Fitness Tips: 40 ವರ್ಷಗಳ ನಂತರ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಕರಗಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ವಯಸ್ಸಾಗುತ್ತಾ ಹೋದಂತೆ ಅರೋಗ್ಯ ಸಮಸ್ಯೆಗಳು ಮನುಷ್ಯನನ್ನು ಹೆಚ್ಚು ಕಾಡುತ್ತಾ ಹೋಗುತ್ತವೆ. ಬಿಪಿ, ಮಧುಮೇಹದ ಜೊತೆಗೆ ಫಿಟ್ ನೆಸ್ ಕಾಪಾಡಿಕೊಳ್ಳುವುದು ಹೆಚ್ಚಿನವರಿಗೆ ಒಂದು ದೊಡ್ಡ ಸವಾಲಾಗಿರುತ್ತದೆ. ಹಾಗಾದ್ರೆ ಕೆಲವು ಸರಳ ಸಲಹೆಗಳನ್ನು ಅನುಸರಿಸಿ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಬೊಜ್ಜನ್ನು ಕರಗಿಸುವುದು ಹೇಗೆ?

ನಲವತ್ತು ವರ್ಷಗಳ ನಂತರ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಕರಗಿಸುವುದು ಎಂದರೆ ಅದು ಸುಲಭದ ಮಾತಲ್ಲ. ಹೊಟ್ಟೆಯಲ್ಲಿ ಅಧಿಕ ಪ್ರಮಾಣದ ಬೊಜ್ಜು ಶೇಖರಗೊಂಡು ನೀವು ನೋಡಲು ಆಕರ್ಷಕವಾಗಿ ಕಾಣಿಸದೇ ಇರಬಹುದು. ಅಲ್ಲದೆ, ಅಧಿಕ ಕೊಬ್ಬಿನ ಪರಿಣಾಮ ಕೆಲವೊಂದು ಕಾಯಿಲೆಗಳು ಕೂಡ ನಿಮ್ಮನ್ನು ಬಾಧಿಸಬಹುದು. ಇದನ್ನು ತಡೆಗಟ್ಟಲು ಕೆಲವೊಮ್ಮೆ ಜನರು ದಿಢೀರ್ ತೂಕ ಇಳಿಸುವ ಅವೈಜ್ಞಾನಿಕ ಸಲಹೆಗಳ ಮೊರೆ ಹೋಗುತ್ತಾರೆ. ಆದರೆ ಎಷ್ಟೋ ಬಾರಿ ಇದರಿಂದ ಪ್ರಯೋಜನಕ್ಕಿಂತ ಹೆಚ್ಚಾಗಿ ಅಡ್ಡಪರಿಣಾಮಗಳು ಉಂಟಾಗಿದೆ. ಇರುವ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಲು ಹೋಗಿ ಇನ್ನೊಂದಷ್ಟು ಹೊಸ ಅನಾರೋಗ್ಯಗಳನ್ನು ಮೇಲೆ ಎಳೆದುಕೊಂಡವರೇ ಅಧಿಕ. ಹೀಗಾಗಿ ಯಾವುದೇ ಕ್ರಮಗಳನ್ನು ಅನುಸರಿಸುವ ಮುನ್ನ ಅಂತಹ ಕ್ರಮಗಳ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವುದು ವೈದ್ಯರ ಅಭಿಪ್ರಾಯ.
ದೊಡ್ಡ ಹೊಟ್ಟೆ ಬೇಕು ಎಂದು ಯಾರೂ ಬಯಸುವುದಿಲ್ಲ. ಹಾಗಂತ ಅದನ್ನು ಕರಗಿಸಲು ಸ್ವಲ್ಪ ಶ್ರಮಪಡಲು ಯಾರೂ ತಯಾರಿರುವುದಿಲ್ಲ. ಅದರಲ್ಲೂ ವಯಸ್ಸು 40 ಕಳೆಯುತ್ತಾ ಹೋದಂತೆ ಫಿಟ್ನೆಸ್ ಯೌವನದಲ್ಲಿ ಇದ್ದಂತೆ ಇರುವುದಿಲ್ಲ. ಹೊಟ್ಟೆಯ ಸುತ್ತ ಬೊಜ್ಜು ಬಂದು ಕೆಲವರಿಗೆ ಅವರ ಬಗ್ಗೆಯೇ ಕೀಳರಿಮೆ ಹುಟ್ಟಿಸುತ್ತೆ. ಅದಕ್ಕಾಗಿಯೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಫಿಟ್‌ನೆಸ್ ತರಬೇತುದಾರರು ಇಲ್ಲಿ ಕೆಲವು ಸಿಂಪಲ್ ಟಿಪ್ಸ್ ನೀಡಿದ್ದಾರೆ. ವಿಶೇಷವಾಗಿ 40 ವರ್ಷಗಳ ನಂತರ ದೇಹ ಉತ್ತಮ ಆಕಾರ ಪಡೆಯಲು ಅನುಸರಿಸಬೇಕಾದ ಆಹಾರ ಪದ್ಧತಿ ಅಥವಾ ವ್ಯಾಯಾಮ ದಿನಚರಿ ಇಲ್ಲಿದೆ.
ಆಹಾರ ಜರ್ನಲಿಂಗ್ ಅನ್ನು ಪ್ರಾರಂಭಿಸಿ. ನೀವು ಏನು ತಿನ್ನಬೇಕು, ಎಷ್ಟು ತಿನ್ನಬೇಕು, ತಿನ್ನುವ ಸಮಯ ಮತ್ತು ಅದರ ಪ್ರಮಾಣವನ್ನು ನೋಟ್ ಮಾಡಿ ಅದನ್ನು ಟ್ರ್ಯಾಕ್ ಮಾಡಿ. ನೀವು ತಿನ್ನುವ ಪ್ರತಿಯೊಂದನ್ನೂ ಅದರಲ್ಲಿ ಸೇರಿಸಿ. ಅದು ಒಂದು ತುತ್ತು ಆದರೂ ಸಹ. 7 ದಿನಗಳವರೆಗೆ ಅದನ್ನು ಟ್ರ್ಯಾಕ್ ಮಾಡಿ.
ಪ್ರತಿದಿನ ಕನಿಷ್ಠ 30 ನಿಮಿಷಗಳು ನಡೆಯಿರಿ. ಪ್ರತೀ ಹೆಜ್ಜೆಗಳನ್ನು ಎಣಿಕೆ ಮಾಡಿ. ದಿನಕ್ಕೆ 6 ಸಾವಿರದಿಂದ 8 ಸಾವಿರ ಹೆಜ್ಜೆಗಳನ್ನು ಗುರಿಯಾಗಿಸಿ.
ಊಟದ ಜೊತೆಗೆ ಸಾಕಷ್ಟು ನೀರು ಕುಡಿಯಿರಿ. ನಮ್ಮಲ್ಲಿ ಹೆಚ್ಚಿನವರು ಸರಿಯಾಗಿ ನೀರನ್ನೇ ಕುಡಿಯೋದಿಲ್ಲ ಮತ್ತು ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನೀರು ಒಂದು ಉತ್ತಮ ಔಷಧದಂತೆ. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಿರಿ.
ವಾರಕ್ಕೆ 3 ದಿನವಾದರೂ ಭಾರ ಎತ್ತುವಂತಹ ವ್ಯಾಯಾಮವನ್ನು ಮಾಡಿ. ನಿಮ್ಮ ದೇಹದ ಪ್ರಮುಖ ಸ್ನಾಯು ಗುಂಪುಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿ.
ಸಾಮಾನ್ಯ ದೇಹದ ತೂಕದ ಪ್ರತಿ ಪೌಂಡ್‌ಗೆ ಸುಮಾರು 1 ಗ್ರಾಂ ಪ್ರೋಟೀನ್ ಸೇವಿಸಿ. 170 ಪೌಂಡ್‌ಗಳು = 170 ಗ್ರಾಂ ಪ್ರೋಟೀನ್.
ತಿನ್ನುವ ಆಹಾರ ಇತಿ ಮಿತಿಯಲ್ಲಿರಲಿ. ಸಕ್ಕರೆಯಂತಹ ಪದಾರ್ಥಗಳನ್ನು ಆದಷ್ಟು ದೂರವಿಡಿ.
ಉಳಿದೆಲ್ಲವನ್ನೂ ನಿರ್ಲಕ್ಷಿಸಿ. ಈ ಪ್ರಯಾಣವು ನಿಮ್ಮದಾಗಿದೆ. ನಿಮ್ಮ ಗುರಿಯನ್ನು ಸಾಧಿಸುವತ್ತ ಗಮನ ಕೊಡಿ.
ಈ ಸರಳ ಸಲಹೆಗಳನ್ನು ಪಾಲಿಸಿ. ಯಾವುದೇ ಹೊಸ ಆಹಾರ ಅಥವಾ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, ವಿಶೇಷವಾಗಿ 40ರ ನಂತರ ಯಾವಾಗಲೂ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಲು ಮರೆಯದಿರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
