SSLC-PUC Exam: ವಿಜ್ಞಾನದ ಮುಖ್ಯಾಂಶಗಳು, ಸಂಕೀರ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ; ಪರೀಕ್ಷೆ ತಯಾರಿಗೆ ಅಗತ್ಯ ಸಲಹೆಗಳು
ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಓದಲು ಮತ್ತು ಸಂಕೀರ್ಣ ಅಂಶಗಖನ್ನು ಅರ್ಥಮಾಡಿಕೊಳ್ಳಲು, ಕೆಲವೊಂದು ತಂತ್ರಗಳನ್ನು ಅನುಸರಿಸಬಹುದು. ವಿಜ್ಞಾನ ವಾಸ್ತವವನ್ನು ಮೀರಿದ್ದಲ್ಲ. ಹೀಗಾಗಿ ಪುಸ್ತಕದಲ್ಲಿರುವ ಅಂಶಗಳನ್ನು ನಿಜಜೀವನಕ್ಕೆ ಅನ್ವಯಿಸುವುದು ಮುಖ್ಯ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಪರೀಕ್ಷೆ ಆರಂಭವಾಗಲಿದೆ. ಮಕ್ಕಳು ಅಂತಿಮ ಹಂತದ ಓದು ಹಾಗೂ ಮನನದಲ್ಲಿ ತೊಡಗಿದ್ದಾರೆ. ಗಮನವಿಟ್ಟು ಓದಿದರೆ, ಅದು ನೆನಪಿನಲ್ಲಿ ಉಳಿಯುತ್ತದೆ. ಓದುವ ಸಮಯದಲ್ಲಿ ಮನಸಿಟ್ಟು, ಗಮನವಿಟ್ಟು ಅಧ್ಯಯನ ಮಾಡುವುದು ಪರಿಣಾಮಕಾರಿ ಓದಿನ ಮೊದಲ ಗುಟ್ಟು. ಹತ್ತನೇ ತರಗತಿಯ ಮಕ್ಕಳು ಸಾಮಾನ್ಯವಾಗಿ ವಿಜ್ಞಾನ ವಿಷಯವನ್ನು ಕಷ್ಟ ಎಂದು ಹೇಳುವುದಿದೆ. ಆದರೆ, ವಿಷಯದಲ್ಲಿ ಆಸಕ್ತಿ ಬೆಳೆಸಿದರೆ ವಿಜ್ಞಾನ ಕಬ್ಬಿಣದ ಕಡಲೆ ಅಲ್ಲ.
ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಓದಲು ಮತ್ತು ಅರ್ಥಮಾಡಿಕೊಳ್ಳಲು, ನಿಮ್ಮದೇ ಆದ ಕೆಲವೊಂದು ತಂತ್ರಗಳನ್ನು ಅನುಸರಿಸಬಹುದು. ಮೊದಲಿಗೆ ಪ್ರಶ್ನೆ ಪತ್ರಿಕೆಯ ಮಾದರಿ ಅಥವಾ ಬ್ಲ್ಯೂಪ್ರಿಂಟ್ ಇಟ್ಟುಕೊಂಡು ಅದಕ್ಕೆ ಸೂಕ್ತ ಸಿದ್ಧತೆ ನಡೆಸಿ. ವಿಜ್ಞಾನವನ್ನು ಸುಲಭವಾಗಿ ಅರ್ಥಮಾಡಿಕೊಂಡು ಓದಲು ನಿಮಗೆ ಅನುಕೂಲವಾಗುವಂಥ ಸಲಹೆಗಳು ಇಲ್ಲಿವೆ.
ಈ ಸಲಹೆಗಳನ್ನು ಅನುಸರಿಸಿ
1. ಅವಲೋಕನದೊಂದಿಗೆ ಓದಲು ಆರಂಭಿಸಿ. ವಿಷಯದಲ್ಲಿ ಏನೇನಿದೆ ಎಂಬುದರ ಕಲ್ಪನೆ ಬರಲು ಆ ವಿಷಯದ ಪರಿಚಯ ಅಥವಾ ಸಾರಾಂಶವನ್ನು ಓದಿ.
2. ಓದುವಾಗ ತಿಳಿಯುವ ಮುಖ್ಯ ವಿಚಾರಗಳು ಮತ್ತು ಪರಿಕಲ್ಪನೆಗಳನ್ನು ಗುರುತಿಸಿ ಮಾರ್ಕ್ ಮಾಡಿಕೊಳ್ಳಿ. ಅವು ಪರಸ್ಪರ ಹೇಗೆ ಸಂಬಂಧಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ.
3. ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ರೇಖಾಚಿತ್ರಗಳು, ವಿವರಣೆಗಳು ಮತ್ತು ಗ್ರಾಫ್‌ಗಳನ್ನು ನೋಡಿ. ಅಕ್ಷರಗಳಿಗಿಂತ ಚಿತ್ರವು ಪರಿಣಾಮಕಾರಿಯಾಗಿ ನೆನಪಿನಲ್ಲಿ ಉಳಿಯುತ್ತದೆ.
4. ಟಿಪ್ಪಣಿ ಮಾಡಿಕೊಳ್ಳಿ. ಓದುವಾಗ ಮನಸ್ಸಿಗೆ ಬರುವ ಪ್ರಮುಖ ಪದಗಳು, ನೆನಪಿಟ್ಟುಕೊಳ್ಳಬೇಕಾದ ವಾಕ್ಯಗಳು, ಪರಿಕಲ್ಪನೆಗಳು ಮತ್ತು ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ. ಪುನರಾವರ್ತಿತವಾಗಿ ಓದಿ.
5. ಗಟ್ಟಿಯಾಗಿ ಓದಿ. ಪ್ರತಿಬಾರಿಯೂ ಮನಸ್ಸಿನಲ್ಲೇ ಓದಬೇಡಿ. ಕೆಲವೊಮ್ಮೆ ಜೋರಾಗಿ ಓದಿದ್ದು ಮನಸ್ಸಿನಲ್ಲಿ ಗಾಢವಾಗಿ ಉಳಿಯುತ್ತದೆ.
6. ನಿಷ್ಕ್ರಿಯವಾಗಿ ಓದಬೇಡಿ. ಓದಿದ್ದು ಪರೀಕ್ಷೆ ಬರೆಯಲು ಮಾತ್ರ ಎಂಬ ಕಲ್ಪನೆ ಇಟ್ಟುಕೊಳ್ಳಬೇಡಿ. ವಿಜ್ಞಾನವು ವಾಸ್ತವವನ್ನು ಮೀರಿದ್ದಲ್ಲ. ಹೀಗಾಗಿ ಅದನ್ನು ನಿಜ ಜೀವನದ ಸನ್ನಿವೇಶಗಳಿಗೆ ಹೋಲಿಸಿ ಸಂಪರ್ಕ ಕಲ್ಪಿಸಿ. ವಿಮರ್ಶಾತ್ಮಕವಾಗಿ ಯೋಚಿಸುವ ಮೂಲಕ ಅರ್ಥಮಾಡಿಕೊಳ್ಳಿ. ಮನೆಯವರು, ಶಿಕ್ಷಕರೊಂದಿಗೆ ಪ್ರಶ್ನೆ ಕೇಳಿ, ಗೊಂದಲಗಳನ್ನು ಬಗೆಹರಿಸಿಕೊಳ್ಳಿ.
ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ತಂತ್ರಗಳು
1. ಸಂಕೀರ್ಣ ಪರಿಕಲ್ಪನೆಗಳನ್ನು ಚಿಕ್ಕದಾಗಿ ವಿಭಜಿಸಿದರೆ ಬೇಗನೆ ಅರ್ಥವಾಗುತ್ತದೆ ಎಂದು ಸರ್ಕಾರಿ ಪ್ರೌಢ ಶಾಲೆ ಸರಳಿಕಟ್ಟೆ (ಬೆಳ್ತಂಗಡಿ ತಾಲೂಕು, ದ.ಕ) ಇಲ್ಲಿನ ವಿಜ್ಞಾನ ಶಿಕ್ಷಕಿ ಸಪ್ನಾ ಸಲಹೆ ನೀಡುತ್ತಾರೆ. ಇದಕ್ಕೆ ನಮ್ಮದೇ ಆದ ಕೋಡ್ ವರ್ಡ್ ರೂಪಿಸಬಹುದು. ಉದಾಹರಣೆಗೆ ತಾಮ್ರ ಮತ್ತು ತವರವನ್ನು ಸಂಯೋಜಿಸಿದಾಗ ಕಂಚು ರೂಪುಗೊಳ್ಳುತ್ತದೆ. ಇದಕ್ಕೆ 'ತಾತ' ಎಂಬ ಕೋಡ್ ವರ್ಡ್ ಬಳಸಬಹುದು (ತಾತ= ತಾಮ್ರ+ತವರ).
2. ವಿಡಿಯೊಗಳು ಅಥವಾ ಅನಿಮೇಷನ್‌ಗಳನ್ನು ವೀಕ್ಷಿಸಿ. ಪಠ್ಯದಿಂದ ದೃಶ್ಯ ಹೆಚ್ಚು ಪರಿಣಾಮಕಾರಿ. ಹೀಗಾಗಿ ಸಂಕೀರ್ಣ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅದಕ್ಕೆ ಸಂಬಂಧಿಸಿದ ವಿಡಿಯೋ, ಚಿತ್ರಗಳನ್ನು ವೀಕ್ಷಿಸಿ.
3. ನಿಮಗೆ ಕಷ್ಟವಾಗುವ ವಿಷಯವನ್ನು ಇತರರೊಂದಿಗೆ ಚರ್ಚಿಸಿ. ನಿಮ್ಮ ಮನೆಯಲ್ಲಿರುವವರು, ವಿಜ್ಞಾನದ ಬಗ್ಗೆ ಓದಿರುವವರು ಅಥವಾ ಆಸಕ್ತಿ ಇರುವವರನ್ನೂ ಕೇಳಿ ನೋಡಿ. ನಿಮೆಗ ಅರ್ಥವಾಗುವಂತೆ ಅವರು ವಿವರಿಸುತ್ತಾರೆ.
4. ನಿಮಗೆ ಅರ್ಥವಾಗದ ಯಾವುದೇ ವೈಜ್ಞಾನಿಕ ಪದಗಳು ಸಿಕ್ಕರೆ, ಶಬ್ದಕೋಶ ಅಥವಾ ಡಿಕ್ಷನರಿ ನೋಡಿ ಅರ್ಥ ತಿಳಿದುಕೊಳ್ಳಿ. ಅವುಗಳ ವ್ಯಾಖ್ಯಾನಗಳನ್ನು ಗಮನಿಸಿ.
5. ಗೊಂದಲಗಳನ್ನು ಒಂದು ಕಡೆ ಪಟ್ಟಿ ಮಾಡುತ್ತಾ ಹೋಗಿ. ಅಸ್ಪಷ್ಟ ಅಂಶಗಳು ಉಳಿದಿದ್ದರೆ, ಶಿಕ್ಷಕರು ಅಥವಾ ಗೆಳೆಯರೊಂದಿಗೆ ಚರ್ಚಿಸಲು ಹಿಂಜರಿಯಬೇಡಿ. ಲೈಬ್ರೆರಿ ಅಥವಾ ಇತರ ಮೂಲಗಳಿಂದ ಮಾಹಿತಿ ಕಲೆ ಹಾಕಿ.
6. ವೈಜ್ಞಾನಿಕ ಭಾಷೆಯ ಮೇಲೆ ಹೆಚ್ಚುವರಿ ಗಮನ ಕೊಡಿ. ವೈಜ್ಞಾನಿಕ ಬರವಣಿಗೆ ತುಸು ತಾಂತ್ರಿಕವಾಗಿರುತ್ತದೆ. ಅದು ನಿಖರವಾಗಿ ಬರೆಯಬೇಕು ಎಂಬುದು ಗಮನದಲ್ಲಿರಲಿ. ಅವುಗಳನ್ನು ಬರೆದೇ ಅಭ್ಯಾಸ ಮಾಡಿ. ನಿರ್ದಿಷ್ಟ ಪರಿಭಾಷೆ (terminology)ಮತ್ತು ಪದಗುಚ್ಛಗಳಿಗೆ ಹೆಚ್ಚು ಗಮನ ಕೊಡಿ.
7. ಕೆಲವು ವೈಜ್ಞಾನಿಕ ಕ್ಷೇತ್ರದ ವಿಷಯಗಳಿಗೆ ಗಣಿತದ ತಿಳುವಳಿಕೆಯೂ ಬೇಕಾಗುತ್ತದೆ. ಹೀಗಾಗಿ ಅಗತ್ಯವಿದ್ದಾಗ ಗಣಿತದ ಪರಿಕಲ್ಪನೆಗಳನ್ನು ಅನ್ವಯಿಸಲು ಸಿದ್ಧರಾಗಿರಿ.
