಾವಾಸಗಳಿಗೆ ಸಲ್ಲಿಕೆ ಮಾಡಬೇಕು.
- ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ರಾಯಭಾರ ಕಚೇರಿಯು ಅರ್ಜಿಗಳನ್ನು ಪರಿಶೀಲಿಸುತ್ತದೆ.
- ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಉದ್ದೇಶಿತ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಿಖಿತ ಪರೀಕ್ಷೆಗಳಿಗೆ ಹಾಜರಾಗಲು ಕೇಳಬಹುದು.
- ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ರಾಯಭಾರ ಕಚೇರಿಯ ಅಧಿಕಾರಿಗಳು ಸಂದರ್ಶನ ಮಾಡುತ್ತಾರೆ.
- ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು MEXTಗೆ ಶಿಫಾರಸು ಮಾಡಲಾಗುತ್ತದೆ. ಅದು ನಂತರ ಅಂತಿಮ ಪ್ರವೇಶಕ್ಕಾಗಿ ಜಪಾನ್ ವಿಶ್ವವಿದ್ಯಾಲಯಗಳೊಂದಿಗೆ ಸಂವಹನ ನಡೆಸುತ್ತದೆ.
- MEXT ಅಂತಿಮ ಆಯ್ಕೆ ಕುರಿತು ದೃಢೀಕರಿಸಿ ವಿದ್ಯಾರ್ಥಿವೇತನ ನೀಡುತ್ತದೆ.
ಇದನ್ನೂ ಓದಿ | ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಶೇ 93.66 ವಿದ್ಯಾರ್ಥಿಗಳು ಉತ್ತೀರ್ಣ; ವಿದ್ಯಾರ್ಥಿನಿಯರದ್ದೇ ಮೇಲುಗೈ