Anti Corruption Day: ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ; ಈ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Anti Corruption Day: ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ; ಈ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ

Anti Corruption Day: ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ; ಈ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ

ಪ್ರಪಂಚದಾದ್ಯಂತ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರಿಗಳೇ ತುಂಬಿರುವ ಈ ಪ್ರಪಂಚವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, ಡಿಸೆಂಬರ್ 9 ರಂದೇ ಈ ದಿನವನ್ನು ಆಚರಿಸುವ ಉದ್ದೇಶವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ (ಸಾಂಕೇತಿಕ ಚಿತ್ರ)
ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ (ಸಾಂಕೇತಿಕ ಚಿತ್ರ) (PC: Canva)

ವಿಶ್ವದಾದ್ಯಂತ ಪ್ರತಿವರ್ಷ ಡಿಸೆಂಬರ್ 9 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. ಭ್ರಷ್ಟಾಚಾರವನ್ನು ವಿರೋಧಿಸುವುದು ಹಾಗೂ ಈ ಇದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಹೆಮ್ಮರವಾಗಿ ಬೆಳೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಭ್ರಷ್ಟಾಚಾರ ಮುಕ್ತ ವಿಶ್ವವನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ಭ್ರಷ್ಟಾಚಾರ ಇದೊಂದು ಸಂಕೀರ್ಣ ಪದವಾಗಿದೆ ಮತ್ತು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿದ್ಯಮಾನವಾಗಿದೆ. ಭ್ರಷ್ಟಾಚಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದಲ್ಲದೆ ಆರ್ಥಿಕ ಅಭಿವೃದ್ಧಿಯನ್ನು ನಿಧಾನಗೊಳಿಸುತ್ತದೆ. ಇದು ಸರ್ಕಾರದ ಅಸ್ಥಿರತೆಗೆ ಸಹ ಕೊಡುಗೆ ನೀಡುತ್ತದೆ.

ಭ್ರಷ್ಟಾಚಾರದ ಬಗ್ಗೆ ಅರಿವು ಹಾಗೂ ಭ್ರಷ್ಟಾಚಾರವನ್ನು ವಿರೋಧಿಸುವ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 31 ಅಕ್ಟೋಬರ್‌ 2003 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲು ಅಂಗೀಕಾರ ನೀಡಿತು.

ಭಾರತದ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ರಾಜಕೀಯ, ಸರ್ಕಾರಿ ಅಧಿಕಾರಿಗಳು, ಶಾಲೆ, ಆಸ್ಪತ್ರೆ ಹೀಗೆ ಬಹುತೇಕ ಕಡೆ ಭ್ರಷ್ಟಾಚಾರ ಎಗ್ಗಿಲ್ಲದೇ ಸಾಗುತ್ತಿದೆ. ಭ್ರಷ್ಟಾಚಾರ ನಿಗ್ರಹಕ್ಕೆ ಹಲವು ನಿಯೋಗಗಳಿದ್ದರೂ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ದೇಶಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿವೆ.

ಭ್ರಷ್ಟಾಚಾರವು ದೇಶ ಅಭಿವೃದ್ಧಿ ಕುಂಠಿತವಾಗುವಂತೆ ಮಾಡುತ್ತದೆ. ಇದರಿಂದ ದೇಶವು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯುತ್ತದೆ. ನಮ್ಮನ್ನ ಆಳುವವರೇ ಭ್ರಷ್ಟಾಚಾರದ ಆರೋಪಗಳನ್ನ ಹೊತ್ತು ತಿರುಗುತ್ತಿರುವ ಈ ಹೊತ್ತಿನಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ ಟಾಪ್‌ 5 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಇದೆ ಎನ್ನುವುದು ವಿಪರ್ಯಾಸ.

ಭಷ್ಟಾಚಾರ ವಿರೋಧಿ ದಿನದ ಇತಿಹಾಸ

ಭ್ರಷ್ಟಾಚಾರ ಎನ್ನುವುದು ಕರ್ನಾಟಕ , ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ದೇಶಗಳು ಎದುರಿಸುತ್ತಿರುವ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಅದೆಷ್ಟೋ ರಾಷ್ಟ್ರಗಳು ಇನ್ನೂ ಆರ್ಥಿಕವಾಗಿ ಹಿಂದುಳಿದಿವೆ. ಹೆಮ್ಮರವಾಗಿ ಬೆಳೆದಿರುವ ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 31 ಅಕ್ಟೋಬರ್‌ 2003 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲು ಅಂಗೀಕಾರ ನೀಡಿತು. ಅದೇ ವರ್ಷ ಡಿಸೆಂಬರ್‌ 9 ರಂದು ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಇದುವರೆಗೂ ಪ್ರತಿ ವರ್ಷ ಡಿಸೆಂಬರ್‌ 9 ರಂದು ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸುತ್ತಾ ಬರಲಾಗಿದೆ.

ಭಷ್ಟಾಚಾರ ವಿರೋಧಿ ದಿನದ ಮಹತ್ವ

ಭಷ್ಟಾಚಾರದ ವಿರುದ್ಧ ಹೋರಾಡುವುದು ಪ್ರತಿ ಜನ ಸಾಮಾನ್ಯರ ಕರ್ತವ್ಯವಾಗಿದೆ. ಕೆಲಸ ಸುಲಭವಾಗಿ ಆಗಲೆಂದು ಕೇಳಿದಷ್ಟು ಹಣ ನೀಡುವುದು, ದೂರು ಕೊಡಲು ಹಿಂದೇಟು ಹಾಕುವುದು ಹೆಚ್ಚಾಗಿದೆ. ಇದೇ ಕಾರಣಕ್ಕೆ ಭ್ರಷ್ಟಾಚಾರಿಗಳು ಯಾವುದೇ ಭಯವಿಲ್ಲದೆ ಲಂಚ ಪಡೆಯುತ್ತಿದ್ದಾರೆ. ಆದ್ದರಿಂದ ಎಲ್ಲೇ ಭ್ರಷ್ಟಾಚಾರ ಕಂಡು ಬಂದರೂ ಅದನ್ನು ಸಂಬಂಧಿಸಿದವರ ಗಮನಕ್ಕೆ ತರುವುದು ಮುಖ್ಯ. ನಿಮಗೆ ಯಾರೇ ಲಂಚಕ್ಕೆ ಬೇಡಿಕೆ ಇಟ್ಟರೂ ಧೈರ್ಯದಿಂದ ದೂರು ನೀಡಿ. ಲಂಚ ಪಡೆಯುವುದು ಎಷ್ಟು ಅಪರಾಧವೋ , ಕೊಡುವುದು ಕೂಡಾ ಅಷ್ಟೇ ಅಪರಾಧ. ಆದ್ದರಿಂದ ಎಲ್ಲಿಯಾದರೂ ಲಂಚ ಪಡೆಯುವುದು, ನೀಡುವುದು ನಿಮ್ಮ ಗಮನಕ್ಕೆ ಬಂದರೆ ದೂರು ನೀಡಲು ಹಿಂಜರಿಯಬೇಡಿ. ನೀವು ಇತರರಿಗೂ ಮಾದರಿಯಾಗಿ. ನಿಮ್ಮೊಬ್ಬರ ಕೆಲಸ ಇತರರಿಗೂ ಸ್ಫೂರ್ತಿಯಾಗಬಹುದು.

ಈ ದಿನವು ಭ್ರಷ್ಟಾಚಾರವನ್ನು ಎದುರಿಸಲು ಜಾಗತಿಕ ಸಹಕಾರವನ್ನು ಒತ್ತಿಹೇಳುತ್ತದೆ, ಸರ್ಕಾರಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುತ್ತದೆ. ನಮ್ಮ ಕೆಲಸ ಆಗಬೇಕು ಎನ್ನುವ ಕಾರಣಕ್ಕೆ ನಾವು ಭ್ರಷ್ಟಾಚಾರಿಗಳಾಗಬಾರದು. ತಳಮಟ್ಟದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾವು ಪಣ ತೊಡಬೇಕು. ಈ ದಿನ ಮಾತ್ರವಲ್ಲ, ಪ್ರತಿದಿನವೂ ಭ್ರಷ್ಟಾಚಾರ ವಿರೋಧ ದಿನವಾಗಬೇಕು.

Whats_app_banner