ಕನ್ನಡ ಸುದ್ದಿ  /  Lifestyle  /  How To Cope With Layoff Anxiety? Here Is Some Solutions

how to cope with layoff fear: ಕೆಲಸದಿಂದ ವಜಾಗೊಳ್ಳುವ ಆತಂಕದಿಂದ ಹೊರ ಬರುವುದು ಹೇಗೆ? ಇಲ್ಲಿದೆ ಸಲಹೆ

how to cope with layoff fear: ವೃತ್ತಿಯನ್ನು ಸಂಪೂರ್ಣವಾಗಿ ಪ್ರೀತಿಸುವವರು, ನಿಜವಾಗಿಯೂ ಕೆಲಸದ ಅವಶ್ಯಕತೆ ಇರುವವರಿಗೆ ಕೆಲಸದಿಂದ ವಜಾಗೊಳ್ಳುವ ಸುದ್ದಿ ಒತ್ತಡ ಹಾಗೂ ಆತಂಕ ಉಂಟು ಮಾಡುವುದು ಸಹಜ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಈ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಕೆಲಸ ಕಳೆದುಕೊಳ್ಳುವ ಆತಂಕದಿಂದ ಹೊರ ಬರುವುದು ಹೇಗೆ?

ಆಪ್ತಸಮಾಲೋಚನೆ
ಆಪ್ತಸಮಾಲೋಚನೆ

ಇತ್ತೀಚೆಗೆ ಎಲ್ಲಿ ನೋಡಿದರೂ ಕೆಲಸ ಕಳೆದುಕೊಳ್ಳುವ ಬಗ್ಗೆಯೇ ಮಾತು. ಆ ಕಂಪನಿಯಲ್ಲಿ ಅಷ್ಟು ಜನರನ್ನು ತೆಗೆದು ಹಾಕಿದ್ರು, ಈ ಕಂಪನಿಯಲ್ಲಿ ಇಷ್ಟು ಜನರನ್ನು ತೆಗೆಯಬೇಕು ಎಂಬ ಮಾತುಕತೆ ನಡೆಯುತ್ತಿದೆ, ಇದನ್ನು ಪ್ರತಿದಿನ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಇದರಿಂದ ಪ್ರತಿಯೊಬ್ಬ ಉದ್ಯೋಗಿಯ ಮನದಲ್ಲೂ ಒಂದು ರೀತಿಯ ಆತಂಕ, ಭಯ.

ವೃತ್ತಿಯನ್ನು ಸಂಪೂರ್ಣವಾಗಿ ಪ್ರೀತಿಸುವವರು, ನಿಜವಾಗಿಯೂ ಕೆಲಸದ ಅವಶ್ಯಕತೆ ಇರುವವರಿಗೆ ಇಂತಹ ಸುದ್ದಿ ಒತ್ತಡ ಹಾಗೂ ಆತಂಕ ಉಂಟು ಮಾಡುವುದು ಸಹಜ. ಕಂಪನಿಗಳು ಉದ್ಯೋಗಿಗಳ ಮಾನಸಿಕ ಯೋಗಕ್ಷೇಮಕ್ಕೆ ಒತ್ತು ನೀಡುವ ಜೊತೆ ಜೊತೆಗೆ, ಇಂತಹ ಆತಂಕದ ವಾತಾವರಣವನ್ನೂ ಸೃಷ್ಟಿ ಮಾಡುತ್ತಿವೆ. ಇದು ಉದ್ಯೋಗಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡುತ್ತಿದೆ. ಆದರೆ ಇದನ್ನು ಎದುರಿಸಿ ಮುಂದೆ ಸಾಗುವುದು ಅಗತ್ಯ.

ಮಾನಸಿಕ ಒತ್ತಡ ಸಹಜ

ನಿಶ್ಚಿತವಾಗಿದ್ದ ಬದುಕಿನಲ್ಲಿ ಅನಿಶ್ಚಿತತೆಯ ಕಾರಣದಿಂದ ಬದುಕು ಅಲ್ಲೋಲ ಕಲ್ಲೋಲವಾದರೆ ಅದರ ನೇರ ಪರಿಣಾಮ ಉಂಟಾಗುವುದು ಮನಸ್ಸಿನ ಮೇಲೆ. ದೀರ್ಘಾವಧಿಯ ಅನಿಶ್ಚಿತತೆ ವೃತ್ತಿ ಜೀವನದ ಮೇಲೂ ಸಾಕಷ್ಟು ಪರಿಣಾಮ ಬೀರಬಹುದು. ಇದರಿಂದ ಉಂಟಾಗುವ ಮಾನಸಿಕ ವೇದನೆಯ ಪರಿಣಾಮ ದೈಹಿಕ ಆರೋಗ್ಯದ ಬೀರಬಹುದು. ಆದರೆ ಕೆಲಸದಿಂದ ವಜಾಗೊಳಿಸುವ ಮೊದಲು ಕಂಪನಿಯು ನಮಗೆ ಒಂದಿಷ್ಟು ಹಣ ಹಾಗೂ ಇತರ ಭದ್ರತಾ ಅಂಶಗಳನ್ನು ನೀಡಬಹುದು ಎಂಬುದನ್ನು ನಾವು ಮರೆಯಬಾರದು. ಅದರಿಂದ ಒಂದಿಷ್ಟು ದಿನ ಬದುಕಬಹುದು. ತಕ್ಷಣಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳುವುದು ಬೇಡ.

ಈ ಆತಂಕದಿಂದ ಹೊರ ಬರುವುದು ಹೇಗೆ?

ಕೆಲಸದಿಂದ ಒಮ್ಮಿಂದೊಮ್ಮೆಲೆ ವಜಾಗೊಳಿಸುವುದು ಕಡಿಮೆ. ಕೆಲವು ಕಂಪನಿಗಳಲ್ಲಿ ಒಂದು ಅಥವಾ ಎರಡು ತಿಂಗಳ ಗಡುವು ನೀಡಿ ವಜಾಗೊಳಿಸಬಹುದು. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.

ಬ್ಯಾಕ್‌ಅಪ್‌ ಯೋಜನೆಗಳಿರಲಿ

ಕೆಲಸದಲ್ಲಿ ಇರುವವರು ಹಣಕಾಸಿನ ಉಳಿತಾಯದ ಯೋಜನೆ ರೂಪಿಸಿಕೊಳ್ಳುವುದು ಬಹಳ ಅವಶ್ಯ. ಇದು ಕೆಲವೊಮ್ಮೆ ಸಂಪೂರ್ಣವಾಗಿ ನಿಮ್ಮಿಂದ ಸಾಧ್ಯವಾಗದಿದ್ದರೂ ತಕ್ಕ ಮಟ್ಟಿಗೆ ಉಳಿತಾಯ ಮಾಡುವ ಅಭ್ಯಾಸವಿರಬೇಕು. ಇದರಿಂದ ನೀವು ತಕ್ಷಣಕ್ಕೆ ಕೆಲಸ ಕಳೆದುಕೊಂಡರೂ ಹೆದರುವ ಅವಶ್ಯಕತೆ ಇರುವುದಿಲ್ಲ. ಇದರೊಂದಿಗೆ ಅಪ್‌ಡೇಟೆಡ್‌ ರೆಸ್ಯೂಮೆ, ವೃತ್ತಿ ಸಂಪರ್ಕವನ್ನು ವೃದ್ಧಿಸುವ ಗುಣ, ಎಲ್ಲಿ ಹಾಗೂ ಹೇಗೆ ಕೆಲಸ ಹುಡುಕುಬೇಕು ಎಂಬ ಬಗ್ಗೆ ಮಾಹಿತಿ... ಈ ಎಲ್ಲವನ್ನೂ ನೀವು ತಿಳಿದುಕೊಂಡಿರಬೇಕು.

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಕೆಲಸದಿಂದ ವಜಾಗೊಂಡ ತಕ್ಷಣ ಆತಂಕಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳುವುದು ಅಥವಾ ದುಡುಕಿನ ನಿರ್ಧಾರಕ್ಕೆ ಬರುವುದು ಮಾಡಬಾರದು. ನಿಧಾನಕ್ಕೆ ಕುಳಿತು ಯೋಚಿಸಬೇಕು. ಮುಂದಿನ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ತಳೆಯಿರಿ. ಬದುಕಿನ ದಾರಿ ಉದ್ದಕ್ಕಿದೆ, ಸಾಗುವ ದಾರಿಯಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇರಿಸಿಕೊಳ್ಳಬೇಕು.

ವೃತ್ತಿ ಸಮಾಲೋಚಕರೊಂದಿಗೆ ಚರ್ಚೆ

ಕೆಲಸವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ಆದರೆ ಇದನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುವ ವೃತ್ತಿ ಸಮಾಲೋಚಕರು ಇದ್ದಾರೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಸಿಗುವ ಸಮಾಲೋಚಕರ ಬಳಿ ಸಲಹೆ ಪಡೆಯಿರಿ. ಇವರು ನಿಮಗೆ ಹೊಸ ಉದ್ಯೋಗದ ದಾರಿ ತೋರಿಸುವ ಜೊತೆಗೆ ಆತಂಕದಿಂದ ಹೊರಬರುವಂತೆ ಮಾಡುತ್ತಾರೆ.

ಹೊಸ ಕಲಿಕೆಯೊಂದಿಗೆ ಆತಂಕವನ್ನು ಮರೆಯಿರಿ

ಕೆಲಸ ಕಳೆದುಕೊಂಡ ಭಯದಿಂದ ಹೊರ ಬರಲು ತಕ್ಷಣಕ್ಕೆ ಹೊಸ ಹೊಸ ಕೌಶಲಗಳನ್ನು ಕಲಿಯಲು ಆರಂಭಿಸಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಬಹುದು. ಅಲ್ಲದೇ ಹೊಸ ಕೆಲಸ ಹುಡುಕಿಕೊಳ್ಳಲು ಇದು ದಾರಿಯಾಗಬಹುದು. ಹೊಸ ಕೌಶಲದಿಂದ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ.

ವಿಭಾಗ