International Day of Mathematics: ಅಂತರರಾಷ್ಟ್ರೀಯ ಗಣಿತ ದಿನಕ್ಕೂ ಪೈಗೂ ಸಂಬಂಧವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
Pi Day 2025: ಗಣಿತದ ಪೈ ಬಗ್ಗೆ ನಿಮಗೂ ತಿಳಿದಿರಬಹುದು. ಪೈಯ ಮೌಲ್ಯವನ್ನು ಪ್ರತಿನಿಧಿಸುವ ದಿನವನ್ನು ಅಂತರರಾಷ್ಟ್ರೀಯ ಗಣಿತ ದಿನ ಎಂದು ಕರೆಯಲಾಗುತ್ತದೆ. ಈ ದಿನದ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

International Day of Mathematics: ಗಣಿತದಲ್ಲಿ ಪೈ(Pi) ಗೆ ವಿಶೇಷ ಮಹತ್ವವಿದೆ. ವೃತ್ತದ ಪರಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುತ್ತ ಮೊತ್ತವೇ ಪೈ, ಇದು ಜಗತ್ತಿನ ಅದ್ಭುತ ಅನ್ವೇಷಣೆಗಳಲ್ಲಿ ಒಂದು. ಗಣಿತ, ಸಂಖ್ಯಾಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಪೈ ಒಂದು ಪ್ರಮುಖ ಸಂಕೇತವಾಗಿದೆ. ಇದು ವೃತ್ತದ ಸುತ್ತಳತೆಯ ವ್ಯಾಸದ ಅನುಪಾತವಾಗಿದೆ. ಈ ಅನುಪಾತವು 3.14 PI ನ ಸ್ಥಿರಾಂಕವಾಗಿದೆ.
ಪೈಯ ಮೌಲ್ಯವನ್ನು ಪ್ರತಿನಿಧಿಸುವ ಹಾಗೂ ಪೈಯ ಮೌಲ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪೈ ದಿನ ಎಂದು ಕೂಡ ಕರೆಯುತ್ತಾರೆ. ಅಂತರರಾಷ್ಟ್ರೀಯ ಗಣಿತ ದಿನ ಯಾವಾಗ, ಈ ದಿನ ಇತಿಹಾಸ ಹಾಗೂ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಅಂತರರಾಷ್ಟ್ರೀಯ ಗಣಿತ ದಿನ ಯಾವಾಗ?
ಪ್ರತಿವರ್ಷ ಮಾರ್ಚ್ 14 ರಂದು ಅಂತರರಾಷ್ಟ್ರೀಯ ಗಣಿತ ದಿನ ಅಥವಾ ಪೈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಶುಕ್ರವಾರ ಅಂದರೆ ಇಂದು ಪೈ ದಿನವಿದೆ.
ಅಂತರರಾಷ್ಟ್ರೀಯ ಗಣಿತ ದಿನದ ಮಹತ್ವ?
1988ರಲ್ಲಿ ಭೌತಶಾಸ್ತ್ರಜ್ಞ ಲ್ಯಾರಿ ಶಾ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಎಕ್ಸ್‌ಪ್ಲೋರೇಟೋರಿಯಂನಲ್ಲಿ ದೊಡ್ಡ ಪ್ರಮಾಣದ ಆಚರಣೆಯನ್ನು ಆಯೋಜಿಸುವ ಮೂಲಕ ಈ ದಿನದ ಆಚರಣೆಗೆ ಮುನ್ನುಡಿ ಬರೆದರು. ಪೈ ಆಕಾರದ ಕೇಕ್ ರೀತಿಯ ತಿನಿಸನ್ನು ಕತ್ತರಿಸುವ ಮೂಲಕ ಅವರು ಈ ದಿನವನ್ನು ಆಚರಿಸಿದರು.
ಪೈಯ ಮೌಲ್ಯವನ್ನು ಮೊದಲು ಕಂಡುಹಿಡಿದಿದ್ದು ಗಣಿತತಜ್ಞ ಆರ್ಕಿಮಿಡಿಸ್. ಅದರ ನಂತರ 1737 ರಲ್ಲಿ ಲಿಯೊನ್ಹಾರ್ಡ್ ಯೂಲರ್ ಪೈ ಚಿಹ್ನೆಯನ್ನು ಬಳಸಿದಾಗ ವೈಜ್ಞಾನಿಕ ಸಮುದಾಯ ಅದನ್ನು ಅಂಗೀಕರಿಸಿತು. 2019ರ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ತನ್ನ 40ನೇ ಸಾಮಾನ್ಯ ಸಮ್ಮೇಳನದಲ್ಲಿ ಪೈ ದಿನವನ್ನು ಅಂತರರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಪೈಯ ಮಹತ್ವ
ಪೈ ಎಂಬುದು ಒಂದು ಅಭಾಗಲಬ್ಧ. ಇದು ಎಂದೂ ಮುಗಿಯದ್ದು ಕೂಡ ಹೌದು. ದಶಮಾಂಶ ಪ್ರಾತಿನಿಧ್ಯವು ಎಂದಿಗೂ ಕೊನೆಗೊಳ್ಳುವುದಿಲ್ಲ ಮತ್ತು ಎಂದಿಗೂ ಪುನರಾವರ್ತನೆಯಾಗುವುದಿಲ್ಲ. ಪೈ ನಿಖರವಾದ ಮೌಲ್ಯವನ್ನು ತಿಳಿಯಲು ಸಾಧ್ಯವಾಗದ ಕಾರಣ, ನಾವು ವೃತ್ತದ ನಿಖರವಾದ ವಿಸ್ತೀರ್ಣ ಅಥವಾ ಸುತ್ತಳತೆಯನ್ನು ಎಂದಿಗೂ ಕಂಡುಹಿಡಿಯಲಾಗುವುದಿಲ್ಲ.
ಈಜಿಪ್ಟ್‌ನ ಗಿಜಾದ ಪಿರಮಿಡ್‌ಗಳನ್ನು ಪೈ ತತ್ವಗಳ ಮೇಲೆ ನಿರ್ಮಿಸಲಾಗಿದೆ ಎಂದು ಈಜಿಪ್ಟ್‌ನ ಜನರು ನಂಬಿದ್ದರು. ಪಿರಮಿಡ್‌ಗಳ ಎತ್ತರ ಮತ್ತು ಅವುಗಳ ತಳಹದಿಯ ಪರಿಧಿಯ ನಡುವಿನ ಅನುಪಾತವು ವೃತ್ತದ ತ್ರಿಜ್ಯ ಮತ್ತು ಸುತ್ತಳತೆಯ ನಡುವಿನ ಅನುಪಾತಕ್ಕೆ ಸಮಾನವಾಗಿರುತ್ತದೆ.
ನಮ್ಮ ದೈನಂದಿನ ಜೀವನದಲ್ಲಿ ಗಣಿತದ ಮಹತ್ವವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪೈ ಒಂದು ಮೂಲಭೂತ ಸ್ಥಿರಾಂಕವಾಗಿದ್ದು, ಲೆಕ್ಕಾಚಾರಗಳನ್ನು ನಿರ್ವಹಿಸುವಲ್ಲಿ ಇದು ಮಹತ್ವದ್ದಾಗಿದೆ ಮತ್ತು ಗಣಿತವನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ ಮತ್ತು ಬಳಸುತ್ತಿದ್ದಾರೆ. ಗಣಿತ ಹಾಗೂ ವಿಜ್ಞಾನದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಇದರೊಂದಿಗೆ ಈ ದಿನ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರ ಜನ್ಮವೂ ಹೌದು. ವ್ಯಾಪಕವಾಗಿ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ 2018 ರಲ್ಲಿ ಈ ದಿನ ನಿಧನರಾದರು.
ಅಂತರರಾಷ್ಟ್ರೀಯ ಗಣಿತ ದಿನದ ವಿಶೇಷ
ನಮ್ಮ ದೈನಂದಿನ ಜೀವನದಲ್ಲಿ ಗಣಿತದ ಮಹತ್ವವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಜಗತ್ತಿನಾದ್ಯಂತ ಗಣಿತ ಉತ್ಸಾಹಿಗಳು ಈ ದಿನವನ್ನು ಆಚರಿಸುತ್ತಾರೆ. ಗಣಿತ ಶಿಕ್ಷಣ ಮತ್ತು ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಜಾಗತಿಕವಾಗಿ ವಿವಿಧ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಗಣಿತ ಸಂಸ್ಥೆಗಳು ಈ ದಿನವನ್ನು ವಿಶಿಷ್ಟ ಥೀಮ್‌ನೊಂದಿಗೆ ಆಚರಿಸುತ್ತವೆ. ಈ ವರ್ಷ ಗಣಿತ ಕಲೆ ಮತ್ತು ಸೃಜನಶೀಲತೆ ಎಂಬ ಥೀಮ್ ಅನ್ನು ಹೊಂದಿದೆ.
