ಶುರುವಾಗಿದೆ ಮದುವೆ ಸೀಸನ್; ಅರಿಸಿನ ಶಾಸ್ತ್ರದಲ್ಲಿ ಬಟ್ಟೆ ಹಳದಿ ಕಲೆಯಾಗಿದ್ರೆ ಕ್ಲೀನ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್
ಮದುವೆಯಲ್ಲಿ ಅರಿಸಿನ ಶಾಸ್ತ್ರವೆಂದರೆ ಬಹಳ ಮೋಜು. ವಧು- ವರರಿಗೆ ಅರಿಸಿನ ಹಚ್ಚಿ ಸಂಭ್ರಮಿಸುತ್ತಾ ಎಲ್ಲರೂ ಹಳದಿಯ ಬಣ್ಣದಲ್ಲಿ ಮಿಂದೇಳುತ್ತಾರೆ. ಆದರೆ ಬಟ್ಟೆಯ ಮೇಲಾದ ಅರಿಸಿನದ ಕಲೆ ತೆಗೆಯುವುದು ಬಹಳ ಕಷ್ಟ. ಹಾಗಂತ ಸಮಾರಂಭದಿಂದ ದೂರವಿರಬೇಡಿ. ಇಲ್ಲಿದೆ ಸುಲಭದಲ್ಲಿ ಬಟ್ಟೆಯ ಮೇಲಾದ ಅರಿಸಿನದ ಕಲೆ ತೆಗೆಯುವ ಉಪಾಯಗಳು.
ಈಗ ಎಲ್ಲೆಲ್ಲೂ ಮದುವೆ ಸೀಸನ್ ಪ್ರಾರಂಭವಾಗಿದೆ. ಮದುವೆ ಎಂದ ಮೇಲೆ ಬಹಳಷ್ಟು ಶಾಸ್ತ್ರಗಳಿರುತ್ತವೆ. ಬಳೆ ಶಾಸ್ತ್ರ, ಅರಿಸಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಹೀಗೆ ಸಂಭ್ರಮವೋ ಸಂಭ್ರಮ. ಮದುವೆಯ ಶಾಸ್ತ್ರಗಳಲ್ಲಿ ಅರಿಸಿನ ಶಾಸ್ತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ವಧು ವರರಿಗೆ ಅರಿಸಿನ ಹಚ್ಚಿ, ಮುಂದಿನ ಬದಕು ಹಸನಾಗಿರಲಿ ಎಂದು ಹಾರೈಸುವ ಅರಿಸಿನ ಶಾಸ್ತ್ರವು ಬಹಳಷ್ಟು ಮಜವಾಗಿರುತ್ತದೆ. ಎಲ್ಲೆಲ್ಲೂ ಹಳದಿ ಬಣ್ಣದ ರಂಗೇರಿರುತ್ತದೆ.
ಆದರೆ ಬಟ್ಟೆಗಳ ಮೇಲೆ ಬಿದ್ದ ಅರಿಸಿನದ ಮೊಂಡು ಕಲೆ ಮಾತ್ರ ಅಷ್ಟು ಸುಲಭವಾಗಿ ತೊಡೆದುಹಾಕಲು ಆಗುವುದಿಲ್ಲ. ಹಾಗೆ ಬಟ್ಟೆಗಳ ಮೇಲೆ ಉಂಟಾದ ಅರಿಸಿನದ ಕಲೆ ತೆಗೆಯುವುದು ಒಂದು ದೊಡ್ಡ ಸಾಹಸವೇ ಆಗಿದೆ. ಸೋಪು, ಡಿಟರ್ಜಂಟ್ ಪೌಡರ್, ಎಂತದೇ ಬಳಸಿದರೂ ಒಮ್ಮೊಮ್ಮೆ ಕಲೆ ಹಾಗೇ ಉಳಿದು ಬಿಡುತ್ತದೆ. ಅಂತಹ ಸಂದರ್ಭದಲ್ಲಿ ಇಷ್ಟಪಟ್ಟು ಕೊಂಡ ಬಟ್ಟೆಯನ್ನು ಎಸೆಯಲೂ ಮನಸಾಗುವುದಿಲ್ಲ. ಹಾಗಾದರೆ ಅದನ್ನು ಸುಲಭವಾಗಿ ತೆಗೆಯುವ ಹಲವು ಕಸರತ್ತುಗಳು ನಡೆಯುತ್ತವೆ. ನಿಮ್ಮ ಬಟ್ಟೆಯ ಮೇಲೂ ಇದೇ ರೀತಿ ಅರಿಸಿನದ ಕಲೆಗಳಾಗಿದ್ದರೆ ಇಲ್ಲಿ ಕೆಲವೊಂದು ಸುಲಭ ಮತ್ತು ಪರಿಣಾಮಕಾರಿಯಾದ ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಉಪಯೋಗಿಸಿಕೊಂಡು ನಿಮ್ಮ ಬಟ್ಟೆಯ ಮೇಲೆ ಉಂಟಾದ ಅರಿಸಿನದ ಕಲೆಯನ್ನು ಸುಲಭವಾಗಿ ತೆಗೆಯಬಹುದು.
ಅರಿಸಿನ ಕಲೆ ಸುಲಭವಾಗಿ ತೆಗೆಯುವುದು ಹೇಗೆ?
ಬಟ್ಟೆಯನ್ನು ಬ್ಲೀಚ್ ಮಾಡಿ: ಬಿಳಿ ಬಟ್ಟೆಗಳ ಮೇಲಿನ ಅರಿಸಿನದ ಮೊಂಡು ಕಲೆಗಳನ್ನು ತೆಗೆಯಲು ಬ್ಲೀಚ್ ಪರಿಣಾಮಕಾರಿ ಉಪಾಯವಾಗಿದೆ. ಬ್ಲೀಚ್ ಮಾಡುವು ಮೊದಲು ನಿಮ್ಮ ಬಟ್ಟೆ ಅದಕ್ಕೆ ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ರೇಷ್ಮೆ ಅಥವಾ ಉಣ್ಣೆಯಂತಹ ಸೂಕ್ಷ್ಮ ಬಟ್ಟೆಗಳನ್ನು ಬ್ಲೀಚ್ ಮಾಡಿದರೆ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಬಟ್ಟೆ ಯಾವುದೆಂದು ತಿಳಿದು ಜಾಗರೂಕರಾಗಿರುವುದು ಮುಖ್ಯವಾಗಿದೆ. ಒಂದು ಬಕೆಟ್‌ನಲ್ಲಿ ತಂಪು ನೀರು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಕಪ್ ಬ್ಲೀಚ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 20 ನಿಮಿಷಗಳ ಕಾಲ ಅರಿಸಿನದ ಕಲೆ ಆಗಿರುವ ಬಟ್ಟೆಯನ್ನು ನೆನೆಸಿ. ಕೇವಲ ಬಿಳಿ ಬಣ್ಣದ ಬಟ್ಟೆಯಾಗಿರಲಿ, ಬೇರೆ ಬಣ್ಣಗಳಿರುವ ಬಟ್ಟೆಯಾಗಿದ್ದರೆ ನೀವು ಬ್ಲೀಚ್ ಮಾಡಿದ ತಕ್ಷಣ ಬಟ್ಟೆಯ ಮೂಲ ಬಣ್ಣವೂ ಹೊರಟುಹೋಗುತ್ತದೆ.
ಬಿಳಿ ವಿನೆಗರ್ ಬಳಸಿ: ನೀವು ರೇಷ್ಮೆ ಮತ್ತು ಉಣ್ಣೆಗಳಂತಹ ಸೂಕ್ಷ್ಮ ಬಟ್ಟೆಗಳ ಮೇಲಿರುವ ಅರಿಸಿನದ ಕಲೆ ಹೋಗಿಸಲು ಪ್ರಯತ್ನಪಡುತ್ತಿದ್ದರೆ, ಅದಕ್ಕೆ ಬಿಳಿ ವಿನೆಗರ್ ಉತ್ತಮ ಪರಿಹಾರವಾಗಿದೆ. 2 ಚಮಚ ಬಿಳಿ ವಿನೆಗರ್ ಅನ್ನು 1 ಚಮಚ ಪಾತ್ರೆ ತೊಳೆಯುವ ಲಿಕ್ವಿಡ್‌ನೊಂದಿಗೆ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಕಲೆಯಾದ ಜಾಗಕ್ಕೆ ಅನ್ವಯಿಸಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಗತ್ಯವಿದ್ದರೆ ಮೃದುವಾಗಿ ಉಜ್ಜಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಅಡುಗೆ ಸೋಡಾ: ಎಣ್ಣೆ ಜಿಡ್ಡು ಸಹ ಸೇರಿರುವ ಅರಿಸಿನದ ಕಲೆ ತೆಗೆಯುವ ಮೊದಲು ಪೇಪರ್ ಟವಲ್ ಅಥವಾ ಟಿಶ್ಯೂ ಪೇಪರ್ ಅನ್ನು ಕಲೆಯಾದ ಜಾಗದ ಮೇಲೆ ಹರಡಿ. ಎಣ್ಣೆಯನ್ನು ಅದು ಹೀರಿಕೊಳ್ಳುತ್ತದೆ. ಈಗ ಕಲೆಯಾದ ಭಾಗದ ಮೇಲೆ ಬೇಕಿಂಗ್ ಸೋಡಾ ಹಾಕಿ. ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಬಿಳಿ ವಿನೆಗರ್, ಪಾತ್ರೆ ತೊಳೆಯುವ ಲಿಕ್ವಿಡ್ ಮತ್ತು ನೀರು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಆ ಮಿಶ್ರಣವನ್ನು ಕಲೆಯಾದ ಭಾಗದಲ್ಲಿ ಸ್ಪ್ರೇ ಮಾಡಿ. ನಿಧಾನವಾಗಿ ಉಜ್ಜಿ, ನಂತರ ತಂಪು ನೀರಿನಿಂದ ತೊಳೆಯಿರಿ. ಅರಿಸಿನದ ಕಲೆ ಬಟ್ಟೆಯ ತುಂಬೆಲ್ಲಾ ಆಗಿದ್ದರೆ ಅದನ್ನು ರಾತ್ರಿಯಿಡಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ತೊಳೆಯಬಹುದು. ಅಡುಗೆ ಸೋಡಾ ಮತ್ತು ತಂಪು ನೀರು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಅಡುಗೆ ಸೋಡಾ, ಟೂತ್ ಪೇಸ್ಟ್ ಬಳಸಿ: ಬಟ್ಟೆಯ ಮೇಲಿನ ಅರಿಸಿನದ ಕಲೆ ತೆಗೆಯಲು ಅಡುಗೆ ಸೋಡಾ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಅರಿಸಿನದ ಕಲೆಯಾಗಿರುವ ಜಾಗಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ.
ರಬ್ಬಿಂಗ್ ಆಲ್ಕೋಹಾಲ್ ಬಳಸಿ: ಬಟ್ಟೆಯ ಮೇಲೆ ಉಂಟಾದ ಅರಿಸಿನದ ಕಲೆ ತೆಗೆಯಲು ರಬ್ಬಿಂಗ್ ಆಲ್ಕೋಹಾಲ್ ಉತ್ತಮ ಪರಿಹಾರವಾಗಿದೆ. ಇದು ಅನೇಕ ಆಳವಾದ ಮೊಂಡು ಕಲೆಗಳನ್ನು ತೆಗೆದುಹಾಕುತ್ತದೆ. ಕಲೆಯಾದ ಜಾಗಕ್ಕೆ ಐದು ಹನಿ ಆಲ್ಕೋಹಾಲ್ ಅನ್ವಯಿಸಿ. ಸ್ವಲ್ಪ ಹೊತ್ತು ಹಾಗೆ ಬಿಡಿ. ಈಗ ಬಟ್ಟೆಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ಬಟ್ಟೆಯ ಮೇಲಿರುವ ಅರಿಸಿನದ ಕಲೆಗಳು ದೂರವಾಗುತ್ತದೆ.