World Saree Day: ಇಂದು ನೀರೆಯ ಅಂದ ಹೆಚ್ಚಿಸುವ ಸೀರೆ ದಿನ; ವಿಶ್ವ ಸೀರೆ ದಿನದ ಇತಿಹಾಸ, ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  World Saree Day: ಇಂದು ನೀರೆಯ ಅಂದ ಹೆಚ್ಚಿಸುವ ಸೀರೆ ದಿನ; ವಿಶ್ವ ಸೀರೆ ದಿನದ ಇತಿಹಾಸ, ಮಹತ್ವ ಹೀಗಿದೆ

World Saree Day: ಇಂದು ನೀರೆಯ ಅಂದ ಹೆಚ್ಚಿಸುವ ಸೀರೆ ದಿನ; ವಿಶ್ವ ಸೀರೆ ದಿನದ ಇತಿಹಾಸ, ಮಹತ್ವ ಹೀಗಿದೆ

ಸೀರೆ... ಭಾರತೀಯ ಸಂಸ್ಕೃತಿಯ ಪ್ರತೀಕ. ಹೆಣ್ಣುಮಕ್ಕಳಿಗೆ ಸೀರೆ ಮೇಲೆ ವಿಶೇಷ ಒಲವು. ಸೀರೆಗೂ ನೀರೆಗೂ ಅವಿನಾಭಾವ ಸಂಬಂಧ. ಇಂದು ವಿಶ್ವ ಸೀರೆ ದಿನ. ಪ್ರಪಂಚದಾದ್ಯಂತ ಡಿಸೆಂಬರ್‌ 21 ರಂದು ಸೀರೆ ದಿನ ಆಚರಿಸುತ್ತಾರೆ. ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ವಿಶ್ವ ಸೀರೆ ದಿನ
ವಿಶ್ವ ಸೀರೆ ದಿನ (Unplash )

ಸೀರೆಲಿ ಹುಡುಗಿರ ನೋಡಲೇಬಾರದು ನಿಲ್ಲೊಲ್ಲ ಟ್ರೆಂಪರೇಚರ್ರು, ಹೆಣ್ಣಿಗೆ ಸೀರೆ ಯಾಕೆ ಅಂದ... ಹೌದು ಹೆಣ್ಣಿಗೂ ಸೀರೆಗೂ ವಿಶೇಷ ಬಾಂಧವ್ಯ. ಆ ಕಾರಣಕ್ಕೆ ಹಲವು ಸಿನಿಮಾಗಳಲ್ಲಿ ಹೆಣ್ಣಿಗೂ ಸೀರೆಗೂ ಸಂಬಂಧ ಬೆಸೆದು ಹಾಡು ಹೊಸೆದಿದ್ದಾರೆ. ಹೆಣ್ಣುಮಕ್ಕಳಿಗೆ ಸೀರೆ ಎಂದರೆ ಒಲವು ಜಾಸ್ತಿ. ಸೀರೆಯುಟ್ಟ ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಹೆಚ್ಚು ಇಷ್ಟವಾಗುವುದರಲ್ಲೂ ಅನುಮಾನವಿಲ್ಲ. ಸೀರೆ ಘನತೆ, ಗೌರವ ಪ್ರತೀಕವೂ ಹೌದು. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೀರೆಯ ಮಹತ್ವ ನಿಜಕ್ಕೂ ಅಪಾರ.

ಅದೆಲ್ಲಾ ಸರಿ, ಇವತ್ತು ಸೀರೆ ಬಗ್ಗೆ ಇಷ್ಟೆಲ್ಲಾ ಯಾಕೆ ಮಾತಾಡ್ತಾ ಇದ್ದಾರೆ ಅಂದ್ಕೋತಿದೀರಾ, ಖಂಡಿತ ವಿಷ್ಯಾ ಇದೆ. ಇಂದು ವಿಶ್ವ ಸೀರೆ ದಿನ. ಪ್ರತಿದಿನ ವರ್ಷ ಡಿಸೆಂಬರ್‌ 21 ರಂದು ವಿಶ್ವ ಸೀರೆ ದಿನವನ್ನು ಆಚರಿಸುತ್ತಾರೆ. ನೇಕಾರರ ಸಮುದಾಯ ಮತ್ತು ಸೀರೆಗಳ ವಿಶಿಷ್ಠ ಕಲೆಯನ್ನು ಗೌರವಿಸುವ ಉದ್ದೇಶದಿಂದ 2020ರಲ್ಲಿ ವಿಶ್ವ ಸೀರೆ ದಿನ ಆಚರಣೆಯನ್ನು ಜಾರಿಗೊಳಿಸಲಾಯಿತು.

ಸಿಂಧೂರ ಕವಿಟಿ ಮತ್ತು ನಿಸ್ತುಲಾ ಹೆಬ್ಬಾರ್ ಎಂಬಿಬ್ಬರು ಸೀರೆ ದಿನದ ಆಚರಣೆಗೆ ಮುನ್ನಡಿ ಬರೆದರು. ಶೀಘ್ರದಲ್ಲೇ ಇದು ರಾಷ್ಟ್ರೀಯ ಮನ್ನಣೆ ಗಳಿಸಿತು.

ಆದರೆ 2009ರಲ್ಲಿ ನಳಿನಿ ಶೇಖರ್‌ ಎನ್ನುವವರು ಸೀರೆಗಳನ್ನು ಪುನರುಜ್ಜೀವನಗೊಳಿಸಲು ಹಾಗೂ ಸೀರೆಯ ಪರಂಪರೆಯನ್ನು ಉಳಿಸಿಕೊಳ್ಳಲು ಬಯಸಿ ಈ ದಿನದ ಆಚರಣೆಯನ್ನು ಆರಂಭಿಸಿದರು ಎನ್ನಲಾಗುತ್ತದೆ. ನಳಿನಿ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಇವರ ಪ್ರಯತ್ನವು ಭಾರತವು ವೈವಿಧ್ಯತೆಯನ್ನು ಆಚರಿಸಲು ಮತ್ತು ಸೀರೆಯ ಬಹುಮುಖತೆಯನ್ನು ಪ್ರದರ್ಶಿಸಲು ಉತ್ತಮ ಪ್ರಯತ್ನವಾಗಿದೆ. ಇಂದು ಭಾರತೀಯರು ಮಾತ್ರವಲ್ಲ, ವಿದೇಶಿಗರು ಸೀರೆಯನ್ನು ಮೆಚ್ಚಿ ಉಡುತ್ತಿದ್ದಾರೆ. ದುಬಾರಿ ಬೆಲೆಯ ಸೀರೆಗಳಿಂದ ಅತಿ ಕಡಿಮೆಯ ಬೆಲೆಯ ಸೀರೆಗಳು ಲಭ್ಯವಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿರಲಿ ಅದರಲ್ಲಿ ಹೆಣ್ಣುಮಕ್ಕಳು ಸೀರೆಯುಟ್ಟು ಮಿಂಚುವುದನ್ನು ಗಮನಿಸಬಹುದಾಗಿದೆ.

ಇತಿಹಾಸ, ಮಹತ್ವ

ಸೀರೆ ಇತಿಹಾಸವು ಸಿಂಧೂ ನಾಗರಿಕತೆಯ ಕಾಲದಿಂದಲೂ ಇತ್ತು ಎನ್ನಲಾಗುತ್ತದೆ. ಅಂದರೆ ಕ್ರಿಸ್ತಪೂರ್ವ 2,800 ರಿಂದ 1800ಕ್ಕೂ ಹಿಂದಿನ ಇತಿಹಾಸವನ್ನು ಸೀರೆ ಹೊಂದಿದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಸೀರೆ ಬಳಕೆ ಹೆಚ್ಚಿದೆ. ಒಟ್ಟು 80ಕ್ಕೂ ಹೆಚ್ಚು ಬಗೆಯ ಸೀರೆಯ ವಿಧಗಳಿವೆ.

ವಿಶ್ವ ಸೀರೆಯು ದಿನವು ಸೀರೆಯ ಮಹತ್ವವನ್ನು ಸಾರುವ ದಿನವಾಗಿದೆ. ಅನಾದಿಕಾಲದಿಂದಲೂ ಭಾರತದಲ್ಲಿ ಸೀರೆ ಉಡುವ ಸಂಪ್ರದಾಯವಿತ್ತು. ಸೀರೆ ಭಾರತದ ಹೆಮ್ಮೆಯ ಪ್ರತೀಕವೂ ಹೌದು. ಈ ಸಾಂಪ್ರದಾಯಿಕ ಭಾರತೀಯ ಉಡುಪಿನ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ದಿನ ವಿಶ್ವ ಸೀರೆ ದಿನ. ಇದು ನಮ್ಮ ಭಾರತೀಯ ಸಂಸ್ಕೃತಿಯ ಮೂಲ ಹಾಗೂ ಪರಂಪರೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಬಹುಮುತೆಯನ್ನು ಜಗತ್ತಿನ ಸಾರುವ, ಸೀರೆ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸೀರೆ ದಿನವನ್ನು ಆಚರಿಸಲಾಯಿತು.

ಸೀರೆಯುಟ್ಟಾಗ ಹೆಣ್ಣುಮಕ್ಕಳ ಅಂದ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ. ಇದೊಂದು ಕೇವಲ ಉಡುಪಲ್ಲ. ಭಾರತೀಯ ಮಹಿಳೆಯರಿಗೆ ಶಕ್ತಿಯ ಸಂಕೇತ. ಪ್ರಾಚೀನ ಕಾಲದಿಂದಲೂ ಸೀರೆ ಅಸ್ತಿತ್ವದಲ್ಲಿದ್ದರೂ ಸೀರೆಯ ಸ್ವರೂಪಗಳು ಬದಲಾಗುತ್ತಲೇ ಇವೆ. ಆದರೂ ಎಂದಿಗೂ ಸೀರೆ ಘನತೆ, ಗೌರವ ಉಳಿಸಿಕೊಂಡು ಬಂದಿದೆ ಎಂಬುದು ಮಾತ್ರ ಸುಳ್ಳಲ್ಲ.

ವಿಶ್ವ ಸೀರೆ ದಿನ 2023

ಈ ದಿನದಂದು ಪ್ರಪಂಚದಾದ್ಯಂತ ಸೀರೆ ಪ್ರೇಮಿಗಳು ಒಂದಾಗುತ್ತಾರೆ. ತಮ್ಮಿಷ್ಟದ ಸೀರೆಯುಟ್ಟು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಅಭಿಯಾನ ಮಾಡುತ್ತಾರೆ. ಆ ಮೂಲಕ ಸೀರೆಯ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ. ಈ ದಿನ ಸೀರೆ ಎಕ್ಸಿಬಿಷನ್‌, ಸೀರೆ ಮೇಳಗಳು, ಕೈಮಗ್ಗ ಪ್ರದರ್ಶನ, ನೇಕಾರರ ವೃತ್ತಿಯನ್ನು ತೋರಿಸುವ ಎಕ್ಸಿಬಿಷನ್‌ಗಳು ನಡೆಯುತ್ತವೆ.

ಈ ದಿನದಂದು ತಮ್ಮ ತಾಯಿ ಅಥವಾ ಅಜ್ಜಿಯ ಸೀರೆಯುಟ್ಟು ಹೆಣ್ಣುಮಕ್ಕಳು ಸಾಮಾಹಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವ ಮೂಲಕ ಸೀರೆ ದಿನವನ್ನು ಸಂಭ್ರಮಿಸುವುದನ್ನೂ ಕಾಣಬಹುದು.