Tips for Facial Hair: ಮುಖದ ಮೇಲೆ ಕೂದಲು ಎದ್ದು ಕಾಣ್ತಿದ್ಯಾ...ರೇಸರ್, ವ್ಯಾಕ್ಸಿಂಗ್ ಬಿಟ್ಟು ಈ ನೈಸರ್ಗಿಕ ಪ್ಯಾಕ್ ಹಚ್ಚಿಕೊಳ್ಳಿ
ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಕಾರ್ನ್‌ಸ್ಟಾರ್ಚ್ ಮತ್ತು 1 ಚಮಚ ಸಕ್ಕರೆ ಸೇರಿಸಿ. ಮೃದುವಾದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮಾಸ್ಕ್ ಒಣಗಿದ ನಂತರ ಮೊದಲು ಮಾಸ್ಕ್ ಪೀಲ್ ಮಾಡಿ ನಂತರ ಮುಖ ತೊಳೆಯಿರಿ.
ಪುರುಷರಿಗೆ ಗಡ್ಡ, ಮೀಸೆ ಇದ್ದರೆ ಲಕ್ಷಣ. ಆದರೆ ಮಹಿಳೆಯರಿಗೆ ಮುಖದ ಮೇಲಿನ ಕೂದಲು ಅಂದವನ್ನೇ ಹಾಳು ಮಾಡುತ್ತದೆ. ಅದರಲ್ಲೂ ಕೆಲವು ಮಹಿಳೆಯರಿಗೆ ಮುಖದಲ್ಲಿ ಹೆಚ್ಚು ಕೂದಲು ಇರುತ್ತದೆ. ಇದರಿಂದ ಅವರು ಕೀಳರಿಮೆ ಅನುಭವಿಸುವ ಸಾಧ್ಯತೆ ಇದೆ. ಒತ್ತಡ ಮತ್ತು ಹಾರ್ಮೋನ್ ಅಸಮತೋಲನದಿಂದಾಗಿ, ಮುಖದ ಕೂದಲು ವಿಪರೀತವಾಗಿ ಬೆಳೆಯುವ ಸಾಧ್ಯತೆಯಿದೆ.
ಟ್ರೆಂಡಿಂಗ್ ಸುದ್ದಿ
ಮುಖದ ಮೇಲೆ ಕೂದಲು ಇರುವುದರಿಂದ ಹೊಳಪು ಕಡಿಮೆಯಾಗುತ್ತದೆ. ಸರಿಯಾಗಿ ಮೇಕಪ್ ಸೆಟ್ ಆಗುವುದಿಲ್ಲ. ಮುಖದ ಕೂದಲು ತೆಗೆಯಲು ಅನೇಕರು ಶೇವಿಂಗ್, ವ್ಯಾಕ್ಸಿಂಗ್, ಥ್ರೆಡಿಂಗ್, ಲೇಸರ್ ಚಿಕಿತ್ಸೆ ಪಡೆಯುತ್ತಾರೆ. ಆದರೆ ಇದು ನೋವು ಹಾಗೂ ಬಹಳ ದುಬಾರಿ. ಅಲ್ಲದೆ ಇದು ತಾತ್ಕಾಲಿಕ ಪರಿಹಾರ ಅಷ್ಟೇ. ನೈಸರ್ಗಿಕ ಫೇಸ್ ಪ್ಯಾಕ್‌ಗಳಿಂದ ಮುಖದ ಕೂದಲನ್ನು ನೀವು ಮನೆಯಲ್ಲೇ ತೆಗೆಯಬಹುದು.
ಪರಂಗಿಕಾಯಿ ಮತ್ತು ಅರಿಶಿನ: ಹಸಿ ಪಪ್ಪಾಯಿಯಲ್ಲಿ ಪಾಪೈನ್ ಅಂಶವಿದೆ. ಇದು ಕೂದಲಿನ ಕಿರುಚೀಲಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಹಾಗೂ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. 2 ಟೇಬಲ್ ಸ್ಪೂನ್ ಹಸಿ ಪಪ್ಪಾಯಿ ಪೇಸ್ಟ್ ಹಾಗೂ ಅರ್ಧ ಟೀ ಚಮಚ ಅರಿಶಿನ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ಕೂದಲು ಬೆಳೆಯುವ ದಿಕ್ಕಿಗೆ ಒದ್ದೆ ಕೈಯಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ನಂತರ ತೊಳೆಯಿರಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಪ್ಯಾಕ್ ಹಾಕಿದರೆ ಮುಖದ ಕೂದಲು ಕಡಿಮೆಯಾಗುತ್ತದೆ. ಕೂದಲಿನ ಬೆಳವಣಿಗೆ ಕಡಿಮೆ ಆಗುವುದು ಅಲ್ಲದೆ, ಮುಖ ಕಾಂತಿಯುತವಾಗುತ್ತದೆ.
ಆಲೂಗಡ್ಡೆ ಮತ್ತು ಕಡ್ಲೆಹಿಟ್ಟು: ಆಲೂಗಡ್ಡೆ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಮುಖದ ಕೂದಲನ್ನು ತೆಗೆಯಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೇಯಿಸಿದ ಆಲೂಗಡ್ಡೆ ಪೇಸ್ಟ್‌ಗೆ ಕಡ್ಲೆಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ 1 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ಸ್ಕ್ರಬ್ ಮಾಡಿ ನಂತರ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಚ್ಚಿ. ಈ ನ್ಯಾಚುರಲ್ ಪ್ಯಾಕ್ ಮುಖದಲ್ಲಿರುವ ಕೂದಲನ್ನು ತೆಗೆದು ಕಾಂತಿ ನೀಡುತ್ತದೆ. ಡಾರ್ಕ್ ಸರ್ಕಲ್ ಕೂಡಾ ತೆಗೆಯುತ್ತದೆ.
ಓಟ್ಸ್ ಮತ್ತು ಜೇನು: ಓಟ್ಸ್ ಪುಡಿಮಾಡಿ, ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ. ನಂತರ ಅದನ್ನು ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. ಒಣಗಿದ ನಂತರ , ಒದ್ದೆ ಮಾಡಿ ನಿಧಾನವಾಗಿ ಮಸಾಜ್ ಮಾಡಿದರೆ ಕೂದಲು ಕಡಿಮೆಯಾಗುತ್ತದೆ.
ಅರಿಶಿನ ಮತ್ತು ಗಂಧದ ಪುಡಿ: ಕಸ್ತೂರಿ ಅರಿಶಿನ, ಶ್ರೀಗಂಧದ ಪುಡಿ, ಕೆಲವು ಹನಿ ನಿಂಬೆ ರಸ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದನ್ನು ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. ಒಣಗಿದ ನಂತರ ಸ್ಕ್ರಬ್ ಮಾಡಿ. 20-30 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಬಾರಿ ಹಚ್ಚಿದರೆ ಕೂದಲಿನ ಬೆಳವಣಿಗೆ ತಡೆಯುತ್ತದೆ.
ಎಗ್ ಮತ್ತು ಕಾರ್ನ್‌ಸ್ಟಾಚ್ ಮಾಸ್ಕ್: ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಕಾರ್ನ್‌ಸ್ಟಾರ್ಚ್ ಮತ್ತು 1 ಚಮಚ ಸಕ್ಕರೆ ಸೇರಿಸಿ. ಮೃದುವಾದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮಾಸ್ಕ್ ಒಣಗಿದ ನಂತರ ಮೊದಲು ಮಾಸ್ಕ್ ಪೀಲ್ ಮಾಡಿ ನಂತರ ಮುಖ ತೊಳೆಯಿರಿ. ಮಾಸ್ಕ್ ಪೀಲ್‌ನಲ್ಲಿ ಕೂದಲು ಅಂಟಿಕೊಂಡಿರುವುದನ್ನು ಗಮನಿಸಿ.
ಅಕ್ಕಿ ಹಿಟ್ಟು ಮತ್ತು ಅರಿಶಿನ: 2 ಸ್ಪೂನ್ ಅಕ್ಕಿ ಹಿಟ್ಟು, 1/2 ಸ್ಪೂನ್ ಅರಿಶಿನ ಪುಡಿಗೆ ಹಾಲು ಸೇರಿಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿ.
ಈ ಸಲಹೆಗಳನ್ನು ಅನುಸರಿಸಿದರೆ ಮುಖದ ಮೇಲಿನ ಕೂದಲು ಕಡಿಮೆ ಆಗಿ ನಿಮ್ಮ ಮುಖ ಮೃದು, ಕಾಂತಿಯುತವಾಗಿರುತ್ತದೆ.