ಕನ್ನಡ ಸುದ್ದಿ  /  ಜೀವನಶೈಲಿ  /  Ugadi Recipe: ಯುಗಾದಿ ಹಬ್ಬದೂಟಕ್ಕೆ ಮಾಡಿ ಮಾವಿನಕಾಯಿ ಚಿತ್ರಾನ್ನ, ಹತ್ತೇ ನಿಮಿಷಗಳಲ್ಲಿ ತಯಾರಾಗೋ ಸ್ಪೆಷಲ್‌ ರೆಸಿಪಿಯಿದು

Ugadi Recipe: ಯುಗಾದಿ ಹಬ್ಬದೂಟಕ್ಕೆ ಮಾಡಿ ಮಾವಿನಕಾಯಿ ಚಿತ್ರಾನ್ನ, ಹತ್ತೇ ನಿಮಿಷಗಳಲ್ಲಿ ತಯಾರಾಗೋ ಸ್ಪೆಷಲ್‌ ರೆಸಿಪಿಯಿದು

ಯುಗಾದಿ ಹಬ್ಬ ಬಂತೆಂದರೆ ಸಾಕು ಹಬ್ಬದಡುಗೆಯೇ ಬಹಳ ವಿಶೇಷವಾಗಿರುತ್ತದೆ. ಅದರಲ್ಲೂ ಮಾವಿನಕಾಯಿ ಚಿತ್ರಾನ್ನವಿಲ್ಲದೆ ಹಬ್ಬದ ಸಂಭ್ರಮವಿರದು. ಚಿತ್ರಾನ್ನಕ್ಕೂ ಯುಗಾದಿ ವಿಶೇಷ ನಂಟಿರುವುದು ಸುಳ್ಳಲ್ಲ. ಹತ್ತೇ ನಿಮಿಷಗಳಲ್ಲಿ ಸುಲಭವಾಗಿ ಮಾವಿನಕಾಯಿ ಚಿತ್ರಾನ್ನವನ್ನು ತಯಾರಿಸುವುದು ಹೇಗೆ ನೋಡಿ.

ಮಾವಿನಕಾಯಿ ಚಿತ್ರಾನ್ನ
ಮಾವಿನಕಾಯಿ ಚಿತ್ರಾನ್ನ

ಭಾರತದಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬಗಳನ್ನು ಅದ್ಧೂರಿತನವಿಲ್ಲದೇ ಹೋದರೂ ಸರಳವಾಗಿ ಸಿಹಿತಿಂಡಿಗಳನ್ನು ತಯಾರಿಸಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ, ತರಹೇವಾರಿ ಅಡುಗೆಗಳನ್ನು ಮಾಡಿಕೊಂಡು ಕುಟುಂಬದ ಸದಸ್ಯರೆಲ್ಲರೂ ಜೊತೆಗೆ ಕುಳಿತು ಊಟ ಮಾಡುವ ಸಂಭ್ರಮವನ್ನು ಹೇಳಿದಷ್ಟೂ ಕಡಿಮೆಯೇ.

ಟ್ರೆಂಡಿಂಗ್​ ಸುದ್ದಿ

ಪಂಚಾಗದ ಪ್ರಕಾರ ಹೊಸ ವರ್ಷದ ಆಚರಣೆ ಪ್ರಾರಂಭವಾಗುವುದು ಯುಗಾದಿ ಹಬ್ಬದಂದು. ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಇನ್ನುಳಿದಿರುವುದು ಬೆರಳೆಣಿಕೆಯಷ್ಟು ದಿನಗಳು ಮಾತ್ರ. ಅದಾಗಲೇ ಹಬ್ಬಕ್ಕೆ ತಯಾರಿಸಬೇಕಿರುವ ಅಡುಗೆಗಳೇನೆಂದು ಮನೆಯ ಹೆಣ್ಣಮಕ್ಕಳು ಪಟ್ಟಿ ಮಾಡೋದಿಕ್ಕೆ ಪ್ರಾರಂಭಿಸಿದ್ದಾರೆ. ಅದರಲ್ಲೂ ಮಾರುಕಟ್ಟೆಯಲ್ಲಿ ಈಗಾಗಲೇ ಹಸಿ ಮಾವಿನಕಾಯಿ ಲಭ್ಯವಿದ್ದು, ಯುಗಾದಿ ಹಬ್ಬಕ್ಕೆ ಮಾವಿನ ಚಿತ್ರಾನ್ನ ಮಾಡದಿದ್ದರೆ ಹೇಗೆ, ಅಲ್ವಾ? ಹಾಗಾದರೆ 10 ನಿಮಿಷದಲ್ಲಿ ಮಾವಿನಕಾಯಿ ಚಿತ್ರಾನ್ನ ತಯಾರಿಸುವುದು ಹೇಗೆ ಎನ್ನುವುದನ್ನು ನಾವು ನಿಮಗೆ ಕಲಿಸಿ ಕೊಡುತ್ತೇವೆ.

ಮಾವಿನಕಾಯಿ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ - 1 ತುರಿದಿಟ್ಟುಕೊಂಡದ್ದು, ಎಣ್ಣೆ - 5-6 ಚಮಚ, ಹಸಿಮೆಣಸಿನಕಾಯಿ - 7-8, ಕಡಲೆಕಾಯಿ ಬೀಜ - 4 ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಕರಿಬೇವಿನ ಸೊಪ್ಪು - ಸ್ವಲ್ಪ,

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಸಾಸಿವೆ, ಅರಿಶಿನ ಪುಡಿ, 1 ಚಮಚ ಜೀರಿಗೆ, 2 ಚಮಚ ಕಡ್ಲೆಬೇಳೆ, 2 ಚಮಚ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಬಾಣಲೆಗೆ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆಯನ್ನೂ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿಟ್ಟಕೊಂಡ ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಳ್ಳಿ. ಈಗ ಉಪ್ಪು ಸೇರಿಸಿ ತುರಿದಿಟ್ಟ ಮಾವಿನಕಾಯಿಯನ್ನು ಹಾಕಿ 1 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ನಂತರ ಅರಿಶಿನ ಪುಡಿ ಸೇರಿಸಿಕೊಳ್ಳಿ. ಇದು ಚೆನ್ನಾಗಿ ಮಿಶ್ರವಾದ ನಂತರ ಸ್ಟೌವ್‌ ಆಫ್‌ ಮಾಡಿ. ಈಗ ಚಿಕ್ಕ ಕಡಾಯಿಯಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಕಡ್ಲೆಬೀಜಗಳನ್ನು ಬಣ್ಣ ಬದಲುವಾಗ ತನಕ ಹುರಿದುಕೊಂಡು ಬಾಣಲೆಗೆ ಸೇರಿಸಿಕೊಂಡು ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಅರ್ಧ ಕೆಜಿಯಷ್ಟು ಉದುರುದುರಾಗಿ ಬೇಯಿಸಿಕೊಂಡಿರುವ ಅನ್ನವನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರ ಮಾಡಿಕೊಂಡರೆ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧವಾಗುತ್ತದೆ.

ಯುಗಾದಿ ಹಬ್ಬದಂದು ದೇವರಿಗೆ ನೈವೇದ್ಯಕ್ಕೆ ಮಾತ್ರವಲ್ಲದೆ ಹಬ್ಬದೂಟದಲ್ಲೂ ಬಹು ಬೇಡಿಕೆ ಹೊಂದಿರುವ ಮಾವಿನಕಾಯಿ ಚಿತ್ರಾನ್ನ ಮಾಡುವುದು ಬಹಳ ಸುಲಭ. ಉಪ್ಪು, ಹುಳಿ, ಖಾರ ಈ ಮೂರೂ ರುಚಿಗಳ ಮಿಶ್ರಣವಾಗಿರುವ ಮಾವಿನಕಾಯಿ ಚಿತ್ರಾನ್ನವನ್ನು 10 ನಿಮಿಷಗಳಲ್ಲಿ ತಯಾರಿಸಿಕೊಂಡು ಹಬ್ಬದ ಸಡಗರವನ್ನು ಇನ್ನೂ ಹೆಚ್ಚಿಸಿಕೊಳ್ಳಿ.