ಮನೆಗೊಂದು ಮಗು ಬಂದ್ರೆ ಲಾಟರಿ ಹೊಡೆದಂತೆ; ಕೋಟಿಗಟ್ಟಲೆ ಹಣ ನೀಡುತ್ತೆ ದಕ್ಷಿಣ ಕೊರಿಯಾದ ಬೂಯಾಂಗ್ ಕಂಪನಿ
ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ಇತ್ತೀಚಿನ ಯುವ ದಂಪತಿಗಳು ಅಷ್ಟೊಂದು ಒಲವು ತೋರುತ್ತಿಲ್ಲ. ಪ್ರಪಂಚದಾದ್ಯಂತ ನೋ ಚೈಲ್ಡ್ ಟ್ರೆಂಡ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಈ ನಡುವೆ ಕೊರಿಯಾ ಮೂಲದ ಈ ಕಂಪನಿಯೊಂದು ಮಕ್ಕಳು ಮಾಡ್ಕೊಂಡ್ರೆ ಬರೋಬ್ಬರಿ 62.28 ಲಕ್ಷ ನೀಡುವುದಾಗಿ ಘೋಷಿಸಿದೆ.
ಮನೆ ತುಂಬಾ ಮಕ್ಕಳು ಓಡಾಡುತ್ತಿದ್ದರೆ ಹೆತ್ತವರಿಗೆ ಅದೇ ಸ್ವರ್ಗ ಎಂಬ ಕಾಲವೊಂದಿತ್ತು. ವಿದ್ಯಾವಂತ ಸಮಾಜ ರೂಪುಗೊಳ್ಳುತ್ತಲೇ ಈ ಚಿಂತನೆಯಲ್ಲಿ ಸ್ವಲ್ಪ ಸ್ವಲ್ಪವೇ ಬದಲಾವಣೆಗಳು ಕಾಣತೊಡಗಿತ್ತು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಸಾಕು ಎಂಬ ಚಿಂತನೆಗೆ ಜನ ಒಗ್ಗಿಕೊಂಡಿದ್ದರು. ಈಗ ಇನ್ನೂ ಮುಂದುವರಿದು, ಹೆಣ್ಣಾಗಲಿ, ಗಂಡಾಗಲಿ ಮಗು ಮಾತ್ರ ಒಂದೇ ಇರಲಿ ಎಂಬ ಸಮಾಜ ನಮ್ಮ ಮುಂದಿದೆ. ಈ ನಡುವೆ ಕೆಲವು ದೇಶಗಳಲ್ಲಿ ನೋ ಚೈಲ್ಡ್ ಟ್ರೆಂಡ್ ಕೂಡ ಸದ್ದು ಮಾಡುತ್ತಿದೆ.
ಹೆತ್ತವರು ಒಂದೇ ಮಗು ಸಾಕು ಅಥವಾ ಮಕ್ಕಳೇ ಬೇಡ ಎಂಬ ತೀರ್ಮಾನಕ್ಕೆ ಬರುವ ಹಿಂದೆ ಕಾರಣಗಳು ಹಲವಿವೆ. ಇಂದಿನ ಜೀವನಶೈಲಿ, ಹೊರೆಯಾಗುತ್ತಿರುವ ಬೆಲೆ ಏರಿಕೆ ವಸ್ತುಗಳು, ದುಬಾರಿ ಶಿಕ್ಷಣ ಕ್ರಮಗಳು ಪೋಷಕರ ನಿದ್ದೆ ಕೆಡಿಸಿದೆ. ಮಗು ಹುಟ್ಟಿದಾಗಿನಿಂದ ಶಿಕ್ಷಣ, ಮದುವೆ ಹೀಗೆ ಸಾಲು ಸಾಲಾಗಿ ಬರುವ ಖರ್ಚು-ವೆಚ್ಚಗಳನ್ನ ಗಮನಿಸಿ ಹೆತ್ತವರು ಆರತಿಗೂ-ಕೀರ್ತಿಗೂ ಸೇರಿ ಒಂದೇ ಮಗು ಸಾಕು ಎಂಬ ತೀರ್ಮಾನಕ್ಕೆ ಬಂದಿರಬಹುದು. ಆದರೆ ಇತ್ತೀಚಿನ ಮಕ್ಕಳ ಬೇಡ ಎಂಬ ಟ್ರೆಂಡ್ ಹಲವು ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಆ ಕಾರಣಕ್ಕಾಗಿಯೇ ಕೊರಿಯಾದ ಈ ಕಂಪನಿ ವಿಶೇಷ ಆಫರ್‌ವೊಂದನ್ನು ಘೋಷಿಸಿದೆ.
ಮಗು ಮಾಡ್ಕೊಂಡ್ರೆ ಕಂಪನಿಯೇ ನೀಡುತ್ತೆ 62.28 ಲಕ್ಷ
ಮಕ್ಕಳನ್ನು ಬೆಳೆಸುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ಜೊತೆಗೆ ಮಕ್ಕಳನ್ನು ಹೊಂದಲು ತನ್ನ ಉದ್ಯೋಗಿಗಳಿಗೆ ಭಾರಿ ಮೊತ್ತವನ್ನು ನೀಡುವುದಾಗಿ ಬೂಯಾಂಗ್ ಗ್ರೂಪ್ ಘೋಷಿಸಿತು. ದಕ್ಷಿಣ ಕೊರಿಯಾದ ಬೂಯಾಂಗ್ ಗ್ರೂಪ್ ಆಫ್ ಕಂಪನಿ ತನ್ನ ಕೆಲಸಗಾರರಿಗೆ ಅವರು ಪೋಷಕರಾಗುವ ಪ್ರತಿ ಬಾರಿ 100 ಮಿಲಿಯನ್ ಕೊರಿಯನ್ ವನ್ ಅಂದ್ರೆ 62.28 ಲಕ್ಷ ರೂ ನೀಡುತ್ತಿದೆ. ಮೂರು ಮಕ್ಕಳು ಮಾಡ್ಕೊಂಡ್ರೆ ಪೋಷಕರಿಗೆ 1.86 ಕೋಟಿ ರೂಪಾಯಿ ಸಿಗುತ್ತೆ.
ಹೌದು, ದಕ್ಷಿಣ ಕೊರಿಯಾದಲ್ಲಿ ಕಡಿಮೆ ಜನನ ಪ್ರಮಾಣವನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಮಾಣ ಕಂಪನಿಯಾದ ಬೂಯೊಂಗ್ ಗ್ರೂಪ್ ಈ ಭಾರಿ ಹಣವನ್ನು ನೀಡುತ್ತಿದೆ. ವರದಿಗಳ ಪ್ರಕಾರ, ಕಂಪನಿಯು 2021 ರಿಂದ 70 ಮಕ್ಕಳಿಗೆ ಜನ್ಮ ನೀಡಿದ ಸಿಬ್ಬಂದಿ ಸದಸ್ಯರಿಗೆ ಒಟ್ಟು 7 ಬಿಲಿಯನ್ ಕೊರಿಯನ್ ವನ್ (5.25 ಮಿಲಿಯನ್ ಡಾಲರ್) ನಗದು ಪಾವತಿಸಿದೆ.
ಬೂಯಂಗ್ ಗ್ರೂಪ್‌ನ ಅಧ್ಯಕ್ಷ ಲೀ ಜುಂಗ್-ಕಿಯುನ್ ಹೇಳಿರುವ ಪ್ರಕಾರ, ಅವರು ಮಕ್ಕಳನ್ನು ಬೆಳೆಸುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಉದ್ಯೋಗಿಗಳಿಗೆ ʼನೇರ ಆರ್ಥಿಕ ಬೆಂಬಲʼ ನೀಡುತ್ತಿದ್ದಾರೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಜನನವನ್ನು ಉತ್ತೇಜಿಸಲು ಇಂತಹ ನಡೆಗೆ ಮುಂದಾಗಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಮೂರು ನವಜಾತ ಶಿಶುಗಳನ್ನು ಹೊಂದಿರುವ ಉದ್ಯೋಗಿಗಳಿಗೆ 300 ಮಿಲಿಯನ್ ಕೊರಿಯನ್ ವನ್ ನಗದು ಅಥವಾ ಬಾಡಿಗೆ ಮನೆಗಳನ್ನು ಪಡೆಯಲು ಸರ್ಕಾರವು ಕಟ್ಟಡಕ್ಕೆ ಭೂಮಿಯನ್ನು ಒದಗಿಸಿದರೆ ಅವರಿಗೆ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಕಂಪನಿಯ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.
ದಕ್ಷಿಣ ಕೊರಿಯಾದಲ್ಲಿ ಫಲವಂತಿಕೆಯ ಪ್ರಮಾಣ ಭಾರಿ ಕುಸಿತ
ದಕ್ಷಿಣ ಕೊರಿಯಾದಲ್ಲಿ ರಾಷ್ಟ್ರೀಯ ಅಂಕಿ-ಅಂಶಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಸಂಸ್ಥೆಯ ಪ್ರಕಾರ, 2022ರಲ್ಲಿ ಫಲವತ್ತತೆ ದರ ಶೇ 0.81 ರಿಂದ ಶೇ0.78ಕ್ಕೆ ಇಳಿದಿದೆ. ಅಲ್ಲದೆ ವಿಶ್ವದ ಅತ್ಯಂತ ಕಡಿಮೆ ಫಲವಂತಿಕೆ ದರ ಹೊಂದಿದ ರಾಷ್ಟ್ರವೆನ್ನಿಸಿಕೊಂಡಿತ್ತು. 2023ರಲ್ಲಿ ಶೇ 0.72 ಕ್ಕೆ ಇಳಿಕೆ ಕಂಡ ಫಲವಂತಿಕೆಯ ದರ, 2025ರ ಸಂದರ್ಭದಲ್ಲಿ ಶೇ 0.65ಕ್ಕೆ ಕುಸಿಯುವ ನಿರೀಕ್ಷೆಯಿರುವುದಾಗಿ ಅಂಕಿ-ಅಂಶಗಳ ಕಚೇರಿ ಮಾಹಿತಿ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ನವಜಾತ ಶಿಶುಗಳ ಸಂಖ್ಯೆ 2,60,600 ರಿಂದ 2,49,000 ಕ್ಕೆ ಇಳಿದಿದೆ.
ಜನನ ಪ್ರಮಾಣ ಹೆಚ್ಚಿಸುವ ಸಲುವಾಗಿ ದಕ್ಷಿಣ ಕೊರಿಯಾ ದೇಶದ ಬೂಯೊಂಗ್ ಕಂಪನಿ ಭಾರಿ ಹಣವನ್ನು ನೀಡುವುದಾಗಿ ಘೋಷಿಸುವುದು ಖುಷಿಯ ವಿಚಾರವಾದ್ರೂ ಇದು ಆತಂಕ ಪಡುವ ವಿಚಾರವೂ ಹೌದು. ಜಗತ್ತಿನಲ್ಲಿ ಫಲವಂತಿಕೆಯ ಪ್ರಮಾಣ ಕಡಿಮೆಯಾಗುವುದು ಖಂಡಿತ ಅಪಾಯದ ಮುನ್ಸೂಚನೆ ಎನ್ನುವುದು ಮಾತ್ರ ಸುಳ್ಳಲ್ಲ.
(This copy first appeared in Hindustan Times Kannada website. To read more like this please logon to kannada.hindustantimes.com )