Huttari Habba 2023: ಕೊಡಗಿನ ಸುಗ್ಗಿ ಹುತ್ತರಿ ಹಬ್ಬ ಎಂದು? ಈ ಹಬ್ಬದ ಆಚರಣೆ, ವೈಶಿಷ್ಟ್ಯ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Huttari Habba 2023: ಕೊಡಗಿನ ಸುಗ್ಗಿ ಹುತ್ತರಿ ಹಬ್ಬ ಎಂದು? ಈ ಹಬ್ಬದ ಆಚರಣೆ, ವೈಶಿಷ್ಟ್ಯ ಇಲ್ಲಿದೆ

Huttari Habba 2023: ಕೊಡಗಿನ ಸುಗ್ಗಿ ಹುತ್ತರಿ ಹಬ್ಬ ಎಂದು? ಈ ಹಬ್ಬದ ಆಚರಣೆ, ವೈಶಿಷ್ಟ್ಯ ಇಲ್ಲಿದೆ

Kodagu Crop Festival: ಕೊಡಗಿನ ಜನಪ್ರಿಯ ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬವನ್ನು ಈ ವರ್ಷ ನವೆಂಬರ್‌ 27ರಂದು ಆಚರಿಸಲು ನಿರ್ಧರಿಸಲಾಗಿದೆ. ನಾಪೊಕ್ಲು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗಿದೆ.

Huttari Habba 2023: ಕೊಡಗಿನ ಸುಗ್ಗಿ ಹುತ್ತರಿ ಹಬ್ಬ ಎಂದು? ಈ ಹಬ್ಬದ ಆಚರಣೆ, ವೈಶಿಷ್ಟ್ಯ ಇಲ್ಲಿದೆ
Huttari Habba 2023: ಕೊಡಗಿನ ಸುಗ್ಗಿ ಹುತ್ತರಿ ಹಬ್ಬ ಎಂದು? ಈ ಹಬ್ಬದ ಆಚರಣೆ, ವೈಶಿಷ್ಟ್ಯ ಇಲ್ಲಿದೆ

ಕೊಡಗಿನ ಜನಪ್ರಿಯ ಹಬ್ಬಗಳಲ್ಲಿ ಹುತ್ತರಿ ಹಬ್ಬವೂ ಒಂದು. ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹುತ್ತರಿ ಹಬ್ಬ, ಕೊಡವ ಸಮುದಾಯದವರು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ. ಮಳೆಗಾಲ ಪ್ರಾರಂಭವಾದಾಗ ಬಿತ್ತಿದ ಭತ್ತ, ತೆನೆಯೊಡೆದು, ಫಸಲು ಬಂದಾಗ ಅದನ್ನು ಪೂಜಿಸಿ, ಸಂಭ್ರಮಿಸುವ ಹಬ್ಬವಾಗಿದೆ. ಭತ್ತದ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯ ಈ ಹಬ್ಬದಲ್ಲಿದೆ. ಪೂಜಿಸಿ ತಂದ ಕದಿರನ್ನು ದೇವರ ಕೋಣೆಯಲ್ಲಿ ಕಟ್ಟುವುದು, ಮನೆಯಲ್ಲಿರುವ ವಾಹನ, ಆಯುಧಗಳಿಗೆ ಕಟ್ಟುವ ಆಚರಣೆ ಅವರಲ್ಲಿದೆ. ಈ ಹಬ್ಬದಲ್ಲಿ ಕೊಡಗಿನವರು ಭಕ್ತಿಯಿಂದ ಪೂಜಿಸುವ ಪಾಡಿ ಇಗ್ಗುತಪ್ಪ ದೇವರಿಗೆ ಕದಿರು ಕೊಯ್ದು ಅರ್ಪಿಸುವುದು ವಾಡಿಕೆ.

ಹುತ್ತರಿ ಹಬ್ಬ ಎಂದರೇನು?

ಕೊಡವ ಭಾಷೆಯಲ್ಲಿ ಹುತ್ತರಿ ಅಥವಾ ಪುತ್ತರಿ ಎಂದರೆ ಪುದಿಯ ಅರಿ ಎಂದರ್ಥ. ಅಂದರೆ ಹೊಸ ಅಕ್ಕಿ ಎಂದು. ಧಾನ್ಯಲಕ್ಷ್ಮಿಯಾದ ಭತ್ತವನ್ನು ಗದ್ದೆಯಿಂದ ಕೊಯ್ದು ತಂದು ಪೂಜಿಸುತ್ತಾರೆ. ಅದರಿಂದ ಸಿಹಿ ಖಾದ್ಯ ತಯಾರಿಸಿ ಸವಿಯುವ ಸಂಪ್ರದಾಯ ಈ ಹಬ್ಬದಲ್ಲಿದೆ. ಹುತ್ತರಿ ಹಬ್ಬವನ್ನು ರೋಹಿಣಿ ನಕ್ಷತ್ರವಿರುವ ಹಣ್ಣಿಮೆಯ ರಾತ್ರಿಯಂದು ಆಚರಿಸಲಾಗುತ್ತದೆ. ಒಂದುವೇಳೆ ರೋಹಿಣಿ ನಕ್ಷತ್ರವಿಲ್ಲದಿದ್ದರೆ, ಕೃತ್ತಿಕಾ ನಕ್ಷತ್ರವೂ ಶುಭವೆಂದು ನಂಬಲಾಗಿದೆ.

ಹುತ್ತರಿ ಹಬ್ಬ ಯಾವಾಗ?

ಕೊಡಗಿನ ಜನಪ್ರಿಯ ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬವನ್ನು ಈ ವರ್ಷ ನವೆಂಬರ್‌ 27ರಂದು ಆಚರಿಸಲು ನಿರ್ಧರಿಸಲಾಗಿದೆ. ನಾಪೊಕ್ಲು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಂದು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಜೆ 7.20ಕ್ಕೆ ನೆರೆ ಕಟ್ಟುವುದು, ರಾತ್ರಿ 8.20ಕ್ಕೆ ಕದಿರು ತೆಗೆಯುವುದು ಮತ್ತು ರಾತ್ರಿ 9.20ಕ್ಕೆ ಊಟೋಪಚಾರದ ಸಮಯವನ್ನು ನಿಗದಿಪಡಿಸಲಾಗಿದೆ.

ಹಬ್ಬದ ಆಚರಣೆ ಹೇಗೆ?

ಕೊಡಗಿನವರಿಗೆ ಈ ಹಬ್ಬವು ಬಹಳ ಸಂತಸ ಹಾಗೂ ಸಂಭ್ರಮದ ಹಬ್ಬ. ಕೃಷಿ ಮಾಡಿ ಬಂದ ಫಸಲನ್ನು ಪೂಜಿಸುವ ಸಂಪ್ರದಾಯವಿರುವ ಹಬ್ಬ. ಈ ಹಬ್ಬದಲ್ಲಿ ಕೊಡಗಿನ ಪ್ರಮುಖ ದೇವರಾದ ಪಾಡಿ ಇಗ್ಗುತ್ತಪ್ಪನಿಗೆ ಭತ್ತದ ಕದಿರು ಕೊಯ್ದು ಮೊದಲು ಅರ್ಪಿಸಲಾಗುತ್ತದೆ. ದೇವರಿಗೆ ಮೊದಲು ಪೂಜೆ ಮಾಡಿದ ನಂತರ ಹುತ್ತರಿ ಹಬ್ಬ ಪ್ರಾರಂಭವಾಗುತ್ತದೆ. ಬಹಳ ಸಂಭ್ರಮ ಸಡಗರದಿಂದ ಕೊಡಗಿನಾದ್ಯಂತ ಆಚರಿಸಲಾಗುತ್ತದೆ. ಇದು ಎರಡು ದಿನಗಳ ಹಬ್ಬ. ಮೊದಲನೆಯದು ಪಾಡಿ ಪಳ್ದ್‌, ಎರಡನೆಯದ್ದು ನಾಡ್‌ ಪೊಳ್ದ್‌. ಮೊದಲ ದಿನ ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಗದ್ದೆಯಿಂದ ಕದಿರು ತಂದು ಅರ್ಪಿಸಿದರೆ, ಇದರ ಮರುದಿನ ಕೊಡಗಿನಾದ್ಯಂತ ಕದಿರನ್ನು ಮನೆಗೆ ತರುವ ನಾಡ ಹಬ್ಬ. ಇಡೀ ಕುಟುಂಬದವರೆಲ್ಲರೂ ಒಟ್ಟಾಗಿ ಆಚರಿಸುವ ವಿಶೇಷ ಹಬ್ಬ ಇದು. ಈ ಹಬ್ಬದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊಡಗಿನ ಸಾಂಪ್ರದಾಯಕ ಉಡುಗೆ–ತೊಡುಗೆಗಳನ್ನು ಧರಿಸಿ ಕೋಲಾಟ, ಪರಿಯ ಕಳಿ ಮುಂತಾದ ಕಾರ್ಯಕ್ರಮವನ್ನು ನಡೆಸುತ್ತಾರೆ.

ಹೊಸ ಅಕ್ಕಿಯ ಪಾಯಸ

ಹುತ್ತರಿ ಹಬ್ಬದ ವಿಶೇಷ ಹೊಸ ಅಕ್ಕಿಯ ಪಾಯಸ. ಹೊಸ ಅಕ್ಕಿಯ ಜೊತೆ ಹಾಲು, ತೆಂಗಿನ ಕಾಯಿ, ಡ್ರೈ ಫ್ರೂಟ್ಸ್‌, ಬೆಲ್ಲ ಅಥವಾ ಸಕ್ಕರೆ ಸೇರಿಸಿ ಅಕ್ಕಿ ಪಾಯಸ ತಯಾರಿಸಲಾಗುತ್ತದೆ. ಈ ಹಬ್ಬದಲ್ಲಿ ಅಕ್ಕಿಯಿಂದ ತಯಾರಿಸುವ ತಂಬಿಟ್ಟು ಸಹ ಪ್ರಮುಖ ಅಡುಗೆಯಾಗಿದೆ.

Whats_app_banner