ಜನರನ್ನು ಮೆಚ್ಚಿಸಿ ಬದುಕಲು ಸಾಧ್ಯವೇ? ಬೇರೆಯವರನ್ನ ನಮ್ಮತ್ತ ಸೆಳೆಯಲು, ಅವರು ಮೆಚ್ಚುವಂತೆ ಮಾಡಲು ಏನು ಮಾಡಬೇಕು– ಕಾಳಜಿ ಅಂಕಣ
ರೂಪಾ ರಾವ್ ಬರಹ: ಎಲ್ಲರನ್ನೂ ಎಲ್ಲಾ ಸಮಯದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ. ಆದರೆ ಮನುಷ್ಯನ ಈ ಕೆಲವು ಮೂಲಭೂತ ವರ್ತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಳವಡಿಸಿಕೊಂಡರೆ ಸಾಕು, ಜನ ಮೆಚ್ಚದಿದ್ದರೂ ನಮ್ಮಿಂದ ಹೆದರಿ ದೂರ ಓಡುವುದಿಲ್ಲ. ಕನಿಷ್ಠ ನಿಮ್ಮ ಮಾತನ್ನಾದರೂ ಕೇಳುವ ಸೌಜನ್ಯ ತೋರುತ್ತಾರೆ.

ಪ್ರಶ್ನೆ: ಜನರನ್ನು ನಮ್ಮತ್ತ ಆಕರ್ಷಿಸಿಕೊಳ್ಳಬೇಕು, ಅವರು ನಮ್ಮನ್ನು ನೋಡಿ ವಾಹ್ ಅನ್ನಬೇಕು, ಮೆಚ್ಚಬೇಕು ಎಂದರೆ ಏನು ಮಾಡಬೇಕು?
ಉತ್ತರ: ನಿಮ್ಮ ಪ್ರಶ್ನೆಗೆ ಉತ್ತರವಾಗಿ ಜನ ಮೆಚ್ಚುವ ಹಾಗೆ ಹೇಗಿರಬೇಕು ಎಂಬುದರ ಜೊತೆ ಹೇಗಿಲ್ಲದಿದ್ದರೆ ಜನರು ಮೆಚ್ಚುತ್ತಾರೆ ಎಂಬುದನ್ನೂ ನೋಡೋಣ.
ಸಾಮಾನ್ಯವಾಗಿ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಪ್ರತೀತಿ ಇದೆ. ಇದು ನಿಜ ಕೂಡ. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೇ ಎಂದು ಕವಿಗಳು ಕೂಡ ಹೇಳಿದ್ದಾರೆ. ಎಲ್ಲಾ ಜನರನ್ನೂ ಎಲ್ಲಾ ಸಮಯದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ. ಆದರೆ ನೋಡಿದ ಕೂಡಲೇ ಜನರನ್ನು ಆಕರ್ಷಿಸಲು ಖಂಡಿತ ಸಾಧ್ಯವಿದೆ. ಅವರಿಗೆ ನಮ್ಮಲ್ಲಿ ಆಸಕ್ತಿ ಬರಿಸುವಂತೆ ಕೂಡ ಮಾಡಬಹುದು.
ಹೌದು, ಕೆಲವೊಮ್ಮೆ ನೀವು ನೋಡಿರುತ್ತೀರಿ. ಕೆಲವರು ಸೂಜಿಗಲ್ಲಿನಂತೆ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಅದು ಹೇಗೆ ಸಾಧ್ಯ? ಅವರ ಚಾರ್ಮಿಂಗ್ ವ್ಯಕ್ತಿತ್ವವೇ, ನಗುವೇ ಅಥವಾ ಪ್ರಖರ ಬುದ್ದಿಶಕ್ತಿಯೇ, ಮಾತುಗಾರಿಕೆಯೇ ಅಥವಾ ಮೌನವೇ? ನಿಜ ಹೇಳಬೇಕೆಂದರೆ ಜನರ ಆಸಕ್ತಿಗೆ ಕಾರಣ ಎಂದರೆ ಇವೆಲ್ಲವೂ.
ನಿಮ್ಮ ಯಾವ ವರ್ತನೆ ಜನರಲ್ಲಿ ನಿಮ್ಮ ಬಗ್ಗೆ ಆಸಕ್ತಿ ಹಾಗೂ ಆಕರ್ಷಣೆ ತರಬಹುದು ಮತ್ತು ಯಾವ ವರ್ತನೆ ನಿಮ್ಮಿಂದ ಜನರನ್ನು ವಿಮುಖರನ್ನಾಗಿ ಮಾಡುತ್ತೆ ನೋಡುವ ಎನ್ನುವ ವಿವರ ಇಲ್ಲಿದೆ.
1. ಜಡ್ಜ್‌ಮೆಂಟಲ್ ಆಗದಿರಿ
ಇತರರಲ್ಲಿ ನಿಜವಾಗಿಯೂ ಆಸಕ್ತಿ ತೋರಿದರೆ ಜನರಿಗೆ ನಿಜಕ್ಕೂ ಸಂತೋಷವಾಗುತ್ತದೆ. ಅವರ ಬಗ್ಗೆ ಜಡ್ಜ್‌ಮೆಂಟಲ್ ಆಗದೇ ಮುಕ್ತವಾದ ಪ್ರಶ್ನೆಗಳನ್ನು ಕೇಳುವುದು, ಸಕ್ರಿಯವಾಗಿ ಅವರ ಮಾತುಗಳನ್ನು ಆಲಿಸುವುದು, ಅವರು ಮಾತಾನಾಡುವಾಗ ಆಸಕ್ತಿ ಇಟ್ಟು ಕೇಳುವುದು ಅವರಿಗೆ ಗೊತ್ತಾಗುವಂತೆ ತಲೆ ಆಡಿಸುವುದು, ಅವರ ಕಣ್ಣುಗಳನ್ನು ಆಗಾಗ ನೋಡಿ ಅರ್ಥವಾಗುತ್ತಿದೆ ಎಂದು ತಿಳಿಸುವುದು ಇವೆಲ್ಲಾ ಸಣ್ಣ ಪುಟ್ಟ ವರ್ತನೆಗಳು ಎದುರಿರುವವರನ್ನು ನಿಮ್ಮತ್ತ ಸೆಳೆದು ಕೂರಿಸುತ್ತದೆ.
ವ್ಯಕ್ತಿಯ ಬಗ್ಗೆ ವಿವರಗಳನ್ನು (ಹೆಸರು, ಅವರ ಮನೆಯವರು ಅಥವಾ ಅವರ ವೃತ್ತಿಯ ಬಗ್ಗೆ ಮುಂತಾದವುಗಳು) ನೆನಪಿಟ್ಟುಕೊಂಡು ಮಾತಾಡುವುದು.
ಎದುರಿನವರು ಹೇಳಿದ್ದನ್ನು ಪ್ರತಿಬಿಂಬಿಸುವುದು ಮತ್ತು ಚಿಂತನಶೀಲವಾಗಿ ಪ್ರತಿಕ್ರಿಯಿಸುವುದು.
ಆದರೆ ಅವರು ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸುವುದು, ಮಧ್ಯಪ್ರವೇಶಿಸುವುದು ಅಥವಾ ಮಾತನಾಡಲು ನಿಮ್ಮ ಸರದಿಗಾಗಿ ಮಾತ್ರ ಕಾಯುವುದು.
ನಿಮ್ಮ ಬಗ್ಗೆ ಮಾತ್ರ ಮಾತನಾಡುವುದು, ಮಾತನಾಡುತ್ತಲೇ ಇರುವುದು, ಸುಖಾ ಸುಮ್ಮನೆ ಕಾಳಜಿ ವಹಿಸುವಂತೆ ನಟಿಸುವುದು ಇಂಥವನ್ನು ಮಾಡಬಾರದು.
ಉದಾಹರಣೆಗೆ ನಿಮ್ಮ ವೀಕೆಂಡ್ ಹೇಗಿತ್ತು ಎಂದು ಮಾತನಾಡುವ ಬದಲು, ‘ನಿಮ್ಮ ಪ್ರವಾಸದ ಅನುಭವ ಹೇಗಿತ್ತು?‘ ಎಂದು ಕೇಳಿ.
ನಿಮ್ಮ ವೃತ್ತಿಯ ಗರಿಮೆಯ ಅಥವಾ ಸವಾಲಿನ ಬಗ್ಗೆ ಮಾತನಾಡುವಾಗ ನಿಮಗೂ ಈ ರೀತಿಯ ಅನುಭವ ಆಗಿರುತ್ತೆ ನಿಮಗೇನನಿಸುತ್ತದೆ ಎಂದು ಕೇಳಿ.
2. ಸಕಾರಾತ್ಮಕ ಹಾವ ಭಾವ ಪ್ರದರ್ಶಿಸಿ
ಮುಗುಳ್ನಗೆ, ಕಣ್ಣು ಕಣ್ಣಿನ ಸಂಪರ್ಕ ಇರಲಿ, ಓಪನ್ ಆರ್ಮ್ ಇರಲಿ
ಇವೆಲ್ಲಾ ಬೇಡಾ
ನಿಮ್ಮ ತೋಳುಗಳನ್ನು ಕಟ್ಟಿ ಮಾತಾಡುವುದು, ದೂರ ನಿಲ್ಲುವುದು, ಕಣ್ಣಿನ ಸಂಪರ್ಕವನ್ನು ತಪ್ಪಿಸಿ ಮೊಬೈಲ್ ನೋಡುತ್ತಾ ಅಥವಾ ಇನ್ನೆಲ್ಲೋ ನೋಡುವುದು. ಬೆಂಕಿಯಲ್ಲಿ ಕೂತಂತಹ ಚಡಪಡಿಕೆ.
ಯಾವುದೇ ವ್ಯಕ್ತಿಯನ್ನು ಅಥವಾ ಗುಂಪನ್ನು ಭೇಟಿಯಾಗುವಾಗ, ಅವರ ಕಡೆ ಬಾಗಿರಿ ಮತ್ತು ನಿಮ್ಮ ಕೈಗಳನ್ನು ಸಡಿಲವಾಗಿರಿಸಿಕೊಳ್ಳಿ. ಆಗಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ, ನೈಜ ನಗು ಇರಲಿ, ಅವರ ಹೆಸರನ್ನು ಎರಡು ಬಾರಿ ಕೇಳಿ, ಅವರ ಬಗ್ಗೆ ಅಥವಾ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಂದೆರೆಡು ಮಾತಾಡಿ. ನಿಮ್ಮ ಬಗ್ಗೆ ಮಾತಾಡಲು ಅವಕಾಶ ಕೊಡಿ ಅಲ್ಲಿ ಒಂದು ಕನೆಕ್ಷನ್ ಏರ್ಪಡುತ್ತದೆ.
3. ನಿಮ್ಮ ವರ್ತನೆ ಉತ್ಪ್ರೇಕ್ಷೆ ಅನ್ನಿಸದಿರಲಿ
ಎದುರಿನವರ ಹಾವಭಾವ ಅಥವಾ ದನಿಯೊಂದಿಗೆ ನಿಮ್ಮ ಹಾವಭಾವವನ್ನು ಹೊಂದಿಸಿಕೊಳ್ಳಿ ಅವರ ಧ್ವನಿಯ ಏರಿಳಿತಗಳನ್ನು ಗಮನಿಸಿ.
ಆದರೆ ಅತಿಯಾಗಿ ಮಾಡುವುದು, ಇದು ತೀರಾ ಆರ್ಟಿಫಿಷಿಯಲ್ ಅಥವಾ ಬೇಕೆಂತಲೇ ಮಾಡುತ್ತಿರುವಿರಿ ಎಂದು ಅವರಿಗೆ ಅನಿಸಬಾರದು.
ಅವರು ಮೃದುವಾಗಿ ಮಾತನಾಡಿದರೆ, ಉತ್ಪ್ರೇಕ್ಷೆ ಮಾಡದೇ ನಿಮ್ಮ ಧ್ವನಿಯನ್ನು ಹೊಂದಿಸಿ.
4. ಪ್ರಾಮಾಣಿಕ ಮೆಚ್ಚುಗೆ ಸೂಚಿಸಿ
ಯಾರದ್ದಾದರೂ ಯಾವುದೇ ವಿಷಯಗಳು ನಿಮಗಿಷ್ಟವಾದರೆ ಅಥವಾ ನಿಮ್ಮ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಾದರೆ ಪ್ರಾಮಾಣಿಕವಾಗಿ ಮೆಚ್ಚುಗೆ ಅಥವಾ ಅಭಿನಂದನೆಗಳನ್ನು ತಿಳಿಸಿ.
ಇದನ್ನೂ ಕೂಡ ಅತಿಯಾಗಿ ತೀರಾ ವಾಚ್ಯವಾಗಿ ಹೇಳಿಬೇಡಿ.
ಉದಾಹರಣೆಗೆ ‘ನೀವು ಸೂಪರ್‘ ಎಂದು ಹೇಳುವ ಬದಲು, ‘ನೀವು ಆ ಈ ಟೀಮ್ ಅನ್ನು ನಿರ್ವಹಿಸಿದ ರೀತಿ ಸ್ಪೂರ್ತಿದಾಯಕವಾಗಿತ್ತು‘ ಎಂದು ಹೇಳಿ.
5. ಬೋರ್ ಹೊಡೆಸದಿರಿ
ಮಾತನಾಡುವಾಗ ವಿಷಯವನ್ನು ಮಾತ್ರವಲ್ಲದೇ ಅದನ್ನು ಬೋರ್ ಹೊಡೆಸದೇ ಕಥೆಗಳ ರೀತಿಯಲ್ಲಿ ಹೇಳಿ
ಸನ್ನಿವೇಶಕ್ಕೆ ಎಮೋಷನಲ್ ಆಗಿ ಕನೆಕ್ಟ್ ಆಗುವ ಸಂಬಂಧಿತ ಮತ್ತು ಅಧಿಕೃತ ಕಥೆಗಳನ್ನು ಹೇಳುವುದು ಒಳ್ಳೆಯದು.
ತೀರಾ ಅಪ್ರಸ್ತುತ ವಿವರಗಳು ಆ ಘಟನೆಯ ಒಂದೊಂದೇ ಸಂಭಾಷಣೆಯನ್ನು ಅತಿಯಾಗಿ ಹೇಳುವ ಅಗತ್ಯಗಳಿಲ್ಲ.
ಇಂತಹ ದಿನ ಇಂತಹ ಕಡೆ ಇಂತಹ ತೊಂದರೆ ಆಯಿತು ನಾನು ಇದನ್ನು ಹೀಗೆ ನಿಭಾಯಿಸಿದೆ ಎಂದು ಹೇಳುವುದನ್ನು ಬಿಟ್ಟು ಆಪ್ತ ದಿನ ನೀವು ಎದ್ದದ್ದು ಕೂತದ್ದು ಊಟ ಮಾಡಿದ್ದು ಎಲ್ಲವನ್ನೂ ಹೇಳುತ್ತಾ ಕೂತರೆ ಎದುರಿನವರ ಅಟೆನ್ಷನ್ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
6. ನಿಮ್ಮ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಿ
ವಿನಮ್ರತೆ ಮತ್ತು ಈಡೇರಿಸಬಹುದಾದ ಭರವಸೆ ಕೊಡುವುದು. ನಿಮ್ಮನ್ನು ಶ್ರೇಷ್ಠರಂತೆ ಕಾಣುವಂತೆ ಮಾಡುವುದೂ ತಪ್ಪು ಅಥವಾ ಎದುರಿನವರಲ್ಲಿ ಕೀಳರಿಮೆ ತರಿಸುವುದೂ ತಪ್ಪು.
ಉದಾಹರಣೆಗೆ ನಿಮ್ಮ ಸಾಮರ್ಥ್ಯದ ಬಗ್ಗೆ ಹೇಳುವಾಗ ಹೀಗೆ ಹೇಳಿದರೆ ಸರಿ ‘ನಾನು ಮುನ್ನಡೆಸುವ ನನ್ನ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಏಕೆಂದರೆ ನಾನು ಆ ಕೌಶಲ ಮತ್ತು ಅನುಭವಗಳನ್ನು ಬೆಳೆಸಲು ವರ್ಷಗಳನ್ನೇ ಸವೆಸಿದ್ದೇನೆ‘.
7. ಕೃತಜ್ಞತೆ ವ್ಯಕ್ತಪಡಿಸಿ
ಜನರಿಗೆ ಅವರ ಸಮಯ, ಸಹಾಯ ಅಥವಾ ಉಪಸ್ಥಿತಿಗಾಗಿ ಪ್ರಾಮಾಣಿಕವಾಗಿ ಕೃತಜ್ಞತೆ ಸಲ್ಲಿಸುವುದು ಅತ್ಯಂತ ಸನ್ನಡತೆ.
ಜನರನ್ನು ಹಗುರವಾಗಿ ಪರಿಗಣಿಸುವುದು ಅಥವಾ ಬೇಕಾಬಿಟ್ಟಿ ಕೃತಜ್ಞತೆ ಸಲ್ಲಿಸಿದರೆ ಜನರೂ ನಿಮ್ಮಿಂದ ದೂರವಾಗುತ್ತಾರೆ.
8. ಕಮೀಟ್‌ಮೆಂಟ್ ಇರಲಿ
ವಾಗ್ದಾನ (ಕಮಿಟಮೆಂಟ್) ಗಳನ್ನು ಪಾಲಿಸುವುದು, ಸಮಯಪಾಲನೆ ಮಾಡುವುದು ಮತ್ತು ಬದ್ಧತೆಗಳನ್ನು ಪಾಲಿಸುವುದು. ನೀವೊಂದು ಕಮಿಟ್ ಮಾಡಿದ ಮೇಲೆ (ಒಂದಷ್ಟು ನಿರ್ಲಕ್ಷ್ಯ ಮಾಡಬಹುದಾದ ವ್ಯತ್ಯಾಸಗಳನ್ನು ಬಿಟ್ಟು) ಅದನ್ನು ಪದೇ ಪದೇ ಮುರಿಯಬೇಡಿ. ಹೇಗಾದರೂ ಮಾಡಿ ಅದನ್ನು ಮುಗಿಸಿ ಇಲ್ಲಿ ಪ್ರಾಮಾಣಿಕವಾಗಿ ನಿಮಗಿರುವ ಅಡ್ಡಿಯನ್ನು ಹೇಳಿ ಅದನ್ನು ಈಡೆರಿಸಲಾಗುವುದಿಲ್ಲ ಎಂದು ಹೇಳಿ.
ಉದಾಹರಣೆ ನೀವು ಒಂದು ಕಾರ್ಯದಲ್ಲಿ ಸಹಾಯ ಮಾಡಲು ಒಪ್ಪಿದರೆ, ಅದನ್ನು ಸಮಯಕ್ಕೆ ಸರಿಯಾಗಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
10. ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ
ಎದುರಿನವರ ಭಾವನೆಗಳನ್ನು, ಸಮಸ್ಯೆ, ಸವಾಲುಗಳನ್ನು ಹಾಗೂ ಅವರ ಅನುಭವಗಳನ್ನು ಗೌರವಿಸಿ ಮತ್ತು ದೃಢೀಕರಿಸಿ ಮತ್ತು ಅಗತ್ಯವಿದ್ದಾಗ ಬೆಂಬಲವನ್ನು ಕೊಡಿ.
ಅವರ ಸಮಸ್ಯೆ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಅವರ ಭಾವನೆಗಳನ್ನು ಅಥವಾ ಸಮಸ್ಯೆಗಳನ್ನು ತಳ್ಳಿಹಾಕುವುದು ಅಥವಾ ಅವರಿಗೆ ಒದಗದ ಪರಿಹಾರಗಳನ್ನು ನೀಡುವುದು. ಉದಾಹರಣೆಗೆ ಕೋವಿಡ್ ಸಮಯದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರಿಗೆ ಕೋವಿಡ್ ಕಾಯಿಲೆ ಅನ್ನುವುದೇ ಸುಳ್ಳು ಎನ್ನುವುದು ಅಥವಾ ಯಾವುದೋ ಸನ್ನಿವೇಶದಲ್ಲಿ ನೊಂದವರಿಗೆ ನಿಮ್ಮ ನೋವಿಗೆ ನೀವೇ ಕಾರಣ ಎಂದು ಬಿಡುವುದು ಇತ್ಯಾದಿ
ಇದರ ಬದಲು ಸುಮ್ಮನಿರುವುದೇ ಬೆಟರ್ ಹಾಗೂ ಏನಾದರೂ ಮಾತನಾಡಲೇ ಬೇಕೆಂದಿದ್ದರೆ ‘ನಿಜಕ್ಕೂ ಇದು ಕಷ್ಟದ ಅನುಭವದಂತೆ ತೋರುತ್ತದೆ. ನೀವು ಇದರ ಬಗ್ಗೆ ಹೆಚ್ಚು ಮಾತನಾಡಲು ಬಯಸಿದರೆ ನಾನು ಆಲಿಸಲು ಸಿದ್ದ‘ ಎಂದರೆ ಆ ಕ್ಷಣಕ್ಕೆ ನೀವು ಅವರಿಗೆ ದೊಡ್ಡ ಉಪಕಾರ ಮಾಡಿರುತ್ತೀರಿ.
ನೆನಪಿಡಿ
ಎಲ್ಲಾ ಜನರನ್ನು ಎಲ್ಲಾ ಸಮಯದಲ್ಲಿಯೂ ಮೆಚ್ಚಿಸಲಾಗುವುದಿಲ್ಲ ಮೇಲಿನ ನಾನು ಹೇಳಿದವುಗಳು ಮನುಷ್ಯನ ಮೂಲಭೂತ ವರ್ತನೆಗಳು ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಳವಡಿಸಿಕೊಂಡರೆ ಸಾಕು ಜನರು ಮೆಚ್ಚದಿದ್ದರೂ ನಮ್ಮಿಂದ ಹೆದರಿ ದೂರ ಓಡುವುದಿಲ್ಲ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990
