EPFO Withdraw: ಪಿಎಫ್ ಹಣವನ್ನು ಯಾವಾಗ, ಹೇಗೆ ತೆಗೆಯಬಹುದು; ಆನ್‌ಲೈನ್, ಆಫ್ಲೈನ್ನಲ್ಲಿ ವಿತ್ ಡ್ರಾ ಮಾಡುವುದೇಗೆ?
How to Withdraw PF: ಉದ್ಯೋಗಿಗಳಿಗೆ ಬಹಳ ಮುಖ್ಯವಾದ ಇಪಿಎಫ್ ಅನ್ನು ವಿತ್ ಡ್ರಾ ಮಾಡಿಕೊಳ್ಳುವುದೇಗೆ? ಆನ್‌ಲೈನ್ ಮತ್ತು ಆಫ್ಲೈನ್ ವಿಧಾನಗಳು ಹೇಗಿವೆ? ಎಂಬುದರ ವಿವರ ಇಲ್ಲಿದೆ.
EPF Withdrawal Process: ಭವಿಷ್ಯ ನಿಧಿ (ಇಪಿಎಫ್) ಎನ್ನುವುದು ಉದ್ಯೋಗಿಗಳು ಸ್ವಲ್ಪ ಮೊತ್ತದ ವೇತನ ಉಳಿಸುವ ಪ್ರಕ್ರಿಯೆ. ಇಪಿಎಫ್ ನಿಯಮದ ಪ್ರಕಾರ, ಉದ್ಯೋಗಿಗಳು ತಮ್ಮ ಸಂಬಳದ ಶೇಕಡಾ 12 ರಷ್ಟು ಹಣವನ್ನು ಪ್ರತಿ ತಿಂಗಳು ಪಿಎಫ್ನಲ್ಲಿ ಠೇವಣಿ ಇಡಬೇಕು. ಇಲ್ಲಿ ಉದ್ಯೋಗಿಯ ಪಾಲಿನಷ್ಟೇ ಮೊತ್ತವನ್ನು ಕಂಪನಿಯು ಸಹ ಪಿಎಫ್ ಖಾತೆಗೆ ವರ್ಗಾವಣೆ ಮಾಡುತ್ತದೆ. ಇಪಿಎಫ್ ಖಾತೆಯಲ್ಲಿರುವ ಮೊತ್ತಕ್ಕೆ ವಾರ್ಷಿಕ ಆಧಾರದಲ್ಲಿ ಬಡ್ಡಿ ಲೆಕ್ಕ ಹಾಕಲಾಗುತ್ತದೆ.
ಉದ್ಯೋಗಿಗಳು ಕೆಲಸದಿಂದ ನಿವೃತ್ತಿಯಾದ ಬಳಿಕ ಪಿಎಫ್ ಮೊತ್ತ ತೆಗೆದುಕೊಳ್ಳಬಹುದು. ಅದಾಗ್ಯೂ ಕೆಲವು ತುರ್ತು ಸಂದರ್ಭಗಳಲ್ಲಿ ಪಿಎಫ್ ವಿತ್ರಾ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ನಿವೃತ್ತಿಗೂ ಮುನ್ನ ಪೂರ್ಣ ಪ್ರಮಾಣದ ಮೊತ್ತ ವಿತ್ಡ್ರಾ ಮಾಡಲು ಸಾಧ್ಯವಿಲ್ಲ. ಶೇ 75ರಷ್ಟು ಮೊತ್ತವನ್ನು ಡ್ರಾ ಮಾಡಿಕೊಳ್ಳಬಹುದು. 2023-24ರ ಆರ್ಥಿಕ ವರ್ಷದಲ್ಲಿ ಶೇ.8.25ಕ್ಕೆ ಬಡ್ಡಿ ಹೆಚ್ಚಾಗಿದ್ದು, ಈ ವರ್ಷ ಏಪ್ರಿಲ್ 16ರಂದು ವೈದ್ಯಕೀಯ ಚಿಕಿತ್ಸೆಗೆ ವಿತ್ಡ್ರಾ ಮಾಡುವ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿದೆ.
ಇಪಿಎಫ್ ಯಾವಾಗ ವಿತ್ ಡ್ರಾ ಮಾಡಬಹುದು?
ಎರಡು ಬಾರಿ ಪೂರ್ತಿಯಾಗಿ ಇಪಿಎಫ್ ಮೊತ್ತವನ್ನು ವಿತ್ಡ್ರಾ ಮಾಡಿಕೊಳ್ಳಲು ಅವಕಾಶ ಇದೆ. ಈ ಪೈಕಿ ಒಂದು ಬಾರಿ ಉದ್ಯೋಗಿಯೊಬ್ಬರು ಸಂಪೂರ್ಣ ನಿವೃತ್ತರಾದಾಗ. ಮತ್ತೊಂದು ಬಾರಿ ಉದ್ಯೋಗಿ ಒಂದು ತಿಂಗಳ ಕಾಲ ನಿರುದ್ಯೋಗಿಯಾದಾಗ ಶೇ 75ರಷ್ಟು ಮತ್ತು 2 ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗಿಯಾದರೆ ಉಳಿದ ಶೇ.25 ರಷ್ಟನ್ನು ವಿತ್ ಡ್ರಾ ಮಾಡಬಹುದು.
ಭಾಗಶಃ ವಿತ್ ಡ್ರಾ
ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಇಪಿಎಫ್ ಮೊತ್ತದಲ್ಲಿ ಭಾಗಶಃ ವಿತ್ ಡ್ರಾ ಮಾಡಿಕೊಳ್ಳಬಹುದು. ನಿವೃತ್ತಿಗೂ ಮೊದಲು ವೈದ್ಯಕೀಯ ಚಿಕಿತ್ಸೆ, ಮದುವೆ, ಶಿಕ್ಷಣ, ಭೂಮಿ ಅಥವಾ ಮನೆ ಖರೀದಿ ಅಥವಾ ಮನೆ ನಿರ್ಮಾಣ ಅಥವಾ ನವೀಕರಣ, ಗೃಹ ಸಾಲದ ಮರುಪಾವತಿಗೆ ಸಂಬಂಧಿಸಿ ಭಾಗಶಃ ಪಿಎಫ್ ಹಿಂಪಡೆಯಬಹುದು.
ಪಿಎಫ್ ವಿತ್ ಡ್ರಾ ಮಾಡುವುದೇಗೆ?
ಆಫ್ಲೈನ್ ಅಪ್ಲಿಕೇಶನ್: ಇಪಿಎಫ್ ವಿತ್ಡ್ರಾಗೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್)/ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ) ಡೌನ್‌ಲೋಡ್ ಮಾಡಿ. (Composite Claim Form)
ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್): ಯುಎಎನ್ (UAN) ಪೋರ್ಟಲ್‌ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀವು ಲಿಂಕ್ ಮಾಡಿದ್ದರೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್) ಭರ್ತಿ ಮಾಡಬೇಕು. ಈ ಫಾರಂನೊಂದಿಗೆ ನಿಮ್ಮ ಕಂಪನಿಯ ದೃಢೀಕರಣ ಇಲ್ಲದೆಯೇ ಸಂಬಂಧಿಸಿದ ಇಪಿಎಫ್ ಆಫೀಸ್ನಲ್ಲಿ ಸಲ್ಲಿಸಬೇಕು.
ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ): ಯುಎಎನ್ ಪೋರ್ಟಲ್‌ನಲ್ಲಿ ಆಧಾರ್ ಮತ್ತು ಬ್ಯಾಂಕ್ ವಿವರ ಲಿಂಕ್ ಮಾಡದಿದ್ದರೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ) ಬಳಸಬಹುದು. ಆದರೆ ನೀವು ಕೆಲಸ ಮಾಡುತ್ತಿರುವ ಕಂಪನಿಯ ದೃಢೀಕರಣದೊಂದಿಗೆ ನೀವು ಈ ಫಾರ್ಮ್ ಭರ್ತಿಗೊಳಿಸಬೇಕು. ಅದರ ನಂತರ ಅದನ್ನು ಇಪಿಎಫ್‌ಒ ಕಚೇರಿಯಲ್ಲಿ ಸಲ್ಲಿಸಬೇಕು. ಭಾಗಶಃ ವಿತ್ಡ್ರಾಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ.
ಆನ್‌ಲೈನ್ ಪಿಎಫ್ ಹಿಂಪಡೆಯುವ ವಿಧಾನ
ಆನ್‌ಲೈನ್ ಮೂಲಕವೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಅದಕ್ಕಾಗಿ ಯುಎಎನ್ ನಂಬರ್ ಆ್ಯಕ್ಟಿವೇಟ್ ಮಾಡಬೇಕು. ಯುಎಎನ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿರಬೇಕು. ಯುಎಎನ್ ಕೆವೈಸಿ ಅಪ್ಡೇಟ್ ಮಾಡಬೇಕು. ಅಂದರೆ ಆಧಾರ್, ಪಾನ್, ಬ್ಯಾಂಕ್ ಖಾತೆ, ಐಎಫ್ಎಸ್ಸಿ ಅನ್ನು ಯುಎಎನ್ಗೆ ಲಿಂಕ್ ಮಾಡಿರಬೇಕು. ಈ ವಿವರಗಳೊಂದಿಗೆ ನಿಮ್ಮ ಖಾತೆಯನ್ನು ಲಿಂಕ್ ಮಾಡಿದ್ದರೆ ಪಿಎಫ್ ಹಿಂಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಪಿಎಫ್ ಡ್ರಾ ಮಾಡುವುದು ಹೇಗೆ?
ಹಂತ 1: ಯುಎಎನ್ ಪೋರ್ಟಲ್ಗೆ https://passbook.epfindia.gov.in/ ಭೇಟಿ ನೀಡಿ. ಮುಖಪುಟ ಓಪನ್ ಆದ ಬೆನ್ನಲ್ಲೇ ಸರ್ವೀಸ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಫಾರ್ ಎಂಪ್ಲಾಯೀಸ್ (For_Employees) ಮೇಲೆ ಒತ್ತಿ.
ಹಂತ 2: ನಿಮ್ಮ ಯುಎಎನ್, ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
ಹಂತ 3 : 'ಮ್ಯಾನೇಜ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕೆವೈಸಿ ವಿವರಗಳಾದ ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ.
ಹಂತ 4: ಕೆವೈಸಿ ವಿವರ ಪರಿಶೀಲಿಸಿದ ನಂತರ, 'ಆನ್‌ಲೈನ್ ಸರ್ವೀಸಸನ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ 'ಕ್ಲೈಮ್ (ಫಾರ್ಮ್-31,19,10C&10D)' ಸೆಲೆಕ್ಟ್ ಮಾಡಿ.
ಹಂತ 5: ಉದ್ಯೋಗಿ ವಿವರ, ಕೆವೈಸಿ ಮತ್ತು ಇತರ ವಿವರಗಳನ್ನು ಒಮ್ಮೆ ಪರಿಶೀಲಿಸಿ. ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಎಂಟರ್ ಮಾಡಿದ ಬಳಿಕ 'ವೆರಿಫೈ' ಮೇಲೆ ಕ್ಲಿಕ್ ಮಾಡಿ.
ಹಂತ 6: ಅಂಡರ್‌ಟೇಕಿಂಗ್ ಸರ್ಟಿಫಿಕೇಟ್ಗೆ ಸಹಿ ಮಾಡಲು ಯೆಸ್ (Yes) ಕ್ಲಿಕ್ ಮಾಡಿ. ನಂತರ ಕಂಟಿನ್ಯೂ ಮಾಡಿ.
ಹಂತ 7: ಈಗ 'ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೈಮ್' (Proceed for online claim) ಮೇಲೆ ಕ್ಲಿಕ್ ಮಾಡಿ.
ಹಂತ 8: ಕ್ಲೈಮ್ ಫಾರ್ಮ್‌ನಲ್ಲಿ, 'ಐ ವಾಂಟ್ ಟು ಅಪ್ಲೈ ಫಾರ್' (I Want To Apply For) ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಮತ್ತು ನಿಮಗೆ ಅಗತ್ಯವಿರುವ ಕ್ಲೈಮ್ ಅನ್ನು ಆಯ್ಕೆ ಮಾಡಿ. ಅಂದರೆ ಇಪಿಎಫ್ ಸೆಟಲ್ಮೆಂಟ್, ಇಪಿಎಫ್ ಭಾಗ ವಿತ್ ಡ್ರಾ (ಸಾಲ/ಮುಂಗಡ) ಅಥವಾ ಪಿಂಚಣಿ ವಿತ್ ಡ್ರಾ ಆಯ್ಕೆಯನ್ನು ಆರಿಸುವುದು.
ಹಂತ 9: ನಿಮ್ಮ ನಿಧಿಯನ್ನು ಹಿಂಪಡೆಯಲು 'ಪಿಎಫ್ ಅಡ್ವಾನ್ಸ್ (ಫಾರ್ಮ್ 31)' ಆಯ್ಕೆ ಮಾಡಿ. ಇದರಲ್ಲಿ ಮುಂಗಡ ಪ್ರಯೋಜನ, ಅಗತ್ಯವಿರುವ ಮೊತ್ತ, ಉದ್ಯೋಗಿ ವಿವರಗಳನ್ನು ನಮೂದಿಸಬೇಕು.
ಹಂತ 10: ನಿಮ್ಮ ಅರ್ಜಿಯನ್ನು ಸಲ್ಲಿಸಿ. ಫಾರ್ಮ್ ಭರ್ತಿ ಮಾಡುವಾಗ ಯಾವ ಕಾರಣ ಹಾಗೂ ಉದ್ದೇಶಕ್ಕೆ ಪಿಎಫ್ ವಿತ್ ಡ್ರಾ ಮಾಡುತ್ತಿದ್ದೀರಿ ಎಂಬುದಕ್ಕೆ ಸಂಬಂಧಿಸಿ ಸರ್ಟಿಫಿಕೇಟ್ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಲ್ಲಿಸಬೇಕು.
ವಿಭಾಗ