ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ಕರ್ನಾಟಕದ ಸ್ಥಳಗಳಿವು; ನಿಮ್ಮ ಮಕ್ಕಳಿಗೆ ಈ ಜಾಗಗಳನ್ನು ತಪ್ಪದೇ ಪರಿಚಯಿಸಿ-independence day 2024 travel tips visit these historical places of freedom struggle in karnataka arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ಕರ್ನಾಟಕದ ಸ್ಥಳಗಳಿವು; ನಿಮ್ಮ ಮಕ್ಕಳಿಗೆ ಈ ಜಾಗಗಳನ್ನು ತಪ್ಪದೇ ಪರಿಚಯಿಸಿ

ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ಕರ್ನಾಟಕದ ಸ್ಥಳಗಳಿವು; ನಿಮ್ಮ ಮಕ್ಕಳಿಗೆ ಈ ಜಾಗಗಳನ್ನು ತಪ್ಪದೇ ಪರಿಚಯಿಸಿ

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುತ್ತೇವೆ. ಅಂತೆಯೇ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಕೆಲವು ಊರುಗಳು ಕೂಡ ಪ್ರಮುಖವಾಗಿವೆ. ಕರ್ನಾಟಕದಲ್ಲೂ ಸ್ವಾತಂತ್ರ್ಯ ಹೋರಾಟ ನಡೆದ ಹಲವು ತಾಣಗಳಿವೆ. ಅಂತಹ ಸ್ಥಳಗಳನ್ನು ನಿಮ್ಮ ಮಗುವಿಗೆ ತೋರಿಸಿ ಇತಿಹಾಸ ಅರಿವು ಮೂಡಿಸುವುದು ಅತ್ಯಗತ್ಯ.

ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಸ್ಥಳಗಳು
ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಸ್ಥಳಗಳು (PC: https://x.com/airnewsalerts/status/1370243401493401600)

ಭಾರತವು 1947, ಆಗಸ್ಟ್‌ 15 ರಂದು ಸ್ವತಂತ್ರವಾಯಿತು. 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸುಲಭದಲ್ಲಿ ಸಿಗಲಿಲ್ಲ. ಅದಕ್ಕಾಗಿ ಹೋರಾಡಿ ಮಡಿದ ಅದೆಷ್ಟೋ ದೇಶಭಕ್ತರ ತ್ಯಾಗ ಅದರಲ್ಲಿದೆ. ದೇಶಕ್ಕಾಗಿ ತಾವು ಹುಟ್ಟಿ ಬೆಳೆದ ಊರು, ಮನೆ ಎಲ್ಲವನ್ನು ಬಿಟ್ಟು ಬಂದು ಸ್ವತಂತ್ರ ಭಾರತ ತಮ್ಮ ಕನಸು ಎಂದು ಹಗಲಿರುಳು ಶ್ರಮಿಸಿದ್ದಾರೆ. ಒಂದೆಡೆ ಸೇರಿ ಚಳುವಳಿ, ಹೋರಾಟ ನೆಡೆಸಿದ್ದಾರೆ. ಅಂದು ಸ್ವಾತಂತ್ರ್ಯಕ್ಕಾಗಿ ಇಡೀ ದೇಶವೇ ಬ್ರಿಟೀಷರ ವಿರುದ್ಧ ಹೋರಾಡಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ಊರು ಪಾಲ್ಗೊಂಡಿತ್ತು. ಚಿಕ್ಕ ಗ್ರಾಮ ಕೂಡಾ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನಿಂತಿತ್ತು. ಹಾಗೆ ಹೋರಾಟಗಾರರು ಒಂದೆಡೆ ಸೇರಿ ಹೋರಾಡಿದ ಸ್ಥಳಗಳೆಲ್ಲವೂ ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಿವೆ. ಇಂದು ಅವುಗಳೆಲ್ಲವೂ ಸ್ವಾತಂತ್ರ್ಯ ಹೋರಾಟ ಸ್ಮಾರಕ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ. ಅಂತಹ ಊರುಗಳನ್ನು ನಾವು ನಮ್ಮ ಮಕ್ಕಳಿಗೆ ಖಂಡಿತ ತೋರಿಸಬೇಕಾಗಿದೆ. ಕೇವಲ ಪುಸ್ತಕದಲ್ಲಿನ ಚಿತ್ರ ತೋರಿಸಿ ಅದರ ಕಥೆ ಹೇಳುವು ಬದಲು ಸ್ವತಃ ಆ ಸ್ಥಳಗಳಿಗೆ ಹೋಗಿ, ಅಲ್ಲಿನ ಇತಿಹಾಸವನ್ನು ತಿಳಿಸುವುದು ಬಹಳ ಉತ್ತಮ. ಆಗ ಮಕ್ಕಳಿಗೆ ಹೋರಾಟದ ಚಿತ್ರಣವನ್ನು ಕಟ್ಟಿಕೊಡಲು, ಅವರ ತ್ಯಾಗ, ಬಲಿದಾನಗಳನ್ನು ಅರ್ಥಮಾಡಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ತಿಳಿಸಲು ಈ ಸ್ಥಳಗಳಿಗೆ ಖಂಡಿತ ಕರೆದುಕೊಂಡು ಹೋಗಿ.

ಇದನ್ನೂ ಓದಿ: ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ? 78 ಅಥವಾ 79 ಎಂಬ ಗೊಂದಲ ಬೇಡ, ಸರಿಯಾದ ಇಸವಿ ಇಲ್ಲಿ ತಿಳಿದುಕೊಳ್ಳಿ

ವಿದುರಾಶ್ವತ್ಥ

ಇತಿಹಾಸದ ಪುಟಗಳಲ್ಲಿ ದಕ್ಷಿಣ ಭಾರತದ ಜಲಿಯನ್‌ ವಾಲಾಬಾಗ್‌ ಎಂದೇ ಪ್ರಸಿದ್ಧಿ ಪಡೆದಿದೆ. ಕೋಲಾರ ಜಿಲ್ಲೆಯಲ್ಲಿರುವ ವಿದುರಾಶ್ವತ್ಥ ಒಂದು ಸಣ್ಣ ಗ್ರಾಮ. ಆ ಗ್ರಾಮದ ಒಂದು ಗುಂಪು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಸತ್ಯಾಗ್ರಹ ಮಾಡುತ್ತಿದ್ದರು. ಆ ಗುಂಪಿನ ಮೇಲೆ ಬ್ರಿಟೀಷರು ಗುಂಡಿನ ಧಾಳಿ ನಡೆಸಿದರು. ಅದರಲ್ಲಿ ಸುಮಾರು 35 ಜನರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದರು. ಇದು ಅಮೃತ್‌ಸರದ ಜಲಿಯನ್‌ ವಾಲಾಬಾಗ್‌ ಘಟನೆಯಂತೆ ಇತ್ತು. ಆದ್ದರಿಂದ ವಿದುರಾಶ್ವತ್ಥವನ್ನು ದಕ್ಷಿಣ ಭಾರತದ ಜಲಿಯನ್‌ ವಾಲಾಬಾಗ್ ಎಂದು ಕರೆಯುತ್ತಾರೆ. ಆ ಘಟನೆಯ ಸ್ಮರಣೆಗಾಗಿ ಮತ್ತು ಬಲಿದಾನ ಮಾಡಿದ ಜನರಿಗಾಗಿ 1973 ರಲ್ಲಿ ಸ್ಮಾರಕವನ್ನು ನಿರ್ಮಿಸಿ, ಸತ್ಯಾಗ್ರದಲ್ಲಿ ಭಾಗಿಯಾಗಿದ್ದವರ ಹೆಸರುಗಳನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಈ ಊರನ್ನು ನಿಮ್ಮ ಮಕ್ಕಳಿಗೆ ಖಂಡಿತ ತೋರಿಸಿ.

ಮುಂಡರಗಿ

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಹಚ್ಚಹಸಿರಾಗಿರುವ ಹೆಸರು ಮುಂಡರಗಿಯ ಭೀಮರಾಯ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದವರು. ಮುಂಡರಗಿಯ ಕೋಟೆಯನ್ನು ವಶಪಡಿಸಿಕೊಳ್ಳಲು ನೋಡುತ್ತಿದ್ದ ಬ್ರಿಟೀಷರಿಗೆ ಸಿಂಹಸ್ವಪ್ನರಾದವರು ಅವರು. ಈ ಕೋಟೆಗೆ ಸ್ವಾತಂತ್ರ್ಯ ಹೋರಾಟಗಾರ ಭೀಮರಾಯನ ಕೋಟೆ ಎಂದೇ ಕರೆಯಲಾಗುತ್ತದೆ. ಗದಗ ಜಿಲ್ಲೆಯಲ್ಲಿರುವ ಈ ಕೋಟೆಯನ್ನು ಮಕ್ಕಳಿಗೆ ತೋರಿಸಿ. ಅಂದಿನ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭೀಮರಾಯನ ಸಾಹಸದ ಕಥೆ ಹೇಳಿ.

ಶಿವಪುರದ

ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಶಿವಪುರ ಸದಾ ನೆನಪಿನಲ್ಲಿಡಬೇಕಾದ ಊರು. ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಶಿವಪುರದ ಧ್ವಜ ಸತ್ಯಾಗ್ರಹ ಎಂದೇ ಖ್ಯಾತಿ ಪಡೆದ ಊರು ಇದು. ಕರ್ನಾಟಕದ ಸಾಮಾನ್ಯ ಜನರ ಮನಸ್ಸಿನಲ್ಲಿಯೂ ಧ್ವಜ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುವಲ್ಲಿ ಯಶಸ್ವಿಯಾದ ಊರು. ಶಿವಪುರ ಮಂಡ್ಯ ಜಿಲ್ಲೆಯ, ಮದ್ದೂರಿನ ಸಮೀಪದಲ್ಲಿದೆ. ಅಲ್ಲಿ ಬೃಹತ್‌ ಸತ್ಯಾಗ್ರಹ ಸೌಧವನ್ನು ಕಟ್ಟಲಾಗಿದೆ. ಆ ಸ್ಮರಣೀಯ ಸ್ಮಾರಕವನ್ನು ನಿಮ್ಮ ಮಕ್ಕಳಿಗೆ ತೋರಿಸುವುದರಿಂದ ರಾಷ್ಟ್ರದ ಸಂಕೇತಗಳಲ್ಲಿ ಧ್ವಜಕ್ಕೆ ಇರುವ ಮಹತ್ವ ಮತ್ತು ಅದರ ಸ್ಥಾನ ತಿಳಿಸಿಕೊಡಬಹುದಾಗಿದೆ.

ಕಿತ್ತೂರು

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಪಾತ್ರ ಬಹಳ ದೊಡ್ಡದು. 1857ರಲ್ಲಿ ಜರುಗಿದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಗಿಂತ ಸುಮಾರು 25 ವರ್ಷಗಳ ಮೊದಲೇ ಕಿತ್ತೂರಿನ ವೀರರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಬ್ರಿಟಿಷರ ವಸಹಾತುಶಾಹಿ ವಿರುದ್ಧ ಹೋರಾಡಿದ ಕರ್ನಾಟಕದ ಹೆಮ್ಮೆಯ ರಾಣಿ. ಸ್ವಾತಂತ್ರ್ಯದ ಬೀಜ ಬಿತ್ತಿದ ಅಂತಹ ರಾಣಿಯ ಊರಾದ ಕಿತ್ತೂರನ್ನು ಇಂದಿನ ಯುವಜನಾಂಗಕ್ಕೆ ತೋರಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ.

ಈಸೂರು

‘ಏಸೂರು ಕೊಟ್ಟರೂ ಈಸೂರು ಬಿಡೆವು’ ಈ ಘೋಷಣೆ ಕರ್ನಾಟಕ ಸ್ವಾತಂತ್ರ್ಯ ಚಳುವಳಿಯ ಸದಾ ನೆನಪಿನಲ್ಲಿ ಉಳಿಯುವ ಗ್ರಾಮ ಈಸೂರು. ಭಾರತ ದೇಶದಲ್ಲಿ ಪ್ರಥಮವಾಗಿ ನಮ್ಮದು ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಳ್ಳುವುದರ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಊರು ಇದು. 1924 ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳುವಳಿ ಸಮಯದಲ್ಲಿ ಈಸೂರಿನ ಗ್ರಾಮಸ್ಥರು ಧ್ವಜ ಹಾರಿಸುವುದರ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ಈ ಊರನ್ನು ದಾಖಲಿಸಿದ್ದಾರೆ. ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿದೆ. ಒಂದು ಚಿಕ್ಕ ಗ್ರಾಮ ಬ್ರಿಟಿಷರಿಗೆ ತಲೆಬಾಗದೆ ಹೋರಾಡಿದ್ದನ್ನು ಅಲ್ಲಿಗೆ ಭೇಟಿ ನೀಡುವುದರ ಮೂಲಕ ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ.