ಆಗಸ್ಟ್ 15ಕ್ಕೆ ಮಗುವಿಗೆ ಫ್ಯಾನ್ಸಿ ಡ್ರೆಸ್ ಹಾಕಿಸುವ ಆಸೆ ಇದ್ಯಾ? ಈ ಸ್ವಾತಂತ್ರ್ಯ ಹೋರಾಟಗಾರ್ತಿಯರ ವೇಷಭೂಷಣ ತೊಡಿಸಿ, ಅಲಂಕರಿಸಿ
ಸ್ವಾತಂತ್ರ್ಯಕ್ಕಾಗಿ ಕೇವಲ ಪುರುಷರಷ್ಟೇ ಅಲ್ಲ, ಮಹಿಳೆಯರೂ ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ. ಅವರ ರಕ್ತದ ಹನಿಗಳಿಂದ ನಮ್ಮ ದೇಶ ಸ್ವತಂತ್ರಗೊಳ್ಳಲು ಕಾರಣವಾಯಿತು. ರಾಣಿಯರಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೂ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ. ಹೀಗಾಗಿ ಶಾಲೆಯಲ್ಲಿ ನಡೆಸುವ ಸ್ಪರ್ಧೆಗಾಗಿ ಮಕ್ಕಳು ಈ ಮಹಿಳಾ ಹೋರಾಟಗಾರ್ತಿಯರ ವೇಷಭೂಷಣ ಹಾಕಬಹುದು. (ಬರಹ:ಪ್ರಿಯಾಂಕ)
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಕೇವಲ ಐದು ದಿನಗಳು ಮಾತ್ರ ಬಾಕಿಯಿದೆ. ಭಾರತ ಸ್ವಾತಂತ್ರ್ಯ ಪಡೆದ ಐತಿಹಾಸಿಕ ದಿನ ಹಾಗೂ ಇದಕ್ಕಾಗಿ ಹೋರಾಡಿದ ವೀರರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ತುಂಬಾನೇ ಮುಖ್ಯ. ಸ್ವಾತಂತ್ರ್ಯೋತ್ಸವ ಅಂದರೆ ಮಕ್ಕಳಲ್ಲೂ ಸಂಭ್ರಮ ಮನೆ ಮಾಡಿರುತ್ತದೆ. ಆದರೆ, ಮಕ್ಕಳಿಗೆ ಸ್ವಾತಂತ್ರ್ಯ ಎಂದರೇನು, ಅದರ ಇತಿಹಾಸವೇನು ಎಂಬ ಬಗ್ಗೆ ತಿಳಿದಿರುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿದ ವೀರರ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದು ನಮ್ಮೆಲ್ಲರ ಕರ್ತವ್ಯ.
ಸ್ವಾತಂತ್ರ್ಯ ದಿನದಂದು ಶಾಲೆಗಳಲ್ಲಿ ಮಕ್ಕಳಿಗೆ ದೇಶಕ್ಕಾಗಿ ಹೋರಾಡಿದವರ ವೇಷ ಹಾಕುವ ಸ್ಪರ್ಧೆ ಇರುತ್ತದೆ. ದೇಶಕ್ಕಾಗಿ ಹೋರಾಡಿದವರಲ್ಲಿ ಪುರುಷರು ಮಾತ್ರವಲ್ಲ ವೀರ ಮಹಿಳೆಯರೂ ಇದ್ದಾರೆ. ತಮ್ಮ ಪ್ರಾಂತ್ಯ/ದೇಶವನ್ನು ಉಳಿಸಲು ವೀರ ಮಹಿಳೆಯರು ಬ್ರಿಟೀಷರ ವಿರುದ್ಧ ಕೆಚ್ಚೆದಯ ಹೋರಾಟ ನಡೆಸಿದ್ದಾರೆ. ಅವರ ನೆನಪು ಎಂದೆಂದಿಗೂ ಅಮರ. ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ನೆಲವನ್ನುಳಿಸಲು ಪ್ರಾಣವನ್ನು ಅರ್ಪಿಸಿದ ಮಹಿಳೆಯರ ಸಾಧನೆ ಯಾರಿಗೂ ಕಮ್ಮಿಯಿಲ್ಲ. ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ನಡೆಯುವ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ಕುರಿತು ನಿಮ್ಮ ಮಗುವಿಗೆ ಯಾವ ರೀತಿಯ ಉಡುಗೆ ತೊಡಿಸಬೇಕು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ಕೆಲವು ಪ್ರಸಿದ್ಧ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ.
ಮಕ್ಕಳಿಗೆ ತೊಡಿಸಿ ಈ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ
ಝಾನ್ಸಿ ರಾಣಿ ಲಕ್ಷ್ಮಿಬಾಯಿ: ಭಾರತದ ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೆಸರು ಅಗ್ರ ಸ್ಥಾನದಲ್ಲಿ ಬರುತ್ತದೆ. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಝಾನ್ಸಿ ರಾಣಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಝಾನ್ಸಿ ರಾಣಿ ತನ್ನ ನಿರ್ಭೀತ ಗುಣ ಮತ್ತು ಶೌರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾಳೆ. ಮಕ್ಕಳಿಗೆ ಲಕ್ಷ್ಮಿ ಬಾಯಿಯ ವೇಷಭೂಷಣ ತೊಡಿಸಿ, ಆಕೆ ದೇಶಕ್ಕಾಗಿ ಹೋರಾಡಿದ ಬಗ್ಗೆ ಅವರಿಗೆ ಹೇಳಿಕೊಡಬಹುದು.
ಕಿತ್ತೂರು ರಾಣಿ ಚೆನ್ನಮ್ಮ: ಕನ್ನಡನಾಡಿನ ವೀರ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಅಗ್ರ ಸ್ಥಾನದಲ್ಲಿ ಬರುತ್ತದೆ. ತನ್ನ ಪುಟ್ಟ ಪ್ರಾಂತ್ಯದ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ರಣಚಂಡಿಯಾಗಿ ಹೋರಾಡಿದ ಚೆನ್ನಮ್ಮ ಎಂದೆಂದಿಗೂ ಅಜರಾಮರ. ಬ್ರಿಟೀಷರ ವಿರುದ್ಧ ಹೋರಾಡುವಾಗ ಆಕೆ ತೋರಿದ ಧೈರ್ಯ, ಸ್ಥೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ ಇತ್ಯಾದಿ ಚೆನ್ನಮ್ಮಳ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮಳ ವೇಷಭೂಷಣವನ್ನು ಹಾಕುವುದರಿಂದ ಆಕೆಯ ಹೋರಾಟದ ಬಗ್ಗೆ ಅವರಿಗೂ ಮನವರಿಕೆಯಾಗುತ್ತದೆ.
ರಾಣಿ ಅಬ್ಬಕ್ಕ: ತುಳುನಾಡಿನ (ದಕ್ಷಿಣ ಕನ್ನಡ ಜಿಲ್ಲೆ) ಒಂದು ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದ ಅಬ್ಬಕ್ಕ ಬಂಟ ಸಮುದಾಯಕ್ಕೆ ಸೇರಿದವಳು. ಉಳ್ಳಾಲವನ್ನು ವಶಪಡಿಸಿಕೊಳ್ಳುವ ಪೋರ್ಚುಗೀಸರ ಯತ್ನಗಳನ್ನು ವಿಫಲಗೊಳಿಸಿದ್ದ ದಿಟ್ಟೆ ಈಕೆ. ನಾಲ್ಕು ದಶಕಗಳ ಕಾಲ ಪೋರ್ಚುಗೀಸರ ಈ ಪ್ರಯತ್ನವನ್ನು ಹಿಮ್ಮೆಟ್ಟಿಸಿದ್ದಳು. ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಕೀರ್ತಿ ರಾಣಿ ಅಬ್ಬಕ್ಕನದ್ದು.
ಸರೋಜಿನಿ ನಾಯ್ಡು: ಭಾರತದ ಗಾನಕೋಗಿಲೆ ಎಂದೇ ಹೆಸರು ಪಡೆದಿರುವ ಸರೋಜಿನಿ ನಾಯ್ಡು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಸ್ವಾತಂತ್ರ್ಯದ ನಂತರ ಉತ್ತರ ಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಆನಿ ಬೆಸೆಂಟ್: ಬ್ರಿಟೀಷರ ವಿರುದ್ಧ, ಮಹಿಳೆಯರ ಹಕ್ಕುಗಳು, ಕಾರ್ಮಿಕರ ಹಕ್ಕುಗಳು ಇತ್ಯಾದಿಗಳಿಗಾಗಿ ಹೋರಾಡಿದ ಧೀರ ಮಹಿಳೆ. ಹೋಮ್ ರೂಲ್ ಚಳುವಳಿಯಲ್ಲಿ ಭಾಗವಹಿಸಿದ್ದ ಆನಿ ಬೆಸೆಂಟ್, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಬೇಗಂ ಹಜರತ್ ಮಹಲ್: ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಮಹಿಳಾ ನಾಯಕಿಯರಲ್ಲಿ ಈಕೆ ಕೂಡ ಒಬ್ಬಳು. 1858 ರಲ್ಲಿ ಬ್ರಿಟಿಷರು ಲಕ್ನೋವನ್ನು ಪುನಃ ವಶಪಡಿಸಿಕೊಂಡ ನಂತರ, ಕ್ರಾಂತಿಕಾರಿ ಚಳವಳಿಯ ಇತರ ನಾಯಕರೊಂದಿಗೆ ನೇಪಾಳಕ್ಕೆ ಬಲವಂತವಾಗಿ ಗಡೀಪಾರಾದಳು. ಇತಿಹಾಸ ಪುಟದಲ್ಲಿ ಮೊದಲ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಈಕೆಯ ಹೆಸರು ಅಚ್ಚಳಿಯದೆ ಉಳಿದಿದೆ.
ಕೇವಲ ಇವರಷ್ಟೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿಳೆಯರು ತಮ್ಮ ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ಮೇಡಂ ಭಿಕಾಜಿ ಕಾಮಾ, ಸುಚೇತ ಕೃಪಲಾನಿ, ಅರುಣಾ ಅಸಾಫ್ ಅಲಿ, ದುರ್ಗಾಬಾಯ್ ದೇಶ್‍ಮುಖ್, ಮಾತಂಗಿನಿ ಹಜ್ರಾ, ಬಸಂತಿ ದೇವಿ, ಆಶಾಲತಾ ಸೇನ್, ಅರುಣಾ ಅಸಫ್ ಅಲಿ, ಉಮಾಬಾಯಿ ಕುಂದಾಪುರ, ಯಶೋಧರ ದಾಸಪ್ಪ, ನಾಗಮ್ಮ ಪಾಟೀಲ್, ಕಮಲಾದೇವಿ ಚಟ್ಟೋಪಾಧ್ಯಾಯ, ಬಳ್ಳಾರಿ ಸಿದ್ದಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಪದ್ಮಾವತಿ ಬಿದರಿ ಇತ್ಯಾದಿ. ಇವರುಗಳ ವೇಷಭೂಷಣವನ್ನು ಮಕ್ಕಳಿಗೆ ತೊಡಿಸಬಹುದು. ಇದರಿಂದ ಇತಿಹಾಸ ಪುಟದಲ್ಲಿರುವ ಅನೇಕ ಮಹಿಳಾ ಹೋರಾಟಗಾರ್ತಿಯರ ಬಗ್ಗೆ ಮಕ್ಕಳಿಗೆ ತಿಳಿಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳಾ ಹೋರಾಟಗಾರರ ಪಾತ್ರವೂ ಪ್ರಮುಖವಾಗಿದೆ.
ವಿಭಾಗ