ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆ ದೇಶಭಕ್ತರ ವೇಷ ತೊಡಿಸಲು ಇಲ್ಲಿದೆ ಐಡಿಯಾ, ಕರ್ನಾಟಕದ ಈ ಹೋರಾಟಗಾರರನ್ನು ಆಯ್ಕೆ ಮಾಡಿಕೊಳ್ಳಿ
ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿಸಬೇಕು ಎಂದುಕೊಳ್ಳುತ್ತಿದ್ದೀರಾ? ಹಾಗಾದರೆ ಬ್ರಿಟಿಷರ ದಾಸ್ಯದಿಂದ ದೇಶವನ್ನು ರಕ್ಷಿಸಲು ಹೋರಾಡಿ, ಮಡಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ವೇಷ ತೊಡಿಸಿ. ಯಾರ ವೇಷ ತೊಡಿಸಬಹುದು ಎಂಬ ಗೊಂದಲ ನಿಮಗಿದ್ದರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು, ಗಮನಿಸಿ.
ಆಗಸ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಇಂದು ನಾವು ಭಾರತದ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಿದ್ದೇವೆ ಎಂದರೆ ಅಂದು ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟವೇ ಕಾರಣ. ನಾಡಿನಾದ್ಯಂತ ಹಲವು ಮಂದಿ ನಾಯಕರು ಹಾಗೂ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವದಾನ ಮಾಡಿದ್ದಾರೆ. ಭಾರತಾಂಬೆಯ ನೆಲವನ್ನು ರಕ್ಷಿಸಲು ನೆತ್ತರಕೋಡಿ ಹರಿಸಿದ್ದಾರೆ. ಹಾಗಾಗಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತೇವೆ. ಅಲ್ಲದೇ ಶಾಲಾ-ಕಾಲೇಜುಗಳಿಗೆ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷ ತೊಡಿಸಿ, ಅವರ ಪ್ರೇರಣಾದಾಯಕ ಮಾತುಗಳನ್ನು ಹೇಳಿಸಿ, ಅಂದಿನ ದಿನಗಳನ್ನು ಮರುಕಳಿಸುವಂತೆ ಮಾಡಲಾಗುತ್ತದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಮಗುವಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿಸಬೇಕು ಎಂದು ಯೋಚಿಸುತ್ತಿದ್ದರೆ ಕರ್ನಾಟಕದ ಈ ಸ್ವಾತಂತ್ರ್ಯ ಹೋರಾಟಗಾರರನ್ನು ಆಯ್ಕೆ ಮಾಡಿಕೊಳ್ಳಿ. ಅವರ ವೇಷವನ್ನು ನಿಮ್ಮ ಮಗುವಿಗೆ ತೊಡಿಸಿ, ದೇಶಪ್ರೇಮ ಹರಡಿ.
ಎನ್.ಎಸ್. ಹರ್ಡೀಕರ್: ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕರ್ನಾಟಕದ ಪ್ರಮುಖರಲ್ಲಿ ಎನ್.ಎಸ್.ಹರ್ಡೀಕರ್ ಕೂಡ ಒಬ್ಬರು. ಧಾರವಾಡ ಮೂಲದ ಇವರ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದವರು. ನಿಮ್ಮ ಮಗುವಿಗೆ ಇವರ ವೇಷವನ್ನು ತೊಡಿಸಬಹುದು. ಇದು ಜುಬ್ಬಾ, ಪ್ಯಾಂಟ್ ಮೇಲೊಂದು ಕರಿಕೋಟು ಹಾಗೂ ಗಾಂಧಿ ಟೋಪಿ ಧರಿಸುತ್ತಿದ್ದರು. ದಪ್ಪ ಅಂಚಿನ ಕನ್ನಡಕ ಕೂಡ ಇವರ ವೇಷಭೂಷಣದ ಭಾಗವಾಗಿತ್ತು.
ಟೇಕೂರು ಸುಬ್ರಹ್ಮಣ್ಯಂ: ಬಳ್ಳಾರಿ ಮೂಲದ ಟೇಕೂರು ಸುಬ್ರಹ್ಮಣ್ಯಂ ಅವರು ಟಿ. ಸುಬ್ರಹ್ಮಣ್ಯ ಎಂದೇ ಖ್ಯಾತಿ ಗಳಿಸಿದವರು. ಸ್ವಾತಂತ್ರ್ಯ ಚಳವಳಿಯಲ್ಲಿ ಹಲವು ಬಾರಿ ಜೈಲಿಗೆ ಹೋಗಿದ್ದ ಇವರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದರು. ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಪೊಲಿಟಿಕಲ್ ಸೆಕ್ರೆಟರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಬೋಳುತಲೆಯ ಇವರು ಬಿಳಿಜುಬ್ಬಾ ಧರಿಸುತ್ತಿದ್ದರು. ಇವರು ಕೂಡ ದಪ್ಪ ಅಂಚಿನ ಕನ್ನಡಕ ಧರಿಸಿದ್ದರು.
ಕಾರ್ನಾಡ್ ಸದಾಶಿವ ರಾವ್: ಮಂಗಳೂರು ಮೂಲದ ಕಾರ್ನಾಡ್ ಸದಾಶಿವ ರಾವ್ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಗಾಂಧೀಜಿಯವರ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ ಸ್ವಯಂ ಸೇವಕರಲ್ಲಿ ಕರ್ನಾಟಕದ ಮೊದಲ ವ್ಯಕ್ತಿ ಇವರು. ಬಿಳಿ ಜುಬ್ಬಾ, ಪ್ಯಾಂಟ್, ಗಾಂಧಿ ಟೋಪಿ, ಬಿಳಿ ಮೀಸೆ ಇವರ ವೇಷಭೂಷಣ.
ಕಿತ್ತೂರು ಚೆನ್ನಮ್ಮ: ಭಾರತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಅವರದ್ದು ಪ್ರಮುಖ ಹೆಸರು. ಕಿತ್ತೂರು ಸ್ರಾಮಾಜ್ಯದ ರಾಣಿಯಾಗಿದ್ದ ಇವರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಗಟ್ಟಿಗಿತ್ತಿ. ಕಚ್ಚೆ ಸೀರೆ ಹಾಕಿ, ತುರುಬಿಗೆ ಸೆರಗು ಕಟ್ಟಿ, ಕೈಯಲ್ಲಿ ಖಡ್ಗ ಹಿಡಿದು ಗತ್ತು ಗಾಂಭೀರ್ಯದ ನಡೆ ಇವರದ್ದು.
ನಿಟ್ಟೂರು ಶ್ರೀನಿವಾಸ ರಾವ್: ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದಿಂದ ಭಾಗವಹಿಸಿದ ಪ್ರಮುಖರಲ್ಲಿ ನಿಟ್ಟೂರು ಶ್ರೀನಿವಾಸ ರಾವ್ ಕೂಡ ಒಬ್ಬರು. ಗಾಂಧಿವಾದಿಯಾಗಿದ್ದ ಇವರು ಬೆಂಗಳೂರಿನಲ್ಲಿ ಜನಿಸಿದವರು. ಮಹಾತ್ಮಗಾಂಧೀಜಿ ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ ಮೊದಲಿಗರು ಇವರು. ಜುಬ್ಬಾ, ಪ್ಯಾಂಟ್ ಮೇಲೊಂದು ಕೋಟ್, ಅವರ ಮೇಲೆ ಕುತ್ತಿಗೆಗೆ ಸುತ್ತಿದ ಶಾಲು, ಗಾಂಧಿ ಟೋಪಿ, ಕನ್ನಡಕ ಇವರ ವೇಷಭೂಷಣ.
ಎಸ್. ನಿಜಲಿಂಗಪ್ಪ: ಕರ್ನಾಟಕದ 4ನೇ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಸಿದ್ದವನಹಳ್ಳಿ ನಿಜಲಿಂಗಪ್ಪ ಇವರ ಪೂರ್ಣ ಹೆಸರು. ಬಳ್ಳಾರಿ ಮೂಲದವರು. ಬಿಳಿ ಪಂಚೆ, ಮೇಲೆ ಬಿಳಿ ಉದ್ದನೆಯ ಜುಬ್ಬಾ, ಕನ್ನಡಕ ಇವರ ವೇಷಭೂಷಣ.
ಆರ್ ಎಸ್ ಹುಕ್ಕೇರಿಕರ್: ಬೆಳಗಾಂ ಮೂಲದ ಹುಕ್ಕೇರಿಕರ್ ಕೂಡ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರ ವೇಷಭೂಷಣವನ್ನೂ ನಿಮ್ಮ ಮಗುವಿಗೆ ತೊಡಿಸಬಹುದು. ಅವರು ಬಿಳಿ ಗಾಂಧಿ ಟೋಪಿ, ಬಿಳಿ ಜುಬ್ಬಾ, ಪೈಜಾಮ ಧರಿಸುತ್ತಿದ್ದರು.
ಉಮಾಬಾಯಿ ಕುಂದಾಪುರ
ಇವರು ಸ್ವಾತಂತ್ರ್ಯ ಹೋರಾಟಗಾರರ ಗುಂಪಾದ ಭಗಿನಿ ಮಂಡಲವನ್ನು ಸ್ಥಾಪಿಸಿದವರು. ಎನ್.ಎಸ್.ಹರ್ಡಿಕರ್ ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಳದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು. ಇವರಂತೆ ವೇಷ ಧರಿಸಲು ಖಾದಿ ಸೀರೆ, ರವಿಕೆ, ತುಂಬು ತೋಳಿನ ರವಿಕೆ ಹಾಗೂ ತುರುಬು ಕಟ್ಟಿರಬೇಕು.
ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಕಮಲಾದೇವಿ ಚಟ್ಟೋಪಧ್ಯಾಯ ಸೇರಿದಂತೆ ಇನ್ನೂ ಹಲವು ಕರ್ನಾಟಕದವರು ಭಾಗವಹಿಸಿದ್ದರು. ಇವರೆಲ್ಲರೂ ದೇಶಕ್ಕಾಗಿ ಹೋರಾಡಿ ನಾಡಿಗೆ ಹೆಮ್ಮೆ ತಂದವರು.
ವಿಭಾಗ