ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾದಿಷ್ಟ ಏಲಕ್ಕಿಯಿಂದ ಹತ್ತಾರು ಪ್ರಯೋಜನ; ಆರೋಗ್ಯದ ಜೊತೆಗೆ ತ್ವಚೆ, ಕೂದಲು, ತುಟಿಯ ಆರೈಕೆಗೂ ಬೇಕು

ಸ್ವಾದಿಷ್ಟ ಏಲಕ್ಕಿಯಿಂದ ಹತ್ತಾರು ಪ್ರಯೋಜನ; ಆರೋಗ್ಯದ ಜೊತೆಗೆ ತ್ವಚೆ, ಕೂದಲು, ತುಟಿಯ ಆರೈಕೆಗೂ ಬೇಕು

ಸುವಾಸನೆಗೆ ಹೆಸರಾದ ಪ್ರಮುಖ ಮಸಾಲೆ ಪದಾರ್ಥ ಏಲಕ್ಕಿ. ರೋಗನಿರೋಧಕ ಶಕ್ತಿ ವರ್ಧಕವಾಗಿರುವ ಏಲಕ್ಕಿ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇದು ಚರ್ಮ, ಕೂದಲು ಹಾಗೂ ಒಟ್ಟಾರೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಸ್ವಾದಿಷ್ಟ ಏಲಕ್ಕಿಯಿಂದ ಹತ್ತಾರು ಪ್ರಯೋಜನ; ತ್ವಚೆ, ಕೂದಲು, ತುಟಿಯ ಆರೈಕೆಗೂ ಬೇಕು
ಸ್ವಾದಿಷ್ಟ ಏಲಕ್ಕಿಯಿಂದ ಹತ್ತಾರು ಪ್ರಯೋಜನ; ತ್ವಚೆ, ಕೂದಲು, ತುಟಿಯ ಆರೈಕೆಗೂ ಬೇಕು (Pixabay)

ಭಾರತದ ಸಾಂಪ್ರದಾಯಿಕ ಅಡುಗೆಗಳಲ್ಲಿ ವಿವಿಧ ಮಸಾಲೆಗಳಿಗೆ ಪ್ರಮುಖ ಸ್ಥಾನವಿದೆ. ಖಾರ ಸೇರಿದಂತೆ ಭಿನ್ನ ವಿಭಿನ್ನ ಮಸಾಲೆ ಪದಾರ್ಥಗಳು ನಮ್ಮ ಅಡುಗೆ ಮನೆಯ ಅವಿಭಾಜ್ಯ ಅಂಗ. ಮಸಾಲೆಗಳು ಅಡುಗೆಗೆ ರುಚಿ ತುಂಬುವುದಲ್ಲದೆ; ಭಿನ್ನ ಸ್ವಾದ, ಪರಿಮಳ ಹಾಗೂ ಬಣ್ಣವನ್ನೂ ಕೊಡುತ್ತದೆ. ಮಸಾಲೆಗಳಲ್ಲಿ ಅತ್ಯಂತ ಪರಿಮಳಯುಕ್ತ ಪದಾರ್ಥಗಳಲ್ಲಿ ಏಲಕ್ಕಿಗೆ ಅಗ್ರಸ್ಥಾನ. ಇದರ ವಿಶೇಷ ಸುವಾಸನೆಯಿಂದಾಗಿ ಹಲವು ಆಹಾರಗಳ ತಯಾರಿಯಲ್ಲಿ ನಿತ್ಯ ಬಳಕೆಯಾಗುತ್ತದೆ. ವಿಶೇಷವೆಂದರೆ ಖಾರದ ಅಡುಗೆ ಮಾತ್ರವಲ್ಲದೆ ಸಿಹಿ ತಿನಿಸುಗಳಲ್ಲಿಯೂ ಏಲಕ್ಕಿಯನ್ನು ಬಳಸಲಾಗುತ್ತದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಏಲಕ್ಕಿಯು ದೇಹಕ್ಕೆ ಮಾತ್ರವಲ್ಲದೆ ತ್ವಚೆಯ ಸೌಂದರ್ಯಕ್ಕೂ ಅಗತ್ಯ. ಆರೋಗ್ಯಕರ ಮಸಾಲೆಯು ಚರ್ಮದ ಜೊತೆಗೆ ಕೂದಲಿನ ಆರೋಗ್ಯ ಸುಧಾರಿಸಲು ಕೂಡಾ ಪ್ರಯೋಜನಕಾರಿ.

ಹಾಗಿದ್ದರೆ ಏಲಕ್ಕಿಯಿಂದ ಏನೇನು ಪ್ರಯೋಜನಗಳಿವೆ? ಚರ್ಮ ಮತ್ತು ಕೂದಲಿಗೆ ಹೇಗೆ ಉತ್ತಮ ಎಂಬುದನ್ನು ನೋಡೋಣ.

ಚರ್ಮಕ್ಕೆ ಒಳ್ಳೆಯದು

ಯಾವುದೇ ರೀತಿಯ ಚರ್ಮವಾದರೂ ಸುಂದರವಾದ ಚರ್ಮಕ್ಕೆ ಏಲಕ್ಕಿ ಬಹಳ ಸಹಾಯಕವಾಗಿದೆ. ಕಪ್ಪು ಏಲಕ್ಕಿ ದೇಹದಲ್ಲಿರುವ ಮತ್ತು ಚರ್ಮಕ್ಕೆ ಹಾನಿ ಮಾಡುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದನ್ನು ಅಗಿದು ತಿನ್ನುವ ಮೂಲಕ ದೇಹವು ನಿರ್ವಿಷಗೊಳ್ಳುತ್ತದೆ.

ಟ್ರೆಂಡಿಂಗ್​ ಸುದ್ದಿ

ತ್ವಚೆಯ ಬಣ್ಣ ಸುಧಾರಿಸುತ್ತದೆ.

ಮೈಬಣ್ಣವನ್ನು ಸುಧಾರಿಸುವಲ್ಲಿ ಏಲಕ್ಕಿ ಪ್ರಧಾನ ಪಾತ್ರ ವಹಿಸುತ್ತದೆ. ತ್ವಚೆಯ ಕಲೆಗಳನ್ನು ಹೋಗಲಾಡಿಸುವ ಮೂಲಕ ಚರ್ಮ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಇದರಲ್ಲಿ ಫೈಟೊಕೆಮಿಕಲ್‌ ಹೇರಳವಾಗಿರುವ ಕಾರಣ ನಿಮ್ಮ ವಯಸ್ಸನ್ನು ಮರೆಮಾಚುತ್ತದೆ. ನಿತ್ಯ ಅಡುಗೆಯಲ್ಲಿ ಗುಣಮಟ್ಟದ ಏಲಕ್ಕಿಯನ್ನು ಸೇರಿಸುವುದರಿಂದ ಅಥವಾ ಏಲಕ್ಕಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಈ ಪ್ರಯೋಓಜನ ಪಡೆಯಬಹುದು.

ಚರ್ಮದ ಅಲರ್ಜಿಗೆ ಪರಿಹಾರ

ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಚರ್ಮದ ಅಲರ್ಜಿಗೆ ಉತ್ತಮ ಮದ್ದು. ಜೇನುತುಪ್ಪ ಮತ್ತು ಏಲಕ್ಕಿ ಪುಡಿಯ ಪೇಸ್ಟ್‌ ಮಾಡಿ ಚರ್ಮದ ಅಲರ್ಜಿ ಕಾಣಿಸಿಕೊಂಡ ಜಾಗಕ್ಕೆ ಈ ಪೇಸ್ಟ್ ಹಚ್ಚಿ. ಇದು ಸುಲಭ ಔಷಧ.

ರಕ್ತ ಪರಿಚಲನೆ ಸುಧಾರಿಸುತ್ತದೆ

ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಏಲಕ್ಕಿ ತುಂಬಾ ಉಪಯುಕ್ತ. ಇದರಲ್ಲಿ ವಿಟಮಿನ್ ಸಿ ಇದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ವಿಟಮಿನ್ ಸಿ ರಕ್ತವನ್ನು ಶುದ್ಧೀಕರಿಸುತ್ತದೆ. ಆ ಮೂಲಕ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಆ ಮೂಲಕ ಸಹಜವಾಗಿ ಚರ್ಮದ ಆರೋಗ್ಯ ಕೂಡಾ ಹೆಚ್ಚಿಸುತ್ತದೆ. ನಿಮ್ಮ ರಕ್ತ ಪರಿಚಲನೆ ಸುಧಾರಿಸಲು ಏಲಕ್ಕಿಯ ಸೇವನೆ ಮಾಡಿ.

ಕೂದಲ ಪೋಷಣೆ

ಏಲಕ್ಕಿ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಕೂದಲು ಹಾನಿಯಾಗದಂತೆ ತಡೆಯುತ್ತದೆ. ಇದರಲ್ಲಿರುವ ಈ ರಾಸಾಯನಿಕಗಳು ದೇಹದ ಮೇಲೆ ದಾಳಿ ಮಾಡುವ ಸ್ವತಂತ್ರ ರಾಡಿಕಲ್‌ಗಳಿಂದ ನೆತ್ತಿಯನ್ನು ರಕ್ಷಿಸುತ್ತದೆ. ಇದೇ ವೇಳೆ ಕೂದಲನ್ನು ಬುಡದಿಂದಲೇ ಗಟ್ಟಿಯಾಗಿಸುತ್ತದೆ. ತಲೆಹೊಟ್ಟು ಸಮಸ್ಯೆಗಳಿಂದ ಏಲಕ್ಕಿ ರಕ್ಷಿಸುತ್ತದೆ. ಕೂದಲನ್ನು ತೊಳೆದ ನಂತರ ಏಲಕ್ಕಿಯನ್ನು ಪುಡಿಮಾಡಿ ಆ ಮಿಶ್ರಣವನ್ನು ತಲೆಗೆ ಹಚ್ಚಬೇಕು. ಏಲಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೆತ್ತಿಯ ಸೋಂಕಿಗೆ ಚಿಕಿತ್ಸೆ ನೀಡುತ್ತವೆ.

ತುಟಿಯ ಆರೋಗ್ಯಕ್ಕೂ ಒಳ್ಳೆಯದು

ಏಲಕ್ಕಿಯು ತುಟಿಗಳನ್ನು ಮೃದು ಮತ್ತು ಆಕರ್ಷಕವಾಗಿಸಲು ಪ್ರಯೋಜನಕಾರಿ. ಇದರಲ್ಲಿರುವ ಎಣ್ಣೆಯ ಸಾರವು ನಿಮ್ಮ ತುಟಿಗಳಿಗೆ ಮಾಯಿಶ್ಚರ್‌ ಆಗಿ ಕೆಲಸ ಮಾಡುತ್ತದೆ. ಅದರಗಳನ್ನು ಮೃದು ಮತ್ತು ನಯವಾಗಿಸುತ್ತದೆ. ಮಾರುಕಟ್ಟೆಯಲ್ಲಿ ಏಲಕ್ಕಿ ಲಿಪ್‌ಬಾಮ್‌ಗಳು ಲಭ್ಯವಿರುತ್ತವೆ. ಇದೇ ವೇಳೆ ಏಲಕ್ಕಿಯನ್ನು ಒಳಗೊಂಡಿರುವ ಸೌಂದರ್ಯವರ್ಧಕಗಳನ್ನು ಬಳಸಬಹುದು.