ಮಕ್ಕಳು ಗಾಂಧೀಜಿ, ಭಗತ್ ಸಿಂಗ್ ಮುಂತಾದ ಹೋರಾಟಗಾರರ ವೇಷಭೂಷಣ ತೊಡಲು ಸಜ್ಜಾಗಿದ್ದಾರಾ: ಹಾಗಿದ್ದರೆ ಅಪ್ಪಿತಪ್ಪಿಯೂ ಇಂಥ ತಪ್ಪು ಮಾಡದಿರಿ-independence day dressing children as freedom fighters dressing children in fancy dress for independence day prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳು ಗಾಂಧೀಜಿ, ಭಗತ್ ಸಿಂಗ್ ಮುಂತಾದ ಹೋರಾಟಗಾರರ ವೇಷಭೂಷಣ ತೊಡಲು ಸಜ್ಜಾಗಿದ್ದಾರಾ: ಹಾಗಿದ್ದರೆ ಅಪ್ಪಿತಪ್ಪಿಯೂ ಇಂಥ ತಪ್ಪು ಮಾಡದಿರಿ

ಮಕ್ಕಳು ಗಾಂಧೀಜಿ, ಭಗತ್ ಸಿಂಗ್ ಮುಂತಾದ ಹೋರಾಟಗಾರರ ವೇಷಭೂಷಣ ತೊಡಲು ಸಜ್ಜಾಗಿದ್ದಾರಾ: ಹಾಗಿದ್ದರೆ ಅಪ್ಪಿತಪ್ಪಿಯೂ ಇಂಥ ತಪ್ಪು ಮಾಡದಿರಿ

ದೇಶದ ನಾಗರಿಕರು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಈ ದಿನ ಬಹಳ ಖುಷಿ ಕೊಡುವ ದಿನ. ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಿದ ಬಳಿಕ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜಾಗುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಅವರನ್ನು ಸ್ಮರಿಸುತ್ತಾರೆ. ಮಕ್ಕಳಿಗೆ ವೇಷಭೂಷಣ ತೊಡಿಸುವಾಗ ಈ ತಪ್ಪು ಮಾಡದಿರಿ.

ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಈ ತಪ್ಪು ಮಾಡದಿರಿ
ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಈ ತಪ್ಪು ಮಾಡದಿರಿ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಆಗಸ್ಟ್ 15, 1947ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಇದು ಒಂದೆರಡು ವರ್ಷ ನಡೆದ ಹೋರಾಟವಲ್ಲ. ಸಹಸ್ರಾರು ಹೋರಾಟಗಾರರು ತಮ್ಮ ನೆತ್ತರ ಹೊಳೆಯನ್ನು ಹರಿಸಿ ಬ್ರಿಟೀಷ್ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿದ ದಿನವಿದು. ಈ ದಿನವು ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಗೆ ಅಂತ್ಯ ಹಾಡಿ, ಭಾರತ ಸಾರ್ವಭೌಮ ರಾಷ್ಟ್ರವಾಗಿ ಜನನ ಪಡೆಯಿತು.

ಸ್ವಾತಂತ್ರ್ಯ ದಿನಾಚರಣೆಯು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸುವ ದಿನ. ದೇಶದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸುವ ಸುವರ್ಣವಕಾಶವೂ ಹೌದು. ಈ ದಿನ ಶಾಲಾ-ಕಾಲೇಜುಗಳಲ್ಲಂತೂ ವಿಶೇಷ ಸಂಭ್ರವಿರುತ್ತದೆ. ಶಾಲಾ ಮಕ್ಕಳು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ, ಅವರು ಮಾಡಿರುವ ಹೋರಾಟವನ್ನು ಸ್ಮರಿಸುತ್ತಾರೆ. ಆದರೆ, ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಅಪ್ಪಿತಪ್ಪಿಯೂ ಇಂಥ ತಪ್ಪು ಮಾಡಬೇಡಿ.

ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಈ ತಪ್ಪು ಮಾಡದಿರಿ

ಅಸಮರ್ಪಕ ವೇಷಭೂಷಣಗಳು: ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ನಿಖರವಾಗಿ ಪ್ರತಿನಿಧಿಸದ ಉಡುಪುಗಳನ್ನು ಮಕ್ಕಳಿಗೆ ತೊಡಿಸದಿರಿ. ಉದಾಹರಣೆಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರನ್ನು ಪ್ರತಿನಿಧಿಸುತ್ತಿರುವ ಮಗುವಿಗೆ ಒನಕೆ ಓಬವ್ವನ ವೇಷಭೂಷಣ ತೊಡಿಸಬೇಡಿ. ಸರಿಯಾಗಿ ಝಾನ್ಸಿ ರಾಣಿಯನ್ನೇ ಪ್ರತಿನಿಧಿಸುವಂತಹ ಉಡುಪನ್ನೇ ತೊಡಿಸಬೇಕು.

ಆಭರಣ ಬಳಕೆ ಮಿತವಾಗಿರಲಿ: ಎದ್ದು ಕಾಣುವಂಥ ಆಭರಣಗಳು ಮತ್ತು ದುಬಾರಿ ಉಡುಗೆಯಿಂದಷ್ಟೇ ವೇಷ ಕಳೆಗಟ್ಟುತ್ತೆ ಎಂದಲ್ಲ. ಏಕೆಂದರೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸರಳವಾಗಿದ್ದವರು. ಪಾತ್ರಕ್ಕೆ ಅಗತ್ಯವಾದ ಕೆಲವು ಪ್ರಮುಖ ಅಂಶಗಳಿಗೆ ಒತ್ತು ನೀಡಿರಿ. ಆಭರಣ ಮತ್ತು ಉಡುಪಿಗಾಗಿ ಹೆಚ್ಚು ವೆಚ್ಚ ಮಾಡಬೇಡಿ.

ಉಡುಗೆಯ ಅಳತೆ: ತೀರಾ ದೊಗಲೆಯಾಗಿರುವ ಅಥವಾ ಬಿಗಿಯಾಗಿರುವ ಉಡುಗೆ ಹಾಕಿದರೆ ಮಕ್ಕಳಿಗೆ ಕಾರ್ಯಕ್ರಮವನ್ನು ಆನಂದಿಸಲು ಕಷ್ಟವಾಗಬಹುದು. ಯಾವಾಗಲೂ ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡಿ. ಮೃದುವಾದ ಬಟ್ಟೆಗಳನ್ನು ಬಳಸಿ. ವೇಷಭೂಷಣವು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮಗುವಿನ ತಿಳಿವಳಿಕೆಯನ್ನು ನಿರ್ಲಕ್ಷಿಸುವುದು: ಮಗುವಿಗೆ ತಾನು ತೊಟ್ಟ ವೇಷಭೂಷಣ ಯಾರದ್ದು ಹೇಳುವುದರ ಜೊತೆಗೆ ಅವರು ಏಕೆ ಮುಖ್ಯರು? ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವೇನು ಎಂಬುದನ್ನು ವಿವರಿಸಬೇಕು. ಇಲ್ಲದಿದ್ದಲ್ಲಿ ಪಾತ್ರ ಹಾಕಿಸಿ ಏನೂ ಪ್ರಯೋಜನ ಇಲ್ಲದಂತೆ ಆಗಬಹುದು.

ಕೇಶವಿನ್ಯಾಸ ಮತ್ತು ಮೇಕಪ್ ನಿರ್ಲಕ್ಷಿಸುವುದು: ಕೆಲವೊಮ್ಮೆ, ವೇಷಭೂಷಣಕ್ಕೆ ಪೂರಕವಾದ ಸೂಕ್ತವಾದ ಕೇಶವಿನ್ಯಾಸ ಅಥವಾ ಸರಳವಾದ ಮೇಕ್ಅಪ್ ಅನ್ನು ಪರಿಗಣಿಸದೆ ಒಟ್ಟಾರೆ ನೋಟವನ್ನು ಕಡೆಗಣಿಸಲಾಗುತ್ತದೆ. ಈ ಅಂಶಗಳು ಪಾತ್ರಕ್ಕೆ ಅನುಗುಣವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪಿನ್‍ಗಳ ಬಳಕೆಯಲ್ಲಿ ಎಡವಟ್ಟು: ಮಕ್ಕಳಿಗೆ ಉಡುಪು ತೊಡಿಸುವಾಗ ಸರಿಯಾಗಿ ಪಿನ್ ಮಾಡಿ. ಅದು ಮಕ್ಕಳಿಗೆ ಚುಚ್ಚದಂತೆ ಗಮನ ಹರಿಸಬೇಕು. ಹೆಚ್ಚು ಪಿನ್‍ಗಳನ್ನು ಬಳಸಬೇಡಿ. ಅಗತ್ಯವಿರುವಷ್ಟೇ ಪಿನ್‍ಗಳನ್ನು ಬಳಸಿ.

ಸೂಕ್ತ ಶೂ, ಚಪ್ಪಲಿಗಳ ಆಯ್ಕೆ: ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಆ ಹೋರಾಟಗಾರರು ಯಾವ ರೀತಿಯ ಶೂ ಅಥವಾ ಚಪ್ಪಲಿ ಧರಿಸುತ್ತಿದ್ದರು. ಅಥವಾ ಅವರು ಬರಿಗಾಲಿನಲ್ಲಿರುತ್ತಿದ್ದರೆ ಎಂಬುದನ್ನು ತಿಳಿದುಕೊಳ್ಳಿ. ಅವರು ಚಪ್ಪಲಿ ಧರಿಸುತ್ತಿದ್ದರೆ ಯಾವ ರೀತಿಯ ಚಪ್ಪಲಿ ತೊಡುತ್ತಿದ್ದರೋ ಅಂಥದ್ದನ್ನೇ ಆಯ್ಕೆ ಮಾಡಬೇಕು.

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸುವಾಗ ಈ ಅಂಶಗಳು ಗಮನದಲ್ಲಿರಲಿ

ಉಡುಗೆಯ ಬಗ್ಗೆ ಮಾಹಿತಿ ಕಲೆಹಾಕಿ: ಮಕ್ಕಳು ಪ್ರತಿನಿಧಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಬಟ್ಟೆ ಮತ್ತು ಪರಿಕರಗಳು ನಿಖರವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಐತಿಹಾಸಿಕ ಫೋಟೋಗಳನ್ನು ನೋಡಿ. ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಬಳಿಕ ಮಕ್ಕಳಿಗೆ ವೇಷಭೂಷಣ ತೊಡಿಸಿ.

ಸರಳ ಮತ್ತು ಗುರುತಿಸಬಹುದಾದ ಅಂಶಗಳನ್ನು ಬಳಸಿ: ಸ್ವಾತಂತ್ರ್ಯ ಹೋರಾಟಗಾರರು ಬಳಸುತ್ತಿದ್ದ ಐಕಾನಿಕ್ ಅಂಶಗಳತ್ತ ಗಮನ ಕೇಂದ್ರೀಕರಿಸಿ. ಇದರಿಂದ ಮಕ್ಕಳು ಪ್ರತಿನಿಧಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬುದನ್ನು ಗುರುತಿಸಲು ಸುಲಭವಾಗುತ್ತದೆ. ಉದಾಹರಣೆಗೆ ಗಾಂಧಿ ಟೋಪಿ, ನೆಹರು ಜಾಕೆಟ್, ಸು‍ಭಾಷ್ ಚಂದ್ರ ಬೋಸ್‌ ಅವರ ಸಮವಸ್ತ್ರ, ಭಗತ್ ಸಿಂಗ್ ಮೀಸೆ ಅಥವಾ ಶಾಲು ಇತ್ಯಾದಿ.

ಮಕ್ಕಳಿಗೆ ಆರಾಮದಾಯಕವಾಗಿರಲಿ: ವೇಷಭೂಷಣವು ಆರಾಮದಾಯಕ ಮತ್ತು ಮಗುವಿಗೆ ಚಲಿಸಲು ಸುಲಭವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೇಷಭೂಷಣ ತೊಟ್ಟಾಗ ಮಕ್ಕಳಿಗೆ ಕಷ್ಟವಾಗಬಾರದು. ಇದರಿಂದ ಅವರ ಗಮನ ತಮ್ಮ ಉಡುಪಿನ ಮೇಲೆ ಹೋಗಿ ಏಕಾಗ್ರತೆ ಕಳೆದುಕೊಳ್ಳುವಂತಾಗಬಹುದು. ಸ್ವಾತಂತ್ರ್ಯ ದಿನಾಚರಣೆಯ ದಿನ ಮಕ್ಕಳಿಗೆ ವೇಷಭೂಷಣ ತೊಡಿಸುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಪ್ರಿಯ ಪೋಷಕರೇ, ನಿಮ್ಮ ಮಗು ನಾಳೆ (ಆಗಸ್ಟ್‌ 15) ಶಾಲೆಯಲ್ಲಿ ಮಿಂಚಲಿ. ದೇಭಭಕ್ತಿ ಮಕ್ಕಳಲ್ಲಿ ಅನುರಣಿಸಲಿ. ನಾಡಿನ ಉತ್ತಮ ಪ್ರಜೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.