ಮಹಾಭಾರತ: ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮಾಡಿದ್ದು ಯಾಕೆ? ಅಂಬಾಲಿಕೆ, ಅಂಬಿಕೆ ಸ್ವಯಂವರದಲ್ಲಿ ಭೀಷ್ಮನ ಪ್ರವೇಶ ಪ್ರಸಂಗ ಓದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಾಭಾರತ: ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮಾಡಿದ್ದು ಯಾಕೆ? ಅಂಬಾಲಿಕೆ, ಅಂಬಿಕೆ ಸ್ವಯಂವರದಲ್ಲಿ ಭೀಷ್ಮನ ಪ್ರವೇಶ ಪ್ರಸಂಗ ಓದಿ

ಮಹಾಭಾರತ: ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮಾಡಿದ್ದು ಯಾಕೆ? ಅಂಬಾಲಿಕೆ, ಅಂಬಿಕೆ ಸ್ವಯಂವರದಲ್ಲಿ ಭೀಷ್ಮನ ಪ್ರವೇಶ ಪ್ರಸಂಗ ಓದಿ

ಮಹಾಭಾರತ ಧಾರ್ಮಿಕ ಹಾಗೂ ಪೌರಾಣಿಯ ಮಹಾಕಾವ್ಯಗಳಲ್ಲಿ ಒಂದು. ಕುರುಕ್ಷೇತ್ರದದ ಯುದ್ಧ ಹಾಗೂ ನಂತರ ಘಟನೆಗಳನ್ನು ಮಹಾಭಾರತದಲ್ಲಿ ವಿವರಿಸಲಾಗಿದೆ. ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮಾಡಿದ್ದು ಯಾಕೆ ಎಂಬುದನ್ನು ಈ ಭಾಗದಲ್ಲಿ ವಿವರಿಸಲಾಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮತ್ತು ಅಂಬಾಲಿಕೆ, ಅಂಬಿಕೆ ಸ್ವಯಂವರದ ಪ್ರಸಂಗವನ್ನು ತಿಳಿಯಿರಿ.
ಭೀಷ್ಮನನ್ನು ಕೊಲ್ಲಲು ಅಂಬೆ ಪ್ರತಿಜ್ಞೆ ಮತ್ತು ಅಂಬಾಲಿಕೆ, ಅಂಬಿಕೆ ಸ್ವಯಂವರದ ಪ್ರಸಂಗವನ್ನು ತಿಳಿಯಿರಿ.

ಮಹಾಭಾರತದ ಮುಂದುವರಿದ ಭಾಗದಲ್ಲಿ ಯೋಜನಗಂಧಿಯ ಹೆಸರು ಸತ್ಯವತಿ. ಶಂತನು ಸತ್ಯವತಿಯನ್ನು ವಿವಾಹವಾದ ನಂತರ ಅವನ ಜೀವನದಲ್ಲಿ ಮತ್ತೊಮ್ಮೆ ಸಂತಸ ಮತ್ತು ಕೆಲಸದ ಜವಾಬ್ದಾರಿಯು ಹೆಚ್ಚುತ್ತದೆ. ಆದರೆ ಆ ಸಂತೋಷ ಬಹುಕಾಲ ಉಳಿಯುವುದಿಲ್ಲ. ಸತ್ಯವತಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯರೆಂಬ ಇಬ್ಬರು ಮಕ್ಕಳ ಜನನವಾಗುತ್ತದೆ. ಇವರು ಚಿಕ್ಕವರಾಗಿರುವಾಗಲೇ ಶಂತನು ಇಹಲೋಕವನ್ನು ತ್ಯಜಿಸುತ್ತಾನೆ. ಈ ಕಾರಣದಿಂದಾಗಿ ಸತ್ಯವತಿಯ ಮಕ್ಕಳನ್ನು ಕಾಪಾಡುವ ಹೊರೆಯು ಭೀಷ್ಮನ ಪಾಲಾಗುತ್ತದೆ. ಚಿತ್ರಾಂಗದ ಎಂಬ ಗಂಧರ್ವನೊಬ್ಬ ಇರುತ್ತಾನೆ. ತನ್ನದೇ ಹೆಸರಿನ ಇನ್ನೊಬ್ಬ ಇರುವುದು ಅವನಿಗೆ ಇಷ್ಟವಾಗುವುದಿಲ್ಲ. ಈ ಕಾರಣದಿಂದಾಗಿ ಸತ್ಯವತಿಯ ಮಗ ಚಿತ್ರಾಂಗದನನ್ನು ಯುದ್ಧದಲ್ಲಿ ಹತ್ಯೆ ಮಾಡುತ್ತಾನೆ. ಕ್ಷಣಕಾಲ ವಿಚಲಿತನಾದರೂ ತಡಮಾಡದೆ ಭೀಷ್ಮನು ವಿಚಿತ್ರವೀರ್ಯನಿಗೆ ರಾಜ್ಯಭಾರದ ಜವಾಬ್ದಾರಿಯನ್ನು ವಹಿಸುತ್ತಾನೆ. ಭೀಷ್ಮನ ಸಹಾಯದಿಂದ ರಾಜ್ಯಭಾರವನ್ನು ಯಶಸ್ವಿಯಾಗಿ ಮಾಡುತ್ತಿರುತ್ತಾನೆ.

ಕಾಶಿರಾಜನಿಗೆ ಅಂಬೆ, ಅಂಬಾಲಿಕೆ ಮತ್ತು ಅಂಬಿಕೆಯರೆಂಬ ಮೂವರು ಹೆಣ್ಣು ಮಕ್ಕಳಿರುತ್ತಾರೆ. ಮದುವೆಯ ವಯಸ್ಸಾದ ಕಾರಣ ಅವರಿಗೆ ಸ್ವಯಂವರವನ್ನು ಏರ್ಪಡಿಸುತ್ತಾನೆ. ಉತ್ತಮ ಯುದ್ಧದ ಕೌಶಲ್ಯ ಉಳ್ಳವರಿಗೆ ತನ್ನ ಮಕ್ಕಳನ್ನು ಕೊಟ್ಟು ವಿವಾಹ ಮಾಡುತ್ತೇನೆ ಎಂದು ಕಾಶಿರಾಜನು ಡಂಗುರ ಸಾರಿಸುತ್ತಾನೆ. ಇವನ ಆಮಂತ್ರಣಕ್ಕೆ ಓಗೊಟ್ಟು ನೂರಾರು ರಾಜ ಮಹಾರಾಜರು ಸ್ವಯಂವರಕ್ಕೆ ಆಗಮಿಸುತ್ತಾರೆ.

ಕೆಲವು ರಾಜಕೀಯ ಕಾರಣಗಳಿಂದ ಹಸ್ತಿನಾವತಿಗೆ ಸ್ವಯಂವರದ ಆಮಂತ್ರಣ ತಲುಪುವುದಿಲ್ಲ. ಆದರೆ ಗೂಢಚಾರಿಗಳಿಂದ ಈ ವಿಚಾರವು ಭೀಷ್ಮನಿಗೆ ತಿಳಿಯುತ್ತದೆ. ಮನಸ್ಸಿನ ಬೇಸರವನ್ನು ಬದಿಗಿಟ್ಟು ಭೀಷ್ಮನು ಸ್ವಯಂವರಕ್ಕೆ ತೆರಳುತ್ತಾನೆ. ಭೀಷ್ಮನ ಆಗಮನವನ್ನು ಕಂಡು ರಾಜಾಧಿರಾಜರು ಶರಣಾಗುತ್ತಾರೆ. ಭೀಷ್ಮನು ಎಲ್ಲರಿಗೂ ಕೇಳುವಂತೆ ಯಾವುದೇ ರಾಜನಾದರೂ ನನ್ನನ್ನು ಸೋಲಿಸಿ ಕಾಶೀರಾಜನ ಮಕ್ಕಳನ್ನು ವಿವಾಹವಾಗಬಹುದು ಎಂದು ಹೇಳುತ್ತಾನೆ. ಕೇವಲ ಸಾಲ್ವ ಎಂಬ ಮಹಾರಾಜನು ಭೀಷ್ಮನೊಂದಿಗೆ ಯುದ್ಧ ಮಾಡಿ ಸೋಲುತ್ತಾನೆ. ಉಳಿದವರಾರು ಭೀಷ್ಮನನ್ನುಎದುರಿಸಲು ಧೈರ್ಯ ಮಾಡುವುದಿಲ್ಲ.

ಮದುವೆ ವಿಚಾರದಲ್ಲಿ ಅಂಬೆಯು ಭೀಷ್ಮನ ಮಾತಿಗೆ ಒಪ್ಪುವುದಿಲ್ಲ ಯಾಕೆ?

ಭೀಷ್ಮನು ಕಾಶಿರಾಜನ ಮಕ್ಕಳನ್ನು ಕುರಿತು ನಾನು ಆಜನ್ಮ ಬ್ರಹ್ಮಚಾರಿ. ವ್ರತದಲ್ಲಿದ್ದೇನೆ. ಭೂಮಿಯ ಮೇಲಿರುವ ಪ್ರತಿಯೊಬ್ಬ ನಾರಿಯು ನನ್ನ ತಾಯಿಗೆ ಸಮಾನ ಎಂಬ ಶಪಥವನ್ನು ಮಾಡಿದ್ದೇನೆ. ಆದ್ದರಿಂದ ನೀವು ನನ್ನೊಡನೆ ಬಂದು ನನ್ನ ಸೋದರನಾದ ವಿಚಿತ್ರವೀರ್ಯನನ್ನು ವರಿಸಬೇಕು. ಈ ಮೂಲಕ ಚಂದ್ರ ವಂಶದ ಗೌರವವನ್ನು ಬೆಳೆಸಬೇಕು ಎಂದು ಕೋರಿದನು. ಅಂಬಿಕೆ ಮತ್ತು ಅಂಬಾಲಿಕೆಯರು ಭೀಷ್ಮನ ಸೋದರನನ್ನು ವಿವಾಹವಾಗಲು ಒಪ್ಪುತ್ತಾರೆ. ಆದರೆ ಅಂಬೆಯು ಮಾತ್ರ ಭೀಷ್ಮನ ಮಾತಿಗೆ ಒಪ್ಪಿಗೆ ಸೂಚಿಸುವುದಿಲ್ಲ. ಭೀಷ್ಮನಿಗೆ ಇದೊಂದು ಬಿಡಿಸಲಾಗದ ಸಮಸ್ಯೆಯಾಗುತ್ತದೆ.

ಅಂಬೆಯು ಭೀಷ್ಮನನ್ನು ಕುರಿತು ನನ್ನ ಸೋದರಿಯರಂತೆ ನಾನು ನಿನ್ನ ಸೋದರನನ್ನು ವಿವಾಹವಾಗಲಾರೆ. ಸ್ವಯಂವರದ ಮುನ್ನ ನನ್ನ ತಂದೆಯು ಹೇಳಿದ ಮಾತುಗಳನ್ನು ನೆನಪು ಮಾಡಿಕೋ. ಯುದ್ಧದಲ್ಲಿ ಯಾರು ಅಜೇಯರಾಗಿ ಉಳಿಯುವರೊ ಅವರನ್ನು ನಾವು ವರಿಸಬೇಕೆಂಬುದು ನಮ್ಮ ತಂದೆಯ ಆಶಯ. ಇಲ್ಲಿ ನಡೆದ ಯುದ್ಧದಲ್ಲಿ ಪ್ರತಿಯೊಬ್ಬರಿಗೂ ಸೋಲನ್ನು ಉಣಿಸಿ ಗೆದ್ದ ವೀರನೆಂದರೆ ನೀನೊಬ್ಬನೇ. ಆದ್ದರಿಂದ ನಮ್ಮ ತಂದೆಯ ಮಾತಿನಂತೆ ನಾವು ನಿನ್ನನ್ನು ವಿವಾಹ ವಿವಾಹವಾಗಬೇಕೆ ಹೊರತು ನಿನ್ನ ಸೋದರನನ್ನಲ್ಲ. ನ್ಯಾಯದ ಪಕ್ಷಪಾತಿಯಾದ ನಿನಗೆ ಇದು ಸರಿಯೇ ಎಂದು ನೀನೇ ಹೇಳು ಎಂದು ಹೇಳುತ್ತಾಳೆ.

ಭೀಷ್ಮನ ವಾದವನ್ನು ಕೊನೆಗೂ ಅಂಬೆಯು ಒಪ್ಪುವುದಿಲ್ಲ. ಒಂದು ವೇಳೆ ನೀನು ನನ್ನನ್ನು ವಿವಾಹವಾಗದೆ ಹೋದಲ್ಲಿ ನಾನು ಸಾಲ್ವ ರಾಜನನ್ನು ವಿವಾಹವಾಗುತ್ತೇನೆ. ನನ್ನನ್ನು ಅವನಲ್ಲಿಗೆ ಕಳುಹಿಸಿ ಕೊಡು ಎಂದು ಹೇಳುತ್ತಾಳೆ. ಅಂಬೆಯನ್ನು ಸಾಲ್ವರಾಜನ ಬಳಿ ವೃದ್ದನೊಂದಿಗೆ ಕಳಿಸುತ್ತಾನೆ. ಆದರೆ ಸಾಲ್ವ ರಾಜನು ಅಂಬೆಯನ್ನು ವಿವಾಹವಾಗಲು ಒಪ್ಪುವುದಿಲ್ಲ. ನನ್ನ ಜೀವನದ ಕೊನೆಯ ದಿನದಲ್ಲಿಯೂ ಸಹ ನಿನ್ನನ್ನು ವಿವಾಹವಾಗಲಾರೆ ಎಂದು ಹೇಳುತ್ತಾನೆ.

ಇದರಿಂದ ಅಂಬೆಯ ಸ್ಥಿತಿಯು ಅಸ್ಥಿರವಾಗುತ್ತದೆ. ಪುನ: ಹಸ್ತಿನಾವತಿಗೆ ಬಂದು ಭೀಷ್ಮನ ಗುರುಗಳಾದ ಪರಶುರಾಮರಲ್ಲಿ ದೂರನ್ನು ನೀಡುತ್ತಾಳೆ. ಆದರೆ ಭೀಷ್ಮನು ಪರಶುರಾಮರ ಮಾತುಗಳನ್ನು ಕೇಳುವುದಿಲ್ಲ. ಈ ಕಾರಣದಿಂದ ಭೀಷ್ಮ ಮತ್ತು ಪರಶುರಾಮರ ನಡುವೆ ಭೀಕರ ಕಾಳಗವೇ ನಡೆಯುತ್ತದೆ. ಆದರೆ ಯಾರೊಬ್ಬರೂ ಸೋಲುವುದಿಲ್ಲ ಗೆಲ್ಲುವುದು ಇಲ್ಲ. ಇದರಿಂದ ಬೇಸರಗೊಂಡ ಪರಶುರಾಮ ಆಶ್ರಮಕ್ಕೆ ತೆರಳುತ್ತಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡ ಅಂಬೆಯು ಅಗ್ನಿ ಪ್ರವೇಶ ಮಾಡಲು ನಿರ್ಧರಿಸುತ್ತಾಳೆ. ಭೀಷ್ಮನೆ ನೀನು ನನಗೆ ಮೋಸ ಮಾಡಿರುವೆ. ಮತ್ತೊಮ್ಮೆ ನಾನು ಭೂಮಿಯ ಮೇಲೆ ಜನ್ಮ ತಾಳಿ ಬರುವೆ. ಆಗ ನಿನ್ನ ಸಾವಿಗೆ ನಾನೇ ಕಾರಣ ಆಗುತ್ತೇನೆ ಎಂದು ಹೇಳಿ ಅಗ್ನಿಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಅಗ್ನಿಗೆ ಸಮರ್ಪಿಸುತ್ತಾಳೆ.

Whats_app_banner