ಮಹಾಭಾರತ ಕಥೆಗಳು: ಶಂತನು, ಗಂಗೆಯನ್ನು ಮಹಾಶಾಪ ಕಾಡಿದ್ದು, ಬ್ರಹ್ಮ ಲೋಕದಿಂದ ಮರಳಿ ಬರುವಾಗ ಏನಾಯ್ತು?
Mahabharata Story: ಮಹಾಭಾರತದ ಧಾರ್ಮಿಕ ಹಾಗೂ ಪೌರಾಣಿಯ ಮಹಾಕಾವ್ಯಗಳಲ್ಲಿ ಒಂದು. ಕುರುಕ್ಷೇತ್ರದದ ಯುದ್ಧ ಹಾಗೂ ನಂತರ ಘಟನೆಗಳನ್ನು ಮಹಾಭಾರತದಲ್ಲಿ ವಿವರಿಸಲಾಗಿದೆ. ಶಂತನು ಮತ್ತು ಗಂಯೆಯನ್ನು ಮಹಾಶಾಪ ಕಾಡಿದ್ದು ಹೇಗೆ ಎಂಬುದನ್ನು ಈ ಭಾಗದಲ್ಲಿ ವಿವರಿಸಲಾಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
Mahabharata Story: ಸಹೃದಯಿಯಾದ ಗಂಗೆಯು ತನ್ನ ಮಕ್ಕಳನ್ನು ನದಿಗೆ ಅರ್ಪಿಸುತ್ತಾಳೆ ಎಂದರೆ ನಂಬಲು ಅಸಾಧ್ಯ. ಆದರೆ ಅದರ ಹಿಂದೆ ಶಾಪಗ್ರಸ್ತೆಯಾದ ಕಥೆಯಿದೆ. ಇದರ ಬಗ್ಗೆ ಗಂಗೆಯೇ ಶಂತನುವಿಗೆ ವಿವರಿಸುತ್ತಾಳೆ. ಇಕ್ಷ್ವಾಕು ವಂಶಕ್ಕೆ ಸೇರಿದ ಮಹಾಭಿಷ ಎಂಬ ರಾಜನಿದ್ದನು. ಇವನು ಒಂದು ಸಾವಿರ ಅಶ್ವಮೇಧಯಾಗಗಳನ್ನು ಮತ್ತು ನೂರು ರಾಜಸೂಯಾಗಗಳನ್ನು ಮಾಡಿರುತ್ತಾನೆ. ಇದರಿಂದಾಗಿ ದೇವಲೋಕದ ಅಮರರು ತೃಪ್ತಿಗೊಳ್ಳುತ್ತಾರೆ. ಇವೆಲ್ಲದರ ಫಲವಾಗಿ ಅವನಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ. ಬ್ರಹ್ಮಲೋಕದಲ್ಲಿ ಬ್ರಹ್ಮಪೂಜೆಯೊಂದು ಆಚರಿಸಲ್ಪಡುತ್ತದೆ. ಅದರಲ್ಲಿ ಪಾಲ್ಗೊಳ್ಳಲು ಮಹಾಭಿಷನು ತೆರಳುತ್ತಾನೆ. ರೂಪವತಿಯಾದ ಮತ್ತು ನದಿಶ್ರೇಷ್ಠಳಾದ ಗಂಗಾದೇವಿಯೂ ಅಲ್ಲಿಗೆ ಆಗಮಿಸುತ್ತಾಳೆ. ಹಾಲಿನಂತಹ ಬಟ್ಟೆಯನ್ನು ಧರಿಸಿದ ಗಂಗೆಯು ಬ್ರಹ್ಮನ ಸನಿಹಕ್ಕೆ ತೆರಳುತ್ತಾಳೆ.
ಈ ವೇಳೆ ಒಮ್ಮೆಲೆ ಬಿರುಗಾಳಿ ಬಂದು ಆಕೆಯ ವಸ್ತ್ರವು ಅಸ್ತವ್ಯಸ್ತಗೊಳ್ಳುತ್ತದೆ. ಅಮರರು ತಲೆತಗ್ಗಿಸಿ ನಿಲ್ಲುತ್ತಾರೆ. ಆದರೆ ಮಹಾರಾಜನಾದ ಮಹಾಭಿಷನು ಗಂಗೆಯನ್ನು ನೋಡುತ್ತಾ ನಿಂತುಬಿಡುತ್ತಾನೆ. ಇದರಿಂದ ಎಲ್ಲರ ಕೋಪಕ್ಕೆ ಒಳಗಾಗುತ್ತಾನೆ. ಇವನ ಕೆಟ್ಟ ನಡತೆಯಿಂದ ಕಾರ್ಯಕ್ರಮವು ನೀರಸವಾಗುತ್ತದೆ. ಬ್ರಹ್ಮದೇವನಿಗೆ ಮಹಾರಾಜನ ಮೇಲೆ ಕೋಪ ಉಂಟಾಗುತ್ತದೆ. ಬ್ರಹ್ಮಲೋಕಕ್ಕೆ ಬಂದರೂ ಇವನ ಕೆಟ್ಟತನದ ಬಗ್ಗೆ ಬೇಸರ ಉಂಟಾಗುತ್ತದೆ.
ಕ್ರೋಧಗೊಂಡ ಬ್ರಹ್ಮನು ರಾಜನನ್ನು ಕುರಿತು ಅರಿಷಡ್ವರ್ಗಗಳನ್ನು ಬಿಟ್ಟವರಿಗೆ ಮಾತ್ರ ಇಲ್ಲಿ ಜಾಗ. ಅವರಿಗೆ ಮಾತ್ರ ನಮ್ಮೊಡನೆ ಇರಲು ಅರ್ಹತೆ ಇರುತ್ತದೆ. ಆದರೆ ನೀನು ಗಂಗೆಯ ಸೌಂದರ್ಯಕ್ಕೆ ಮಾರುಹೋಗಿ ಕಾಮ, ಮೋಹಕ್ಕೆ ಒಳಗಾಗಿರುವೆ. ಆದ್ದರಿಂದಾಗಿ ನಾನು ನಿನ್ನನ್ನು ಶಪಿಸಲೇ ಬೇಕಾಗಿದೆ. ನೀನು ಗಂಗೆಯ ಜೊತೆಯಲ್ಲಿ ಸಂಸಾರವನ್ನು ಮಾಡು. ಆದರೆ ನಿನ್ನ ಮನಸ್ಸಿಗೆ ಶಾಂತಿ ಇರುವುದಿಲ್ಲ. ಕಾರಣವೇನೆಂದರೆ ನಿನಗೆ ಇಷ್ಟವಾಗದಂತಹ ಕೆಲಸಗಳನ್ನು ಗಂಗೆಯು ಮಾಡುತ್ತಾಳೆ. ಆದರೆ ಅದನ್ನು ನೀನು ವಿರೋಧಿಸಲಾಗದ ಸ್ಥಿತಿಗೆ ತಲುಪುವೆ. ನಿನ್ನ ಮನಸ್ಸಿನ ಶಾಂತಿಯು ಮರೆಯಾಗುತ್ತದೆ. ಆದರೆ ಅಂತಿಮವಾಗಿ ಅವಳ ಕಠೋರ ಪ್ರವೃತ್ತಿಯನ್ನು ನೀನು ವಿರೋಧಿಸುವೆ ಎಂದು ಹೇಳುತ್ತಾನೆ.
ಶಿಕ್ಷೆ ಅನುಭವಿಸಲು ಗಂಗೆ ಬ್ರಹ್ಮಲೋಕ ತೊರೆದು ಬರುತ್ತಾಳಾ?
ಮುಂದುವರಿದು, ಅವಳ ಕೆಟ್ಟ ಕೆಲಸಗಳಿಗೆ ಅಡ್ಡಿ ಉಂಟುಮಾಡುವೆ. ಆಗ ನಿನಗೆ ಶಾಪ ವಿಮುಕ್ತಿಯಾಗುತ್ತದೆ. ಬ್ರಹ್ಮನ ಶಾಪವೆಂದ ಮೇಲೆ ಬದಲಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಮಹಾಭಿಷ ಮಹಾರಾಜ ಮತ್ತು ಗಂಗೆ ಸಂಸಾರವನ್ನು ನಡೆಸಲೇಬೇಕಾದಂತಹ ಪರಿಸ್ಥಿತಿ ಉಂಟಾಗುತ್ತದೆ. ಈ ಕಾರಣದಿಂದಾಗಿ ಚಂದ್ರ ವಂಶದ ಮಹಾರಾಜನಾದ ಪ್ರತೀಪನ ಮಗನಾಗಿ ಜನ್ಮತಾಳುತ್ತಾನೆ. ಅವನೇ ಶಂತನು. ಮಾಡಿದ ಪಾಪಕ್ಕೆ ಶಿಕ್ಷೆ ಅನುಭವಿಸಲು ಗಂಗೆಯು ಬ್ರಹ್ಮಲೋಕವನ್ನು ತೊರೆದು ಹೊರಬರುತ್ತಾಳೆ.
ಗಂಗೆಯು ಬ್ರಹ್ಮ ಲೋಕದಿಂದ ಮರಳಿ ಬರುವಾಗ ಮಾರ್ಗದಲ್ಲಿ ಅಷ್ಟವಸುಗಳನ್ನು ಭೇಟಿ ಮಾಡುತ್ತಾಲೇ. ಇವರಿಗೆ ವಸಿಷ್ಠ ಮಹರ್ಷಿಯ ಶಾಪವಿರುತ್ತದೆ. ಗಂಗೆಯನ್ನು ಕಂಡ ಅಷ್ಟವಸುಗಳು ತಮ್ಮ ಕಷ್ಟವನ್ನು ವಿವರಿಸುತ್ತಾರೆ. ವಶಿಷ್ಠರ ಬಳಿ ನಂದಿನಿ ಎಂಬ ಕಾಮಧೇನು ಇರುತ್ತದೆ. ಒಳ್ಳೆಯ ಸಂಸ್ಕಾರವಿದ್ದರೂ ಆ ಕ್ಷಣದಲ್ಲಿ ಆಸೆಗೆ ಒಳಗಾಗಿ ಅಷ್ಟವಸುಗಳು ನಂದಿನಿಯನ್ನು ಅಪಹರಿಸುತ್ತಾರೆ. ಆಗ ವಸಿಷ್ಠರು ಸಿಟ್ಟಿಗೆ ಒಳಗಾಗಿ ಅಷ್ಟವಸುಗಳನ್ನು ಮಾನವರಾಗಿ ಭೂಲೋಕದಲ್ಲಿ ಜನ್ಮ ತಾಳಿರಿ ಎಂದು ಶಾಪ ನೀಡುತ್ತಾರೆ. ಆದರೆ ನಾವು ಎಂದಿಗೂ ಮಾನವರ ಮಕ್ಕಳಾಗಿ ಹುಟ್ಟಲು ಬಯಸುವುದಿಲ್ಲ.
ಆದ್ದರಿಂದ ನಿನ್ನ ಮತ್ತು ಶಂತನುವಿನ ಮಕ್ಕಳಾಗಿ ಹುಟ್ಟಲು ಇಚ್ಚಿಸುತ್ತೇವೆ. ನಮ್ಮ ಜನನದ ನಂತರ ನಿಮ್ಮ ಕೈಯಾರ ನಮ್ಮ ಅಂತ್ಯವಾಗುತ್ತದೆ. ಎಂಟನೆಯ ವಸುವಾದ ಅಪನಿಗೆ ಹೋಲಿಸಿದರೆ ನಾವು ಮಾಡಿದ ಪಾಪ ಕಡಿಮೆ. ಆದ್ದರಿಂದ ಕೊನೆಯ ಮಗುವನ್ನು ಕಾಪಾಡು. ಅವನು ಆಜನ್ಮ ಬ್ರಹ್ಮಚಾರಿಯಾಗಿ ಚಂದ್ರವಂಶದ ಕೀರ್ತಿಯನ್ನು ಬೆಳಗುತ್ತಾನೆ ಎಂದು ತಿಳಿಸುತ್ತಾರೆ. ಗಂಗೆಯೂ ನೀರಿಗೆ ಬಿಡುವ ಏಳು ಮಕ್ಕಳು ಅಷ್ಟವಸುಗಳು.
ಶಂತನು ವಿರೋಧ ವ್ಯಕ್ತಪಡಿಸಿ ಉಳಿಸಿಕೊಳ್ಳುವ ಮಗುವೇ 8ನೇ ವಸುವಾದ ಅಪ. ಇವನನ್ನು ಗಂಗೆಯು ಕರೆದುಕೊಂಡು ನದಿಯಲ್ಲಿ ಐಕ್ಯವಾಗುತ್ತಾಳೆ. ಮುಂದೊಮ್ಮೆ ಶಂತನು ನದಿಯ ಬಳಿಗೆ ಬಂದಾಗ ಆ ಮಗುವನ್ನು ಮರಳಿ ಒಪ್ಪಿಸುತ್ತಾಳೆ. ಪರಶುರಾಮ ಮತ್ತು ಜಮದಗ್ನಿಂದ ಸರ್ವ ವಿದ್ಯಾ ಪಾರಂಗತನಾದ ಈ ಮಗುವಿಗೆ ದೇವವ್ರತ ಎಂಬ ಹೆಸರನ್ನು ಇಡುತ್ತಾರೆ. ಗಂಗೆಯ ತಪ್ಪಿಗೂ ಶಾಪವೇ ಕಾರಣ ಎಂದು ಇದರಿಂದ ತಿಳಿಯಬಹುದು.