Friendship Day: ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೇ; ಗಂಡು ಹೆಣ್ಣಿನ ಸುಂದರ ಸ್ನೇಹ ಸಂಬಂಧಕ್ಕೆ ಅಪಾರ್ಥ ಕಲ್ಪಿಸುವ ಮುನ್ನ ಯೋಚಿಸಿ
International Friendship Day: ಸ್ನೇಹಿತರಾಗಲು ಜಾತಿ ಧರ್ಮ, ಗಂಡು ಹೆಣ್ಣು, ವಯಸ್ಸು ಇದ್ಯಾವುದೂ ಮುಖ್ಯವಲ್ಲ. ಸಮಾನ ಮನಸ್ಸಿದ್ದರೆ ಅಲ್ಲಿ ಪರಿಶುದ್ಧ ಸ್ನೇಹ ಎಂಬ ಅನುಬಂಧ ಅರಳುತ್ತದೆ. ಆದರೆ ಈ ಸಮಾಜ ಗಂಡು ಹೆಣ್ಣಿನ ಸ್ನೇಹವನ್ನು ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಹಾಗಾದರೆ ಗಂಡು-ಹೆಣ್ಣು ಬೆಸ್ಟ್ ಆಗುವುದು ತಪ್ಪೇ?
ಈ ಜಗತ್ತಿನಲ್ಲಿ ಸ್ನೇಹ ಸಂಬಂಧದಷ್ಟು ಶ್ರೇಷ್ಠ ಸಂಬಂಧವಿಲ್ಲ. ನಿಸ್ವಾರ್ಥ ಭಾವದ ಸಂಬಂಧವೊಂದು ಜಗತ್ತಿನಲ್ಲಿ ಇನ್ನೂ ಜೀವಂತವಾಗಿದೆ ಎಂದರೆ ಅದು ಸ್ನೇಹಿತರ ಅನುಬಂಧ ಮಾತ್ರ. ಸ್ನೇಹದ ಶಕ್ತಿಯೇ ಅಂತಹದ್ದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ಜೀವಗಳನ್ನು ಸ್ನೇಹದ ಸಂಕೋಲೆಯಲ್ಲಿ ಬಂಧಿಸಿ ಕೊನೆವರೆಗೆ ಆ ಸಂಕೋಲೆ ಭದ್ರವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಎರಡು ಜೀವಗಳ ನಡುವೆ ವಿವರಿಸಲಾಗದ ಪ್ರೀತಿ, ಕಾಳಜಿ, ಮಮಕಾರ, ಒಲುಮೆ ಹುಟ್ಟುವಂತೆ ಮಾಡುವುದು ಸ್ನೇಹ ಸಂಬಂಧ.
ಸ್ನೇಹಿತರಾಗಲು ಜಾತಿ ಧರ್ಮ, ಗಂಡು ಹೆಣ್ಣು, ವಯಸ್ಸು ಇದ್ಯಾವುದೂ ಮುಖ್ಯವಾಗುವುದಿಲ್ಲ. ಸಮಾನ ಮನಸ್ಸೊಂದು ಇದ್ದರೆ ಅಲ್ಲಿ ಪರಿಶುದ್ಧ ಸ್ನೇಹ ಎಂಬ ಅನುಬಂಧ ಅರಳುತ್ತದೆ.
ನಾನು, ನನ್ನದು ಎಂಬ ಸ್ವಾರ್ಥವಿಲ್ಲದ, ಯಾರಿಲ್ಲದಿದ್ದರೇನಂತೆ ನಾನಿದ್ದೇನೆ ನಿನ್ನೊಂದಿಗೆ ಎನ್ನುವ ಧೈರ್ಯ ತುಂಬುತ್ತಾ, ಆತ್ಮವಿಶ್ವಾಸದ ಭಾವನೆ ಮೂಡಿಸಲು, ಭರವಸೆಯ ಮಾತುಗಳನ್ನಾಡಲು ಸ್ನೇಹಿತರಿಂದಷ್ಟೇ ಸಾಧ್ಯ.
ಇಂದು (ಆಗಸ್ಟ್ ೬) ಅಂತರರಾಷ್ಟ್ರೀಯ ಸ್ನೇಹಿತರ ದಿನ. ಸ್ನೇಹವನ್ನು ಸಂಭ್ರಮಿಸುವ ಸುಂದರ ದಿನ. ಸ್ನೇಹಿತರೇ ಬದುಕು ಎಂದುಕೊಂಡು ಬದುಕುವವರಿಗೆ ಪ್ರತಿದಿನವೂ ಸ್ನೇಹಿತರ ದಿನವೇ. ನನ್ನಂತೆ ಸ್ನೇಹವೇ ಬದುಕು, ಸ್ನೇಹಿತರೇ ಜೀವನ ಎಂದು ಬದುಕುವವರು ನಮ್ಮ ನಡುವೆ ಹಲವರಿರಬಹುದು. ಸ್ನೇಹದ ಅನುಬಂಧ ಹೇಗೆಂದರೆ ಒಮ್ಮೆ ಮನಸ್ಸು ಇವನು ಅಥವಾ ಇವಳು ನನ್ನ ಬೆಸ್ಟ್ ಫ್ರೆಂಡ್ ಒಪ್ಪಿಕೊಂಡರೆ ನಮ್ಮ ನಡುವೆ ಅದೆಷ್ಟೇ ಜಗಳ, ಮನಸ್ತಾಪ, ಭಿನ್ನಾಭಿಪ್ರಾಯಗಳು ಬಂದರೂ ಅದು ತಾನಾಗಿಯೇ ಸರಿ ಹೊಂದುತ್ತದೆ. ಆ ಬಂಧ ಇನ್ನಷ್ಟು ಬಿಗಿಯಾಗುತ್ತದೆ, ಅಂತಹ ಸುಂದರ ಸಂಬಂಧ ಸ್ನೇಹ.
ʼನಾನು ಸ್ನೇಹಜೀವಿ. ನನಗೆ ಇಂದಿನವರೆಗೆ ಸ್ನೇಹಿತರೇ ಬದುಕು, ನಗು, ಸಂತೋಷ, ಸಂಭ್ರಮ ಎಲ್ಲವೂ. ನನ್ನ ಸ್ನೇಹಿತರು ಜೊತೆ ಇದ್ದರೆ ಜಗತ್ತನ್ನೇ ಗೆದ್ದು ಬಿಡುತ್ತೇನೆ ಎಂಬ ಛಲ ಮೂಡುತ್ತದೆʼ ಎಂದು ಮಾತನಾಡಿಕೊಳ್ಳುವ ಸ್ನೇಹಿತರನ್ನು ನಾವು ನೋಡಿರುತ್ತೇವೆ. ಇದು ನಮ್ಮ ಮನದಾಳದ ಮಾತು ಕೂಡ ಆಗಿರಬಹುದು.
ಸ್ನೇಹಕ್ಕೆ ಅಪಾರ್ಥ ಕಲ್ಪಿಸುವ ಸಮಾಜ
ಆದರೆ ನಮ್ಮ ನಿಷ್ಕಲ್ಮಶ, ಪರಿಶುದ್ಧ ಸ್ನೇಹಕ್ಕೆ ಕೆಲವೊಮ್ಮೆ ಸಮಾಜದ ಕೆಟ್ಟ ಕಣ್ಣು ಬೀಳುತ್ತೆ. ಅದರಲ್ಲೂ ಒಂದು ಗಂಡು-ಹೆಣ್ಣು ಸ್ನೇಹಿತರಾದರೆ ಮುಗಿಯಿತು. ಸಮಾಜದ ವಕ್ರದೃಷ್ಟಿ, ಕೊಂಕು ಕೇಳಿಸಿಕೊಳ್ಳಲು ಮೊದಲೇ ನಾವು ಸಿದ್ಧರಾಗಬೇಕು. ಗಂಡು-ಹೆಣ್ಣಿನ ಸ್ನೇಹ ಸಂಬಂಧವನ್ನು ಸಮಾಜ ನೋಡುವುದೇ ಕಾಮಾಲೆ ಕಣ್ಣಿನಿಂದ.
ಗಂಡು ಹೆಣ್ಣಿನ ಸ್ನೇಹವನ್ನು ಅರ್ಥೈಸಿಕೊಳ್ಳುವವರೂ ಕಡಿಮೆ. ಹುಡುಗ, ಹುಡುಗಿ ಬೆಸ್ಟ್ ಆಗಿದ್ದು, ಈ ಇಬ್ಬರೂ ಒಂದೆರಡು ಕಡೆ ಜೊತೆಯಾಗಿ ಕಾಣಿಸಿಕೊಂಡರೆ ʼಇವರಿಬ್ಬರ ನಡುವೆ ಏನೋ ಇರಬೇಕು, ಇಲ್ಲದಿದ್ದರೆ ಇಷ್ಟೊಂದು ಕ್ಲೋಸ್ ಇರಲು ಹೇಗೆ ಸಾಧ್ಯ. ಅವಳಂತೂ ಅವನೊಂದಿಗೆ ವರ್ತಿಸುವುದು ನೋಡಿದ್ರೆ ಪಕ್ಕಾ ಏನೋ ಇದೆʼ ಹೀಗಂತ ಹೊರಗಿನವರು ಬಿಡಿ ನಮ್ಮೊಂದಿಗೆ ಇರುವ ಸ್ನೇಹಿತರೂ ಮಾತನಾಡಿಕೊಳ್ಳುತ್ತಾರೆ. ಇಂತಹ ಮಾತುಗಳನ್ನು ಕೇಳಿಸಿಕೊಂಡಾಗ ʼಅಯ್ಯೋ ದೇವರೇ, ನಾವು ಸ್ನೇಹಿತರಾಗಿದ್ದೇ, ಬೆಸ್ಟ್ ಫ್ರೆಂಡ್ಸ್ ಆಗಿದ್ದೇ ನಮ್ಮ ತಪ್ಪಾʼ ಅನ್ನಿಸಿದೇ ಇರದು.
ಆಧುನಿಕತೆ, ತಂತ್ರಜ್ಞಾನ, ಜಗತ್ತು ಎಷ್ಟೆಲ್ಲಾ ಮುಂದುವರಿದರೂ ಇಂದಿಗೂ ಗಂಡು-ಹೆಣ್ಣಿನ ಸ್ನೇಹ ಸಂಬಂಧವನ್ನು ಸಮಾಜ ನೋಡುವ ರೀತಿಗೆ ಕೋಪ, ಅಸಹನೆ ಮೂಡುವುದು ಸಹಜ.
ಶಾಲಾ, ಕಾಲೇಜು ದಿನಗಳಲ್ಲಿ ಹುಡುಗ ಹುಡುಗಿಯ ಸ್ನೇಹವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಬಿಡಿ, ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿದ ಮೇಲೂ ಇದೇ ಕಥೆ. ಕಚೇರಿಯಲ್ಲಿ ಒಂದು ಹುಡುಗ-ಹುಡುಗಿ ಬೆಸ್ಟ್ ಆಗಿ ಬಿಟ್ಟರೆ ʼಹೋ ಇವರು ಕಮಿಟೇಡ್, ಇನ್ನೇನು ಮದುವೆ ಆಗುತ್ತಾರಂತೆʼ ಅಂತ ಅಲ್ಲಿವರೆಗೂ ಕಥೆ ಕಟ್ಟಿ ಬಿಡುತ್ತಾರೆ.
ಹುಡುಗ-ಹುಡುಗಿ ಜೊತೆಯಾಗಿ ತಿರುಗಿದಾಕ್ಷಣ, ಕ್ಲೋಸ್ ಇದ್ದಾಕ್ಷಣ ಅವರು ಬೆಸ್ಟ್ ಫ್ರೆಂಡ್ಸ್ ಆಗಿರಲು ಸಾಧ್ಯವೇ ಇಲ್ಲವೇ, ಅವರಲ್ಲಿ ಪ್ರೀತಿ, ಪ್ರೇಮವನ್ನೂ ಮೀರಿದ ಸ್ನೇಹ ಸಂಬಂಧ ಇರಬಾರದೇಕೆ? ಅವರನ್ನು ತಪ್ಪಾಗಿಯೇ ಅರ್ಥೈಸಿಕೊಳ್ಳುವ ನಿಮ್ಮ ಮನೋಭಾವ ಬದಲಾಗುವುದಾದರೂ ಎಂದು? ಇದು ಸಮಾಜದ ಮುಂದೆ ನಾನಿಡುವ ಪ್ರಶ್ನೆ.
ಒಬ್ಬ ಹುಡುಗಿ ಹುಡುಗನ ಜೊತೆ ಸ್ನೇಹ ಬೆಳೆಸುತ್ತಾಳೆ ಎಂದರೆ ಅವಳ ಕ್ಯಾರೆಕ್ಟರ್ ಸರಿಯಿಲ್ಲ, ಅದಕ್ಕೆ ಇದ್ದ ಹುಡುಗರ ಜೊತೆ ಓಡಾಡುತ್ತಾಳೆ ಎನ್ನುವ ನಿಮ್ಮ ಹೊಲಸು ಮನಸ್ಸಿನಲ್ಲಿ ಒಮ್ಮೆ ಸ್ನೇಹವೆಂಬ ಭಾವವನ್ನು ತುಂಬಿ ನೋಡಿ, ಆಗ ಖಂಡಿತ ನಿಮಗೆ ಅರ್ಥ ಆಗಬಹುದು ಸ್ನೇಹದ ಶಕ್ತಿ ಏನು ಎಂಬುದು.
ಹೆಣ್ಣೊಬ್ಬಳು ತನ್ನ ಸೇಹಿತನಲ್ಲಿ ಎಲ್ಲವನ್ನೂ ಕಾಣುತ್ತಾಳೆ ಎಂದರೆ ಅವಳಿಗೆ ಅವನು ರಕ್ಷಕನಂತೆ ಕಂಡಿರಬಹುದು. ತನಗೆ ದಕ್ಕಿರದ ಅಣ್ಣ, ತಮ್ಮನ ಪ್ರೀತಿಯನ್ನು ಅವನಲ್ಲಿ ಕಂಡಿರಬಹುದು, ಸ್ನೇಹಿತನನ್ನು ಆಕೆ ತನ್ನನ್ನು ರಕ್ಷಿಸುವ ಅಪ್ಪನಂತೆ ಅಂದುಕೊಂಡಿರಬಹುದು, ಯಾರಲ್ಲೂ ಹೇಳಿಕೊಳ್ಳಲು ಆಗದ ಮನದ ಭಾವನೆಗಳನ್ನು ಅವನಲ್ಲಿ ಹೇಳಿಕೊಳ್ಳಲು ಅವಳಿಗೆ ಕಂಫರ್ಟ್ ಫೀಲ್ ಮೂಡಿರಬಹುದು, ತನ್ನ ಸಮಸ್ಯೆಗಳನ್ನೆಲ್ಲಾ ಬಗೆಹರಿಸಲು ಇವನಿಂದ ಸಾಧ್ಯ ಎನ್ನುವ ಭಾವವೂ ಅವಳಲ್ಲಿ ಇರಬಹುದು. ಹೀಗೆ ಹೆಣ್ಣೊಬ್ಬಳು ತನ್ನ ಸ್ನೇಹಿತನಲ್ಲಿ ಹಲವು ಸಂಬಂಧವನ್ನು ಕಾಣುತ್ತಾಳೆ, ಹುಡುಗನೂ ಅಷ್ಟೇ ತನ್ನ ಸ್ನೇಹಿತೆಯಲ್ಲಿ ಸ್ನೇಹವನ್ನು ಹೊರತುಪಡಿಸಿ ತಂಗಿ, ತಂಗಿ, ತಾಯಿಯ ಪ್ರೀತಿಯನ್ನು ಕಾಣಬಹುದು. ಅದರ ಹೊರತು ಅವರೆಂದೂ ಸಮಾಜ ಕಲ್ಪಿಸುವ ಪ್ರೇಮಗಳಂತೆ ಅವರನ್ನು ನೋಡಿರುವುದಿಲ್ಲ, ಅದನ್ನು ಸಮಾಜ ಹಾಗೂ ಜನರು ಅರ್ಥ ಮಾಡಿಕೊಳ್ಳಬೇಕು. ಗಂಡು ಹೆಣ್ಣಿನ ಸ್ನೇಹ ಸಂಬಂಧವಕ್ಕೆ ತಪ್ಪು ಅರ್ಥ ಕಲ್ಪಸುವ ಮುನ್ನ ಯೋಚಿಸಬೇಕು.
ಅದೇನೇ ಇರಲಿ ಫ್ರೆಂಡ್ಸ್, ಸಮಾಜದ ಹುಳುಕು ತಿದ್ದುತ್ತಾ ಹೊರಟರೆ ಅದು ನಮ್ಮ ಕೈಮೀರಿದ್ದು. ನಮ್ಮೆಲ್ಲಾ ನೋವು, ದುಃಖ, ಖುಷಿ, ಸಂತಸ ಹಂಚಿಕೊಳ್ಳುತ್ತಾ, ಅತ್ತಾಗ ಹೆಗಲು ಕೊಡುತ್ತಾ, ನಕ್ಕಾಗ ಇನ್ನಷ್ಟು ನಗಿಸುತ್ತಾ, ಕಷ್ಟ ಬಂದಾಗ ಜೊತೆ ನಿಲ್ಲುವ ಸ್ನೇಹಿತ ಅಥವಾ ಸ್ನೇಹಿತೆ ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ. ಸಮಾಜಕ್ಕಾಗಿಯೋ, ಸಂಬಂಧಿಗಳಿಗಾಗಿಯೋ, ಜನರಿಗಾಗಿಯೋ ಇಂತಹ ಸುಂದರ ಸಂಬಂಧವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಜಗತ್ತಿನಲ್ಲಿ ಸ್ನೇಹ ಸಂಬಂಧವೇ ಶ್ರೇಷ್ಠ ಸಂಬಂಧವಾಗಲಿ. ಫ್ರೆಂಡ್ಸ್ ಫಾರ್ ಎವರ್, ನೆನಪಿರಲಿ.