Sakkare Pongal Recipe: ಸಂಕ್ರಾಂತಿ ವಿಶೇಷ...ಹಾಲು ಬಳಸದೆ ತಯಾರಿಸಿ ರುಚಿಯಾದ ಸಕ್ಕರೆ ಪೊಂಗಲ್.. ರೆಸಿಪಿ ಇಲ್ಲಿದೆ
ಇಂದು ದೇಶಾದ್ಯಂತ ವಿವಿಧ ಹೆಸರುಗಳಿಂದ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಕೆಲವೆಡೆ ಮೂರು ದಿನಗಳ ಕಾಲ ಸಂಕ್ರಾಂತಿ ಆಚರಣೆ ಇರುತ್ತದೆ. ಇನ್ನು ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯುತ್ತಾರೆ. ಈ ದಿನ ಸಿಹಿ ಪೊಂಗಲ್ ಹಾಗೂ ಖಾರ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಇಡುತ್ತಾರೆ.
ಸಿಹಿ ಪೊಂಗಲನ್ನು ಕೆಲವರು ಬೆಲ್ಲದಿಂದ ತಯಾರಿಸಿದರೆ ಕೆಲವರು ಸಕ್ಕರೆಯಿಂದ ತಯಾರಿಸುತ್ತಾರೆ. ಇನ್ನೂ ಕೆಲವರು ಹಾಲು ಬಳಸುತ್ತಾರೆ, ಕೆಲವರು ಹಾಲು ಬಳಸದೆ ಮಾಡುತ್ತಾರೆ. ಇಂದು ಹಾಲು ಬಳಸದೆ ರುಚಿಯಾದ, ಬಾಯಲ್ಲಿ ಇಟ್ಟರೆ ಕರಗುವ ಸಕ್ಕರೆ ಪೊಂಗಲ್ ತಯಾರಿಸುವುದು ಹೇಗೆ ನೋಡೋಣ.
ಟ್ರೆಂಡಿಂಗ್ ಸುದ್ದಿ
ಸಕ್ಕರೆ ಪೊಂಗಲ್ ತಯಾರಿಸಲು ಬೇಕಾದ ಸಾಮಗ್ರಿಗಳು
ಅಕ್ಕಿ - 1 ಕಪ್
ಹೆಸರು ಬೇಳೆ - 1/2 ಕಪ್
ಸಕ್ಕರೆ - 1 1/2 ಕಪ್
ಗೋಡಂಬಿ - 1 ಟೇಬಲ್ ಸ್ಪೂನ್
ಒಣದ್ರಾಕ್ಷಿ- 1 ಟೇಬಲ್ ಸ್ಪೂನ್
ಏಲಕ್ಕಿ ಪುಡಿ - 1/4 ಟೀ ಸ್ಪೂನ್
ಲವಂಗ - 5
ತುಪ್ಪ - 1/2 ಕಪ್
ಕೊಬ್ಬರಿ ತುರಿ - 1 ಕಪ್
ಸಕ್ಕರೆ ಪೊಂಗಲ್ ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಸಿ ವಾಸನೆ ಹೋಗುವರೆಗೂ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿಕೊಳ್ಳಿ.
ಇದರೊಂದಿಗೆ ಅಕ್ಕಿ ಬೆರೆಸಿ ಒಮ್ಮೆ ನೀರಿನಲ್ಲಿ ತೊಳೆದು 5 ಕಪ್ ನೀರು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 4 ಸೀಟಿ ಕೂಗಿಸಿಕೊಳ್ಳಿ
ಅಷ್ಟರಲ್ಲಿ ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋಡಂಬಿ, ಒಣದ್ರಾಕ್ಷಿ, ಕೊಬ್ಬರಿ ತುರಿ ಸೇರಿಸಿ ರೋಸ್ಟ್ ಮಾಡಿ ಪಕ್ಕಕ್ಕೆ ತೆಗೆದಿಡಿ.
ಅದೇ ಪಾತ್ರೆಗೆ ಸಕ್ಕರೆ , ಲವಂಗ ಸೇರಿಸಿ ಸ್ವಲ್ಪ ನೀರು ಸೇರಿಸಿ ಕರಗಿಸಿಕೊಳ್ಳಿ, ಸಕ್ಕರೆಯನ್ನು ಒಮ್ಮೆ ಶೋಧಿಸಿಕೊಳ್ಳಿ
ಸಂಪೂರ್ಣ ಸಕ್ಕರೆ ಕರಗಿದ ನಂತರ ಅಕ್ಕಿ ಹಾಗೂ ಹೆಸರು ಬೇಳೆ ಮಿಶ್ರಣದೊಂದಿಗೆ ಸಕ್ಕರೆ ನೀರು ಸೇರಿಸಿ ಮಿಕ್ಸ್ ಮಾಡಿ.
ಇದನ್ನು ಮತ್ತೆ ಸ್ಟೋವ್ ಮೇಲಿಟ್ಟು ಕಡಿಮೆ ಉರಿಯಲ್ಲಿ 4-5 ನಿಮಿಷ ಕುಕ್ ಮಾಡಿ
ಇದಕ್ಕೆ ಏಲಕ್ಕಿ ಪುಡಿ, ಮೊದಲೇ ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿತುರಿ, ತುಪ್ಪ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಸಕ್ಕರೆ ಪೊಂಗಲ್ ರೆಡಿ.
ಗಮನಿಸಿ: ಕೆಲವರು ಹೆಸರು ಬೇಳೆಯನ್ನು ಹುರಿಯುವುದಿಲ್ಲ. ಅದರ ಹಸಿ ವಾಸನೆ ನಿಮಗೆ ಇಷ್ಟವಾಗದಿದ್ದಲ್ಲಿ ಮೊದಲು ಒಂದೆರಡು ನಿಮಿಷ ಡ್ರೈ ರೋಸ್ಟ್ ಮಾಡುವುದು ಉತ್ತಮ.
ಇದೇ ವಿಧಾನದಲ್ಲಿ ಸಕ್ಕರೆ ಬದಲಿಗೆ ಬೆಲ್ಲ ಬಳಸಿ ಸಿಹಿ ಪೊಂಗಲ್ ತಯಾರಿಸಬಹುದು.
ಹಾಲು ಬೇಕೆಂದರೆ ನೀವು ಅಕ್ಕಿ-ಹೆಸರುಬೇಳೆಯನ್ನು ಬೇಯಿಸಿಕೊಳ್ಳುವಾಗ ಬಳಸಬಹುದು.
ಪೊಂಗಲ್ ತಯಾರಾಗುತ್ತಿದ್ದಂತೆ ಸರ್ವ್ ಮಾಡಬೇಡಿ, ಮುಚ್ಚಳ ಮುಚ್ಚಿಟ್ಟು 10-15 ನಿಮಿಷದ ನಂತರ ತಿಂದರೆ ಅನ್ನ ಮತ್ತಷ್ಟು ಗಟ್ಟಿಯಾಗಿರುತ್ತದೆ.