Relationship: ಹೊಂದಾಣಿಕೆ ಬೆಸೆಯುವ ಪ್ರವಾಸದ ಏಕಾಂತ, ಜೋಡಿಯಾಗಿ ಹೊರಡುವ ಮೊದಲು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು
Tour for Rejuvenation: ಹೊಂದಾಣಿಕೆ ಸಮಸ್ಯೆಯಿಂದ ಬಳಲುವ ಜೋಡಿಗಳಿಗೆ ಪ್ರವಾಸ ಎನ್ನುವುದು ಮನಸ್ಸನ್ನು ಮತ್ತೆ ಸಮಸ್ಥಿತಿ ತರುವ ಟಾನಿಕ್ ಇದ್ದಂತೆ. ನಿಮ್ಮ ಪ್ರವಾಸ ಸುಖಕರವಾಗಿರಬೇಕಿದ್ದರೆ, ಪ್ರವಾಸ ಮುಗಿಸಿ ಬಂದ ನಂತರವೂ ನಿಮ್ಮ ಮನಶಾಂತಿ ಹಾಗೆಯೇ ಉಳಿಯಬೇಕಿದ್ದರೆ ನಿಮ್ಮ ಸಿದ್ಧತೆ ಹೇಗಿರಬೇಕು? ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್ ಈ ಅಂಕಣದಲ್ಲಿ ವಿವರಿಸಿದ್ದಾರೆ.
ಪ್ರಶ್ನೆ 1: ಪ್ರವಾಸವು ಸಂಬಂಧಗಳನ್ನು ಸುಧಾರಿಸಬಲ್ಲದೇ ? ಪ್ರವಾಸಿ ತಾಣಗಳಿಗೆ ಸಂಬಂಧ ಬೆಸೆಯುವ ಸಾಮರ್ಥ್ಯವಿದೆಯೇ? ಸಂಗಾತಿಗಳ ನಡುವೆ ಇರುವ ಹೊಂದಾಣಿಕೆ ಸೇರಿ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಬಹುದೇ? - ವಿನಾಯಕ, ಬೀದರ್
ಉತ್ತರ: ಸಾಮಾನ್ಯವಾಗಿ ಸಂಗಾತಿಗಳ ನಡುವೆ ಅತಿಯಾದ ಜಗಳ, ಸಂಘರ್ಷಗಳು ಉಂಟಾದಾಗ ಆತ್ಮೀಯರಿಂದ ಸಾಮಾನ್ಯವಾಗಿ ಒಂದು ಸಲಹೆ ಬರುತ್ತದೆ. ಸಂಗಾತಿಗಳಿಗೂ ಇಂಥದ್ದೇ ಆಲೋಚನೆ ಬರಬಹುದು. ಅದೇನೆಂದರೆ ದೀರ್ಘಾವಧಿ ರಜೆ ಪಡೆದುಕೊಂಡು ಪ್ರವಾಸಕ್ಕೆ ಹೋಗುವುದು. ಹೀಗೆ ಪ್ರವಾಸ ಮಾಡಿದರೆ ಹೊಂದಾಣಿಕೆಯ ಸಮಸ್ಯೆ ಪರಿಹಾರವಾಗಬಹುದು ಎಂಬ ಅಭಿಪ್ರಾಯ ಹಲವರದು. ಏಕೆಂದರೆ ಪ್ರವಾಸ ತಾಣದ ಏಕಾಂತವು ಒಬ್ಬರು ಮತ್ತೊಬ್ಬರ ಮನಸ್ಸು ಮತ್ತು ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿಕೊಡುತ್ತದೆ. ಪ್ರವಾಸ ತಾಣಗಳಿರುವುದೇ ಮನಸ್ಸಿನ ಮತ್ತು ದೇಹದ ವಿಶ್ರಾಂತಿಗೆ. ಸ್ಥಳ ಬದಲಾವಣೆಯಾದರೆ ಮನಸ್ಸಿಗೂ ಒಂದು ರೀತಿಯ ಬದಲಾವಣೆಯಾಗಿ, ಚೇತರಿಸಿಕೊಳ್ಳುತ್ತದೆ. ಮನಃಸ್ಥಿತಿಗಳೂ ಸುಧಾರಿಸುವ ಸಾಧ್ಯತೆಯಿರುತ್ತದೆ. ಪ್ರವಾಸಿ ತಾಣದ ವಾತಾವರಣ, ಸೌಂದರ್ಯ ಒಂದು ಮಟ್ಟಿಗೆ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವುದು ಖಚಿತ.
ಕಣ್ಣೆದುರು ಇರುವ ಸಮಸ್ಯೆಯ ಬಗ್ಗೆ ವಿಶ್ಲೇಷಣೆ ಮಾಡುವ ಸಮಯ ಮತ್ತು ಪ್ರಶಾಂತವಾದ ಸ್ಥಳಾವಕಾಶ ಸಿಗುತ್ತದೆ. ಏಕಾಂತದಲ್ಲಿ ಒಬ್ಬರೊಬ್ಬರ ಮನಸ್ಸನ್ನು ಅರಿಯುವ ಸಾಧ್ಯತೆ ಹೆಚ್ಚು. ಮನಸ್ಸು ರಿಫ್ರೆಶ್ ಆದಾಗ ಸಂಬಂಧಗಳೂ ಕೂಡ ಪುನಃಶ್ಚೇತನಗೊಳ್ಳಬಹುದು. ಆದರೆ, ಈ ಬದಲಾದ ವಾತಾವರಣದಲ್ಲಿ ಮನಸ್ಸು ಪಡೆದುಕೊಂಡ ತಾಜಾ ಮನಃಸ್ಥಿತಿಯನ್ನು ಪ್ರವಾಸ ಮುಗಿಸಿಕೊಂಡು ಪುನಃ ಹಿಂದಿರುಗಿ ತಮ್ಮ ಮನೆಗೆ ಹೋದಾಗಲೂ ಉಳಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಸಾಧ್ಯವಾದರೂ ಸಹ ಈ ಮನಃಸ್ಥಿತಿಯನ್ನು ಎಷ್ಟು ಅವಧಿಗೆ ಮುಂದುವರೆಸಬಹುದು?
ಪ್ರವಾಸವೆಂಬ ಕದನ ವಿರಾಮ
ಕೆಲ ಸಂಗಾತಿಗಳು ಜಗಳದಿಂದ ವಿರಾಮ ಸಿಕ್ಕಿದರೆ ಸಾಕಪ್ಪ ಎಂದು ಪ್ರವಾಸಕ್ಕೆ ಹೋಗುತ್ತಾರೆ. ಇಂಥವರ ಪಾಲಿಗೆ ಪ್ರವಾಸ ಎನ್ನುವುದು 'ತಾತ್ಕಾಲಿಕ ಕದನ ವಿರಾಮ' ಇದ್ದಂತೆ. ಕೆಲವರಿಗೆ ಪ್ರಯಾಣ, ಪ್ರವಾಸಗಳಿಂದ ಬದುಕಿನಲ್ಲಿ ಯಾವುದೇ ವ್ಯತ್ಯಾಸಗಳೂ ಆಗುವುದಿಲ್ಲ. ಪ್ರವಾಸದಲ್ಲೂ ಭಿನ್ನಾಭಿಪ್ರಾಯಗಳು, ಕದನ ಮುಂದುವರೆಯುತ್ತದೆ. ಸ್ಥಳ ವಾತಾವರಣ ಬದಲಾಗಬಹುದೇ ಹೊರತು ಹಳೆಯ ವಾದ ವಿವಾದಗಳು ಹಾಗೆಯೇ ಇರುತ್ತವೆ.
ಮನಸ್ತಾಪಗಳು ಬಹಳ ಆಳವಾಗಿದ್ದರೆ ಪ್ರವಾಸವು ಕುಸಿದ ಸೇತುವೆಯನ್ನು ಪುನಃ ಜೋಡಿಸಲು ವಿಫಲವಾಗುತ್ತದೆ. ಪ್ರವಾಸದ ಕಹಿ ನೆನಪುಗಳು ಸಂಗಾತಿಗಳಿಗೆ ಮತ್ತಷ್ಟು ನೋವು ಉಂಟುಮಾಡುತ್ತವೆ. ಸಂಗಾತಿಗಳ ಮನಸ್ಸು ಕಹಿಯಾಗಿದ್ದು, ಇಬ್ಬರ ನಡುವೆ ಕದನವಾಗಿದ್ದರೆ, ಪ್ರವಾಸಿ ತಾಣದ ಸುಂದರ ಪ್ರಶಾಂತ ವಾತಾವರಣ ಸಹ ಗಮನಕ್ಕೆ ಬರುವುದಿಲ್ಲ. ಇಂಥವರ ಪ್ರವಾಸವೂ ನಿರುಪಯೋಗವಾಗುತ್ತದೆ. ಪುನಃ ಆ ಸ್ಥಳಕ್ಕೆ ಹೋಗುವುದಕ್ಕೂ ಇಷ್ಟವಾಗುವುದಿಲ್ಲ.
ಕೇವಲ ಪ್ರವಾಸ ಮತ್ತು ಪ್ರವಾಸ ತಾಣಗಳೇ ನಿಮ್ಮ ಹೊಂದಾಣಿಕೆ ಸಮಸ್ಯೆಗಳಿಗೆ ಪರಿಹಾರ ಆಗುವುದಿಲ್ಲ. ಪ್ರವಾಸ ಹೊರಡುವ ಮೊದಲು ಪ್ರವಾಸ ಬೇಕೆ ಅಥವಾ ಬೇಡವೇ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ನಿಮ್ಮ ಆಯ್ಕೆ ಬೇಕು ಎಂದಾದರೆ ಪ್ರವಾಸದ ನಿಜವಾದ ಉದ್ದೇಶವನ್ನು ಅರಿತು ಅದರ ಉಪಯೋಗವನ್ನು ಪಡೆದುಕೊಳ್ಳಿ.
ಪ್ರವಾಸಕ್ಕೆ ಹೋರಡುವ ಮೊದಲು ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.
1) ಈ ಪ್ರವಾಸದ ಉದ್ದೇಶವೇನು?
2) ಈ ಉದ್ದೇಶವನ್ನು ಪೂರೈಸಿಕೊಳ್ಳಲು ನಾನು ಬದ್ಧನಾಗಿದ್ದೇನೆಯೇ?
3) ನಾನು / ನಾವು ನಿಜಕ್ಕೂ ನಮ್ಮ ಮನಃಸ್ಥಿತಿಯನ್ನು ಬದಲಿಸಿಕೊಂಡು, ವಾದ-ವಿವಾದವಿಲ್ಲದೆ ಪ್ರೀತಿಯಿಂದ, ಅನ್ಯೋನ್ಯತೆಯಿಂದ ಸಮಯ ಕಳೆಯುವುದಕ್ಕೆ ಸಿದ್ಧರಿದ್ದೇವೆಯೇ?
4) ಪ್ರವಾಸದಿಂದ ಹಿಂದಿರುಗಿದ ನಂತರ ಮನಃಶಾಂತಿ, ಸಮಾಧಾನವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಾಧ್ಯವೇ?
5) ಪ್ರವಾಸವೇ ಸಮಸ್ಯೆಯ ಪರಿಹಾರ ಎನ್ನುವುದಾದರೆ, "ಆಂತರಿಕ ಪ್ರಯಾಣ” ಉತ್ತಮವಲ್ಲವೇ ?
ಏನಿದು ಆಂತರಿಕ ಪ್ರಯಾಣ?
ಹೊರ ಪ್ರಪಂಚದ ಪ್ರಯಾಣವು ನವಚೇತನ, ರೋಮಾಂಚಕ ಅನುಭವ ಮತ್ತು ಉತ್ತಮ ನೆನಪುಗಳನ್ನು ನೀಡಬಹುದಾದರೂ, ಅಂತಿಮವಾಗಿ ಆಂತರಿಕ ಪ್ರಯಾಣವು ಶಾಶ್ವತ ಬದಲಾವಣೆಯನ್ನು ತರುತ್ತದೆ. ಎಲ್ಲಿ ಆತಂರಿಕ ಮತ್ತು ಹೊರ ಪ್ರಯಾಣಗಳೆರೆಡರ ಮಿಲನವಾಗುತ್ತದೆಯೋ ಅಲ್ಲಿ ವಿಭಿನ್ನ, ವಿಶೇಷ, ಹಾಗೂ ಪರಿಪೂರ್ಣ ಪ್ರಯಾಣವು ಲಭ್ಯವಾಗುತ್ತದೆ.
ಯಾವುದೇ ಆತಂಕದ ಅಥವಾ ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ನಡವಳಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೆಚ್ಚಿನ ಮಟ್ಟದ ಸ್ವಯಂ-ಅರಿವು, ಸ್ವಯಂ ನಿಯಂತ್ರಣ ಮತ್ತು ಬದಲಾವಣೆಯನ್ನು ತರುವ ಆಳವಾದ ಬಯಕೆಯ ಅವಶ್ಯಕತೆಯಿರುತ್ತದೆ. ಇವುಗಳೇ ವ್ಯಕ್ತಿಗಳ ನಡುವಣ ಸಂಘರ್ಷಗಳಿಗೆ ರಾಮಬಾಣವಾಗುತ್ತವೆಯೇ ಹೊರತು ಕೇವಲ ಪ್ರವಾಸವಲ್ಲ. ಇಷ್ಟೆಲ್ಲಾ ಸಿದ್ಧತೆ, ಮುಕ್ತ ಮನಃಸ್ಥಿತಿಯಲ್ಲಿ ನಡೆಯುವ ಪ್ರವಾಸವು ಸುಖಕರ ಮತ್ತು ಸ್ಮರಣೀಯ.
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.