ಚಳಿಗಾಲದಲ್ಲಿ ತುಳಸಿ ಗಿಡ ಒಣಗದಂತೆ ತಡೆಯಲು ಈ ರೀತಿ ಮಾಡಿ: ವರ್ಷವಿಡೀ ಹಚ್ಚ ಹಸಿರಾಗಿರಲು ಇಲ್ಲಿದೆ ಟಿಪ್ಸ್
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿಗೆ. ಹಸಿರನಿಂದ ಕಂಗೊಳಿಸುವ ತುಳಸಿ ಗಿಡವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ, ಚಳಿಗಾಲದಲ್ಲಿ ತುಳಸಿ ಗಿಡ ಹೆಚ್ಚಾಗಿ ಒಣಗುತ್ತದೆ. ಇದಕ್ಕಾಗಿ ತುಳಸಿ ಗಿಡದ ಆರೈಕೆ ಹೀಗಿರಲಿ. ಇದರಿಂದ ತುಳಸಿ ಗಿಡ ವರ್ಷವಿಡೀ ಹಸಿರಾಗಿಯೇ ಇರುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವ, ಸ್ಥಾನಮಾನವಿದೆ. ಬಹುತೇಕ ಮನೆಗಳಲ್ಲಿ ತುಳಸಿ ಗಿಡಗಳನ್ನು ಕಾಣಬಹುದು. ಮನೆ ಮುಂದೆ ತುಳಸಿಕಟ್ಟೆ ಮಾಡಿ ಅದರಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ. ಈ ತುಳಸಿಯು ಹಿಂದೂ ಧರ್ಮೀಯರಿಗೆ ಬಹಳ ಪಾವಿತ್ರ್ಯವಾಗಿದ್ದು, ಜನರು ಪೂಜಿಸುತ್ತಾರೆ ಹಾಗೂ ಆರಾಧಿಸುತ್ತಾರೆ. ತುಳಸಿ ಗಿಡವನ್ನು ಅತ್ಯಂತ ಧಾರ್ಮಿಕತೆಯಿಂದ ನೋಡಿಕೊಳ್ಳುತ್ತಾರೆ. ತುಳಸಿಗೆ ನೀರನ್ನು ಅರ್ಪಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಆಯುರ್ವೇದದಲ್ಲಿ ತುಳಸಿಗೆ ಔಷಧೀಯ ಮಹತ್ವವೂ ಇದೆ. ತುಳಸಿ ಎಲೆಗಳಿಂದ ತಯಾರಿಸಲಾಗುವ ಚಹಾ ಮತ್ತು ಕಷಾಯವು ಅನೇಕ ರೋಗಗಳಿಗೆ ಪರಿಣಾಮಕಾರಿಯಾಗಿದೆ. ಮಕ್ಕಳಿಗೆ ಶೀತ ಅಥವಾ ಕಫ ಇದ್ದರೆ ಬೆಳಗ್ಗೆ ಈ ತುಳಸಿ ಎಲೆಗಳ ರಸವನ್ನು ಹಿಂಡಿ ಕುಡಿಸಲಾಗುತ್ತದೆ.
ಮನೆಯಲ್ಲಿರುವ ತುಳಸಿ ಗಿಡವು ಹಚ್ಚ ಹಸಿರಾಗಿದ್ದರೆ, ಅದನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಜನರು ತುಳಸಿ ಗಿಡದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ, ಅನೇಕ ಬಾರಿ ತುಳಸಿ ಗಿಡಗಳು ಚಳಿಗಾಲದಲ್ಲಿ ಚಳಿಯಿಂದಾಗಿ ಒಣಗುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡ ಸರಿಯಾಗಿ ಬೆಳೆಯದೇ ಒಣಗಲು ಆರಂಭಿಸಿದರೆ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಿ. ನಿಮ್ಮ ತುಳಸಿ ಗಿಡವನ್ನು ವರ್ಷವಿಡೀ ಹಸಿರಾಗಿಡಲು 5 ಮಾರ್ಗಗಳು ಇಲ್ಲಿವೆ:
ತುಳಸಿ ಗಿಡವನ್ನು ಒಣಗದಂತೆ ಕಾಪಾಡುವುದು ಹೇಗೆ?
- ತುಳಸಿ ಗಿಡವನ್ನು ಹಸಿರಾಗಿಸುವುದು ಹೇಗೆ: ತುಳಸಿ ಗಿಡ ಹಸಿರಾಗಿರಲು ತುಳಸಿ ಗಿಡಕ್ಕೆ ಬೇವಿನ ನೀರನ್ನು ಹಾಕಿ. ಬೇವಿನ ನೀರು ಹಾಕುವುದರಿಂದ ತುಳಸಿ ಚೆನ್ನಾಗಿ ಬೆಳೆಯುತ್ತದೆ. ಇದು ಎಲೆಗಳು ಒಣಗುವುದನ್ನು ತಡೆಯುತ್ತದೆ ಮತ್ತು ತುಳಸಿ ಸಸ್ಯವು ಹಸಿರಾಗಿ ಉಳಿಯುತ್ತದೆ.
- ತುಳಸಿಗೆ ನೀರುಣಿಸಲು ಸರಿಯಾದ ಮಾರ್ಗ: ತುಳಸಿ ಗಿಡಕ್ಕೆ ನೀರು ಬಹಳ ಅತ್ಯಗತ್ಯ. ಆದರೆ, ಕೆಲವೊಮ್ಮೆ ಹೆಚ್ಚು ನೀರು ಸುರಿಯುವುದರಿಂದ, ಸಸ್ಯವು ಬೇರುಗಳಿಂದ ಕೊಳೆಯಲು ಪ್ರಾರಂಭಿಸುತ್ತದೆ. ಕಡಿಮೆ ನೀರು ಹಾಕುವುದರಿಂದ ಗಿಡ ಒಣಗುತ್ತವೆ. ಹೀಗಾಗಿ ಕಾಳಜಿಯಿಂದ ನೀರು ಹಾಕುವುದು ಬಹಳ ಮುಖ್ಯ. ಪ್ರತಿದಿನ ತುಳಸಿಗೆ ನೀರು ಹಾಕಿದರೆ, ಬಹಳ ಕಡಿಮೆ ಪ್ರಮಾಣದಲ್ಲಿ ನೀರನ್ನು ಸುರಿಯಿರಿ.
- ತುಳಸಿ ಗಿಡಕ್ಕೆ ಹಸುವಿನ ಗೊಬ್ಬರ ಹಾಕಬೇಡಿ: ಕೆಲವರು ತುಳಸಿ ಗಿಡಕ್ಕೆ ಹಸುವಿನ ಹಸಿ ಗೊಬ್ಬರ ಹಾಕುತ್ತಾರೆ. ಇದರಿಂದ ತುಳಸಿ ಗಿಡಕ್ಕೆ ಹಾನಿಯಾಗುತ್ತದೆ. ತುಳಸಿ ಗಿಡಕ್ಕೆ ವರ್ಮಿಕಾಂಪೋಸ್ಟ್ ಗೊಬ್ಬರ ಅಥವಾ ಒಣ ಹಸುವಿನ ಗೊಬ್ಬರವನ್ನು ಹಾಕಬಹುದು. ಹೆಚ್ಚು ಗೊಬ್ಬರವನ್ನು ಸೇರಿಸುವುದರಿಂದ ಸಸ್ಯವನ್ನು ಸುಡಬಹುದು.
- ಮಣ್ಣಿನಲ್ಲಿ ಮರಳನ್ನು ಮಿಶ್ರಣ ಮಾಡಿ: ತುಳಸಿ ಗಿಡ ಒಣಗುತ್ತಿದ್ದರೆ ಅದರ ಮಣ್ಣನ್ನು ಒಮ್ಮೆ ಪರೀಕ್ಷಿಸಿ. ಯಾವುದೇ ಸಸ್ಯಕ್ಕೆ ಸ್ವಲ್ಪ ಮರಳು ಮಣ್ಣು ಒಳ್ಳೆಯದು. ಮಣ್ಣು ನೀರನ್ನು ಹೀರಿಕೊಳ್ಳುತ್ತದೆ ಮತ್ತು ದೀರ್ಘಕಾಲ ತೇವವಾಗಿರುತ್ತದೆ. ಇದು ಸಸ್ಯವನ್ನು ಆರೋಗ್ಯವಾಗಿರಿಸುತ್ತದೆ. ಮಣ್ಣಿನಲ್ಲಿ ಸ್ವಲ್ಪ ಮರಳನ್ನು ಮಿಶ್ರಣ ಮಾಡಿ.
ಈ ವಿಷಯಗಳನ್ನು ನೆನಪಿನಲ್ಲಿಡಿ: ಕಾಲಕಾಲಕ್ಕೆ ತುಳಸಿ ಗಿಡವನ್ನು ಕತ್ತರಿಸುತ್ತಿರಿ. ಇದು ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಸ್ಯದ ಮೇಲಿನ ಮೊಗ್ಗುಗಳನ್ನು ತೆಗೆದುಹಾಕುವುದನ್ನು ಮುಂದುವರಿಸಿ. ಸಸ್ಯವನ್ನು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಚಳಿಗಾಲದ ದಿನಗಳಲ್ಲಿ ಸಸ್ಯವನ್ನು ತೆರೆದ ಆಕಾಶದಲ್ಲಿ ಇಡಬೇಡಿ.