ಸಂಪಾದಕೀಯ: ಸ್ತ್ರೀ ಭ್ರೂಣಹತ್ಯೆ ಪಿಡುಗು ನಿಲ್ಲದೆ ಲಿಂಗಾನುಪಾತ ಸುಧಾರಿಸದು, ಲಿಂಗ ಸಮಾನತೆಯ ಆಶಯಕ್ಕೆ ಸಿಗಬೇಕಿದೆ ಸರ್ಕಾರ, ಸಮಾಜದ ಒತ್ತಾಸೆ
ಹೆಣ್ಣುಮಕ್ಕಳು ಹೊರೆಯಲ್ಲ, ಅವರೂ ಪೋಷಕರನ್ನು ಸಲಹಬಲ್ಲರು, ಹೆಣ್ಣುಮಕ್ಕಳಿಗೂ ವಿದ್ಯೆ, ಉದ್ಯೋಗದಲ್ಲಿ ಸಮಾನ ಅವಕಾಶಗಳು ಇವೆ ಎಂದು ಸಾರಿ ಹೇಳಬೇಕಾಗಿದೆ. ಸಮಾಜದಲ್ಲಿ ಬೇರೂರಿರುವ ಪಿಡುಗುಗಳ ವಿರುದ್ಧ ನಡೆಯುತ್ತಿರುವ ಹೋರಾಟದ ವೇಗ ಎಂದಿಗೂ ಕಡಿಮೆಯಾಗಬಾರದು. ಹರಿಯಾಣದ ಬೆಳವಣಿಗೆ ಕರ್ನಾಟಕಕ್ಕೂ ಒಂದು ಪಾಠವಾಗಬೇಕಿದೆ.
ಕರ್ನಾಟಕವೂ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತಲೂ ಕಡಿಮೆಯಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಪ್ರಕಟಿಸಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 2022-23ರ ಅವಧಿಯಲ್ಲಿ ಪ್ರತಿ ಒಂದು ಸಾವಿರ ಪುರುಷರಿಗೆ 945 ಮಹಿಳೆಯರು ಇದ್ದಾರೆ. 2020-21ರಲ್ಲಿ ಈ ಪ್ರಮಾಣವು 949, 2021-22ರಲ್ಲಿ 940 ಇತ್ತು. ಕರ್ನಾಟಕದಂತೆಯೇ ದೆಹಲಿ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣ ರಾಜ್ಯಗಳಲ್ಲಿಯೂ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತಲೂ ಕಡಿಮೆ ಇದೆ.
ಈ ಪೈಕಿ ಹರಿಯಾಣ ರಾಜ್ಯದ ಲಿಂಗಾನುಪಾತ ಅಂತರವು ಇಡೀ ದೇಶದ ಗಮನ ಸೆಳೆದಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸುವ ಪ್ರಯತ್ನಗಳಲ್ಲಿ ಹರಿಯಾಣ ಸಾಧಿಸಿರುವ ಹಿನ್ನಡೆಯು ಇಡೀ ದೇಶಕ್ಕೆ ಎಚ್ಚರಿಕೆ ನೀಡುವಂತಿದೆ. ಹೆಣ್ಣುಮಕ್ಕಳ ಬಗ್ಗೆ ಇರುವ ಪೂರ್ವಗ್ರಹಗಳು, ಲಿಂಗ ತಾರತಮ್ಯಗಳಿಂದಾಗಿ ಈ ರಾಜ್ಯದಲ್ಲಿ ಲಿಂಗಾನುಪಾತ ಸುಧಾರಿಸುತ್ತಿಲ್ಲ. ಕಳೆದ ಜನವರಿಯಿಂದ ಜೂನ್ ತಿಂಗಳ ಅವಧಿಯಲ್ಲಿ ಹರಿಯಾಣದಲ್ಲಿ ಜನಿಸಿರುವ ಮಕ್ಕಳ ಅಂಕಿಸಂಖ್ಯೆ ವಿಶ್ಲೇಷಿಸಿದರೆ ಈ ಅಂಶ ಮನದಟ್ಟಾಗುತ್ತದೆ. ಹರಿಯಾಣದಲ್ಲಿ ಜೂನ್ ತಿಂಗಳಲ್ಲಿ ಜನಿಸಿರುವ ಪ್ರತಿ 1000 ಗಂಡುಮಕ್ಕಳಿಗೆ, 906 ಹೆಣ್ಣುಮಕ್ಕಳು ಜನಿಸಿದ್ದಾರೆ. ಇದು 2016ರ ನಂತರ ದಾಖಲಾಗಿರುವ ಅತಿಕನಿಷ್ಠ ಹೆಣ್ಣುಮಕ್ಕಳ ಜನನದ ಸಂಖ್ಯೆ ಎಂದು 'ಹಿಂದೂಸ್ತಾನ್ ಟೈಮ್ಸ್' ದಿನಪತ್ರಿಕೆಯು ವರದಿ ಮಾಡಿದೆ.
ಪ್ರತಿ ಒಂದು ಸಾವಿರ ಗಂಡುಮಕ್ಕಳ ಜನನಕ್ಕೆ ಹೋಲಿಸಿದರೆ 2015ನೇ ಇಸವಿಯಲ್ಲಿ 876 ಹೆಣ್ಣುಮಕ್ಕಳು ಜನಿಸಿದ್ದರು. 2016ರಲ್ಲಿ 900, 2017 ಮತ್ತು 2018 ರಲ್ಲಿ 914, 2019ರಲ್ಲಿ 923, 2020ರಲ್ಲಿ 922, 2021ರಲ್ಲಿ 914 ಮತ್ತು 2022ರಲ್ಲಿ 917 ಹೆಣ್ಣುಮಕ್ಕಳು ಜನಿಸಿದ್ದರು. ಈ ದತ್ತಾಂಶದ ಬಗ್ಗೆ ತಕರಾರು ಮಾಡುವವರು ಇದ್ದೇ ಇರುತ್ತಾರೆ. ಆದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಬೇಟಿ ಬಚಾವೋ ಬೇಟಿ ಪಡಾವೋ' ಆಂದೋಲನವು ಹರಿಯಾಣದಂಥ ಮಹತ್ವದ ರಾಜ್ಯದಲ್ಲಿ ನಿರೀಕ್ಷಿತ ಫಲ ನೀಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹರಿಯಾಣದಲ್ಲಿ ಭ್ರೂಣ ಲಿಂಗ ಪತ್ತೆ ದೊಡ್ಡ ದಂಧೆಯಾಗಿದೆ. ಈ ಹಿಂದೆ ಇಂಥ ಕೆಲಸ ಮಾಡುತ್ತಿದ್ದ ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಸರ್ಕಾರಿ ಅಧಿಕಾರಿಗಳು ಬಾಗಿಲು ಹಾಕಿಸಿದ್ದರು. ಕಣ್ಗಾವಲು ಬಿಗಿ ಮಾಡಿದ್ದರು. ಆದರೆ ಗರ್ಭಿಣಿಯರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುವ ದುಷ್ಕರ್ಮಿಗಳು ಇದಕ್ಕೆ ಪರ್ಯಾಯ ಕ್ರಮಗಳನ್ನು ಶೀಘ್ರದಲ್ಲಿಯೇ ಕಂಡುಕೊಂಡರು.
ಹರಿಯಾಣದ ಗರ್ಭಿಣಿಯರನ್ನು ಅಕ್ಕಪಕ್ಕದ ರಾಜ್ಯಗಳಿಗೆ ಕರೆದೊಯ್ದು ಭ್ರೂಣಲಿಂಗ ಪತ್ತೆ ಮತ್ತು ಗರ್ಭಪಾತಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿರುವ ಪ್ರತಿ ಹುಳುಕನ್ನೂ ಸ್ತ್ರೀಭ್ರೂಣ ಹತ್ಯೆಗೆ ಬಳಸಿಕೊಳ್ಳುತ್ತಿದ್ದಾರೆ. ಹರಿಯಾಣದ ಸುತ್ತಲಿನ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಶೀಘ್ರದಲ್ಲಿ ಬಿಗಿ ಕಾರ್ಯಾಚರಣೆ ನಡೆಸದಿದ್ದರೆ ಈ ಪರಿಸ್ಥಿತಿ ಸುಧಾರಿಸುವುದಿಲ್ಲ.
ಸಮಾಜದಲ್ಲಿ ಪರಂಪರಾಗತವಾಗಿ ನೆಲೆಸಿರುವ 'ಹೆಣ್ಣುಮಕ್ಕಳು ಹೊರೆ' ಎನ್ನುವ ಪೂರ್ವಗ್ರಹವನ್ನು ತೊಲಗಿಸಲು, ಸ್ತ್ರೀಯರ ಪರವಾಗಿ ಸದ್ಭಾವನೆ ಮೂಡಿಸುವ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕಿದೆ. ಸಮಾಜ ಪರಿವರ್ತನೆ ಸಾಧ್ಯವಾಗದಿದ್ದರೆ ಕೇವಲ ಪೊಲೀಸ್ ಕಾರ್ಯಾಚರಣೆಗಳಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಯೋಜನ ಆಗಲಾರದು. ಆದರೆ ಸದ್ಯದ ಮಟ್ಟಿಗೆ ಸರ್ಕಾರಗಳಿಗೆ ಬಲಪ್ರಯೋಗ ಮಾತ್ರವೇ ಇಂಥ ದುಷ್ಟರ ಹಾವಳಿ ನಿಲ್ಲಿಸುವ ಏಕೈಕ ಆಯ್ಕೆಯಾಗಿದೆ. ಕುಟುಂಬ ಯೋಜನೆ ಮತ್ತು ಹೆಣ್ಣುಮಕ್ಕಳು ಇರುವ ಕುಟುಂಬಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ.
ಹೆಣ್ಣುಮಕ್ಕಳು ಹೊರೆಯಲ್ಲ, ಅವರೂ ಪೋಷಕರನ್ನು ಸಲಹಬಲ್ಲರು, ಹೆಣ್ಣುಮಕ್ಕಳಿಗೂ ವಿದ್ಯೆ, ಉದ್ಯೋಗದಲ್ಲಿ ಸಮಾನ ಅವಕಾಶಗಳು ಇವೆ ಎಂದು ಸಾರಿ ಹೇಳಬೇಕಾಗಿದೆ. ಸಮಾಜದಲ್ಲಿ ಬೇರೂರಿರುವ ಪಿಡುಗುಗಳ ವಿರುದ್ಧ ನಡೆಯುತ್ತಿರುವ ಹೋರಾಟದ ವೇಗ ಎಂದಿಗೂ ಕಡಿಮೆಯಾಗಬಾರದು. ಯಶಸ್ಸು ಸಾಧಿಸಿದೆವೆಂದು ಸುಮ್ಮನಾದರೆ ಭಾರತದ ಯಾವುದೇ ರಾಜ್ಯದಲ್ಲಿ ಹರಿಯಾಣದಂಥದ್ದೇ ಪರಿಸ್ಥಿತಿ ಕಾಣಿಸಬಹುದು. ಹಲವು ವರ್ಷಗಳ ಪರಿಶ್ರಮದಿಂದ ಸಾಧಿಸಿರುವ ಪ್ರಗತಿ ಒಮ್ಮೆಲೆ ತೊಡೆದುಹೋಗಬಹುದು. ಹರಿಯಾಣದ ಬೆಳವಣಿಗೆ ಕರ್ನಾಟಕಕ್ಕೂ ಒಂದು ಪಾಠವಾಗಬೇಕಿದೆ.