Honey: ಜೇನುತುಪ್ಪದಲ್ಲಿ ಕಲಬೆರಕೆ ಪತ್ತೆಹಚ್ಚುವುದು ಹೇಗೆ; ಈ ಸರಳ ಪರೀಕ್ಷೆಗಳ ಮೂಲಕ ಶುದ್ಧ ಜೇನುತುಪ್ಪ ಮನೆಗೆ ತನ್ನಿ
Check for Adulteration in Honey: ಬಂಗಾರದ ಬಣ್ಣ ಹೊಂದಿರುವ ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಆಯುರ್ವೇದದ ಅನೇಕ ಔಷಧಗಳಲ್ಲಿ ಇದನ್ನು ಬಳಸಲಾಗುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುವ ಜೇನುತುಪ್ಪದಲ್ಲಿ ಕಲಬೆರಕೆಯಾಗಿದ್ದರೆ ಅದನ್ನು ಗುರುತಿಸುವುದು ಹೇಗೆ ಎಂದು ತಿಳಿಯೋಣ.
ಆಯುರ್ವೇದ ವಿಜ್ಞಾನದಲ್ಲಿ ಜೇನುತುಪ್ಪಕ್ಕೆ ಬಹಳ ಮಹತ್ವ ನೀಡಲಾಗಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಔಷಧವನ್ನಾಗಿ ಬಳಸಲಾಗುತ್ತದೆ. ಜೇನುತುಪ್ಪದಲ್ಲಿರುವ ಉರಿಯೂತ ವಿರೋಧಿ ಗುಣವು ಶೀತ ಮತ್ತು ಕೆಮ್ಮನ್ನು ಹೋಗಲಾಡಿಸುತ್ತದೆ. ಇದು ತ್ವಚೆಯ ಹೊಳಪನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದ್ದರಿಂದಲೇ ಜೇನುತುಪ್ಪನ್ನು ಪ್ರಕೃತಿ ನೀಡಿರುವ ದ್ರವರೂಪದ ಜೈವಿಕ ಚಿನ್ನ ಎಂದು ಕರೆಯುತ್ತಾರೆ. ಆರೋಗ್ಯಕ್ಕೆ ವರದಾನವಾಗಿರುವ ಜೇನುತುಪ್ಪ ಕಲಬೆರಕೆಯಿಂದ ಕೂಡಿದ್ದರೆ ಆಗ ಅದು ಆರೋಗ್ಯಕ್ಕೆ ಪ್ರಯೋಜನವಾಗುವ ಬದಲಿಗೆ ಹಾನಿಯನ್ನುಂಟು ಮಾಡುತ್ತದೆ. ಹಾಗಾದರೆ ಮಾರುಕಟ್ಟೆಯಿಂದ ಖರೀದಿಸಿ ತರುವಾಗ ಅಸಲಿ ಜೇನುತುಪ್ಪ ಮತ್ತು ನಕಲಿ ಜೇನುತುಪ್ಪವನ್ನು ಗುರುತಿಸುವುದನ್ನು ತಿಳಿದುಕೊಂಡರೆ ಉತ್ತಮ. ಕೆಲವು ಸರಳ ಪರೀಕ್ಷೆಗಳನ್ನು ನಡೆಸುವ ಮೂಲಕ ನಾವೇ ಅಸಲಿ ಮತ್ತು ನಕಲಿ ಜೇನುತುಪ್ಪಗಳನ್ನು ಗುರುತಿಸಬಹುದಾಗಿದೆ.
ಜೇನುತುಪ್ಪದಲ್ಲಿ ಕಲಬೆರಕೆ ಗುರುತಿಸಲು ಹೀಗೆ ಮಾಡಿ
ನೀರಿನ ಪರೀಕ್ಷೆ
ಕಲಬೆರಕೆ ಜೇನುತುಪ್ಪವನ್ನು ಗುರುತಿಸಲು ಜೇನುತುಪ್ಪನ್ನು ನೀರಿಗೆ ಹಾಕಿ ಪರೀಕ್ಷಿಸಿ. ಈ ಪರೀಕ್ಷೆ ಮಾಡಲು ಒಂದು ಲೋಟ ನೀರು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನೀವು ಕೊಂಡು ತಂದ ಜೇನುತುಪ್ಪ ಅಸಲಿಯಾಗಿದ್ದರೆ ಅದು ಗ್ಲಾಸಿನ ಕೆಳಭಾಗದಲ್ಲಿ ಶೇಖರಣೆಯಾಗುತ್ತದೆ. ಅಲ್ಲದೆ ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ. ಆದರೆ ನಕಲಿ ಜೇನುತುಪ್ಪವು ಸಂಪೂರ್ಣವಾಗಿ ನೀರಿನಲ್ಲಿ ಕರುಗುತ್ತದೆ.
ಹೆಬ್ಬೆರಳಿನಿಂದ ಪರೀಕ್ಷಿಸಿ
ನಕಲಿ ಜೇನುತುಪ್ಪವನ್ನು ಗುರುತಿಸಲು ಒಂದು ಹನಿ ಜೇನುತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಳ್ಳಿ. ಬೆರಳುಗಳಿಂದ ಪರೀಕ್ಷಿಸಿದಾಗ ಅದು ದಪ್ಪವಾಗಿರುವುದು ಕಂಡು ಬಂದರೆ ಅದು ಅಸಲಿ ಜೇನುತುಪ್ಪವಾಗಿದೆ. ಅದೇ ಕಲಬೆರಕೆ ಜೇನುತುಪ್ಪವಾಗಿದ್ದರೆ ಅದು ತೆಳುವಾಗಿದ್ದು, ಚರ್ಮವು ಅದನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತದೆ.
ಬೆಂಕಿಯ ಸಹಾಯದಿಂದಲೂ ಪರೀಕ್ಷಿಸಿ
ಜೇನುತುಪ್ಪದ ಶುದ್ಧತೆಯನ್ನು ಬೆಂಕಿಯ ಸಹಾಯದಿಂದಲೂ ಪರೀಕ್ಷಿಸಬಹುದು. ಮರದ ಒಂದು ಚಿಕ್ಕ ಕೋಲನ್ನು ತೆಗೆದುಕೊಳ್ಳಿ. ಅದರ ತುದಿಗೆ ಹತ್ತಿಯನ್ನು ಸುತ್ತಿ. ಅದರ ಮೇಲೆ ಜೇನುತುಪ್ಪವನ್ನು ಸವರಿ. ಈಗ ಅದನ್ನು ಬೆಂಕಿಗೆ ಹಿಡಿಯಿರಿ. ಹತ್ತಿ ಉರಿಯಲು ಪ್ರಾರಂಭಿಸಿದರೆ ಜೇನುತುಪ್ಪವು ಶುದ್ಧವಾಗಿದೆ ಎಂದರ್ಥ. ಆದರೆ ಅದು ಉರಿಯಲು ಬಹಳ ಸಮಯ ತೆಗೆದುಕೊಂಡರೆ ಜೇನುತುಪ್ಪಕ್ಕೆ ನೀರು ಬೆರೆಸಲಾಗಿದೆ ಎಂದರ್ಥ.
ವಿನೆಗರ್ ಟೆಸ್ಟ್
ಒಂದು ಲೋಟಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. 2–3 ಹನಿ ವಿನೆಗರ್ ಮತ್ತು ಸ್ವಲ್ಪ ನೀರು ಸೇರಿಸಿ. 2ರಿಂದ 3 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದರಲ್ಲಿ ನೊರೆ ಹೊರಬರುತ್ತಿದ್ದರೆ, ನೀವು ತಂದ ಜೇನುತುಪ್ಪವು ನಕಲಿ ಎಂದು ತಿಳಿಯಿರಿ.
ಕಾಗದದ ಪರೀಕ್ಷೆ
ಕಾಗದದ ಮೇಲೆ ಒಂದೆರಡು ಹನಿ ಜೇನುತುಪ್ಪವನ್ನು ಹಾಕಿ ಪರೀಕ್ಷಿಸಬಹುದು. ಕಾಗದವು ಜೇನುತುಪ್ಪವನ್ನು ಹೀರಿಕೊಂಡರೆ ಅದು ನಕಲಿ ಎಂದರ್ಥ. ಅದೇ ಜೇನುತುಪ್ಪವು ಹಾಗೆಯೇ ಇದ್ದರೆ ಅದು ಶುದ್ಧ ಜೇನುತುಪ್ಪ ಎಂದು ತಿಳಿಯಿರಿ.
ಈ ರೀತಿ ನೀವು ಕೊಂಡು ತಂದ ಜೇನುತುಪ್ಪವನ್ನು ಪರೀಕ್ಷಿಸಿ. ಜೇನುತಪ್ಪದಲ್ಲಿ ಕಲಬೆರಕೆ ಕಂಡುಬಂದರೆ ಮತ್ತೊಮ್ಮೆ ಖರೀದಿಸುವಾಗ ಎಚ್ಚರವಹಿಸಿ.