World Childrens Day: ಇಂದು ವಿಶ್ವ ಮಕ್ಕಳ ದಿನ; ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಈ ದಿನ ಇತಿಹಾಸ, ಮಹತ್ವ ತಿಳಿಯಿರಿ
ಮಕ್ಕಳ ಕ್ಷೇಮಾಭಿವೃದ್ಧಿ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. 1959ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆಯ ನೆನಪಿಗಾಗಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಮನುಷ್ಯ ತನ್ನ ಜೀವನದಲ್ಲಿ ನಿಜವಾದ ಸ್ವರ್ಗ ಕಾಣುವುದು ಬಾಲ್ಯದ ದಿನಗಳಲ್ಲಿ. ಬಾಲ್ಯ ಎಂದರೆ ಮರೆಯಲಾರದ ಬದುಕಿನ ಕ್ಷಣಗಳು. ಬಾಲ್ಯದಲ್ಲಿ ಮಾತ್ರ ನಾವು ಯಾವುದೇ ಯೋಚನೆ ಇಲ್ಲದೆ ಸ್ವಚ್ಛಂದವಾಗಿ ಹಾರಾಡಿಕೊಂಡು ಇರಲು ಸಾಧ್ಯವಾಗುವುದು. ಆದರೆ ಬಾಲ್ಯವು ಬದುಕಿನ ನಿರ್ಣಾಯಕ ಹಂತವಾಗಿದ್ದು, ಉತ್ತಮ ಭವಿಷ್ಯಕ್ಕಾಗಿ ಗರಿಷ್ಠ ಪ್ರಮಾಣದ ಆರೈಕೆ, ಪೋಷಣೆ ಹಾಗೂ ಪಾಲನೆಯ ಅಗತ್ಯವಿರುತ್ತದೆ. ನವೆಂಬರ್ 20ರ ವಿಶ್ವ ಮಕ್ಕಳ ದಿನಾಚರಣೆಯು ಪ್ರಪಂಚದಾದ್ಯಂತ ಮಕ್ಕಳ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿಯ ಮಹತ್ವವನ್ನು ಸಾರುವ ದಿನವಾಗಿದೆ.
ಟ್ರೆಂಡಿಂಗ್ ಸುದ್ದಿ
ಈ ದಿನದ ಆಚರಣೆಯ ಅಂಗವಾಗಿ ರಾಷ್ಟ್ರಪತಿ ಭವನದ ಮುಂದೆ ನೀಲಿ ಬಣ್ಣದ ಬೆಳಕು ಹರಡಿರುವುದನ್ನು ಕಾಣಬಹುದಾಗಿದೆ. ಭಾರತ ಮಾತ್ರವಲ್ಲದೇ, ಪ್ರಪಂಚದಾದ್ಯಂತ ನೀಲಿ ಬಣ್ಣದ ಬೆಳಕು ಮಕ್ಕಳ ಹಕ್ಕು ಹಾಗೂ ಕ್ಷೇಮಾಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ.
ಈ ದಿನವನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ಮೀಸಲಿಡಲಾಗಿದೆ. ವಿಶ್ವಸಂಸ್ಥೆಯು 1959ರ ತನ್ನ ಸಾಮಾನ್ಯ ಸಭೆಯಲ್ಲಿ ಮಕ್ಕಳ ಹಕ್ಕುಗಳನ್ನು ಘೋಷಿಸಿತು, ಈ ದಿನ ನೆನಪಿಗಾಗಿ ಪ್ರತಿವರ್ಷ ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ವಿಶ್ವ ಮಕ್ಕಳ ದಿನದ ಇತಿಹಾಸ
ವಿಶ್ವ ಮಕ್ಕಳ ದಿನವನ್ನು 1954ರಲ್ಲಿ ಮೊದಲ ಬಾರಿ ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಸಹೋದರತ್ವದ ಪ್ರಚಾರ, ಮಕ್ಕಳ ಕಲ್ಯಾಣ ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನ, ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಅದೇ ದಿನ ಸಾಮಾನ್ಯಸಭೆಯು ಮಕ್ಕಳ ಹಕ್ಕುಗಳ ಸಮಾವೇಶವನ್ನು ಅಂಗೀಕರಿಸಿತು.
1990ರ ನಂತರ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆ ಮತ್ತು ಸಮಾವೇಶ ಎರಡನ್ನೂ ಅಂಗೀಕರಿಸಿದ ದಿನಾಂಕ ವಾರ್ಷಿಕೋತ್ಸವವನ್ನು ಈ ದಿನ ಆಚರಿಸಲಾಗುತ್ತದೆ.
ವಿಶ್ವ ಮಕ್ಕಳ ದಿನದ ಮಹತ್ವ
ವಿಶ್ವ ಮಕ್ಕಳ ದಿನವು ಎಲ್ಲಾ ವರ್ಗದ ಜನರಿಗೆ ಮಕ್ಕಳ ಹಕ್ಕುಗಳು ಮತ್ತು ಅವರ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವಾಗಿದೆ. ಯುವ ಪೀಳಿಗೆಗಾಗಿ ಜನರು ವಿವಿಧ ಆಯ್ಕೆಗಳನ್ನು ಮಾಡಲು ಇದು ಸುಸಂದರ್ಭವಾಗಿದೆ.
ತಂದೆ-ತಾಯಿ, ಶಿಕ್ಷಕರು, ದಾದಿಯರು, ವೈದ್ಯರು, ಸರ್ಕಾರಿ ಅಧಿಕಾರಿಗಳು, ನಾಗರಿಕ ಸಮಾಜದ ಕಾರ್ಯಕರ್ತರು, ಧಾರ್ಮಿಕ ಹಾಗೂ ಸಮುದಾಯದ ಹಿರಿಯರು, ಕಾರ್ಪೋರೇಟ್ ವಲಯಗಳು, ಮಾಧ್ಯಮ ಹಾಗೂ ಯುವ ಸಮುದಾಯ ಸೇರಿ ವಿಶ್ವ ಮಕ್ಕಳ ದಿನ ಆಚರಣೆಗೆ ವಿಶೇಷ ಅರ್ಥ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂಬುದನ್ನು ಈ ದಿನ ಸಾರುತ್ತದೆ.
ಬಹಳ ಹಿಂದಿನಿಂದಲೂ ಮಕ್ಕಳು ಎಂದರೆ ದೇವರ ಸಮಾನ ಎಂಬ ಮಾತಿದೆ. ಮಕ್ಕಳು ಜಗತ್ತಿನಲ್ಲಿ ಸುಳ್ಳು, ಮೋಸ ಅರಿಯದ ಜೀವಗಳು. ಆ ಮಕ್ಕಳ ಹಕ್ಕಿಗಾಗಿ, ಅವರ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಹೋರಾಡುವುದು ಅವಶ್ಯವಾಗಿದೆ.
ವಿಭಾಗ