ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಅಳಿವಿನಂಚಿನಲ್ಲಿದೆ ಅಂಬೇಡ್ಕರ್‌ ಕನಸಿನ ಪ್ರಜಾಪ್ರಭುತ್ವ, ಬಲವಾಗಲಿ ಆಶಯ; ಅರುಣ ಜೋಳದ ಕೂಡ್ಲಿಗಿ ಬರಹ-international democracy day 2024 dr br ambedkar and his dream of democracy what is purpose of democracy rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಅಳಿವಿನಂಚಿನಲ್ಲಿದೆ ಅಂಬೇಡ್ಕರ್‌ ಕನಸಿನ ಪ್ರಜಾಪ್ರಭುತ್ವ, ಬಲವಾಗಲಿ ಆಶಯ; ಅರುಣ ಜೋಳದ ಕೂಡ್ಲಿಗಿ ಬರಹ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಅಳಿವಿನಂಚಿನಲ್ಲಿದೆ ಅಂಬೇಡ್ಕರ್‌ ಕನಸಿನ ಪ್ರಜಾಪ್ರಭುತ್ವ, ಬಲವಾಗಲಿ ಆಶಯ; ಅರುಣ ಜೋಳದ ಕೂಡ್ಲಿಗಿ ಬರಹ

ಇಂದು (ಸೆಪ್ಟೆಂಬರ್‌ 15) ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಪ್ರಜಾಪ್ರಭುತ್ವ ಎಂದರೆ ನೆನಪಾಗುವ ಡಾ. ಬಿಆರ್‌ ಅಂಬೇಡ್ಕರ್ ಅವರ ಕನಸಿನ ಪ್ರಜಾಪ್ರಭುತ್ವಈಗ ಅಳಿವಿನಂಚಿಲ್ಲಿದೆ ಎಂದು ಅನ್ನಿಸದೇ ಇರುವುದಿಲ್ಲ. ಅದಕ್ಕೆ ಕಾರಣವೇನು, ಅಂಬೇಡ್ಕರ್ ಕಂಡ ಪ್ರಜಾಪ್ರಭುತ್ವದ ಕನಸು ಏನಿತ್ತು ಎಂಬುದನ್ನು ಫೇಸ್‌ಬುಕ್‌ನಲ್ಲಿ ವಿವರವಾಗಿ ಬರೆದಿದ್ದಾರೆ ಅರುಣ ಜೋಳದ ಕೂಡ್ಲಿಗಿ.

ಅಳಿವಿನಂಚಿನಲ್ಲಿದೆ ಅಂಬೇಡ್ಕರ್‌ ಕನಸಿನ ಪ್ರಜಾಪ್ರಭುತ್ವ, ಬಲವಾಗಲಿ ಆಶಯ
ಅಳಿವಿನಂಚಿನಲ್ಲಿದೆ ಅಂಬೇಡ್ಕರ್‌ ಕನಸಿನ ಪ್ರಜಾಪ್ರಭುತ್ವ, ಬಲವಾಗಲಿ ಆಶಯ

ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) 2008 ರಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯನ್ನು ಆರಂಭಿಸಿತು. ಫಿಲಿಫೈನ್ಸ್ ಜನಚಳವಳಿಯ ಹೋರಾಟಗಾರ್ತಿ ಕೊರಾಜನ್ ಸಿ.ಅಕ್ವಿನೋ ‘ಪೀಪಲ್ ಪವರ್ ರೆವಲೂಷನ್’ ಮೂಲಕ ಫಡಿನಾಂಡ್ ಮಾರ್ಕೋಸ್‌ನ 20 ವರ್ಷಗಳ ಸರ್ವಾಧಿಕಾರವನ್ನು ಕೊನೆಗೊಳಿಸಿ 1986 ರ ಸೆಪ್ಟೆಂಬರ್ 15ರಂದು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುತ್ತಾಳೆ. ಇದು ಗಂಡಿನ ವಿರುದ್ಧದ ಹೆಣ್ಣಿನ ವಿಜಯದ ಸಂಕೇತವೂ ಕೂಡ. ಹಾಗಾಗಿ ನಿಜಾರ್ಥದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅರ್ಥಪೂರ್ಣ.

ಇದೀಗ ಜಗತ್ತಿನಲ್ಲಿ ಹೆಚ್ಚುತ್ತಿರುವ ಚುನಾಯಿತ ಸರ್ವಾಧಿಕಾರದ ಅಪಾಯಗಳನ್ನು ಜನರಿಗೆ ಮನವರಿಕೆ ಮಾಡಲು ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2024ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷಣೆಯಾಗಿ ‘ಆಡಳಿತ ಮತ್ತು ನಾಗರೀಕರ ಒಳಗೊಳ್ಳುವಿಕೆಗಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಹೊರಗಿಡುವುದು’ ಎಂದು ಗುರುತಿಸಲಾಗಿದೆ. ಇದು ತುಂಬಾ ಕ್ರಾಂತಿಕಾರಿ ತಂತ್ರಜ್ಞಾನವಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪ್ರಜಾಪ್ರಭುತ್ವದ ಆಶಯಗಳಿಗೆ ತಂದೊಡ್ಡಬಹುದಾದ ಅಪಾಯಗಳ ಕುರಿತಂತೆ ಎಚ್ಚರಿಸುವ ಒಂದು ಬಗೆಯಾಗಿದೆ. ಹೀಗಿರುವಾಗ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕಂಡ ಪ್ರಜಾಪ್ರಭುತ್ವದ ವ್ಯಾಖ್ಯಾನ ಗ್ರಹಿಕೆ ಮತ್ತು ಕನಸುಗಳನ್ನು ಜಾಗತಿಕ ಸಮುದಾಯಕ್ಕೆ ಪರಿಣಾಮಕಾರಿಯಾಗಿ ತಿಳಿಸಬೇಕಿದೆ. 2008ರಿಂದ ಐ.ಪಿ.ಯು ವಾರ್ಷಿಕವಾಗಿ ಘೋಷಿಸಿದ ಘೋಷಣೆಗಳನ್ನು ಗಮನಿಸಿದರೆ ಇವು ಅಂಬೇಡ್ಕರ್ ಕನಸಿನ ಪ್ರಜಾಪ್ರಭುತ್ವದ ಲಕ್ಷಣಗಳಂತೆ ಕಾಣುತ್ತಿದೆ.

ಡಾ. ಬಿಆರ್‌ ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವ

ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಬಹಳ ಆಳವಾಗಿ ಚಿಂತಿಸಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವಾಗಲೆಲ್ಲಾ ಜಾಗತಿಕ ರಾಜಕೀಯ ವಿದ್ಯಮಾನಗಳನ್ನು ಗುರುತಿಸುತ್ತಾರೆ. ಅಂದರೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಚಿಂತನೆ ಜಾಗತಿಕ ದಮನಕ್ಕೊಳಗಾದ ಜನಸಮುದಾಯಗಳ ಸಮತೆಯ ಕನಸಾಗಿದೆ. ಈ ಕಾರಣಕ್ಕಾಗಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಅರಿವನ್ನು ಜಾಗತಿಕ ಅರಿವಿನ ನೆಲೆಯಲ್ಲಿ ವಿಸ್ತರಿಸಬೇಕಿದೆ. ಮುಂದೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ವರ್ಷದ ಥೀಮ್ ಆಗಿಸಲು ಜಾಗತಿಕವಾಗಿ ಭಾರತ ಸರ್ಕಾರ ಒತ್ತಾಯಿಸಬೇಕಾಗಿದೆ.

ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕನಸಿನ ಬೇರುಗಳು ಬೌದ್ಧಧಮ್ಮದಲ್ಲಿವೆ. ಬುದ್ಧ ಒಮ್ಮೆ ಬಿಕ್ಕುಗಳಿಗೆ ಉಪದೇಶಿಸುವಾಗ ರಾಜ ಒಳ್ಳೆಯವನಾಗಿದ್ದರೆ, ಪ್ರಜೆಗಳೂ ಒಳ್ಳೆಯವರಾಗಿರುತ್ತಾರೆ, ರಾಜನು ಕ್ರೂರಿಯಾದರೆ, ಪ್ರಜೆಗಳೂ ಕ್ರೂರಿಗಳಾಗುತ್ತಾರೆ ಎನ್ನುವುದನ್ನು ವಿಸ್ತರಿಸಿ ದೀರ್ಘವಾಗಿ ಮಾತನಾಡುತ್ತಾರೆ. ಇದರಲ್ಲಿ ಒಬ್ಬ ರಾಜ ಸರ್ವಾಧಿಕಾರಿಯಾಗಿರಬಾರದು ಎನ್ನುವ ಆಶಯವಿದೆ. ತರ್ಕ, ಪ್ರಯೋಗ, ಆನ್ವಯಿಕತೆಯ ಸೂತ್ರವಿರುವ ಬೌದ್ಧ ಧರ್ಮದ ವೈಜ್ಞಾನಿಕ ಮನೋಭಾವವನ್ನು ಒಳಗೊಂಡಂತೆ, ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎನ್ನುವ ಮೂಲಭೂತ ತತ್ವವನ್ನೂ ಸೇರಿ ಬೌದ್ಧ ಧರ್ಮದಲ್ಲಿ ಪ್ರಜಾಪ್ರಭುತ್ವ ತತ್ವ ಆಳವಾಗಿ ಬೇರೂರಿವೆ. ಹೀಗಾಗಿ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರ ಆಗುವ ಮೂಲಕ ಪ್ರಜಾಪ್ರಭುತ್ವಕ್ಕೆ ರೂಪಾಂತರಗೊಂಡರು.

ಆರ್ಥಿಕ ಪ್ರಜಾಪ್ರಭುತ್ವದ ವಾಖ್ಯಾನ 

ಅಂಬೇಡ್ಕರ್ ಜಾಗತಿಕವಾಗಿ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುವಾಗ ಆರ್ಥಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ರಚನಾ ಸಂಭೆಯಲ್ಲಿ ‘ರಾಜಕೀಯ ಪ್ರಜಾಪ್ರಭುತ್ವವು ಸಂವಿಧಾನದಲ್ಲಿ ಸ್ಥಾಪಿತವಾಗಿರುವುದು ಒಂದು ನಿರಂತರ ಸರ್ವಾಧಿಕಾರತ್ವ ಅಥವಾ ಯಾವುದೇ ಪ್ರತ್ಯೇಕ ಜನರ ಸಂಸ್ಥಾನವನ್ನು ಸ್ಥಾಪಿಸುವುದಲ್ಲ, ಬದಲಾಗಿ ರಾಜಕೀಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಮೇಲೆ, ಒಂದು ಆದರ್ಶ ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಸಹ ನಮ್ಮ ಕನಸಾಗಿದೆ’ ಎನ್ನುತ್ತಾರೆ. ಮುಂದುವರಿದು ‘ಜನರು ರಾಜಕೀಯದಲ್ಲಿ ಪ್ರವೇಶಿಸಿ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದಷ್ಟೇ ಅಲ್ಲ, ಯಾರು ಸರ್ಕಾರದ ರಚನೆ ಮಾಡುವರೋ ಅಂಥವರ ಮುಂದೆ ಈ ಸಂವಿಧಾನ ಒಂದು ಆದರ್ಶವನ್ನು ಮುಂದಿಡುತ್ತದೆ; ಆ ಆದರ್ಶವೇ ‘ಆರ್ಥಿಕ ಪ್ರಜಾಪ್ರಭುತ್ವ.’ ಎನ್ನುತ್ತಾರೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಚುನಾಯಿತ ಸರ್ವಾಧಿಕಾರವನ್ನು ನಿಯಂತ್ರಿಸುತ್ತಿರುವುದು ಕ್ರೋನಿಕ್ಯಾಪಿಟಲ್ ಶಕ್ತಿಗಳು. ಇದು ಭಾರತಕ್ಕೂ ಅನ್ವಯವಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಅಂತರನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ದೇಶದಲ್ಲಿ ಅಂಬೇಡ್ಕರ್ ಕನಸಿನ ಆರ್ಥಿಕ ಪ್ರಜಾಪ್ರಭುತ್ವ ಇದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಅಂಬೇಡ್ಕರ್ ಅವರು 1952 ಡಿಸೆಂಬರ್ 22 ರಂದು ಪೂನಾದಲ್ಲಿ ಮಾಡಿದ ಭಾಷಣದಲ್ಲಿ, ‘ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಇರುವ ಮೂಲಭೂತ ನಿಯಮಗಳು’ ಕುರಿತು ಮಾಡುತ್ತಾರೆ. ಇದರಲ್ಲಿ ಮೊದಲನೆಯದಾಗಿ ಸಮಾಜದಲ್ಲಿ ಕಣ್ಣಿಗೆ ರಾಚುವ ಅಸಮಾನತೆ ಇರಬಾರದು. ಅಸಮಾನತೆ ಹೆಚ್ಚಾದರೆ ಇದರ ಹೊಟ್ಟೆಯೊಳಗೆ ಹಿಂಸೆಯ ಬೀಜಗಳು ಮೊಳೆಯುತ್ತವೆ ಎನ್ನುತ್ತಾರೆ. ಆಡಳಿತ ಪಕ್ಷವನ್ನು ಕಠಿಣ ಪರೀಕ್ಷೆಗೆ ಒಳಪಡಿಸುವ ಒಂದು ಪ್ರಭಲ ವಿರೋಧ ಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಆಡಳಿತ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನವಾಗಿರಬೇಕು. ಸಂವಿಧಾನದ ಮೌಲ್ಯಗಳನ್ನು ಮೀರಿದಾಗ, ಒಂದು ಗಂಭೀರ ತಪ್ಪು ಮಾಡಿದಾಗ ಆಗುವ ವೇದನೆಯಾಗಿ ಮನುಷ್ಯ ಪರಿವರ್ತನೆ ಆಗಬೇಕು. ಈ ಬಗೆಯ ಸಂವಿಧಾನಿಕ ನೈತಿಕತೆ ಜನರಲ್ಲಿ ನೆಲೆಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎನ್ನುತ್ತಾರೆ.

ಪ್ರಜಾಪ್ರಭುತ್ವದ ಗುರಿ ‘ಜನ ಕಲ್ಯಾಣ’

ಕೊನೆಯ ದಿನಗಳಲ್ಲಿ ಅಂಬೇಡ್ಕರ್ ಆತ್ಯಂತಿಕವಾಗಿ ಪ್ರಜಾಪ್ರಭುತ್ವದ ಆಶಯಗಳಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾರೆ. 1936ರಲ್ಲಿ ಅಂಬೇಡ್ಕರ್ ವರ್ಗಪ್ರಜ್ಞೆಯಲ್ಲಿ ಜಾಗತಿಕ ಕಾರ್ಮಿಕರ ಸಂಘಟನೆಯ ಜತೆ ರಾಜಕೀಯ ಸಮೀಕರಣದ ಕನಸೊತ್ತು, ಜಾತಿ ತರತಮದ ಅಸಮಾನತೆಯ ಆಧಾರದ ಮೇಲೆ ಕಾರ್ಮಿಕರ ವಿಭಜನೆಯನ್ನು ಆಧರಿಸಿ ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’ (ಐ.ಎಲ್.ಪಿ) ಸ್ಥಾಪಿಸುತ್ತಾರೆ. ಮುಂದೆ ಅಸ್ಪೃಶ್ಯ ದಮನಿತ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು 1947ರಲ್ಲಿ ‘ಅಖಿಲ ಭಾರತ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್’ (ಎಸ್.ಸಿ.ಎಫ್) ಎಂಬ ರಾಜಕೀಯ ಪಕ್ಷವನ್ನೂ ಸ್ಥಾಪಿಸುತ್ತಾರೆ. ಕೊನೆಯದಾಗಿ ಸೆಪ್ಟೆಂಬರ್ 30, 1956ರಲ್ಲಿ ಅಂಬೇಡ್ಕರ್ ಒಂದು ರಾಷ್ಟ್ರೀಯ ಪಕ್ಷದ ನೆಲೆಯಲ್ಲಿ ಸಂವಿಧಾನವನ್ನು ಬಲಗೊಳಿಸಲು ಪ್ರಜಾಪ್ರಭುತ್ವದ ಆಶಯಗಳನ್ನು ನೆಲೆಗೊಳಿಸುವ ಕನಸೊತ್ತು ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ (ಆರ್.ಪಿ.ಐ) ಸ್ಥಾಪಿಸಿದರು. ಭಾರತೀಯ ಸಂವಿಧಾನವನ್ನು ನಿಜವಾದ ಅರ್ಥದಲ್ಲಿ ಜಾರಿಗೊಳಿಸಲು ಈ ಪಕ್ಷವನ್ನು ಸ್ಥಾಪಿಸಲಾಗಿದೆ, ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವವೇ ಅದರ ಮುಖ್ಯ ಗುರಿ ಎನ್ನುತ್ತಾರೆ. ಆರ್.ಪಿ.ಐ ಪಕ್ಷಕ್ಕೆ ಆಹ್ವಾನಿಸುವಾಗ ಬರೆದ ತೆರೆದ ಪತ್ರದಲ್ಲಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಬಗೆಗಿನ ತಾತ್ವಿಕ ಬಿಕ್ಕಟ್ಟುಗಳನ್ನು ತುಂಬಾ ಸೂಕ್ಷ್ಮವಾಗಿ ವಿವರಿಸುತ್ತಾರೆ. ರಾಜಸತ್ತೆಯನ್ನು ಕೊನೆಗೊಳಿಸಲೆಂದು ಪ್ರಜಾಪ್ರಭುತ್ವದ ಜನ್ಮತಳೆದರೂ, ಇದೀಗ ಪ್ರಜಾಪ್ರಭುತ್ವದ ಗುರಿ ‘ಜನ ಕಲ್ಯಾಣ’ ಎನ್ನುತ್ತಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಕತ್ತು ಹಿಸುಕುವ ಕೆಲಸ ಆಗಬಾರದು. ಕಡೆಯದಾಗಿ ವಿಚಾರವಂತ ಜನಸಮುದಾಯ (Public Conscience) ಇರಬೇಕು. ಸಮಾಜದಲ್ಲಿ ವ್ಯಾಪಕ ಅನ್ಯಾಯ ಅಕ್ರಮ ದೌರ್ಜನ್ಯಗಳು ನಡೆದಾಗ ಇದರ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ. ಪ್ರಜ್ಞಾವಂತ ಜನರು ಅನ್ಯಾಯದ ವಿರುದ್ಧ ಮೌನ ತಾಳಬಾರದು ಎನ್ನುತ್ತಾರೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿ, ಅವರ ತಿಳಿವನ್ನು ಹರಳುಗಟ್ಟಿಸಿ ಪ್ರಜಾಪ್ರಭುತ್ವಕ್ಕೆ ಒಂದು ವ್ಯಾಖ್ಯಾನ ಕೊಡುತ್ತಾರೆ, ‘ರಕ್ತಪಾತವಿಲ್ಲದೆ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರ್ಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ' ಪ್ರಜಾಪ್ರಭುತ್ವ ಎನ್ನುತ್ತಾರೆ.

World inequality database ಸಂಸ್ಥೆಯು ಮಾರ್ಚ್, 18, 2024 ರಂದು ಈ ಸಂಶೋಧನ ವರದಿ ಪ್ರಕಟಿಸಿದೆ. 2022-23 ರಲ್ಲಿ 46.12 ಕೋಟಿ ಜನರು ಬಡವರಾಗಿದ್ದು ಅವರ ಒಟ್ಟು ವಾರ್ಷಿಕ ಆದಾಯವು ಶೇ.15 ರಷ್ಟಿದೆ, ಒಟ್ಟು ಸಂಪತ್ತು ಶೇ.6.4 ರಷ್ಟಿದೆ. ಇದೀಗ ದೇಶದ ಶ್ರೀಮಂತರ ಸಂಖ್ಯೆ 9.23 ಕೋಟಿಯಾಗಿದ್ದು ಇವರ ಪ್ರಮಾಣ ಶೇ10 ರಷ್ಟಿದೆ. ವಾರ್ಷಿಕ ಆದಾಯದಲ್ಲಿ ಇವರ ಪಾಲು ಶೇ.57.7 ರಷ್ಟು ಹಾಗೂ ಶೇ.65 ರಷ್ಟು ಸಂಪತ್ತು ಹೊಂದಿದ್ದಾರೆ. ಈ ವಿವರ ನೋಡಿದರೆ ಅಂಬೇಡ್ಕರ್ ಹೇಳುವ ಆರ್ಥಿಕ ಪ್ರಜಾಪ್ರಭುತ್ವ ನೆಲಸಮವಾಗಿರುವುದು ಕಾಣುತ್ತಿದೆ. ಹೀಗೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕನಸುಗಳನ್ನು ನೋಡುತ್ತಾ ಹೋದರೆ, ಅವರ ಕನಸಿನ ಪ್ರಜಾಪ್ರಭುತ್ವ ಇಂದು ಅಳಿವಿನಂಚಿನಲ್ಲಿದೆ. ಇಂದು ಅಂಬೇಡ್ಕರ್ ಅವರನ್ನು ಜೀವಂತಗೊಳಿಸುವುದು ಅಂದರೆ ಪ್ರಜಾಪ್ರಭುತ್ವದ ಆಶಯಗಳನ್ನು ಬಲಗೊಳಿಸಲು ಹೋರಾಟ ನಡೆಸುವುದೇ ಆಗಿದೆ.

 ಬರಹ: ಅಜೋ (ಅರುಣ ಜೋಳದ ಕೂಡ್ಲಿಗಿ)

mysore-dasara_Entry_Point