Kargil Vijay Diwas: ಇಂದು ಕಾರ್ಗಿಲ್ ವಿಜಯ ದಿನ; ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ಇಲ್ಲಿವೆ
ಇಂದು ಕಾರ್ಗಿಲ್ ವಿಜಯ್ ದಿವಸ್. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ದಿನ 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂದು ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಲಾಗುತ್ತದೆ.
ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ನಡೆಯಿತು. ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಪ್ರಸಿದ್ಧವಾದ ʼಟೈಗರ್ ಹಿಲ್ʼ ಅನ್ನು ವಶಪಡಿಸಿಕೊಂಡಿತ್ತು. ಯುದ್ಧದಲ್ಲಿ ಹಲವು ಸೈನಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೆಚ್ಚೆದೆಯಿಂದ ಹೋರಾಡಿದ್ದರು. ಕಾರ್ಗಿಲ್ ವಿಜಯ್ ದಿವಸದಂದು ಕೆಚ್ಚೆದೆಯ ಸೈನಿಕರು ಮತ್ತು ಅವರ ತ್ಯಾಗವನ್ನು ನೆನಪಿಸಿಕೊಳ್ಳಲಾಗುತ್ತದೆ.
ಈ ಯುದ್ಧದಲ್ಲಿ ಭಾರತೀಯ ಸೇನೆಯ ಪ್ರಮುಖ ಅಧಿಕಾರಿಗಳು ಸೇರಿದಂತೆ 527 ಯೋಧರು ವೀರಮರಣ ಹೊಂದಿದ್ದಾರೆ. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್ ಜಿಲ್ಲೆಯ ಎಲ್‌ಒಸಿ ಮೂಲಕ ಒಳ ಪ್ರವೇಶಿಸಿದ್ದರು. ಇದು ಭಾರತದ ಸೇನೆಗೆ ಗೊತ್ತಾಗಿ ತಕ್ಷಣ ಪ್ರತಿದಾಳಿ ಆರಂಭಿಸಿತು. ಪಾಕಿಸ್ತಾನದ ಈ ಯುದ್ಧ ಭಾರತಕ್ಕೆ ನಿರೀಕ್ಷಿತವಾಗಿರಲಿಲ್ಲ. ಆದರೂ, ಭಯಪಡದೆ ಆಪರೇಷನ್ ವಿಜಯ್ ಆರಂಭಿಸಿ ಗೆಲುವು ಪಡೆಯಿತು.
ಎರಡೂ ಕಡೆಗೂ ಅಪಾರ ಹಾನಿ
ಕಾರ್ಗಿಲ್ ಯುದ್ಧದಿಂದಾಗಿ ಎರಡೂ ಕಡೆಗಳಲ್ಲಿ ಅಪಾರ ಹಾನಿಯಾಗಿತ್ತು. ಭಾರತದ ಸುಮಾರು 500 ಮಂದಿ ಸೈನಿಕರು ಪ್ರಾಣ ತೆತ್ತಿದ್ದರೆ, ಪಾಕ್‌ನ ಸುಮಾರು 700 ಮಂದಿ ಮಡಿದಿದ್ದರು. ಪಾಕ್ ಭಾರತದ ಯುದ್ಧ ವಿಮಾನ, ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತ್ತು. ಭಾರತ ಕೂಡ ದೊಡ್ಡ ಸಂಖ್ಯೆಯಲ್ಲಿ ಪಾಕ್ ಸೈನಿಕರನ್ನು ಸೆರೆಹಿಡಿದಿತ್ತು.
ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದಿರಬೇಕಾದ ಪ್ರಮುಖ ಮಾಹಿತಿ ಇಲ್ಲಿವೆ
* ಕಾರ್ಗಿಲ್ ಯುದ್ಧವು 1999ರ ಮೇ ಮತ್ತು ಜುಲೈ ತಿಂಗಳ ನಡುವೆ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು.
* ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳ ಒಳನುಸುಳುವಿಕೆಯ ಪರಿಣಾಮವಾಗಿ ಯುದ್ಧ ಉಂಟಾಗಿತ್ತು.
* ಕಾರ್ಗಿಲ್ ಯುದ್ಧದ ಸಮಯದಲ್ಲಿ ಆಕ್ರಮಿತ ಕಾರ್ಗಿಲ್ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲು ಭಾರತೀಯ ಸೇನೆಯು ʼಆಪರೇಷನ್ ವಿಜಯ್ʼ ಹೆಸರಿನಲ್ಲಿ ಕಾರ್ಯಾಚರಣೆಯನ್ನು ನಡೆಸಿತ್ತು.
* ಕಾರ್ಗಿಲ್ ಯುದ್ಧವು ಎತ್ತರದ ಹಿಮಚ್ಛಾದಿತ ಪ್ರದೇಶಗಳಲ್ಲಿ ನಡೆಯಿತು. 18,000 ಅಡಿ ಎತ್ತರದಲ್ಲಿ ಯುದ್ಧ ನಡೆದಿತ್ತು. ಕಾರ್ಗಿಲ್ ಪ್ರದೇಶವು ಯುದ್ಧಕ್ಕೆ ಸವಾಲಿನ ಹಾಗೂ ಆಯಕಟ್ಟಿನ ಸ್ಥಳವಾಗಿತ್ತು.
* ಈ ಯುದ್ಧದಿಂದ ಎರಡೂ ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿತ್ತು. ಸುಮಾರು 500 ಭಾರತೀಯ ಹಾಗೂ 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.
* ಯುದ್ಧದಲ್ಲಿ ಫಿರಂಗಿ, ವಾಯುದಳ ಹಾಗೂ ಸೈನಿಕರ ಕಾರ್ಯಾಚರಣೆ ಇತ್ತು.
* ಈ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯು ವೈಮಾನಿಕ ಬೆಂಬಲವನ್ನು ಸೂಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ವಾಯುದಾಳಿಗಳ ಮೂಲಕ ಶತ್ರುಪಡೆಗಳನ್ನು ಹಿಮ್ಮೆಟ್ಟಿಸಿತ್ತು.
* ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಗಾಗಿ ರಾಷ್ಟ್ರೀಯ ನಾಯಕರಾದರು. "ಯೇ ದಿಲ್ ಮಾಂಗೆ ಮೋರ್" ಎಂಬ ಅವರ ಪ್ರಸಿದ್ಧ ನುಡಿ ಅಪ್ರತಿಮವಾಯಿತು.
* ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ರ ಆಯಕಟ್ಟಿನ ಶಿಖರಗಳನ್ನು ಪುನಃ ವಶಪಡಿಸಿಕೊಂಡಿತು.
* 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಎರಡು ದೇಶಗಳು ಕಾರ್ಗಿಲ್ ಯುದ್ಧದಲ್ಲಿ ನೇರ ಮಿಲಿಟರಿ ಸಂಘರ್ಷದಲ್ಲಿ ತೊಡಗಿದವು.
* ಈ ಸಂಘರ್ಷವು ಅಂತರರಾಷ್ಟ್ರೀಯ ಗಮನವನ್ನು ಸೆಳೆಯಿತು, ಈ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿವಿಧ ದೇಶಗಳು ಪಾಕಿಸ್ತಾನವನ್ನು ಒತ್ತಾಯಿಸಿದವು.