ಎಜುಕೇಶನ್ ಲೋನ್ ಪಡೆಯುವುದು ಹೇಗೆ, ದಾಖಲೆಗಳು, ಬಡ್ಡಿದರ ಹಾಗೂ ಮರುಪಾವತಿ ನಿಯಮ ಹೇಗಿರುತ್ತದೆ?
ಉನ್ನತ ವ್ಯಾಸಂಗ ಮಾಡುವ ಸಲುವಾಗಿ ಹಲವು ವಿದ್ಯಾರ್ಥಿಗಳು ಶಿಕ್ಷಣ ಸಾಲ ಅಥವಾ ಎಜುಕೇಶನ್ ಲೋನ್ ಮೊರೆ ಹೋಗುತ್ತಾರೆ. ವ್ಯಾಸಂಗ ಮಾಡುವ ಸಂಸ್ಥೆಯ ಪ್ರಕಾರ, ಆಯ್ಕೆ ಮಾಡಿಕೊಂಡಿರುವ ಕೋರ್ಸ್, ಆರ್ಥಿಕ ಪರಿಸ್ಥಿತಿ, ಬಡ್ಡಿದರ ಹೀಗೆ ವಿವಿಧ ಅಂಶಗಳನ್ನು ಗಮನಿಸಿ ಸಾಲ ಪಡೆಯುವುದು ಉತ್ತಮ.

ಶಿಕ್ಷಣ ಸಾಲಗಳು ಹಲವು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವೆಚ್ಚ, ಬೋಧನೆ, ಶುಲ್ಕಗಳು, ಪುಸ್ತಕಗಳ ವೆಚ್ಚಗಳನ್ನು ಭರಿಸಲು ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಎಜುಕೇಶನ್ ಲೋನ್ ನೀಡುತ್ತವೆ. ಶೈಕ್ಷಣಿಕ ಸಾಲಗಳನ್ನು ಅಧ್ಯಯನಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಬಳಸಬಹುದು. ವಿದ್ಯಾರ್ಥಿಗಳು ನಿರ್ದಿಷ್ಟ ಪ್ರಮಾಣದ ಸಾಲವನ್ನು ಪಡೆದು, ತಮ್ಮ ಪದವಿ ಪೂರ್ಣಗೊಳಿಸಿದ ನಂತರ ಅದನ್ನು ಬಡ್ಡಿ ಸಹಿತ ಮರುಪಾವತಿಸಬೇಕಾಗುತ್ತದೆ.
ಭಾರತದಲ್ಲಿ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಎಜುಕೇಶನ್ ಲೋನ್ ನೀಡುತ್ತವೆ. ಶಿಕ್ಷಣ ಸಾಲದ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ಸಣ್ಣ ಪ್ರಮಾಣದ ವ್ಯತ್ಯಾಸಗಳಿರುತ್ತದೆ. ಪಿಯುಸಿ ನಂತರ ಮಾಡುವ ಪದವಿ ಶಿಕ್ಷಣ ಹಾಗೂ ಆ ನಂತರ ಮಾಡುವ ಉನ್ನತ ಶಿಕ್ಷಣಕ್ಕೆ ಸಾಮಾನ್ಯವಾಗಿ ಶುಲ್ಕ ಹಾಗೂ ಇತರ ವೆಚ್ಚಗಳು ಹೆಚ್ಚಿರುತ್ತದೆ. ಎಲ್ಲರಿಂದ ದುಬಾರಿ ಶುಲ್ಕ ಪಾವವತಿಸುವ ಸಾಮರ್ಥ್ಯ ಇರುವುದಿಲ್ಲ. ಆಗ ಎಜುಕೇಶನ್ ಲೋನ್ ಪಡೆಯಬಹುದು. ಕೋರ್ಸ್ ಪೂರ್ಣಗೊಳಿಸಲು ಬೇಕಾಗುವ ಮೊತ್ತವನ್ನು ಎಜುಕೇಶನ್ ಲೋನ್ ರೂಪದಲ್ಲಿ ಪಡೆದು, ಕೋರ್ಸ್ ಪೂರ್ಣಗೊಂಡ ನಂತರ ಪಾವತಿಸಬೇಕಾಗುತ್ತದೆ.
ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಪರಿಗಣಿಸಬೇಕಾದ ಹಲವಾರು ಅಂಶಗಳಿವೆ. ಉದಾಹರಣೆಗೆ ನೀವು ವ್ಯಾಸಂಗ ಮಾಡುವ ಸಂಸ್ಥೆಯ ಪ್ರಕಾರ, ಆಯ್ಕೆ ಮಾಡಿಕೊಂಡಿರುವ ಕೋರ್ಸ್, ನಿಮ್ಮ ಆರ್ಥಿಕ ಪರಿಸ್ಥಿತಿ ಹೀಗೆ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ವಿಭಿನ್ನ ಸಾಲ ಆಯ್ಕೆಗಳನ್ನು ನೋಡಿಕೊಂಡು, ಬಡ್ಡಿದರಗಳನ್ನು ಗಮನಿಸಿ ಅಂತಿಮ ನಿರ್ಧಾರಕ್ಕೆ ಬರುವುದು ಅತ್ಯಗತ್ಯ.
ಸಾಲದ ವಿಧ
ದೇಶದೊಳಗೆ ಶಿಕ್ಷಣ ಪಡೆಯುವವರಿಗೆ ದೇಶೀಯ ಶಿಕ್ಷಣ ಸಾಲ ಮತ್ತು ವಿದೇಶಗಳಿಗೆ ಹೋಗಿ ಶಿಕ್ಷಣ ಮುಂದುವರೆಸುವವರಿಗೆ ವಿದೇಶಿ ಶಿಕ್ಷಣ ಸಾಲವನ್ನು ನೀಡಲಾಗುತ್ತದೆ. ಸಹಜವಾಗಿ ವಿದೇಶದಲ್ಲಿ ಓದುವವರಿಗೆ ಶಿಕ್ಷಣ ವೆಚ್ಚ ಹೆಚ್ಚಿರುವುದರಿಂದ ಸಾಲದ ಮೊತ್ತವೂ ಹೆಚ್ಚಿರುತ್ತದೆ. ಇದೇ ವೇಳೆ ಪದವಿಪೂರ್ವ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿಯ ಆಧಾರದಲ್ಲಿ ಶಿಕ್ಷಣ ಸಾಲ ನೀಡಲಾಗುತ್ತದೆ.
ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಲು, ನೀವು ಕೆಲವು ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.
- ಪೂರ್ಣಗೊಳಿಸಿದ ಅರ್ಜಿ ನಮೂನೆ
- ಗುರುತಿನ ಪುರಾವೆ (ಆಧಾರ್ ಕಾರ್ಡ್ಮ ಪ್ಯಾನ್ ಕಾರ್ಡ್)
- ವಾಸಸ್ಥಳದ ಪುರಾವೆ (ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್)
- ಅಡ್ಮಿಶನ್ ಪ್ರೂಫ್ (ಶೈಕ್ಷಣಿಕ ಸಂಸ್ಥೆಯಿಂದ ಕೊಡುವ ಸ್ವೀಕಾರ ಪತ್ರ)
- ಶಿಕ್ಷಣದ ವೆಚ್ಚದ ಕುರಿತ ಸ್ಟೇಟ್‌ಮೆಂಟ್ (ಇದನ್ನು ಶಿಕ್ಷಣ ಸಂಸ್ಥೆಯಿಂದ ಕೇಳಿ ಪಡೆಯಬೇಕು)
- ಆಯಾ ಬ್ಯಾಂಕ್ ಹೇಳುವ ಇತರೆ ದಾಖಲೆಗಳು
ಬಡ್ಡಿದರ ಹೇಗಿರುತ್ತದೆ?
ಬಡ್ಡಿದರವು ಬ್ಯಾಂಕ್‌ಗಿಂತ ಬ್ಯಾಂಕ್‌ಗೆ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಬ್ಯಾಂಕ್‌ಗಳಲ್ಲಿ ಅಂದಾಜು 9 ಪ್ರತಿಶತಕ್ಕಿಂತ ಹೆಚ್ಚು ಬಡ್ಡಿದರ ನಿಗದಿಪಡಿಸಲಾಗಿರುತ್ತದೆ.
ಶೈಕ್ಷಣಿಕ ಸಾಲದ ಮೊತ್ತ ಎಷ್ಟು? ಮರುಪಾವತಿ ನಿಯಮ ಹೇಗೆ?
ಸಾಲದ ಮೊತ್ತವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ರೂ.1 ಕೋಟಿಯವರೆಗೆ ಮತ್ತು ದೇಶೀಯ ವಿದ್ಯಾರ್ಥಿಗಳಿಗೆ ರೂ.50 ಲಕ್ಷದವರೆಗೂ ಬ್ಯಾಂಕ್‌ಗಳು ಸಾಲ ನೀಡಬಹುದು. ವಿದ್ಯಾರ್ಥಿಗಳು ಶಿಕ್ಷಣದ ಉದ್ದೇಶಕ್ಕಾಗಿ ಖರೀದಿಸುವ ಲ್ಯಾಪ್‌ಟಾಪ್, ಕ್ಯಾಮೆರಾದಂತಹ ವಸ್ತುಗಳೂ ಇದರಲ್ಲಿ ಸೇರುತ್ತದೆ. ಶಿಕ್ಷಣ ಸಾಲಕ್ಕೆ ಪೋಷಕರು ಜಂಟಿ ಸಾಲಗಾರರಾಗಿರಬೇಕಾಗುತ್ತದೆ.
ಆಯಾ ಕೋರ್ಸ್ ಮುಗಿದ ನಂತರ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಕೋರ್ಸ್ ಮಾಡುವಾಗ ಸಾಲ ಮರುಪಾವತಿಸಬೇಕಾಗಿಲ್ಲ. ಸಾಮಾನ್ಯವಾಗಿ ಕೋರ್ಸ್ ಮುಗಿದ ನಂತರ 6 ತಿಂಗಳಿಂದ 1 ವರ್ಷದವರೆಗೆ ಸಾಲ ಮೊರಟೋರಿಯಂ ಅವಧಿ ಇರುತ್ತದೆ. ಅಂದರೆ ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕಾಗಿರುವುದಿಲ್ಲ. ಈ ಅವಧಿಯನ್ನು ವಿದ್ಯಾರ್ಥಿಯು ಉದ್ಯೋಗ ಹುಡುಕಲು ಸಮಯಾವಕಾಶವಾಗಿ ಪರಿಗಣಿಸಲಾಗುತ್ತದೆ. ಆಯಾ ಬ್ಯಾಂಕ್‌ಗಳು ಈ ಅವಧಿಯನ್ನು ತಿಳಿಸುತ್ತವೆ. ಆ ಅವಧಿ ಮುಗಿದ ತಕ್ಷಣ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಬೇಕಾಗುತ್ತದೆ.