ಭಾರತ–ಪಾಕ್‌ ನಡುವೆ ಹೆಚ್ಚಿದೆ ಉದ್ವಿಗ್ನ ಸ್ಥಿತಿ; ಆರೋಗ್ಯ, ಸುರಕ್ಷತೆಗಾಗಿ ಈ ವಸ್ತುಗಳು ಸದಾ ನಿಮ್ಮೊಂದಿಗಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತ–ಪಾಕ್‌ ನಡುವೆ ಹೆಚ್ಚಿದೆ ಉದ್ವಿಗ್ನ ಸ್ಥಿತಿ; ಆರೋಗ್ಯ, ಸುರಕ್ಷತೆಗಾಗಿ ಈ ವಸ್ತುಗಳು ಸದಾ ನಿಮ್ಮೊಂದಿಗಿರಲಿ

ಭಾರತ–ಪಾಕ್‌ ನಡುವೆ ಹೆಚ್ಚಿದೆ ಉದ್ವಿಗ್ನ ಸ್ಥಿತಿ; ಆರೋಗ್ಯ, ಸುರಕ್ಷತೆಗಾಗಿ ಈ ವಸ್ತುಗಳು ಸದಾ ನಿಮ್ಮೊಂದಿಗಿರಲಿ

ಭಾರತ–ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಜನರು ಸಾಕಷ್ಟು ಎಚ್ಚರದಿಂದಿರಬೇಕು ಎಂದು ಸರ್ಕಾರ ಸಲಹೆ ನೀಡುತ್ತಿದೆ. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಈ ಕೆಲವು ವಸ್ತುಗಳು ಸದಾ ನಿಮ್ಮೊಂದಿಗೆ ಇರಬೇಕು.

ಭಾರತ–ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನ ಸ್ಥಿತಿ; ಆರೋಗ್ಯ, ಸುರಕ್ಷತೆಗಾಗಿ ಈ ವಸ್ತುಗಳು ಸದಾ ನಿಮ್ಮೊಂದಿಗಿರಲಿ
ಭಾರತ–ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನ ಸ್ಥಿತಿ; ಆರೋಗ್ಯ, ಸುರಕ್ಷತೆಗಾಗಿ ಈ ವಸ್ತುಗಳು ಸದಾ ನಿಮ್ಮೊಂದಿಗಿರಲಿ

ಆಪರೇಷನ್ ಸಿಂದೂರದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ‍ಪರಿಸ್ಥಿತಿ ಹದಗೆಟ್ಟಿದೆ. ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಭಾರತ–ಪಾಕ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಭಾರತದ ಜನರಿಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ನಾವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕು.

ದೇಶದ ಜನರು ಭಯಭೀತರಾಗದೇ, ಶಾಂತ ರೀತಿಯಲ್ಲಿ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಆದರೆ ನಾವು ಮುಂಚಿತವಾಗಿ ಒಂದಿಷ್ಟು ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ನಮ್ಮ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೆಲವು ವಸ್ತುಗಳನ್ನು ಸದಾ ನಮ್ಮೊಂದಿಗೆ ಇರಿಸಿಕೊಳ್ಳಬೇಕು. ಯುದ್ಧದ ಪರಿಸ್ಥಿತಿ ಎದುರಾಗಿರುವ ಈ ಸಂದರ್ಭದಲ್ಲಿ ನಮ್ಮೊಂದಿಗೆ ಇರಬೇಕಾದ ಕೆಲವು ಅಗತ್ಯ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕುಡಿಯುವ ನೀರು

ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರಿಗೆ ಅಗತ್ಯವಾಗಿ ಬೇಕಿರುವುದು ಕುಡಿಯುವ ನೀರು. ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಸಾಕಷ್ಟು ಕುಡಿಯುವ ನೀರನ್ನು ಸಂಗ್ರಹಿಸಿ ಇಡುವುದು ಬಹಳ ಮುಖ್ಯವಾಗುತ್ತದೆ. ಶುದ್ಧ ಕುಡಿಯುವ ನೀರನ್ನು ಬಾಟಲಿ ಹಾಗೂ ಪಾತ್ರೆಗಳಲ್ಲಿ ಸಂಗ್ರಹಿಸಿ ಇಡಿ.

ಆಹಾರ ಪದಾರ್ಥಗಳು

ನಿಮ್ಮ ಅಡುಗೆ ಮನೆಯಲ್ಲಿ ಅಗತ್ಯ ಆಹಾರ ಪದಾರ್ಥಗಳ ದಾಸ್ತಾನು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮನೆಯಲ್ಲಿ ಕೆಲವು ದಿನಗಳ ಕಾಲ ಕೆಡದಂತೆ ಇರುವ ಆಹಾರ ವಸ್ತುಗಳನ್ನು ಸಂಗ್ರಹಿಸಿ ಇಡಿ. ದೇಹಕ್ಕೆ ಪ್ರೊಟೀನ್ ಒದಗಿಸುವ ಆಹಾರಗಳಾದ ಮೊಟ್ಟೆ, ಒಣಹಣ್ಣುಗಳು, ಎನರ್ಜಿ ಬಾರ್‌ಗಳು ಹೆಚ್ಚಿರಲಿ. ಅಕ್ಕಿ, ಹಿಟ್ಟು, ಬೇಳೆ ಇವುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವುದು ಉತ್ತಮ.

ಪ್ರಥಮ ಚಿಕಿತ್ಸಾ ಕಿಟ್

ಫಸ್ಟ್ ಏಯ್ಡ್ ಬಾಕ್ಸ್ ಅಥವಾ ಪ್ರಥಮ ಚಿಕಿತ್ಸಾ ಕಿಟ್ ಅನ್ನು ನಿಮ್ಮ ಮನೆಯಲ್ಲಿ ತಪ್ಪದೇ ಇರಿಸಿಕೊಳ್ಳಿ. ಸಣ್ಣ ಪುಟ್ಟ ಗಾಯಗಳಾದಾಗ ಮೂಲಭೂತ ಚಿಕಿತ್ಸೆ ನೀಡಲು ನೆರವಾಗುವ ವಸ್ತುಗಳು ಇದರಲ್ಲಿ ಇರಲಿ. ಬ್ಯಾಂಡೇಜ್‌ಗಳು, ಕೈಗವಸುಗಳು, ನಂಜುನಿರೋಧಕಗಳು, ನೋವು ನಿವಾರಕಗಳು, ಥರ್ಮಾಮೀಟರ್ ಮತ್ತು ಕತ್ತರಿಗಳು ತಪ್ಪದೇ ಇರುವಂತೆ ನೋಡಿಕೊಳ್ಳಿ.

ಬಟ್ಟೆಗಳು, ಟಿಶ್ಯೂ, ಪ್ಯಾಡ್‌

ಮನೆಯಲ್ಲಿ ಋತುಮಾನಕ್ಕೆ ಹೊಂದುವ ಒಂದಿಷ್ಟು ಬಟ್ಟೆಗಳ ಸಂಗ್ರಹ ಇರಲಿ. ಇದರೊಂದಿಗೆ ಟಿಶ್ಯೂ, ಪ್ಯಾಡ್‌ಗಳ ಸಂಗ್ರಹ ಇರಲಿ. ಸೋಪುಗಳು, ಶಾಂಪೂಗಳು, ಟೂತ್‌ಪೇಸ್ಟ್‌ಗಳನ್ನು ಖರೀದಿಸಿ ತಂದಿಟ್ಟುಕೊಳ್ಳಿ.

ಪ್ರಮುಖ ದಾಖಲೆಗಳು

ನಿಮ್ಮ ಬಳಿ ಇರುವ ಆಸ್ತಿ ಪತ್ರಗಳು, ಓದಿನ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ರೇಷನ್‌ಕಾರ್ಡ್‌, ವೋಟರ್ ಐಡಿ ಸೇರಿದಂತೆ ಪ್ರಮುಖ ಡ್ಯಾಕುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಪೆನ್‌ಡ್ರೈವ್ ಹಾಗೂ ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿ ಇಡಿ. ಹಾರ್ಡ್ ಕಾಪಿಗಳನ್ನು ವಾಟರ್‌ಪ್ರೂಫ್‌ ಕವರ್‌ನಲ್ಲಿ ಹಾಕಿಡಿ. ಗುರುತಿನ ಚೀಟಿಗಳು, ಪಾಸ್‌ಪೋರ್ಟ್‌ಗಳು, ಆರೋಗ್ಯ ವರದಿಗಳು, ವಿಮಾ ಪತ್ರಗಳು, ಪ್ರಮಾಣಪತ್ರಗಳು ಇತ್ಯಾದಿಗಳ ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ನೀವು ಯಾರಿಗಾದರೂ ಕರೆ ಮಾಡಬೇಕಾದರೆ ಅವರ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ.

ಮೊಬೈಲ್‌, ಪೋನ್‌ಗೆ ಸಂಬಂಧಿತ ವಸ್ತುಗಳು

ಈ ಸಮಯದಲ್ಲಿ ಮೊಬೈಲ್‌ ಫೋನ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸೋಲಾರ್ ಚಾರ್ಜರ್‌ಗಳನ್ನು ಖರೀದಿಸಿ. ಪವರ್‌ ಬ್ಯಾಂಕ್‌ಗಳನ್ನು ತಪ್ಪದೇ ಚಾರ್ಜ್ ಮಾಡಿ ಮನೆಯಲ್ಲಿ ಇರಿಸಿಕೊಳ್ಳಿ.

ಹಣ ಹಾಗೂ ಈ ಅಗತ್ಯ ವಸ್ತುಗಳು

ಒಂದು ವೇಳೆ ಯುದ್ಧ ಘೋಷಣೆಯಾದರೆ ಆನ್‌ಲೈನ್ ವ್ಯವಹಾರಗಳನ್ನು ಕೆಲವು ದಿನಗಳವರೆಗೆ ನಿಲ್ಲಿಸಬಹುದು. ಅದಕ್ಕಾಗಿ ನೀವು ಮನೆಯಲ್ಲಿ ಒಂದಿಷ್ಟು ನಗದು ಇರಿಸಿಕೊಳ್ಳುವುದು ಉತ್ತಮ. ಇದರೊಂದಿಗೆ ಮನೆಯಲ್ಲಿ ಬ್ಯಾಟರಿ, ಸುತ್ತಿಗೆ, ಇಕ್ಕಳ, ಕವರ್‌ಗಳು ಇಂತಹ ಒಂದಿಷ್ಟು ಅಗತ್ಯ ಸಲಕರಣೆಗಳನ್ನು ಕೂಡ ಇರಿಸಿಕೊಳ್ಳಬೇಕು.

ಮಾನಸಿಕ ಯೋಗಕ್ಷೇಮಕ್ಕೆ ಇವು ಜೊತೆ ಇರಲಿ

ಯುದ್ಧ, ಉದ್ವಿಗ್ನ ಪರಿಸ್ಥಿತಿ ಸಮಯದಲ್ಲಿ ಮನಸ್ಸು ಹದಗೆಡುವುದು ಸಹಜ. ಇಂತಹ ಸಮಯದಲ್ಲಿ ಮನಸ್ಸಿಗೆ ಹಿತ ನೀಡುವ ಕೆಲವು ಚಟುವಟಿಕೆಗಳನ್ನು ಮಾಡುತ್ತಿರಬೇಕು. ಈ ಸಮಯದಲ್ಲಿ ನಿಮ್ಮ ನೆಚ್ಚಿನ ಪುಸ್ತಕಗಳು, ಬರೆಯಲು ಡೈರಿ, ಬೇಸರವಾದಾಗ ಆಟವಾಡಲು ಲೊಡೋ, ಚೆಸ್‌ ಬೋರ್ಡ್‌ಗಳನ್ನು ಖರೀದಿಸಿ ತಂದಿಟ್ಟುಕೊಳ್ಳಿ. ಮಕ್ಕಳಿಗಾಗಿ ಒಂದಿಷ್ಟು ಆಟಿಕೆಗಳನ್ನು ಖರೀದಿಸಿ ತನ್ನಿ. ಇದರೊಂದಿಗೆ ದೇವರನ್ನು ನಂಬುವವರು ಹನುಮಾನ್ ಚಾಲಿಸಾ, ವಿಷ್ಣು ಸಹಸ್ರನಾಮದಂತಹ ಪುಸ್ತಕಗಳನ್ನು ಖರೀದಿ ಮಾಡಬಹುದು.

ಹೊರಗಡೆ ಆಶ್ರಯ ಪಡೆಯಲು ಈ ವಸ್ತುಗಳು ಬೇಕು

ಯುದ್ಧ ಪರಿಸ್ಥಿತಿಗಳು ಹೇಗಿರುತ್ತವೆ, ಯುದ್ಧ ನಡೆದರೆ ಏನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ಇಂತಹ ಸಂದರ್ಭಗಳಿಗೆ ಅನುಕೂಲವಾಗುವಂತೆ ನಿಮ್ಮನ್ನು ಬೆಚ್ಚಗಿಡಲು ಮತ್ತು ಮಲಗಲು ಬೇಕಾಗುವ ವಸ್ತುಗಳನ್ನು ಖರೀದಿಸಿ ತನ್ನಿ. ತುರ್ತು ಹೊದಿಕೆಗಳು, ಟೆಂಟ್‌, ಟಾರ್ಪಾಲಿನ್, ಛತ್ರಿ, ಹ್ಯಾಂಡ್ ಗ್ಲೌಸ್‌ ಇಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಇರಲಿ.

ಔಷಧಿ, ಮಾತ್ರೆಗಳು

ನೀವು ಪ್ರತಿನಿತ್ಯ ಔಷಧಿ, ಮಾತ್ರೆಗಳನ್ನು ಸೇವಿಸುವವರಾದರೆ ಎರಡು ಮೂರು ತಿಂಗಳಿಗಾಗುವಷ್ಟು ಔಷಧಿ, ಮಾತ್ರೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. ಇದು ಬಹಳ ಅವಶ್ಯ ಕೂಡ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.