ವಿಶ್ವದ ಟಾಪ್ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ವಡಾಪಾವ್‌ಗೂ ಸ್ಥಾನ; ಸ್ಟ್ರೀಟ್‌ಫುಡ್‌ ಪ್ರೇಮಿಗಳು ಫುಲ್‌ ಖುಷ್‌
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವದ ಟಾಪ್ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ವಡಾಪಾವ್‌ಗೂ ಸ್ಥಾನ; ಸ್ಟ್ರೀಟ್‌ಫುಡ್‌ ಪ್ರೇಮಿಗಳು ಫುಲ್‌ ಖುಷ್‌

ವಿಶ್ವದ ಟಾಪ್ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ವಡಾಪಾವ್‌ಗೂ ಸ್ಥಾನ; ಸ್ಟ್ರೀಟ್‌ಫುಡ್‌ ಪ್ರೇಮಿಗಳು ಫುಲ್‌ ಖುಷ್‌

ಜಗತ್ತಿನಾದ್ಯಂತ ಹೆಸರು ಮಾಡಿರುವ 38 ಪ್ರಮುಖ ಕಾಫಿ ಬ್ರಾಂಡ್‌ಗಳ ಪೈಕಿ ದಕ್ಷಿಣ ಭಾರತದ ಐಕಾನಿಕ್ ಫಿಲ್ಟರ್ ಕಾಫಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಹೆಗ್ಗಳಿಕೆಯ ನಡುವೆಯೇ ಸದ್ಯ ಭಾರತದ ಪ್ರಸಿದ್ಧ ಸ್ಯಾಂಡ್‌ವಿಚ್‌ ಎಂದೇ ಗುರುತಿಸಿಕೊಂಡಿರುವ ವಡಾಪಾವ್‌ ವಿಶ್ವದ ಟಾಪ್ 50 ಅತ್ಯುತ್ತಮ ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ವಿಶ್ವದ ಟಾಪ್ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ವಡಾಪಾವ್‌ಗೂ ಸ್ಥಾನ
ವಿಶ್ವದ ಟಾಪ್ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ವಡಾಪಾವ್‌ಗೂ ಸ್ಥಾನ

ವಡಾಪಾವ್‌ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತದೆ. ನಾಲಿಗೆಯ ರುಚಿ ಹೆಚ್ಚಿಸುವ ವಡಾಪಾವ್‌ ವಿಭಿನ್ನ ಬಗೆಗಳಲ್ಲಿ ಲಭ್ಯವಿದ್ದು, ಯಾವುದು ಬೆಸ್ಟ್‌ ಅಂತ ನಿರ್ಧರಿಸುವುದೇ ಕಷ್ಟದ ಕೆಲಸ. ಆದರೂ ಮುಂಬೈ ಮೂಲದಿಂದ ಬಂದು ಸದ್ಯ ದೇಶದ ಮೂಲೆ ಮೂಲೆಯ ಬೀದಿಗಳ ತಳ್ಳುವ ಗಾಡಿಗಳಲ್ಲಿ ಮಾತ್ರವಲ್ಲದೇ ಸ್ಟಾರ್‌ ರೆಸ್ಟೊರೆಂಟ್ಸ್‌ನಲ್ಲೂ ವಡಾಪಾವ್‌ಗೆ ಇರುವಷ್ಟು ಬೇಡಿಕೆ ಮತ್ಯಾವುದಕ್ಕೂ ಇಲ್ಲ.

ಖುಷಿಯ ವಿಚಾರವೇನು ಗೊತ್ತಾ? ವಡಾಪಾವ್‌ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ವಿಶ್ವದ ಅತ್ಯುತ್ತಮ 50 ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಭಾರತದ ಐಕಾನಿಕ್ ಸ್ಟ್ರೀಟ್ ಫುಡ್ ವಡಾಪಾವ್‌ ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ. ಟೇಸ್ಟ್ ಅಟ್ಲಾಸ್, ಪ್ರಪಂಚದಾದ್ಯಂತದ ಸ್ಥಳೀಯ ಪಾಕವಿಧಾನಗಳನ್ನು ತಿಳಿಸುವ ಮತ್ತು ಆಹಾರ ವಿಮರ್ಶೆಗಳನ್ನು ನೀಡುವ ಪ್ರಯಾಣ ಮತ್ತು ಆಹಾರ ಮಾರ್ಗದರ್ಶಿಯಾಗಿದೆ. ಇದರ ಸಮೀಕ್ಷೆಯ ಪ್ರಕಾರ ವಡಾಪಾವ್‌ 19ನೇ ಬೆಸ್ಟ್‌ ಸ್ಯಾಂಡ್‌ವಿಚ್‌ ಎನ್ನಿಸಿಕೊಂಡಿದೆ.

ಟೇಸ್ಟ್ ಅಟ್ಲಾಸ್ ಪಟ್ಟಿಯ ಪ್ರಕಾರ, ವಿಯೆಟ್ನಾಂನ ಬಾನ್ ಮಿ, ಟರ್ಕಿಯ ಟಾಂಬಿಕ್ ಡೋನರ್, ಲೆಬನಾನ್‌ನ ಷಾವರ್ಮಾ, ಮೆಕ್ಸಿಕೋದ ಟೋರ್ಟಾಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಲಾಬ್ಸ್ಟರ್‌ ರೋಲ್ ವಿಶ್ವದ ಅತ್ಯುತ್ತಮ ಐದು ಸ್ಯಾಂಡ್‌ವಿಚ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಜರ್ಮನಿಯ ಮೆಟ್‌ಬ್ರೊಚೆನ್, ಸ್ಪೇನ್‌ನ ಬೊಕಾಡಿಲೊ ಡಿ ಸೆರ್ಡೊ, ಅರ್ಜೆಂಟೀನಾದ ಸಾಂಗುಚೆ ಡಿ ಮಿಲನೇಸಾ, ಯುನೈಟೆಡ್ ಸ್ಟೇಟ್ಸ್‌ನ ಬೀಫ್ ಆನ್ ವೆಕ್ ಮತ್ತು ಪೊರ್ಚೆಟ್ಟಾ ಸ್ಯಾಂಡ್‌ವಿಚ್‌ಗಳು ಪಟ್ಟಿಯಲ್ಲಿ ಕೊನೆಯ ಐದು ಸ್ಥಾನಗಳಲ್ಲಿವೆ.

ಹೆಸರೇ ಸೂಚಿಸುವಂತೆ ಎರಡು ಪಾವ್‌ಗಳ ಒಳಗೆ ಡೀಪ್-ಫ್ರೈಡ್ ವಡಾವಿದ್ದು, ಕಡಲೆಹಿಟ್ಟಿನಲ್ಲಿ ಲೇಪಿತ ಮಸಾಲೆಯುಕ್ತ ಆಲೂಗಡ್ಡೆಯಿಂದ ಇದನ್ನು ತಯಾರಿಸಲಾಗಿರುತ್ತದೆ. ಸಾಮಾನ್ಯವಾಗಿ ಒಣ ಬೆಳ್ಳುಳ್ಳಿ ಮತ್ತು ಇನ್ನೂ ಅನೇಕ ಬಗೆಯ ಚಟ್ನಿಗಳೊಂದಿಗೆ ಎಣ್ಣೆಯಲ್ಲಿ ಹುರಿದಿಟ್ಟ ಹಸಿಮೆಣಸನ್ನು ಸೇರಿಸಿ ಇದನ್ನು ತಿನ್ನಬಹುದು.

ವಡಾಪಾವ್ ಹುಟ್ಟಿಕೊಂಡಿದ್ದು ಹೇಗೆ?

ಟೇಸ್ಟ್ ಅಟ್ಲಾಸ್ ಪ್ರಕಾರ, ಈ ಬೀದಿ ಆಹಾರವು 1960 ಮತ್ತು 1970 ರ ದಶಕಗಳಲ್ಲಿ ದಾದರ್ ರೈಲು ನಿಲ್ದಾಣದ ಬಳಿ ಕೆಲಸ ಮಾಡುತ್ತಿದ್ದ ಅಶೋಕ್ ವೈದ್ಯ ಎಂಬ ಬೀದಿ ವ್ಯಾಪಾರಿಯಿಂದ ಹುಟ್ಟಿಕೊಂಡಿತು. ಅವರು ಹಸಿದ ಕೆಲಸಗಾರರಿಗೆ ತಿನ್ನುವುದಕ್ಕಾಗಿ ಏನನ್ನು ನೀಡುವುದೆಂಬ ಯೋಜನೆ ಪ್ರಾರಂಭಿಸಿದ್ದರು. ಅದರಲ್ಲೂ ಕೊಂಡುಹೋಗುವುದಕ್ಕೂ ಸುಲಭ ಸಾಧ್ಯವಿರಬೇಕು, ಕೈಗೆಟುಕುವ ದರದಲ್ಲಿ ಲಭ್ಯವಿರಬೇಕು ಮಾತ್ರವಲ್ಲದೆ ತಯಾರಿಸಲು ಹೆಚ್ಚಿನ ಶ್ರಮವಿರ ಕೂಡದೆಂಬ ಚಿಂತನೆಯೇ ವಡಾ ಪಾವ್‌ ಹುಟ್ಟಿಗೆ ಕಾರಣವಾಯಿತಂತೆ.

ಭಾರತದ ಕೀರ್ತಿ ಹೆಚ್ಚಿಸಿದ ವಡಾಪಾವ್‌ ಬಗ್ಗೆ ಆಹಾರಪ್ರಿಯರ ಪ್ರತಿಕ್ರಿಯೆ

ಟೇಸ್ಟ್ ಅಟ್ಲಾಸ್ ವಿಶ್ವದ ಟಾಪ್ 50 ಅತ್ಯುತ್ತಮ ಸ್ಯಾಂಡ್‌ವಿಚ್‌ಗಳ ಪಟ್ಟಿಯನ್ನು ಹಂಚಿಕೊಂಡು, "ನಿಮ್ಮ ಮೆಚ್ಚಿನದನ್ನು ಆರಿಸಿ?" ಎಂದು X ನಲ್ಲಿನ ಪೋಸ್ಟ್‌ ಶೇರ್‌ ಮಾಡಿದ್ದೇ ತಡ ಪೋಸ್ಟ್‌ಗೆ ಹಲವಾರು ಕಾಮೆಂಟ್‌ಗಳು ಬಂದವು. ಅವುಗಳ ಪೈಕಿ ವಡಾ ಪಾವ್ ಟಾಪ್ 20 ಅತ್ಯುತ್ತಮ ಸ್ಯಾಂಡ್‌ವಿಚ್‌ಗಳಲ್ಲಿ ಸ್ಥಾನ ಪಡೆದಿರುವ ಕುರಿತು ಬಂದಿರುವ ಕೆಲವು ಕಾಮೆಂಟ್‌ಗಳನ್ನು ನೀವು ನೋಡಲೇಬೇಕು.

- "ವಡಾ ಪಾವ್, ವಿಶ್ವದ ಅತ್ಯುತ್ತಮ ವೆಜ್ ಸ್ಯಾಂಡ್ವಿಚ್."

- "ವಡಾ ಪಾವ್ ಟಾಪ್‌ 20 ಯಲ್ಲಿ. ವೂಹೂ!"

- “ವಡಾ ಪಾವ್ ಟಾಪ್ 5 ರಲ್ಲಿ ಇಲ್ಲವೇ?! ಈ ಪಟ್ಟಿಯನ್ನು ಮಾಡಿದವರು ಯಾರು?"

- "ನಾನು ಭಾರತದಲ್ಲಿರಬೇಕಿತ್ತು, ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಇದ್ದಿದ್ದರೆ ಪ್ರತಿದಿನ ವಡಾ ಪಾವ್ ತಿನ್ನಬಹುದಿತ್ತು." ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಭಾರತದ ಐಕಾನಿಕ್ ಫಿಲ್ಟರ್ ಕಾಫಿಯ ನಂತರ ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಮ್ಮೆ ಸುದ್ದಿಯಲ್ಲಿದ್ದು, ವಡಾಪಾವ್‌ ಇದಕ್ಕೆ ವೇದಿಕೆ ಕಲ್ಪಿಸಿದೆ. ಮತ್ಯಾಕೆ ತಡ, ಈ ನೆಪದಲ್ಲಿ ನೀವೂ ಮತ್ತೊಮ್ಮೆ ವಡಾಪಾವ್‌ ಟೇಸ್ಟ್‌ ಮಾಡಲು ಮರೆಯದಿರಿ.

Whats_app_banner