ಕನ್ನಡ ಸುದ್ದಿ  /  ಜೀವನಶೈಲಿ  /  Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

ಓದುವಾಗ ನಿಮ್ಮ ಕ್ಲಾಸ್‌ನಲ್ಲಿ, ಆಫೀಸ್‌ನಲ್ಲಿ ಅಥವಾ ಮನೆಯಲ್ಲೇ ಯಾರಾದರೂ ಎಡಗೈಯನ್ನೇ ಹೆಚ್ಚಾಗಿ ಬಳಸುವವರು ಇರಬಹುದು. ಇವರನ್ನು ಬಹಳ ವಿಶೇಷವಾಗಿ ನೋಡಲಾಗುತ್ತದೆ. ಎಲ್ಲರೂ ಬಲಗೈ ಬಳಕೆ ಮಾಡಿದ್ರೆ, ಕೆಲವರು ಮಾತ್ರ ತಮ್ಮ ಕೆಲಸಗಳಿಗೆ ಎಡಗೈ ಬಳಕೆ ಮಾಡುತ್ತಾರೆ. ಈ ಎಡಗೈ ಬಳಕೆ ಮಾಡುವವರ ಬಗ್ಗೆ ನಿಮಗೆ ಗೊತ್ತಿರದ ಆಸಕ್ತಿಕರ ಸಂಗತಿಗಳು ಇಲ್ಲಿವೆ. (ಬರಹ: ಪ್ರಿಯಾಂಕ ಗೌಡ)

ಎಡಗೈ ಬಳಕೆ ಮಾಡುವವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ
ಎಡಗೈ ಬಳಕೆ ಮಾಡುವವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

ಭಾರತೀಯರಲ್ಲಿ ಅದರಲ್ಲೂ ಹಿಂದೂಗಳಲ್ಲಿ ಬಲಗೈ ಮೂಲಕ ಮಾಡುವ ಕೆಲಸವೇ ಶ್ರೇಷ್ಠ ಎಂಬ ನಂಬಿಕೆಯಿದೆ. ನಮ್ಮಲ್ಲಿ ಹಲವರು ಬರೆಯುವುದು, ಕೆಲಸ ಮಾಡುವುದು ಮುಂತಾದ ಎಲ್ಲವನ್ನೂ ಬಲಗೈಯಲ್ಲೇ ಮಾಡುತ್ತಾರೆ. ಜಗತ್ತಿನಲ್ಲಿ ಸುಮಾರು ಶೇ 12ರಷ್ಟು ಮಾತ್ರ ಎಡಗೈ ಬಳಸುವ ವ್ಯಕ್ತಿಗಳಿದ್ದಾರೆ. ಆದರೆ ತಮ್ಮ ಪ್ರತಿ ಕೆಲಸಕ್ಕೂ ಎಡಗೈಯನ್ನೇ ಉಪಯೋಗಿಸುವವರು ಸಿಗುವುದು ತುಂಬಾ ವಿರಳ. ಇಂಥವರು ಕೆಲವೇ ಕೆಲವು ಜನರಷ್ಟೇ ಇದ್ದಾರೆ. ಇವರನ್ನು ಬಹಳ ವಿಶೇಷವಾಗಿ ನೋಡಲಾಗುತ್ತದೆ. ಇಂಥವರು ಬುದ್ಧಿವಂತರು, ಸೃಜನಾತ್ಮಕ ವ್ಯಕ್ತಿತ್ವ, ವಿಶ್ಲೇಷಣಾತ್ಮಕ ಮನೋಭಾವದವರು ಮತ್ತು ಉತ್ತಮ ಭಾಷಾ ಕೌಶಲವನ್ನು ಹೊಂದಿರುತ್ತಾರೆ ಎಂದೂ ಹೇಳಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಎಡಗೈ ಬಳಕೆ ಮಾಡುವ ಜನರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ಸಂಗತಿಗಳಿವು

1. ಅಲರ್ಜಿಯನ್ನು ಹೊಂದುವ ಸಾಧ್ಯತೆ ಹೆಚ್ಚು: ಎಡಗೈಯವರು ಬಲಗೈಯ ಜನರಿಗಿಂತ 11 ಪಟ್ಟು ಹೆಚ್ಚು ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಎಡಗೈಯವರು ಅಸ್ವಸ್ಥತೆಗಳಿಂದ ಬಳಲುತ್ತಿರುವವರಲ್ಲಿ ಎರಡೂವರೆ ಪಟ್ಟು ಹೆಚ್ಚು ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ.

2. ಮೈಗ್ರೇನ್‌ ಸಮಸ್ಯೆ: ಬಲಗೈ ಜನರಿಗೆ ಹೋಲಿಸಿದರೆ ಎಡಗೈ ಜನರು ಮೈಗ್ರೇನ್ ಅನ್ನು ಅನುಭವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಸಂಶೋಧಕರು ನಡೆಸಿರುವ ಅಧ್ಯಯನವೊಂದರಲ್ಲಿ ಕಂಡು ಹಿಡಿಯಲಾಗಿದೆ.

3. ನಿದ್ರಾಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು: ಎಡಗೈ ಜನರು ನಿದ್ರಾಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಎಡಗೈ ಬಳಸುವ ಜನರು ನಿದ್ದೆಯ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಾರಂತೆ. ಇದಕ್ಕಾಗಿ ನಡೆಸಿದ ಅಧ್ಯಯನದಲ್ಲಿ ಶೇ 94ರಷ್ಟು ಎಡಗೈ ವ್ಯಕ್ತಿಗಳಲ್ಲಿ ಈ ಸಮಸ್ಯೆ ಕಂಡು ಬಂದಿದ್ದರೆ, ಶೇ 64ರಷ್ಟು ಬಲಗೈ ವ್ಯಕ್ತಿಗಳಲ್ಲಿ ನಿದ್ರಾಹೀನತೆ ಸಮಸ್ಯೆ ಕಂಡುಬಂದಿದೆ.

4. ಮದ್ಯಪಾನ ಮಾಡುವ ಸಾಧ್ಯತೆ ಹೆಚ್ಚು: 1973ರ ಮನಶ್ಶಾಸ್ತ್ರಜ್ಞ ಪಾಲ್ ಬಕನ್ ಅವರು ನಡೆಸಿರುವ ಸಂಶೋಧನೆಯ ಪ್ರಕಾರ, ಮದ್ಯವ್ಯಸನ ಮಾಡುವ ಬಲಗೈಯವರಿಗಿಂತ ಎಡಗೈ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕಂಡುಹಿಡಿದಿದ್ದಾರೆ.

ಆದರೂ, 2011 ರಲ್ಲಿ ಡಾ. ಕೆವಿನ್ ಡೆನ್ನಿ ಅವರ ಅಧ್ಯಯನದಲ್ಲಿ 12 ದೇಶಗಳ 25,000 ಜನರನ್ನು ಪರೀಕ್ಷಿಸಿದೆ. ಇದರಲ್ಲಿ ಎಡಗೈಯವರು ಅತಿಯಾದ ಮದ್ಯಪಾನ ಮಾಡುವುದಿಲ್ಲ ಎಂಬುದನ್ನು ಕಂಡುಹಿಡಿಯಲಾಗಿದೆ. ಬಲಗೈ ಜನರಿಗಿಂತ ಎಡಗೈ ಜನರು ಮಧ್ಯಮ ಮಟ್ಟದಲ್ಲಿ ಕುಡಿಯಲು ಹೆಚ್ಚು ಒಲವು ತೋರುತ್ತಾರೆ ಎಂದು ಹೇಳಲಾಗಿದೆ.

5. ಎಡಗೈ ಜನರು ಬುದ್ಧಿವಂತರೇ?: ಬಹುತೇಕ ಮಂದಿ ಎಡಗೈನಲ್ಲಿ ಬರೆಯುವವರನ್ನು ಬುದ್ಧಿವಂತರು ಎಂದು ಹೇಳುತ್ತಾರೆ. ಎಡಗೈ ಮಕ್ಕಳಿಗೆ ಪೋಷಕರು ಕೂಡ ಪ್ರೋತ್ಸಾಹ ನೀಡುತ್ತಾರೆ. ಯಾಕೆಂದರೆ ತಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದು. 2007ರ ಅಧ್ಯಯನವೊಂದರಲ್ಲಿ ವಿದ್ಯಾರ್ಥಿಗಳ ಬುದ್ಧಿಮತ್ತೆಯ ಮಟ್ಟದಲ್ಲಿ ಎಡಗೈನಲ್ಲಿ ಬರೆಯುವವರು ಐಕ್ಯೂ ಸಾಮರ್ಥ್ಯದ ಮಟ್ಟ ಹೆಚ್ಚಿರುತ್ತದೆ ಎಂದು ತೋರಿಸುತ್ತದೆ. ಆದರೆ, 2010ರ ಮತ್ತೊಂದು ಅಧ್ಯಯನದಲ್ಲಿ ಇದರ ವಿರುದ್ಧ ತೋರಿಸಿದೆ.

6. ಭಾಷಾ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚು: ಫಿನ್‌ಲ್ಯಾಂಡ್‌ನ 2009ರ ಅಧ್ಯಯನದಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ಪರೀಕ್ಷೆಗೊಳಪಡಿಸಲಾಯಿತು. ಇದರಲ್ಲಿ ಮಕ್ಕಳು ಪ್ರೌಢಾವಸ್ಥೆಯಲ್ಲಿ ಭಾಷೆ ಮತ್ತು ಪಾಂಡಿತ್ಯದ ಸಮಸ್ಯೆಗಳನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಯನ್ನು ತೋರಿಸಿದೆ.

7. ಪುರುಷರಲ್ಲೇ ಎಡಗೈ ಸಾಧ್ಯತೆ ಹೆಚ್ಚು: 2008ರ ಅಧ್ಯಯನವೊಂದರ ಪ್ರಕಾರ ಶೇ 23 ರಷ್ಟು ಪುರುಷರು ಎಡಗೈಯವರು ಎಂದು ಕಂಡುಹಿಡಿಯಲಾಯಿತು. 2 ಮಿಲಿಯನ್ ಜನರನ್ನು ಪರೀಕ್ಷಿಸಿ 144 ವೈಯಕ್ತಿಕ ಅಧ್ಯಯನಗಳಿಂದ ಡೇಟಾವನ್ನು ಸಂಗ್ರಹಿಸಿದೆ.

8. ಬಲಗೈಯವರಿಗಿಂತ ಸರಾಸರಿ 9 ವರ್ಷ ಕಡಿಮೆ ಬದುಕು: 1980 ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ಬಲಗೈ ಜನರು ಸಾಯುವ ಸರಾಸರಿ ವಯಸ್ಸು 75. ಆದರೆ, ಎಡಗೈಯವರು 66 ವರ್ಷಕ್ಕೆಲ್ಲಾ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಆದರೂ, ಈ ಸಂಶೋಧನೆಗಳು ಹೆಚ್ಚಾಗಿ ಅಪಖ್ಯಾತಿಗೊಳಗಾಗಿವೆ.

9. ಶೇ 39ರಷ್ಟಿದೆ ಸಲಿಂಗಕಾಮಿಯಾಗುವ ಸಾಧ್ಯತೆ: 2000ದ ಅಧ್ಯಯನವೊಂದರಲ್ಲಿ ಪುರುಷರು ಮತ್ತು ಮಹಿಳೆಯರನ್ನು ವಿಶ್ಲೇಷಿಸಲಾಯಿತು. ಇದರಲ್ಲಿ ಬಲಗೈಯವರಿಗೆ ಹೋಲಿಸಿದರೆ ಸಲಿಂಗಕಾಮಿಗಳು ಎಡಗೈನವರೇ ಹೆಚ್ಚು ಎಂಬುದು ತಿಳಿದು ಬಂದಿದೆ.

10. ಬಲಗೈ ಜನರಿಗಿಂತ ಹೆಚ್ಚು ಹಣ ಗಳಿಸುವ ಸಾಧ್ಯತೆಯಿದೆಯೇ?: 2006ರ ಅಧ್ಯಯನವೊಂದರ ಪ್ರಕಾರ, ಎಡಗೈಯವರು ಬಲಗೈಯವರಿಗಿಂತ ಶೇ 15 ರಷ್ಟು ಹೆಚ್ಚು ವೇತನ ಗಳಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, 2014ರ ಅಧ್ಯಯನದಲ್ಲಿ ಇದು ಕಡಿಮೆ ತೋರಿಸಿದೆ.

ವಿಭಾಗ