ಜೀವಕ್ಕೆ ತಂಪಾದ ಆರೋಗ್ಯಕರ ರಾಗಿ ಕಾಫಿ ಮಾಡುವ ವಿಧಾನ ಇಲ್ಲಿದೆ, ಹೀಟ್ ಆಗುತ್ತೆ ಎನ್ನುವ ಪ್ರಮೇಯವೇ ಇಲ್ಲ
ಕಾಫಿ ಇಷ್ಟಪಡುವವರು ಅನೇಕರಿದ್ದಾರೆ. ಆದರೆ ಬಾಡಿ ಹೀಟ್ ಆಗುವ ಕಾರಣ ಅದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಅಂತವರಿಗೆ ಈ ರಾಗಿ ಕಾಫಿ ಒಂದು ಬೆಸ್ಟ್ ಪಾನೀಯ. ನೀವೂ ಕಾಫಿ ಪ್ರಿಯರಾಗಿದ್ದಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ. ತುಂಬಾ ಚೆನ್ನಾಗಿರುತ್ತದೆ.
ರಾಗಿ ಕಾಫಿ ಎಂಬ ಹೆಸರನ್ನು ಕೇಳಿದ ತಕ್ಷಣ ನಿಮಗೆ ಆಶ್ಚರ್ಯ ಆಗಿರಬಹುದು. ಅಥವಾ ಇದನ್ನೊಮ್ಮೆ ಟ್ರೈ ಮಾಡಲೇಬೇಕು ಎಂದು ಅನಿಸಿರುತ್ತದೆ. ಕಾಣಲು ಆಕರ್ಶಕವಾಗಿ ಹಾಗೂ ತುಂಬಾ ರುಚಿಯಾಗಿ ಈ ರಾಗಿ ಕಾಫಿಯನ್ನು ನೀವು ಮನೆಯಲ್ಲೇ ರೆಡಿ ಮಾಡಬಹುದು ಐದೇ ನಿಮಿಷದಲ್ಲಿ ಇದು ರೆಡಿ ಆಗುತ್ತದೆ. ಕಾಫಿ ಪ್ರಿಯರು ಖಂಡಿತ ಇದನ್ನು ಒಮ್ಮೆಯಾದರೂ ಟ್ರೈ ಮಾಡಲೇಬೇಕು. ಯಾರೆಲ್ಲ ಬಾಡಿ ಹೀಟ್ ಆಗುತ್ತದೆ ಎಂಬ ಕಾರಣಕ್ಕಾಗಿ ಕಾಫಿ ಕುಡಿಯುವುದನ್ನು ನಿಲ್ಲಿಸಿದ್ದೀರೋ ಅವರೂ ಇದೊಂದು ಪ್ರಯೋಗ ಮಾಡಿ ನೋಡಬಹುದು.
ರಾಗಿ ಕಾಫಿಗೆ ಬೇಕಾಗುವ ಸಾಮಾಗ್ರಿಗಳು:
1 ಚಮಚ ರಾಗಿ ಪೌಡರ್
1 ಟೀಚಮಚ ಕಾಫಿ ಪುಡಿ
ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಅಥವಾ ಬೆಲ್ಲ
ಒಂದೂವರೆ ಕಪ್ ನೀರು
ಒಂದು ಕಪ್ ಹಾಲು
ಅರ್ಧ ಚಮಚ ಏಲಕ್ಕಿ ಪುಡಿ
ರಾಗಿ ಕಾಫಿ ಮಾಡುವ ವಿಧಾನ:
1. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದನ್ನು ಸ್ವಲ್ಪ ಬಿಸಿ ಮಾಡಿ. ಅದಕ್ಕೆ ರಾಗಿ ಪುಡಿಯನ್ನು ಸೇರಿಸಿ. ರಾಗಿ ಪುಡಿಯನ್ನು ಕನಿಷ್ಠ ಎರಡು ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ.
2. ಈಗ ಅದಕ್ಕೆ ಏಲಕ್ಕಿ ಪುಡಿ , ಕಾಫಿ ಪುಡಿ ಮತ್ತು ಹಾಲು ಸೇರಿಸಿ .
3. ಇನ್ನೂ ಎರಡು ಮೂರು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
4. ಈಗ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಅದು ಕರಗಿದ ನಂತರ ಬಿಸಿಯಾಗಿರುವಾಗಲೇ ಒಂದು ಬೌಲ್‌ನಲ್ಲಿ ಹಾಕಿಕೊಂಡು ಸ್ಪೂನ್‌ನಲ್ಲಿ ಅಥವಾ ನೇರವಾಗಿ ಇದನ್ನು ನೀವು ಕುಡಿಯಬಹುದು. ಇದು ನಾರ್ಮಲ್ ಕಾಫಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ.
5. ರೆಸಿಪಿಯನ್ನು ಹೆಚ್ಚು ಸುಲಭವಾಗಿ ತಯಾರಿಸಬೇಕೆಂದಿದ್ದರೆ, ಮೊದಲೇ ರಾಗಿ ಹಿಟ್ಟಿನಲ್ಲಿ ಕಾಫಿ ಪುಡಿ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ.
6. ಒಂದು ಚಮಚ ಈ ಪುಡಿಯನ್ನು ನೇರವಾಗಿ ನೀರಿನಲ್ಲಿ ಕುದಿಸಿ ಹಾಲು ಹಾಕಿದರೆ ರಾಗಿ ಕಾಫಿ ರೆಡಿ.
ಬಿಸಿ ಇಷ್ಟವಿಲ್ಲ ಎಂದಾದರೆ ನೀವು ಇದನ್ನು ಫ್ರಿಜ್‌ನಲ್ಲಿಟ್ಟು ತಣಿಸಿ ಕೂಡ ಕುಡಿಯಬಹುದು.
ರಾಗಿ ಪುಡಿಯ ಪ್ರಯೋಜನಗಳು:
ನಾರಿನಂಶ ಅಧಿಕವಾಗಿರುತ್ತದೆ. ಸಕ್ಕರೆ ಖಾಯಿಲೆ ಇರುವವರಿಗೆ ಹೆಚ್ಚಿನ ಉಪಯೋಗ ಇದೆ. ಇದು ಅಮೈನೋ ಆಮ್ಲಗಳು ಮತ್ತು ಪ್ರೋಟೀನ್ ಹೊಂದಿದೆ. ನೀವು ಆರೋಗ್ಯ ಮತ್ತು ರುಚಿ ಎರಡೂ ಇರುವ ಕಾಫಿ ಕುಡಿಯಲು ಬಯಸಿದರೆ, ಈ ಕಾಫಿಯನ್ನು ಒಮ್ಮೆ ಪ್ರಯತ್ನಿಸಿ. ಇದು ತುಂಬಾ ಸರಳವಾಗಿದೆ.