Ugadi Recipes: ಯುಗಾದಿ ಹಬ್ಬಕ್ಕೆ ಇಲ್ಲಿದೆ ನಿಮಗಾಗಿ 4 ಸ್ಪೆಷಲ್‌ ಹೋಳಿಗೆ ರೆಸಿಪಿಗಳು; ಕ್ಯಾರೆಟ್‌ ಹೋಳಿಗೆಯಿಂದ ಸೇಬು ಹೋಳಿಗೆವರೆಗೆ
ಕನ್ನಡ ಸುದ್ದಿ  /  ಜೀವನಶೈಲಿ  /  Ugadi Recipes: ಯುಗಾದಿ ಹಬ್ಬಕ್ಕೆ ಇಲ್ಲಿದೆ ನಿಮಗಾಗಿ 4 ಸ್ಪೆಷಲ್‌ ಹೋಳಿಗೆ ರೆಸಿಪಿಗಳು; ಕ್ಯಾರೆಟ್‌ ಹೋಳಿಗೆಯಿಂದ ಸೇಬು ಹೋಳಿಗೆವರೆಗೆ

Ugadi Recipes: ಯುಗಾದಿ ಹಬ್ಬಕ್ಕೆ ಇಲ್ಲಿದೆ ನಿಮಗಾಗಿ 4 ಸ್ಪೆಷಲ್‌ ಹೋಳಿಗೆ ರೆಸಿಪಿಗಳು; ಕ್ಯಾರೆಟ್‌ ಹೋಳಿಗೆಯಿಂದ ಸೇಬು ಹೋಳಿಗೆವರೆಗೆ

ಹಿಂದೂಗಳ ಹೊಸ ವರ್ಷ ಯುಗಾದಿಯಂದು ಬೇವು-ಬೆಲ್ಲ ತಿಂದು ಸಾಮರಸ್ಯದ ಮಾತುಗಳನ್ನಾಡುವ ಜೊತೆಗೆ ಬಗೆ ಬಗೆ ತಿನಿಸುಗಳನ್ನು ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು ವಾಡಿಕೆ. ಯುಗಾದಿಯಂದು ಹೋಳಿಗೆ ಮಾಡುವುದು ವಿಶೇಷ. ಈ ಬಾರಿ ನೀವು ಸ್ಪೆಷಲ್‌ ಹೋಳಿಗೆ ಮಾಡ್ಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 4 ಹಣ್ಣಿನ ಹೋಳಿಗೆ ರೆಸಿಪಿ.

ಯುಗಾದಿ ಹಬ್ಬಕ್ಕೆ ಸ್ಪೆಷಲ್‌ ಹೋಳಿಗೆ ರೆಸಿಪಿಗಳು
ಯುಗಾದಿ ಹಬ್ಬಕ್ಕೆ ಸ್ಪೆಷಲ್‌ ಹೋಳಿಗೆ ರೆಸಿಪಿಗಳು (Karnataka Tourism and HT)

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬದ ಆಚರಣೆ ಇದೆ. ವಿಕ್ರಮ ಸಂವತ್ಸರ ಮುಗಿದು ಕ್ರೋಧಿನಾಮ ಸಂವತ್ಸರಕ್ಕೆ ಕಾಲಿಡುವ ಈ ಶುಭ ಸಂದರ್ಭದಲ್ಲಿ ಹಬ್ಬದ ಸಡಗರ ಹೆಚ್ಚಲು ಬಗೆ ಬಗೆಯ ತಿನಿಸುಗಳು ಜೊತೆಯಾಗಿಲ್ಲ ಅಂದ್ರೆ ಹೇಗೆ ಅಲ್ವಾ? ಅದರಲ್ಲೂ ಒಬ್ಬಟ್ಟು ಅಥವಾ ಹೋಳಿಗೆ ಇಲ್ಲ ಅಂದ್ರೆ ಯುಗಾದಿ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ. ನೀವು ಈ ವರ್ಷದ ಯುಗಾದಿಗೆ ವಿಶೇಷವಾದ ಹೋಳಿಗೆಗಳನ್ನು ತಯಾರಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 4 ಹಣ್ಣಿನ ಹೋಳಿಗೆ ರೆಸಿಪಿಗಳು.

ಕ್ಯಾರೆಟ್‌ ಹೋಳಿಗೆ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು - 1ಕಪ್‌, ಚಿರೋಟಿ ರವೆ - 1/2ಕಪ್‌, ಅರಿಶಿನ - ಚಿಟಿಕೆ, ಕ್ಯಾರೆಟ್‌ - 1/2ಕಿಲೋ, ಬೆಲ್ಲ - 1/2ಕಪ್‌, ಬಾದಾಮಿ ಪುಡಿ - 2 ಚಮಚ, ಏಲಕ್ಕಿ ಪುಡಿ - 1/4 ಚಮಚ, ಎಣ್ಣೆ - 1/2ಕಪ್‌, ತುಪ್ಪ - ಹೋಳಿಗೆ ಜೊತೆ ಬಡಿಸಲು.

ತಯಾರಿಸುವ ವಿಧಾನ: ಮೊದಲು ಮೈದಾಹಿಟ್ಟಿಗೆ ಕಾಲು ಕಪ್‌ ಚಿರೋಟಿ ರವೆ, ಅರಿಶಿನ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೈದಾಹಿಟ್ಟಿನ ಮಿಶ್ರಣಕ್ಕೆ ಚೆನ್ನಾಗಿ ಎಣ್ಣೆ ಸವರಿ, ಮುಚ್ಚಳ ಮುಚ್ಚಿ ಬದಿಗೆ ಇರಿಸಿ. ಕ್ಯಾರೆಟ್‌ ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ, ನೀರು ಸೇರಿಸದೇ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಉಳಿದ ಚಿರೋಟಿ ರವೆಯನ್ನು ಘಮ್ಮನೆ ಪರಿಮಳ ಬರುವಂತೆ ಹುರಿದುಕೊಂಡು ಪ್ಲೇಟ್‌ನಲ್ಲಿ ಹಾಕಿಡಿ. ಅದೇ ಪಾತ್ರೆಗೆ ಒಂದೆರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ರುಬ್ಬಿಕೊಂಡು ಕ್ಯಾರೆಟ್‌ ಸೇರಿಸಿ ಹುರಿದುಕೊಳ್ಳಿ. ಕ್ಯಾರೆಟ್‌ ಬಣ್ಣ ಬದಲಾಗುತ್ತಿದ್ದಂತೆ, ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬೆಲ್ಲ ಚೆನ್ನಾಗಿ ಕರಗಿದಾಗ ಈ ಮಿಶ್ರಣ ದಪ್ಪಗಾಗಲು ಆರಂಭಿಸಿದಾಗ ಏಲಕ್ಕಿ ಪುಡಿ, ಬಾದಾಮಿ ಪುಡಿ, ಹುರಿದಿಟ್ಟುಕೊಂಡ ರವೆ ಸೇರಿಸಿ ಮಿಶ್ರಣ ಮಾಡಿ. ಈ ಎಲ್ಲವೂ ಚೆನ್ನಾಗಿ ಮಿಶ್ರಣ ಮಾಡಿ ಹೂರಣ ಸಿದ್ಧವಾದಾಗ ಸ್ಟೌವ್‌ ಆಫ್‌ ಮಾಡಿ ತಣ್ಣಗಾಗಲು ಬಿಡಿ.

ಮೊದಲೇ ತಯಾರಿಸಿಟ್ಟುಕೊಂಡ ಮೈದಾಹಿಟ್ಟಿನ ಮಿಶ್ರಣವನ್ನು ಒಮ್ಮೆ ನಾದಿಕೊಂಡು ಸ್ವಲ್ಪ ಭಾಗ ತೆಗೆದುಕೊಂಡು ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಕ್ಯಾರೆಟ್‌ ಹೂರಣವನ್ನು ಸಣ್ಣ ಉಂಡೆ ಮಾಡಿ ಪೂರಿ ಒಳಗೆ ಇರಿಸಿ, ಹೂರಣ ಹೊರಗೆ ಬಾರದಂತೆ ಸುತ್ತಲೂ ಕವರ್‌ ಮಾಡಿ. ನಂತರ ನಿಧಾನವಾಗಿ ಹೋಳಿಗೆ ಲಟ್ಟಿಸಿ. ಪ್ಯಾನ್‌ ಬಿಸಿಯಾದ ಮೇಲೆ ಸ್ವಲ್ಪ ತುಪ್ಪ ಹಾಕಿ ಹೋಳಿಗೆಯನ್ನು ಅದರ ಮೇಲೆ ಹಾಕಿ ಎರಡೂ ಕಡೆ ಬೇಯಿಸಿಕೊಳ್ಳಿ. ಈ ನಿಮ್ಮ ಮುಂದೆ ರುಚಿಯಾದ ಕ್ಯಾರೆಟ್‌ ಹೋಳಿಗೆ ತಿನ್ನಲು ಸಿದ್ಧ. ಇದನ್ನು ತುಪ್ಪದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮಾವಿನಹಣ್ಣಿನ ಹೋಳಿಗೆ

ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು- ಒಂದೂವರೆ ಕಪ್‌, ಉಪ್ಪು ರುಚಿಗೆ, ಅರಿಸಿನ- ಚಿಟಿಕೆ, ಎಣ್ಣೆ - 1 ಚಮಚ, ನೀರು - ಕಲೆಸಲು, ಚಿರೋಟಿ ರವೆ - 1 ಕಪ್‌(10 ನಿಮಿಷಗಳ ಕಾಲ ನೆನೆಸಿಡಿ), ತೆಂಗಿನತುರಿ - ಅರ್ಧ ಕಪ್‌, ಸಕ್ಕರೆ - 1ಕಪ್‌(ಸಿಹಿ ನಿಮ್ಮ ಹದಕ್ಕೆ), ಮಾವಿನಹಣ್ಣು - 2 ಮಧ್ಯಮ ಗಾತ್ರದ್ದು (ಸಿಪ್ಪೆ ತೆಗೆದು ಗೊರಟಿನಿಂದ ತಿರುಳನ್ನು ಬೇರ್ಪಡಿಸಿ ಇಟ್ಟುಕೊಳ್ಳಿ), ತುಪ್ಪ - ಸವರಲು.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಉಪ್ಪು, ಅರಿಸಿನ ಹಾಗೂ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಹದಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ನಾದಿ. ಹೋಳಿಗೆ ಹಿಟ್ಟಿನ ಹದಕ್ಕೆ ಮೈದಾಹಿಟ್ಟಿನ ಮಿಶ್ರಣವನ್ನು ಕಲೆಸಿಡಿ. ಈಗ ನೆನೆಸಿದ ಚಿರೋಟಿ ರವೆ ಹಾಗೂ ತೆಂಗಿನತುರಿಯನ್ನು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ, ನಂತರ ಅದೇ ಮಿಕ್ಸಿನಲ್ಲಿ ಮಾವಿನಹಣ್ಣಿನ ತಿರುಳನ್ನು ರುಬ್ಬಿ. ಈ ಎರಡನ್ನೂ ಮಿಶ್ರಣ ಮಾಡಿ, ದಪ್ಪ ತಳದ ಪಾತ್ರೆಗೆ ಹಾಕಿ ಸ್ಟೌ ಮೇಲಿರಿಸಿ. ಅದಕ್ಕೆ ಏಲಕ್ಕಿ ಪುಡಿ ಹಾಗೂ ಸಕ್ಕರೆ ಸೇರಿಸಿ ಕೈಯಾಡಿಸುತ್ತಲೇ ಇರಿ. ಈ ಮಿಶ್ರಣ ಒಂದು ಹದಕ್ಕೆ ಬಂದ ಸ್ಟೌ ಆಫ್‌ ಮಾಡಿ. ಇದನ್ನು ಬಿಸಿ ಇರುವಾಗಲೇ ಉಂಡೆ ಮಾಡಿ ಇರಿಸಿಕೊಳ್ಳಿ. ನಂತರ ಕಲೆಸಿಟ್ಟುಕೊಂಡ ಮೈದಾಹಿಟ್ಟನ್ನು ಅಂಗೈ ಗಾತ್ರಕ್ಕೆ ತಟ್ಟಿಕೊಂಡು ಈ ಉಂಡೆಗಳನ್ನು ಅದರಲ್ಲಿ ಇಟ್ಟು ಲಟ್ಟಿಸಿ. ತವಾದ ಮೇಲೆ ತುಪ್ಪ ಸವರಿ ಎರಡೂ ಕಡೆ ಬೇಯಿಸಿ.

ಸ್ಟ್ರಾಬೆರಿ ಹೋಳಿಗೆ

ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು - ಒಂದೂವರೆ ಕಪ್‌, ಎಣ್ಣೆ - 1 ಚಮಚ, ಅರಿಸಿನ- ಚಿಟಿಕೆ, ಉಪ್ಪು - ಚಿಟಿಕೆ, ಸಕ್ಕರೆ - 1ಕಪ್‌, ರವೆ- ಅರ್ಧ ಕಪ್‌, ಸ್ಟ್ರಾಬೆರಿ - 1ಕಪ್‌, ಸ್ಟ್ರಾಬೆರಿ ಪ್ಲೇವರ್‌ - ಚಿಟಿಕೆ, ಏಲಕ್ಕಿ ಪುಡಿ - ಚಿಟಿಕೆ, ತುಪ್ಪ - ಸವರಲು

ತಯಾರಿಸುವ ವಿಧಾನ: ಮೈದಾಹಿಟ್ಟು, ಎಣ್ಣೆ, ಅರಿಸಿನ ಹಾಗೂ ಉಪ್ಪು ಈ ಎಲ್ಲವನ್ನೂ ಮಿಶ್ರಣ ಮಾಡಿ. ಅದಕ್ಕೆ ನೀರು ಸೇರಿಸಿ ಹೋಳಿಗೆ ಹಿಟ್ಟನ್ನು ತಯಾರಿಸಿ. ಇದನ್ನು ಗಂಟೆಗಳ ಕಾಲ ಹಾಗೆ ಇಡಿ.

ದಪ್ಪ ತಳದ ಪಾತ್ರೆಯನ್ನು ಸ್ಟೌ ಮೇಲಿಡಿ. ಅದಕ್ಕೆ 1 ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ರವೆಯನ್ನು ಹಾಕಿ ಹುರಿದುಕೊಳ್ಳಿ. ರವೆ ಪರಿಮಳ ಬರುವವರೆಗೂ ಹುರಿಯಬೇಕು, ನಂತರ ಅದನ್ನು ತೆಗೆದಿರಿಸಿ. ಅದೇ ಪಾತ್ರಕ್ಕೆ ಪುನಃ 1 ಚಮಚ ತುಪ್ಪ ಹಾಕಿ ತೊಳೆದು ಕತ್ತರಿಸಿಕೊಂಡ ಸ್ಟ್ರಾಬೆರಿ ಸೇರಿಸಿ. ಸ್ಟ್ರಾಬೆರಿ ಮೃದುವಾಗುವವರೆಗೂ ಕೈಯಾಡಿಸಿ. ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಲು ಬಿಡಿ. ಸಕ್ಕರೆ ಸಂಪೂರ್ಣ ಕರಗಿದ ಮೇಲೆ ಅದಕ್ಕೆ ಹುರಿದುಕೊಂಡ ರವೆ ಹಾಕಿ ಗಂಟಿಲ್ಲದಂತೆ ತಿರುವಿ. ಅದಕ್ಕೆ ಏಲಕ್ಕಿ ಪುಡಿ ಹಾಗೂ ಸ್ಟ್ರಾಬೆರಿ ಎಸೆನ್ಸ್‌ ಸೇರಿಸಿ, ಈ ಎಲ್ಲವೂ ಪಾಕ ಆಗುವವರೆಗೂ ಕೈಯಾಡಿಸಿ. ಕೈಗೆ ಅಂಟದಂತೆ ನೋಡಿಕೊಳ್ಳಿ. ನಂತರ ಸ್ಟೌ ಆರಿಸಿ. ಬಿಸಿ ಇರುವಾಗಲೇ ಉಂಡೆ ಮಾಡಿ ಇಡಿ. ಹೋಳಿಗೆ ಹಿಟ್ಟನ್ನು ಉಂಡೆ ಮಾಡಿ, ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಸ್ಟ್ರಾಬೆರಿ ಉಂಡೆ ಇರಿಸಿ, ಸಂಪೂರ್ಣ ಕವರ್‌ ಮಾಡಿ, ನಂತರ ಹರಿಯದಂತೆ ಲಟ್ಟಿಸಿ. ನಂತರ ಪಾನ್‌ಗೆ ತುಪ್ಪ ಸವರಿ ಎರಡೂ ಕಡೆ ಬೇಯಿಸಿ.

ಸೇಬುಹಣ್ಣಿನ ಹೋಳಿಗೆ

ಬೇಕಾಗುವ ಸಾಮಗ್ರಿಗಳು: ಸೇಬುಹಣ್ಣು - 2 ರಿಂದ 3, ಸಕ್ಕರೆ - ಅರ್ಧ ಕಪ್‌, ಕೋವಾ - 200ಗ್ರಾಂ, ಏಲಕ್ಕಿ ಪುಡಿ- ಚಿಟಿಕೆ, ಮೈದಾಹಿಟ್ಟು - ಕಾಲು ಕೆಜಿ, ಅರಿಸಿನ - ಚಿಟಿಕೆ, ತುಪ್ಪ - 2 ಟೀ ಚಮಚ, ಉಪ್ಪು - ರುಚಿಗೆ, ನೀರು - ಹದಕ್ಕೆ, ಕಾಯಿಸಲು - ತುಪ್ಪ (ತುಪ್ಪ ಸೇರದವರು ಎಣ್ಣೆ ಬಳಸಬಹುದು).

ತಯಾರಿಸುವ ವಿಧಾನ: ಮೊದಲು ಕಣಕ ತಯಾರಿಸಿಕೊಳ್ಳಿ. ಒಂದು ಪಾತ್ರೆಗೆ ಮೈದಾಹಿಟ್ಟು, ಚಿಟಿಕೆ ಅರಿಸಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಹೋಳಿಗೆಗೆ ಉಪ್ಪು ಹೆಚ್ಚು ಹಾಕಬಾರದು. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮಿಶ್ರಣ ಮಾಡುತ್ತಿರಿ. ನಂತರ ಚೆನ್ನಾಗಿ ಮಿಶ್ರಣ ಮಾಡಿ ಕಣಕ ತಯಾರಿಸಿ, ಅದರ ಸುತ್ತಲ್ಲೂ ಎಣ್ಣೆ ಸವರಿ ಮುಚ್ಚಿಡಿ.

ಈಗ ಸೇಬುಹಣ್ಣನ್ನು ಸಿಪ್ಪೆ ತೆಗೆದು ತಿರುಳನ್ನು ಚೆನ್ನಾಗಿ ಸ್ಮ್ಯಾಶ್‌ ಮಾಡಿ ಇಟ್ಟುಕೊಂಡಿರಿ. ಬಾಟಲೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ತುರಿದಿಟ್ಟುಕೊಂಡ ಅಥವಾ ಸ್ಮ್ಯಾಶ್‌ ಮಾಡಿಟ್ಟಕೊಂಡು ಸೇಬುಹಣ್ಣನ್ನು ಹಾಕಿ, ಚೆನ್ನಾಗಿ ಬಾಡಿಸಿ. ಅದಕ್ಕೆ ಸಕ್ಕರೆ ಹಾಕಿ, ಕರಗುವವರೆಗೂ ಕೈಯಾಡಿಸಿ. ಈ ಪಾಕವು ಗಟ್ಟಿಯಾಗುತ್ತ ಬರುವಾಗ ಏಲಕ್ಕಿ ಪುಡಿ ಸೇರಿಸಿ. ನಂತರ ಪುಡಿ ಮಾಡಿಟ್ಟುಕೊಂಡು ಕೋವಾವನ್ನು ಅದೇ ಮಿಶ್ರಣ ಸೇರಿಸಿ. ಈ ಎಲ್ಲವನ್ನೂ ಗಟ್ಟಿಯಾಗಿ ಉಂಡೆ ಮಾಡುವ ಹದಕ್ಕೆ ಬಂದಾಗ ಸ್ಟೌ ಆಫ್‌ ಮಾಡಿ ಕೆಳಗಿರಿಸಿ.

ಮೊದಲೇ ತಯಾರಿಸಿಟ್ಟುಕೊಂಡ ಕಣಕವನ್ನು ಉಂಡೆ ಮಾಡಿಕೊಂಡು ಅದನ್ನು ಪೂರಿ ಹಿಟ್ಟಿನ ಆಕಾರಕ್ಕೆ ಒತ್ತಿಕೊಳ್ಳಿ. ಅದರೊಳಗೆ ಸೇಬು ಹಣ್ಣಿನ ಹೂರಣ ಇರಿಸಿ. ಸುತ್ತಲೂ ಚೆನ್ನಾಗಿ ಕವರ್‌ ಮಾಡಿ, ಹೋಳಿಗೆ ಲಟ್ಟಿಸಿಕೊಳ್ಳಿ. ಪ್ಯಾನ್‌ ಬಿಸಿಗಿಟ್ಟು ತುಪ್ಪ ಅಥವಾ ಎಣ್ಣೆ ಹಾಕಿ ಹೋಳಿಗೆಯನ್ನು ಎರಡೂ ಬದಿ ಕಾಯಿಸಿ. ಈಗ ನಿಮ್ಮ ಮುಂದೆ ಸೇಬುಹಣ್ಣಿನ ಹೋಳಿಗೆ ತಿನ್ನಲು ಸಿದ್ಧ.

Whats_app_banner