World Mental Health Day: ಮಾನಸಿಕ ಸಮಸ್ಯೆಗಳಿಂದ ಮುದುಡದಿರಲಿ ದೇಹ, ಮನಸ್ಸು; ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಉತ್ತಮ ಮಾನಸಿಕ ಆರೋಗ್ಯದ ಪ್ರಾಮುಖ್ಯ ತಿಳಿಸುವ, ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
ಮನುಷ್ಯರಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಮಾನಸಿಕ ಆರೋಗ್ಯಕ್ಕೂ ಉತ್ತಮವಾಗಿದ್ದರೆ, ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಉತ್ತಮ ಮಾನಸಿಕ ಆರೋಗ್ಯದ ಪ್ರಾಮುಖ್ಯ ತಿಳಿಸುವ, ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
ವಿಶ್ವ ಮಾನಸಿಕ ಆರೋಗ್ಯ ದಿನದಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೆಮಿನಾರ್‌ಗಳು, ಕಾರ್ಯಾಗಾರಗಳು, ಕಾರ್ಯಕ್ರಮಗಳು ಹಾಗೂ ಸಮ್ಮೆಳನಗಳಂತಹ ವಿವಿಧ ಚಟುವಟಿಕೆಗಳನ್ನು ಜಾಗತಿಕ ಮಟ್ಟದಲ್ಲಿ ನಡೆಸಲಾಗುತ್ತದೆ. ಆ ಮೂಲಕ ಮಾನಸಿಕ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸುವ ಮತ್ತು ಅವುಗಳನ್ನು ನಿರ್ವಹಿಸುವ ಹಾಗೂ ತಡೆಗಟ್ಟುವ ಕೆಲಸಗಳನ್ನು ಮಾಡಲಾಗುತ್ತಿದೆ.
ಮಾನಸಿಕ ಆರೋಗ್ಯ ಉತ್ತಮವಾಗಿರುವುದು ಇಡೀ ದೇಹದ ಕಾರ್ಯ ಚಟುವಟಿಕೆಯ ಸುಧಾರಣೆಯ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯ ಹದಗೆಡುವುದರಿಂದ ಖಿನ್ನತೆಯಂತಹ ಪರಿಸ್ಥಿತಿ ಉದ್ಭವವಾಗುವುದು ಮಾತ್ರವಲ್ಲ, ಇದರಿಂದ ದೈಹಿಕ ಆರೋಗ್ಯ ಸಮಸ್ಯೆಗಳೂ ಕೂಡ ಉಂಟಾಗುತ್ತವೆ. ಅಲ್ಲದೆ ಇದು ಜನರ ಜೀವನಕ್ರಮದ ಮೇಲೂ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ ಎಂಟರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಹದಿಹರೆಯದವರು ಹಾಗೂ ಎಳೆ ವಯಸ್ಸಿನವರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿವೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಹಲವು ಕಾರಣಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದರೂ ಕೂಡ ಮಾನಸಿಕ ಸಮಸ್ಯೆ ಇರುವವರನ್ನು ಜಗತ್ತು ನೋಡುವ ದೃಷ್ಟಿಯೇ ಬೇರೆಯಿದೆ. ಸಾಮಾನ್ಯವಾಗಿ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳನ್ನು ತಾರತಮ್ಯ ಮಾಡಲಾಗುತ್ತಿದೆ. ಅವರ ಮೂಲಭೂತ ಹಕ್ಕಗಳನ್ನು ಜನರು ಕಸಿಯುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರು ನಮ್ಮಂತೆಯೇ ಮನುಷ್ಯರು, ಅವರಿಗೆ ನಮ್ಮಂತೆ ಬದುಕುವ ಹಕ್ಕಿದೆ ಎಂಬುದನ್ನು ವಿಶ್ವ ಮಾನಸಿಕ ಆರೋಗ್ಯ ದಿನವು ಪ್ರತಿಪಾದಿಸುತ್ತದೆ. ಈ ಆಚರಣೆಯ ಮುಖ್ಯ ಉದ್ದೇಶವೆಂದರೆ ಜಗತ್ತಿನ ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮಾಡುವುದು.
ವಿಶ್ವ ಮಾನಸಿಕ ಆರೋಗ್ಯ ದಿನ 2023ರ ಥೀಮ್
ʼಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕುʼ ಎಂಬುದು ಈ ವರ್ಷ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ಆಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು, ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಬ್ಬರ ಮಾನಸಿಕ ಆರೋಗ್ಯವನ್ನುಸಾರ್ವತ್ರಿಕ ಮಾನವ ಹಕ್ಕು ಎಂದು ಸಾರುವ ಹಾಗೂ ಮಾನಸಿಕ ರೋಗಿಗಳನ್ನು ರಕ್ಷಿಸುವ ಕ್ರಮಗಳಿಗೆ ಚಾಲನೆ ನೀಡುವುದು ಈ ದಿನದ ಉದ್ದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ
1992ರಲ್ಲಿ ದಕ್ಷಿಣ ಆಫ್ರಿಕಾ ಕೇಪ್ ಟೌನ್‌ನಲ್ಲಿ ನಡೆದ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಕಾಂಗ್ರೆಸ್‌ನಲ್ಲಿ ಮಾನಸಿಕ ಆರೋಗ್ಯ ಜಾಗೃತಿಗಾಗಿ ಒಂದು ದಿನವನ್ನು ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಲಾಯಿತು. ಈ ಪ್ರಸ್ತಾಪವನ್ನು ಅಂಗೀಕರಿಸಿದ ನಂತರ 1992ರ ಅಕ್ಟೋಬರ್ 10ರಂದು ಮೊದಲ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು.
1948ರಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಸ್ಥಾಪನೆಯ ನೆನಪಿಗಾಗಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿರುವ ಜನರ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತದೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವ
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲು ಹಿಂದಿನ ಮಹತ್ವ ಅಪಾರವಾಗಿದೆ. ಆದರೂ ಈ ಕೆಲವು ಉದ್ದೇಶಗಳು ಈ ಆಚರಣೆಯಲ್ಲಿ ಮಹತ್ವ ಪಡೆಯುತ್ತವೆ.
- ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದರ ನಿರ್ವಹಣೆಯ ಬಗ್ಗೆ ತಿಳಿವಳಿಕೆ ಮೂಡಿಸುವುದು.
- ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಳಂಕಗಳು, ಕಟ್ಟುಕತೆಗಳು ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು.
- ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕ ಪಡುವ ಬದಲು ಜನರಿಗೆ ಸಹಾಯ ಪಡೆಯಲು ಪ್ರೋತ್ಸಾಹಿಸುವುದು.
- ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ವಿವಿಧ ಹಂತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಈ ಬಗ್ಗೆ ಶಿಕ್ಷಣ ನೀಡುವುದು. ಮಾನಸಿಕ ಆರೋಗ್ಯ ಸ್ಥಿರವಾಗಿರುವುದು ನಮ್ಮ ಒಟ್ಟಾರೆ ದೈಹಿಕ ಆರೋಗ್ಯ ಸುಧಾರಣೆಗೆ ಬಹಳ ಅವಶ್ಯ. ಯಾವುದೇ ಕಾರಣಕ್ಕೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ.
- ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿದಾಗ ಮಾನಸಿಕ ಆರೋಗ್ಯ ತಜ್ಞರು, ಕುಟುಂಬದವರು, ಸ್ನೇಹಿತರು ಅಥವಾ ಆತ್ಮೀಯರ ಬಳಿ ಯಾವುದೇ ಮುಜುಗರ ಅಂಜಿಕೆ ಇಲ್ಲದೆ ಸಹಾಯ ಪಡೆಯಬೇಕು.
- ಅಂತರರಾಷ್ಟ್ರೀಯ ಸಹಯೋಗಗಳ ಮೂಲಕ ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಗಮನ ನೀಡುವುದು