International Education Day: ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಜ 24ಕ್ಕೆ ಆಚರಿಸುವುದೇಕೆ? ಈ ದಿನದ ಮಹತ್ವ, 2025 ರ ಥೀಮ್ ಕುರಿತ ವಿವರ
ಶಿಕ್ಷಣ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಶಿಕ್ಷಣದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24ಕ್ಕೆ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಜನವರಿ 24ಕ್ಕೆ ಶಿಕ್ಷಣ ದಿನ ಆಚರಿಸುವುದೇಕೆ, ಈ ದಿನದ ಆಚರಣೆಯ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ.

ನಮ್ಮ ವೈಯಕ್ತಿಕ ಬದುಕು ಮಾತ್ರವಲ್ಲ, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಮಗುವೊಂದು ಕಲಿತರೆ ಶಾಲೆಯೊಂದು ತೆರದಂತೆ, ಶಿಕ್ಷಣವು ಸಮಾಜ ಬದಲಿಸುವ ಮೂಲಮಂತ್ರ ಎಂಬ ಮಾತುಗಳು ಖಂಡಿತ ಅತಿಶಯೋಕ್ತಿಯಲ್ಲ. ಶಿಕ್ಷಣ ಅಥವಾ ಓದು ಎನ್ನುವುದು ಮನುಷ್ಯನನ್ನ ವಿಕಾಸದೆಡೆಗೆ ಸಾಗುವಂತೆ ಮಾಡುತ್ತದೆ.
ಪ್ರತಿ ವರ್ಷ, ಶಾಂತಿ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಶಿಕ್ಷಣದ ಮಹತ್ವವನ್ನು ಗುರುತಿಸಲು ಪ್ರಪಂಚದಾದ್ಯಂತ ಜನವರಿ 24ಕ್ಕೆ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ತರುವ ಸಲುವಾಗಿ 2018ರ ಡಿಸೆಂಬರ್ 3ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಈ ದಿನವನ್ನು ಅಂಗೀಕರಿಸಿತು. 2019ರ ಜನವರಿ 24 ರಂದು ಮೊದಲ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಯಿತು. 2018 ರಿಂದ 59 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ಕಾರ್ಯಕ್ರಮವನ್ನು ಆಚರಿಸುತ್ತಿವೆ.
2025ರ ಅಂತರರಾಷ್ಟ್ರೀಯ ಶಿಕ್ಷಣ ದಿನದ ಥೀಮ್ ಏನು?
ಈ ಬಾರಿ ನಾವು 7ನೇ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸುತ್ತಿದ್ದೇವೆ. ಈ ವರ್ಷ ‘ಎಐ ಮತ್ತು ಶಿಕ್ಷಣ: ಯಾಂತ್ರೀಕೃತ ಜಗತ್ತಿನಲ್ಲಿ ಮಾನವ ವ್ಯವಸ್ಥೆಯನ್ನು ಸಂರಕ್ಷಿಸುವುದು‘ ಎನ್ನುವುದು 2025ರ ಅಂತರರಾಷ್ಟ್ರೀಯ ಶಿಕ್ಷಣ ದಿನದ ಥೀಮ್ ಆಗಿದೆ. ಶಿಕ್ಷಣ ಮತ್ತು ಭವಿಷ್ಯದ ಕಾರ್ಯತಂತ್ರಗಳ ಮೇಲೆ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸಲು ಈ ವಿಷಯವನ್ನು ಆಯ್ಕೆ ಮಾಡಲಾಗಿದೆ. ತಂತ್ರಜ್ಞಾನವು ವೇಗವಾಗಿ ವಿಕಸನಗೊಳ್ಳುತ್ತಿದ್ದಂತೆ, ಎಐ ಮತ್ತು ಯಾಂತ್ರೀಕರಣ ಕೈಗಾರಿಕೆಗಳು, ಆರ್ಥಿಕತೆಗಳು ಮತ್ತು ಜನರ ಜೀವನ ಮತ್ತು ಕೆಲಸವನ್ನು ಹೇಗೆಲ್ಲಾ ಪರಿವರ್ತಿಸುತ್ತಿವೆ ಎಂಬುದನ್ನು ತಿಳಿಸುವ ಉದ್ದೇಶವನ್ನೂ ಈ ಥೀಮ್ ಹೊಂದಿದೆ.
2025ರ ಅಂತರರಾಷ್ಟ್ರೀಯ ಶಿಕ್ಷಣ ದಿನದ ಉದ್ದೇಶಗಳೇನು?
ಈ ವರ್ಷದ ಅಂತರರಾಷ್ಟ್ರೀಯ ಶಿಕ್ಷಣ ದಿನ 2025 ಬೋಧನೆ, ಕಲಿಕೆ, ಮೌಲ್ಯಮಾಪನ ಮತ್ತು ಶೈಕ್ಷಣಿಕ ಆಡಳಿತದಲ್ಲಿ ಎಐ ನೀಡುವ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನಿರ್ಣಾಯಕ ಎಐ ಸಾಕ್ಷರತೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು, ಎಐ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು, ಬಳಸಲು ಮತ್ತು ಪ್ರಭಾವಿಸಲು ಅಗತ್ಯವಾದ ಸಾಮರ್ಥ್ಯಗಳೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ.
ಭಾರತದಲ್ಲಿ ನವೆಂಬರ್ 11 ರಾಷ್ಟ್ರೀಯ ಶಿಕ್ಷಣ ದಿನ
ಮಹಿಳೆಯರ ಶಿಕ್ಷಣವನ್ನು ಬಲವಾಗಿ ಪ್ರತಿಪಾದಿಸಿದ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ವಾರ್ಷಿಕೋತ್ಸವದ ದಿನ ಅಂದರೆ ನವೆಂಬರ್ 11 ರಂದು ಭಾರತವು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸುತ್ತದೆ.
