ರಾಮಾಯಣ: ದಶರಥನಿಗೆ ಪುತ್ರಕಾಮೇಷ್ಟಿ ಯಾಗದಿಂದ ಮನೋಭಿಷ್ಟ ಪ್ರಾಪ್ತಿ; ಯಜ್ಞಕುಂಡದಿಂದ ಮಹಾಪುರುಷನೊಬ್ಬ ಎದ್ದು ನಿಲ್ಲುವ ಕಥೆ ತಿಳಿಯಿರಿ
Ramayana Story: ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಹಿಂದೂಗಳಿಗೆ ಪವಿತ್ರ ಗ್ರಂಥಗಳಲ್ಲಿ ಒಂದಾಗಿದ್ದು, ಇದರಲ್ಲಿ ಮನುಷ್ಯನ ಜೀವನಕ್ಕೆ ಸಂಬಂಸಿದ ಸ್ಫೂರ್ತಿಯಾಗುವ ಕಥೆಗಳಿವೆ. ರಾಮಾಯಣದ ಮುಂದುವರಿದ ದಶರಥನಿಗೆ ಪುತ್ರಕಾಮೇಷ್ಟಿ ಯಾಗದಿಂದ ಮನೋಭಿಷ್ಟ ಪ್ರಾಪ್ತಿದ ಬಗ್ಗೆ ಇಲ್ಲಿ ನೀಡಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)
ರಾಮಾಯಣದ ಮುಂದುವರಿದ ಭಾಗದಲ್ಲಿ ದಶರಥನು ದಾನ ಮಾಡುವ ಮೂಲಕ ಅಶ್ವಮೇಧ ಯಾಗವನ್ನು ಪೂರ್ಣಗೊಳಿಸುತ್ತಾನೆ. ವಸಿಷ್ಠರ ಆದಿಯಾಗಿ ಆಗಮಿಸಿದ ಎಲ್ಲರೂ ತೃಪ್ತಿಯಿಂದ ರಾಜನನ್ನು ಆಶೀರ್ವದಿಸುತ್ತಾರೆ. ನಿನ್ನ ಈ ಯಾಗವು ಹಿಂದೆ ಮಾಡಿರುವ ಪಾಪ ಕರ್ಮಗಳಿಂದ ಮುಕ್ತಿ ನೀಡುತ್ತದೆ. ಆದರೆ ಋಷ್ಯಶೃಂಗರ ಆದೇಶದಂತೆ ಪುತ್ರಪ್ರಾಪ್ತಿಗೆ ಸಹಕಾರಿಯಾಗುವ ಪುತ್ರಕಾಮೇಷ್ಠಿ ಯಾಗವನ್ನು ಮಾಡಲು ನಿರ್ಧರಿಸುತ್ತಾರೆ. ಇದೇ ವೇಳೆಯಲ್ಲಿ ಬ್ರಹ್ಮದೇವನ ವರಪ್ರಸಾದದಿಂದ ಜನಿಸಿದ ರಾವಣನೆಂಬ ರಾಕ್ಷಸನು ದೇವಾನುದೇವತೆಗಳನ್ನು ಪೀಡಿಸುತ್ತಾ ಇರುತ್ತಾನೆ. ಇವನನ್ನು ಅಂತ್ಯಗೊಳಿಸಲು ಪಂಚಭೂತಗಳಿಂದಲೂ ಸಾಧ್ಯವಾಗುವುದಿಲ್ಲ. ಆಗ ಬ್ರಹ್ಮದೇವನಿಗೆ ರಾವಣನ ಅಂತ್ಯವು ಒಬ್ಬ ಮಾನವನಿಂದ ಆಗುತ್ತದೆ ಎಂದು ಗೋಚರವಾಗುತ್ತದೆ. ಬ್ರಹ್ಮದೇವನು ದಶರಥನ ಪುತ್ರಕಾಮೇಷ್ಠಿಯಾಗವನ್ನು ರಾವಣನ ಸಂಹಾರಕ್ಕೆ ಬಳಸಿಕೊಳ್ಳಲು ತಿರ್ಮಾನಿಸುತ್ತಾನೆ.
ಭಗವಾನ್ ವಿಷ್ಣುವನ್ನು ಕುರಿತು ನಿನ್ನಿಂದ ಈಗ ಲೋಕ ಕಲ್ಯಾಣವಾಗುವ ಕೆಲಸವೊಂದು ನಡೆಯಬೇಕಿದೆ. ದಶರಥನ ಮಡದಿಯರಾದ ಕೌಸಲ್ಯ, ಕೈಕೇಯಿ ಮತ್ತು ಸುಮಿತ್ರೆಯರೆಂಬ ಮಡದಿಯರು ಇದ್ದಾರೆ. ಈ ಮೂವರ ಗರ್ಭದಲ್ಲಿ ನಿನ್ನ ಆತ್ಮವನ್ನು ನಾಲ್ಕು ಪ್ರಕಾರವಾಗಿ ವಿಂಗಡಿಸಿಕೊಂಡು ಜನ್ಮ ತಾಳು. ನಿನ್ನಿಂದಲೇ ಇಡೀ ಲೋಕಕ್ಕೆ ಕಂಟಕಪ್ರಾಯನಾದ ರಾವಣನ ಅವಸಾನವಾಗಬೇಕಾಗಿದೆ ಎಂದು ಹೇಳುತ್ತಾನೆ. ಆಗ ಭಗವಾನ್ ವಿಷ್ಣುವು ನೀವು ಭಯಪಡುವ ಅಗತ್ಯವಿಲ್ಲ. ಲೋಕಕಲ್ಯಾಣಕ್ಕಾಗಿ ಭೂಲೋಕದಲ್ಲಿ ನಾನು ಮನುಷ್ಯನಾಗಿ ಜನಿಸಲು ಸಿದ್ಧನಿದ್ದೇನೆ. ಅತಿಯಾದ ಸ್ವಾರ್ಥಿಯಾದ ಕ್ರೂರಿಯಾದ ರಾವಣನ ಸಂಹಾರದ ನಂತರ ಮತ್ತೆ ನನ್ನ ಲೋಕಕ್ಕೆ ಮರಳುತ್ತೇನೆ ಎಂದು ತಿಳಿಸುತ್ತಾನೆ.
ರಾವಣ ಮತ್ತು ಕುಂಭಕರ್ಣರ ಸಂಹಾರಕ್ಕಾಗಿ ಭಗವಾನ್ ವಿಷ್ಣು ಭೂಲೋಕದಲ್ಲಿ ಜನಿಸುವ ವಿಚಾರವು ಎಲ್ಲರಿಗೂ ತಿಳಿಯುತ್ತದೆ. ಇದರಿಂದ ದೇವಾನುದೇವತೆಗಳು, ಋಷಿ ಮುನಿಗಳು, ಅಪ್ಸರೆಯರು ಸಂತಸಗೊಳ್ಳುತ್ತಾರೆ. ದಶರಥನನ್ನು ಒಪ್ಪಿಕೊಂಡು ಭೂಲೋಕದಲ್ಲಿ ವಿಷ್ಣು ಜನಿಸುವ ವೇಳೆಯೂ ಸನ್ನಿಹತವಾಗುತ್ತದೆ. ದಶರಥ ಮಹಾರಾಜನು ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಟಿಯಾಗವನ್ನು ಆರಂಭಿಸುತ್ತಾನೆ. ಆ ವೇಳೆಯಲ್ಲಿ ಯಜ್ಞಕುಂಡದ ಒಳಗಿನಿಂದ ಅಪಾರವಾದ ತೇಜಸ್ಸನ್ನು ಹೊಂದಿರುವ ಮಹಾಪುರುಷನೊಬ್ಬನು ಎದ್ದು ನಿಲ್ಲುತ್ತಾನೆ. ದಶರಥನನ್ನು ಕುರಿತು ಅವನು ನನ್ನನ್ನು ಪ್ರಜಾಪತಿಯು ಕಳುಹಿಸಿದ್ದಾನೆ ಎಂದು ತಿಳಿಸುತ್ತಾನೆ. ಆಗ ಭಯ ಭಕ್ತಿ ವಿನಯದಿಂದ ನಿನಗಾಗಿ ನಾನು ಏನು ಮಾಡಬೇಕು ಎಂದು ದಶರಥನು ಕೇಳುತ್ತಾನೆ.
ಆಗ ಅವನು ನಿನ್ನ ಆರಾಧನೆಯನ್ನು ಮೆಚ್ಚಿ ದೇವತೆಗಳು ತಾವೇ ಸಿದ್ದಪಡಿಸಿದ ಪಾಯಸವನ್ನು ನೀಡಿದ್ದಾರೆ. ಈ ಪಾಯಸವನ್ನು ನಿನ್ನ ಪತ್ನಿಯರಿಗೆ ಸೇವಿಸುವಂತೆ ಹೇಳಿ.ಇದರಿಂದಾಗಿ ನಿನಗೆ ಪುತ್ರ ಭಾಗ್ಯ ಲಭಿಸುತ್ತದೆ. ಹೀಗೆಂದು ಹೇಳಿ ಪಾಯಸವಿದ್ದ ಪಾತ್ರೆಯನ್ನು ದಶರಥನಿಗೆ ನೀಡುತ್ತಾನೆ. ಆನಂತರ ಅಗ್ನಿಕುಂಡದಲ್ಲಿಯೇ ಮರೆಯಾಗುತ್ತಾನೆ.
ಇದರಿಂದ ಸಂತಸಗೊಂಡ ದಶರಥನು ಪಾಯಸವನ್ನು ತನ್ನ ಹಿರಿಯ ಪತ್ನಿಯಾದ ಕೌಸಲ್ಯಗೆ ನೀಡಿ ಇದನ್ನು ಸ್ವೀಕರಿಸುವಂತೆ ತಿಳಿಸುತ್ತಾನೆ. ಅದನ್ನು ಒಪ್ಪದ ಕೌಶಲ್ಯ ಇದನ್ನು ಸಮಭಾಗವನ್ನು ಮಾಡಿ ಉಳಿದ ಇಬ್ಬರಿಗೂ ನೀಡಲು ವಿನಂತಿಸಿಕೊಳ್ಳುತ್ತಾಳೆ. ಆಗ ದಶರಥನು ಪಾಯಸವನ್ನು ಕೌಸಲ್ಯಗೆ ಅದರ ಅರ್ಧ ಭಾಗವನ್ನು ನೀಡುತ್ತಾನೆ. ಉಳಿದ ಅರ್ಧ ಭಾಗವನ್ನು ಎರಡು ಸಮಭಾಗವನ್ನಾಗಿ ಮಾಡಿ ಅದರ ಒಂದು ಭಾಗವನ್ನು ಸುಮಿತ್ರೆಗೆ ನೀಡುತ್ತಾನೆ.
ಉಳಿದ ಪಾಯಸವನ್ನು ಮತ್ತೆ ಎರಡು ಭಾಗವನ್ನಾಗಿ ಮಾಡಿ ಅದರ ಒಂದು ಭಾಗವನ್ನು ಕೈಕೇಯಿಗೆ ನೀಡುತ್ತಾನೆ. ಉಳಿದ ಭಾಗವನ್ನು ಸೇವಿಸಲೆಂದು ಸುಮಿತ್ರೆಗೆ ನೀಡುತ್ತಾನೆ. ಇದರಿಂದ ದಶರಥನ ರಾಣಿಯರು ಸಂತಸ ಗೊಳ್ಳುತ್ತಾರೆ. ಈ ಪಾಯಸವನ್ನು ಸೇವಿಸಿದ ನಂತರ ದಶರಥನ ಪತ್ನಿಯರು ಗರ್ಭಿಣಿಯರಾಗುತ್ತಾರೆ. ಇದನ್ನು ತಿಳಿದ ದಶರಥನು ಸಂತಸ ಗೊಳ್ಳುತ್ತಾನೆ. ಸೂರ್ಯನಂತೆ ತೇಜಸ್ಸು ಗರ್ಭಿಣಿಯರಲ್ಲಿ ಮೂಡುತ್ತದೆ. ಈ ರೀತಿ ಪುತ್ರಕಾಮೇಷ್ಠಿಯಾಗದ ಫಲವನ್ನು ಮಹಾರಾಜನು ಪಡೆಯುತ್ತಾನೆ.