Patriotic songs: ವಿಜಯ ಪ್ರಕಾಶ್ ಮಧುರ ಕಂಠದಲ್ಲಿ ಮೂಡಿಬಂದ ಸ್ವಾತಂತ್ರ್ಯ ಗೀತೆ, ನನ್ನ ದೇಶವು ಹಾಡು ಕೇಳಿ ರೋಮಾಂಚನಗೊಳ್ಳಿ
ಭಾರತವು ವೈವಿಧ್ಯತೆಯ ನಾಡು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಡಿರುವ ಈ ನಾಡಿನಲ್ಲಿ ಹಲವು ವೈಶಿಷ್ಟ್ಯಗಳಿವೆ. ಭಾರತದ ವಿವಿಧತೆ, ವೈಶಿಷ್ಟ್ಯ, ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುವ ಹಾಡೊಂದು ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಿಡುಗಡೆಯಾಗಿದೆ. ʼನನ್ನ ದೇಶವುʼ ಹೆಸರಿನ ಈ ಹಾಡು ನಿಮ್ಮಲ್ಲಿ ದೇಶಭಕ್ತಿ ಒಕ್ಕುವಂತೆ ಮಾಡುವುದು ಸುಳ್ಳಲ್ಲ.
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಭಾರತಾಂಬೆಯ ಅಡಿಯಿಂದ ಮುಡಿವರೆಗೆ ನೂರಾರು ವೈವಿಧ್ಯವನ್ನು ನಾವು ಗಮನಿಸಬಹುದು. ಇಲ್ಲಿನ ಪ್ರತಿ ಜಾಗವೂ ವಿಶೇಷ, ಪ್ರತಿ ಮನಸ್ಸುಗಳು ವಿಭಿನ್ನ. ಆದರೂ ನಾವೆಲ್ಲರೂ ಒಂದೇ ಎನ್ನುವ ಭಾವ ಮಾತ್ರ ಎಂದಿಗೂ ಅಜರಾಮರ. ಇಂತಹ ಸುಂದರ ಭಾರತಾಂಬೆ ಮಡಿಲಿನ ಬಗ್ಗೆ ಹಾಡೊಂದನ್ನು ರಚಿಸಿ, ಚಿತ್ರಿಸಿ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಈ ಹಾಡು ದೇಶಭಕ್ತಿ ಉಕ್ಕಿಸುವಂತಿದೆ.
ಜುಂಗ್ರುಸ್ ಸ್ಟುಡಿಯೋಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 10 ರಂದು ʼನನ್ನ ದೇಶವುʼ ಎಂಬ ಹಾಡು ಬಿಡುಗಡೆಯಾಗಿದೆ. 4.16 ಸೆಕೆಂಡ್ ಇರುವ ಈ ಹಾಡಿನಲ್ಲಿ ಸಂಪೂರ್ಣ ಭಾರತವನ್ನು ಕಟ್ಟಿಕೊಡಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವೈವಿಧ್ಯತೆಯನ್ನು ಹಾಡಿನಲ್ಲಿ ಕಾಣಬಹುದು. ಈ ಹಾಡನ್ನು ರಚಿಸಿ ನಿರ್ದೇಶಿಸಿದ್ದು ಭರತ್ ಕುಮಾರ್ ಜರ್ನಾದನ್ ಎನ್ನುವವರು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಈ ಹಾಡಿಗೆ ದನಿಯಾಗಿದ್ದಾರೆ. ಸತ್ಯ ರಾಧಾ ಕೃಷ್ಣ ಎನ್ನುವವರು ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ʼನನ್ನ ದೇಶವುʼ ಹಾಡಿ ಹುಟ್ಟಿದ್ದು ಹೀಗೆ
ಸಿನಿಮಾ ನಿರ್ದೇಶನದ ಕನಸು ಹೊತ್ತಿರುವ ಭರತ್ ಅವರಿಗೆ ತಮ್ಮ ಸಿನಿಮಾಕ್ಕಾಗಿ ಕೆಲಸ ಮಾಡುವಾಗಲೇ ಹುಟ್ಟಿಕೊಂಡ ಪರಿಕಲ್ಪನೆ ಇದು. 2024ರ ಜನವರಿ ಈ ಹಾಡು ಮಾಡುವ ಯೋಚನೆ ಅವರ ತಲೆಗೆ ಹೊಳೆದಿತ್ತು. ಅದನ್ನು ಕಾರ್ಯರೂಪಕ್ಕೆ ತಂದು ಹಾಡು ರಚಿಸಿ, ನಿರ್ದೇಶನ ಮಾಡಿ, ನಟಿಸಿ ಇದೀಗ ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಭಾರತ ಹಲವು ಕಡೆ ಈ ಹಾಡನ್ನು ಶೂಟಿಂಗ್ ಮಾಡಲಾಗಿದೆ. ಸುಮಾರು 60 ರಿಂದ 70 ಮಂದಿ ಈ ಹಾಡಿಗಾಗಿ ಕೆಲಸ ಮಾಡಿದ್ದಾರೆ.
ಈ ಹಾಡಿನ ಪರಿಕಲ್ಪನೆ ಬಗ್ಗೆ ಮಾತನಾಡುವ ಭರತ್ ʼನಾನು ಆರ್ಮಿ ಹಿನ್ನೆಲೆಯುಳ್ಳ ಸಿನಿಮಾ ಕಥೆಯೊಂದನ್ನು ಮಾಡುತ್ತಿದ್ದೇನೆ. ಆ ಕಥೆಯ ಒಂದು ಅಂಶದಲ್ಲಿ ತಂದೆ-ತಾಯಿ ಎಲ್ಲಿದ್ದಾರೆ, ಏನು ತಿಳಿಯದ ಒಬ್ಬ ಹುಡುಗನನ್ನು ಸೈನಿಕರು ದಾಳಿಯೊಂದರಿಂದ ಬಚಾವ್ ಮಾಡಿರುತ್ತಾರೆ. ಆ ಹುಡುಗ ಒಂದು ಆರು ತಿಂಗಳ ಆರ್ಮಿ ಕ್ಯಾಂಪ್‌ನಲ್ಲಿ ಬೆಳೆಯುತ್ತಾನೆ. ಆರ್ಮಿ ಶಾಲೆಯಲ್ಲಿ ಕಲಿಯುತ್ತಿರುವಾಗ, ಶಾಲೆಯಲ್ಲಿ ದೇಶದ ಬಗ್ಗೆ ಪ್ರತಿದಿನ ಪ್ರಾರ್ಥನೆ ಇದ್ದರೆ ಹೇಗಿರಬಹುದು ಎಂದು ಪರಿಕಲ್ಪನೆ ನನ್ನ ತಲೆಗೆ ಹೊಳೆದಿತ್ತು. ಅಂಥ ಸಮಯದಲ್ಲಿ ನಮ್ಮ ದೇಶದಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಎಂಬುದನ್ನು ಸೇರಿ ಒಂದು ಹಾಡು ಮಾಡೋಣ ಅನ್ನಿಸಿತ್ತುʼ ಹೀಗೆ ಈ ಹಾಡಿನ ಪರಿಕಲ್ಪನೆ ಹುಟ್ಟಿಕೊಂಡಿತು ಎಂದು ವಿವರಿಸುತ್ತಾರೆ ಭರತ್.
ʼಈ ಹಾಡನ್ನು ಕರ್ನಾಟಕ ಸಾಗರ, ಶಿವಮೊಗ್ಗ, ಬೆಂಗಳೂರು, ಹಂಪಿ, ಗಗನಚುಕ್ಕಿ-ಭರಚುಕ್ಕಿ, ಮುಂಬೈ, ಲೇಹ್-ಲಡಾಕ್ ಏರಿಯಾಗಳಲ್ಲೂ ಶೂಟಿಂಗ್ ಮಾಡಿದ್ದೇವೆ. ಈ ಹಾಡಿನ ಸಂಪೂರ್ಣ ಶೂಟಿಂಗ್‌ಗೆ ಒಟ್ಟು 20 ದಿನಗಳ ಕಾಲ ತೆಗೆದುಕೊಂಡಿದ್ದೇವೆʼ ಎಂದು ಭರತ್ ಹೇಳುತ್ತಾರೆ.
ಭರತ್ ಅವರ ಹಿನ್ನೆಲೆ
ಭರತ್ ಅವರು ಓದಿದ್ದು ಎಂಜಿನಿಯರಿಂಗ್, ಒಂದಿಷ್ಟು ವರ್ಷ ಸಾಫ್ಟ್‌ವೇರ್ ವೃತ್ತಿಯಲ್ಲಿದ್ದ ಇವರು ನಂತರ ಸಿನಿಮಾ ಕಡೆಗೆ ಒಲವು ತೋರುತ್ತಾರೆ. ಒಂದಿಷ್ಟು ವರ್ಷ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ವೈಲ್ಡ್‌ಲೈಫ್ ಫೋಟೊಗ್ರಫಿ ಹಾಗೂ ವಿಡಿಯೊಗ್ರಫಿ ಕೂಡ ಮಾಡುತ್ತಾರೆ. ಆರ್ಮಿಗೆ ಸೇರಬೇಕು ಎಂದುಕೊಂಡಿದ್ದ ಇವರಿಗೆ ಸೇರಲು ಸಾಧ್ಯವಾಗಿರಲಿಲ್ಲ. ಇದು ಕೂಡ ಈ ಹಾಡಿಗೆ ಸ್ಫೂರ್ತಿ ಎಂದು ಹೇಳಬಹುದು.
ಈಗಾಗಲೇ 1 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿರುವ ಈ ಹಾಡು ಹಲವರಿಗೆ ಇಷ್ಟವಾಗುತ್ತಿದೆ. ಹಾಡಿನ ಸಾಲುಗಳು ನಿಮ್ಮಲ್ಲೂ ದೇಶಭಕ್ತಿ ಹೆಚ್ಚುವಂತಿರುವುದು ಸುಳ್ಳಲ್ಲ. ನೀವೂ ಕೇಳಿಸಿಕೊಳ್ಳಿ.
ವಿಭಾಗ