ಸಮಾನಾಸಕ್ತಿಯಿಂದ ಸ್ನೇಹದ ಸೇತುವೆ ಕಟ್ಟಿದ ಅಪರೂಪದ ಗೆಳತಿ ಇವಳು; ಸ್ನೇಹಿತೆಯ ಪ್ರೀತಿಗೆ ಅಕ್ಷರರೂಪ ನೀಡಿದ ಮೃಣಾಲಿನಿ ಪಿ ಅಗರಖೇಡ್
ಸ್ನೇಹ ಎಂದರೆ ಎರಡು ಮನಸ್ಸುಗಳ ನಡುವಿನ ಶುದ್ಧ ಸಂಬಂಧ. ಸ್ನೇಹ ಬಂಧ ಬೆಸೆಯಲು ಕಾರಣಗಳು ಹಲವಿದ್ದರೂ, ನಮ್ಮ ಸ್ನೇಹ ಬೆಸೆದಿದ್ದು ಸಮಾನಾಸಕ್ತಿಯಿಂದ. ಬರವಣಿಗೆಯೇ ನನ್ನ ಸ್ನೇಹಕ್ಕೆ ಸೇತುವೆಯಾಗಿತ್ತು. ತನ್ನ ಅಪರೂಪದ ಸ್ನೇಹಿತೆ ಹಾಗೂ ಸ್ನೇಹದ ಬಗ್ಗೆ ಬರೆದಿದ್ದಾರೆ ಮೃಣಾಲಿನಿ ಪಿ. ಅಗರಖೇಡ್.
ಯಾರೊಬ್ಬರ ಜೊತೆ ಏಳು ಹೆಜ್ಜೆ ಹಾಕಿದರೆ ಸಾಕು, ಅವರಿಬ್ಬರು ಮಿತ್ರರಾಗುತ್ತಾರೆ ಎಂದು ಸುಭಾಷಿತ ಹೇಳುತ್ತದೆ. ಆದರೆ ನಮ್ಮಿಬ್ಬರ ಗೆಳತನ ಶುರುವಾಗಿದ್ದು ಜಾಲತಾಣದ ಹೆಜ್ಜೆಯಿಂದ. ಇಬ್ಬರೂ ಒಂದು ಬರವಣಿಗೆಗೆ ಸಂಬಂಧಿಸಿದ ಆಪ್‌ಗೆ ಬರೆಯುತ್ತಿದ್ದೆವು, ಮುಖ ಪರಿಚಯವಿರದೆ ಬರೀ ಹೆಸರು ಮಾತ್ರ ಗೊತ್ತಿತ್ತು. ಲೇಖನಗಳಿಗೆ ಪರಸ್ಪರ ಲೈಕ್, ಕಾಮೆಂಟ್ ಮಾಡ್ತಾ ಇದ್ವಿ. ಅವರ ಬರವಣಿಗೆಯಲ್ಲಿ ಅದೇನೋ ಸೆಳೆತ, ಒಂದೂ ಬಿಡದೆ ಅವರ ಎಲ್ಲ ಬರಹಗಳನ್ನು ಓದುತ್ತಿದ್ದೆ. ನನ್ನ ಅಭಿಪ್ರಾಯ, ಪ್ರತಿಕ್ರಿಯೆ ಮೂಲಕ ದಾಖಲಿಸುತ್ತಿದೆ, ಅದೇನೋ ನಮಿಬ್ಬರಲ್ಲಿ ಅವಿನಾಭವ ಮೈತ್ರಿ ಏರಪಟ್ಟಿತ್ತು.
ಹಿಂಗೊಂದು ದಿನ ಗೊತ್ತಿರದ ಸಂಖ್ಯೆಯಿಂದ ಕರೆ ಬಂದಿತು, ಮಧುರ ದನಿ ಕೇಳಿಸಿತು, ಅದು ಅದೇ ಬರಹಗಾರ್ತಿ ಗೆಳತಿಯದಾಗಿತ್ತು. ಗೆಳತಿ ನಮ್ಮೂರಿನವಳೇ ಆಗಿದ್ದಳು. ಬಾಲ್ಯದಲ್ಲಿ ಒಂದೇ ಬಡಾವಣೆಯಲ್ಲಿ ಇದ್ದೆವು, ನನ್ನ ತಂದೆಯ ವಿದ್ಯಾರ್ಥಿನಿಯೂ ಆಗಿದ್ದಳು ಎಂದು ಅವಳ ಬಗ್ಗೆ ಹಲವು ವಿಷಯಗಳು ಗೊತ್ತಾದವು. ನನ್ನ ಲೇಖನದಲ್ಲಿ ನಮ್ಮೂರಿನ ಹೆಸರನ್ನು ನೋಡಿ, ನನ್ನ ಜಾಡು ಹಿಡಿದು ನನಗೆ ಕರೆ ಮಾಡಿದ್ದಳು.
ಜಾಲತಾಣದಿಂದ ಹೀಗೆ ಶುರುವಾದ ನಮ್ಮ ಸ್ನೇಹ ಈಗ ಗಟ್ಟಿಯಾದ ಬಾಂಧವ್ಯವನ್ನು ಹುಟ್ಟುಹಾಕಿದೆ. ಪ್ರತಿಭಾವಂತೆಯಾದ ಗೆಳತಿ ಅಶ್ವಿನಿಯಿಂದ ನನಗೆ ಅನೇಕ ವಿಷಯಗಳ ಬಗ್ಗೆ ಜ್ಞಾನವೃದ್ಧಿಯಾಗಿದೆ. ಕೂಪ ಮಂಡುಕದಂತಿದ್ದ ನನಗೆ, ನನ್ನ ಗೆಳತಿಯಿಂದ ಬರವಣಿಗೆಯ ಹೊಸ ಆಯಾಮಗಳ ಪರಿಚಯವಾಯಿತು. ನನ್ನ ಅಭಿರುಚಿಗೆ ತಕ್ಕಂತೆ ಸಮಾನಾಸಕ್ತರೊಡನೆ ಸ್ನೇಹ ಬೆಳೆಸಲು, ನನ್ನ ಗೆಳತಿ ಸೇತುವೆಯಾದಳು.
ಈ ಸ್ನೇಹಿತೆ ಕಾಡು ಹರಟೆಗೆ ಸಖಿಯಾಗಿದ್ದಾಳೆ, ಗಂಭೀರ ವಿಷಯಕ್ಕೆ ಕಿವಿಯಗಿದ್ದಾಳೆ, ದುಗುಡಗಳಿಗೆ ಹಿತವಾಗಿ ಸ್ಪಂದಿಸುತ್ತಾಳೆ, ಗೆದ್ದಾಗ ಹಾರೈಸಿದ್ದಾಳೆ, ಸೋತಾಗ ಧೈರ್ಯ ಹೇಳಿದ್ದಾಳೆ. ನನ್ನ ಹವ್ಯಾಸಗಳಿಗೆ ಸ್ಫೂರ್ತಿಯಾಗಿದ್ದಾಳೆ, ನನ್ನ ಬರವಣಿಗೆಗೆ ಅಭಿಮಾನ ತೋರ್ಪಡಿಸಿದ್ದಾಳೆ.
ವಿಚಿತ್ರವೆಂದರೆ ನಾವಿಬ್ಬರು ಭೇಟಿಯಾಗುವ ಪ್ಲಾನ್‌ಗಳು ಕಾರಣಾಂತರಗಳಿಂದ ಬುಡಮೇಲಾಗಿವೆಯಾದರೂ ನಮ್ಮ ಸ್ನೇಹದಲ್ಲಿ ನಂಬಿಕೆ-ವಿಶ್ವಾಸ, ಅಕ್ಕರೆ-ಅಂತಃಕರಣ ಭರಪುರಾಗಿದೆ.
ಸ್ನೇಹ ಬೆಳೆಯಲು ಇವೇ ಕೆಲವು ಸಿದ್ಧ ಸೂತ್ರಗಳಿರಬೇಕು ಎನ್ನುವುದನ್ನು ನಮ್ಮಿಬ್ಬರ ಸ್ನೇಹ ಅಲ್ಲಗೆಳೆದಿದೆ. ತವರೂರಿನ ನಂಟು ನಮ್ಮ ಸ್ನೇಹಕ್ಕೆ ಸ್ವಾಗತ ಹಾಡಿತ್ತು, ಈಗ ಅದೇ ನಂಟು ನಮ್ಮ ಸ್ನೇಹಕ್ಕೆ ಭದ್ರ ಬುನಾದಿಯಾಗಿದೆ. ನಮ್ಮ ಈ ಆರೋಗ್ಯಕರ ಸ್ನೇಹಕ್ಕೆ ಯಾರ ಕುದೃಷ್ಟಿ ತಾಕದೆ, ನಮ್ಮ ಮಿತ್ರತ್ವ ಅವಿಚ್ಛಿನ್ನವಾಗಿ ಮುಂದುವರೆಯಲಿ ಎಂದು ಮನ ಬಯಸಿದೆ.
ಬರಹ: ಮೃಣಾಲಿನಿ ಪಿ. ಅಗರಖೇಡ್, ಬೆಂಗಳೂರು