Time Zones: ಪ್ರಪಂಚದಾದ್ಯಂತ ಸಮಯ ಪಾಲಿಸುವ ಕ್ರಮವಿದು; ಟೈಮ್‌ ಝೋನ್‌ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ-international news what is concept of time zone how this is varry from place to place explained arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Time Zones: ಪ್ರಪಂಚದಾದ್ಯಂತ ಸಮಯ ಪಾಲಿಸುವ ಕ್ರಮವಿದು; ಟೈಮ್‌ ಝೋನ್‌ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

Time Zones: ಪ್ರಪಂಚದಾದ್ಯಂತ ಸಮಯ ಪಾಲಿಸುವ ಕ್ರಮವಿದು; ಟೈಮ್‌ ಝೋನ್‌ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

ಸಮಯ ಎಂದು ಬಂದಾಗ ಎಲ್ಲರಿಗೂ ಇರುವುದು 24 ಗಂಟೆ, ಆದರೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಮಯ ಇರುತ್ತದೆ. ಇಲ್ಲಿ ಹಗಲಾದರೆ, ಅಲ್ಲಿ ರಾತ್ರಿ ಹೀಗಿರುತ್ತದೆ. ನಮ್ಮ ದೇಶದ ಸಮಯಕ್ಕೂ ಮತ್ತು ಬೇರೆ ದೇಶದ ಸಮಯಕ್ಕೂ ವ್ಯತ್ಯಾಸ ಏಕೆ? ಟೈಮ್‌ ಝೋನ್‌ ಪರಿಕಲ್ಪನೆ ಹುಟ್ಟಿದ್ದು ಹೇಗೆ? ಜಗತ್ತಿನಲ್ಲಿ ಸಮಯ ಪಾಲಿಸಲು ಇದನ್ನು ಅಳವಡಿಸಿಕೊಂಡಿದ್ದಾದರೂ ಏಕೆ? ಇಲ್ಲಿದೆ ಓದಿ.

ಟೈಮ್‌ ಝೋನ್‌ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ
ಟೈಮ್‌ ಝೋನ್‌ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

ನೀವು ವಿಮಾನದಲ್ಲಿ ಪ್ರಪಂಚದಾದ್ಯಂತ ಪ್ರಯಾಣ ಬೆಳೆಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಪ್ರಯಾಣವು ಭಾರತದ ನವ ದೆಹಲಿಯಿಂದ ಪ್ರಾರಂಭವಾಗಿ, ಅದು ಪೂರ್ವ ದಿಕ್ಕಿಗೆ ಸಾಗಿ ಜಪಾನಿನ ಟೋಕಿಯೊಗೆ ಬಂದ ತಲುಪಿದೆ. ನಿಮ್ಮ ವಾಚ್ ಒಮ್ಮೆ ನೋಡಿ. ಅದರಲ್ಲಿ ಬೆಳಿಗ್ಗೆ 10 ಗಂಟೆಯಾಗಿದ್ದರೆ, ನೀವು ಟೋಕಿಯೋದಲ್ಲಿನ ಸಮಯವನ್ನು ಪರಿಶೀಲಿಸಿದಾಗ ಅದು ಮಧ್ಯಾಹ್ನ 2.30 ಎಂದು ತೋರಿಸುತ್ತಿರುತ್ತದೆ. ಈಗ ನಿಮಗೆ ಸ್ವಲ್ಪ ಆಶ್ಚರ್ಯ ಆಗಿರಬೇಕಲ್ಲ. ಹಾಗಾದರೆ ನಾಲ್ಕುವರೆ ಗಂಟೆ ಎಲ್ಲಿ ಹೋಯಿತು? ಗಾಳಿಯಲ್ಲಿ ಕಳೆದು ಹೋಯಿತಾ? ಇದಕ್ಕೆ ಉತ್ತರ ಟೈಮ್‌ ಝೋನ್‌. ಭೂಮಿಯ ಮೇಲಿನ ಪ್ರದೇಶಗಳು ಒಂದೇ ಪ್ರಮಾಣಿತ ಸಮಯವನ್ನು ಹೊಂದಿರುವ ಪರಿಕಲ್ಪನೆಗೆ ಟೈಮ್‌ ಝೋನ್‌ ಎಂದು ಕರೆಯುತ್ತಾರೆ.

ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ. ಅದು ಪ್ರತಿ 24 ಗಂಟೆಗಳಿಗೊಮ್ಮೆ ತನ್ನ ಪರಿಭ್ರಮಣೆಯನ್ನು ಪೂರ್ಣಗೊಳಿಸುತ್ತದೆ. ಸೂರ್ಯನು ವಿವಿಧ ಸ್ಥಳಗಳಲ್ಲಿ ವಿವಿಧ ಸಮಯದಲ್ಲಿ ತನ್ನ ಅತ್ಯುನ್ನತ ಬಿಂದುವನ್ನು ಅಂದರೆ ದಿನದ ಮಧ್ಯಾಹ್ನವನ್ನು ತಲುಪುತ್ತಾನೆ ಎಂಬ ಕಲ್ಪನೆಯನ್ನು ಟೈಮ್‌ ಝೋನ್‌ ಆಧರಿಸಿದೆ. ಹಾಗಾದರೆ, ಈ ಟೈಮ್‌ ಝೋನ್‌ ಕಲ್ಪನೆ ಪ್ರಾರಂಭವಾಗಿದ್ದು ಹೇಗೆ ಮತ್ತು ಯಾವಾಗ? ಅದು ನಮಗೆ ಏಕೆ ಬೇಕು? ಟೈಮ್‌ ಝೋನ್‌ ಹಿಂದಿರುವ ಇತಿಹಾಸ, ವಿಜ್ಞಾನ ಮತ್ತು ಅದು ನಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ. ಇದೆಲ್ಲದಕ್ಕೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಲೇಖನದಲ್ಲಿದೆ.

ಟೈಮ್‌ ಝೋನ್‌ ಇತಿಹಾಸ

ಟೈಮ್‌ ಝೋನ್‌ ಈ ಪರಿಕಲ್ಪನೆಯನ್ನು ಕೆನಡಾದ ರೈಲ್ವೆ ಎಂಜಿನಿಯರ್‌ ಆದ ಸರ್‌ ಸ್ಯಾಂಡ್‌ಫೋರ್ಡ್‌ ಫ್ಲೆಮಿಂಗ್‌ ಮೊದಲ ಬಾರಿಗೆ 1879ರಲ್ಲಿ ಪ್ರಸ್ತಾಪಿಸಿದರು. ಅವರು ಭೂಮಿಯನ್ನು 24 ಸಮಾನ ಝೋನ್‌ (ವಲಯ)ಗಳಾಗಿ ವಿಂಗಡಿಸಲು ಸಲಹೆ ನೀಡಿದರು. ಎಲ್ಲಾ ಝೋನ್‌ಗಳನ್ನು ಸಮಾನ ಗಂಟೆಯ ಅಂತರದಲ್ಲಿ ವಿಭಜಿಸಬೇಕು ಎಂದು ಹೇಳಿದರು. ಅಂದರೆ ಪ್ರತಿ ಝೋನ್‌ ಅದರ ಪಕ್ಕದ ಝೋನ್‌ನೊಂದಿಗೆ ಒಂದು ಗಂಟೆಯ ಅಂತರದಲ್ಲಿರಬೇಕು ಎಂಬ ಕೋರ್ಡಿನೇಟೆಡ್‌ ಯುನಿವರ್ಸಲ್‌ ಟೈಮ್‌ (UTC) ಎಂಬ ಯುನಿವರ್ಸಲ್‌ ಸಮಯವನ್ನು ಪ್ರಸ್ತಾಪಿಸಿದರು. ಅದು ಭೂಮಿಯ ಮೇಲಿನ ಎಲ್ಲಾ ಸ್ಥಳಗಳಿಗೂ ಒಂದೇ ಆಗಿರುತ್ತದೆ.

ಹಾಗಾದರೆ ಟೈಮ್‌ ಝೋನ್‌ ಯಾವಾಗಲೂ ನಿಖರವಾಗಿ ಒಂದು ಗಂಟೆಯ ಅಂತರದಲ್ಲಿಯೇ ಇರುತ್ತದೆಯಾ? ಅಥವಾ ಅದು ಯಾವಾಗಲೂ ರೇಖಾಂಶದ ರೇಖೆಗಳನ್ನೇ ಅನುಸರಿಸುತ್ತದೆಯಾ? ಇಲ್ಲ, ಟೈಮ್‌ ಝೋನ್‌ಗಳು ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಭಾರತ ಮತ್ತು ಚೀನಾದಂತಹ ಕೆಲವು ದೇಶಗಳು ಹಲವಾರು ಡಿಗ್ರಿ ರೇಖಾಂಶಗಳವರೆಗೆ ವ್ಯಾಪಿಸಿದ್ದರೂ ಸಹ ತಮ್ಮ ಭೂಪ್ರದೇಶಕ್ಕೆ ಒಂದೇ ಟೈಮ್‌ ಝೋನ್‌ ಅನ್ನು ಬಳಸುತ್ತವೆ. ರಷ್ಯಾ ಮತ್ತು ಯುನೈಟೆಡ್‌ ಸ್ಟೇಟ್ಸ್‌ನಂತಹ ದೊಡ್ಡ ಗಾತ್ರದ ಮತ್ತು ವೈವಿಧ್ಯಮಯ ಭೂಪ್ರದೇಶಗಳಿರುವ ದೇಶಗಳು ಸಮಯವನ್ನು ಸರಿಹೊಂದಿಸಿಕೊಳ್ಳಲು ಅವು ಒಂದಕ್ಕಿಂತ ಹೆಚ್ಚು ಟೈಮ್‌ ಝೋನ್‌ಗಳನ್ನು ಬಳಸುತ್ತವೆ. ಕೆಲವು ದೇಶಗಳಲ್ಲಿ ಸಮಯವನ್ನು ಸರಿದೂಗಿಸಿಕೊಳ್ಳಲು 30 ಅಥವಾ 45 ನಿಮಿಷಗಳನ್ನು ಬಳಸಿಕೊಳ್ಳುತ್ತವೆ. ನ್ಯೂಫಾಂಡ್‌ಲ್ಯಾಂಡ್‌ ಮತ್ತು ನೇಪಾಳ ಈ ನಿಯಮ ಪಾಲಿಸುತ್ತದೆ.

ಪ್ರಪಂಚದ ಕೆಲವು ದೇಶಗಳು ಹಗಲಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಡೈಲೈಟ್‌ ಸೇವಿಂಗ್‌ ಟೈಮ್‌ (DST) ಎಂಬ ನಿಯಮವನ್ನು ಪಾಲಿಸುತ್ತವೆ. ಅದೇನೆಂದರೆ ಬೇಸಿಗೆಯ ತಿಂಗಳುಗಳಲ್ಲಿ ಹಗಲಿನ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಗಡಿಯಾರದ ಸಮಯವನ್ನು ಒಂದು ಗಂಟೆಯಷ್ಟು ಹೆಚ್ಚಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಇದನ್ನು ಎಲ್ಲಾ ಕಡೆ ಅಳವಡಿಸಿಕೊಳ್ಳಲಾಗಿಲ್ಲ. ಈ ಸಮಯವನ್ನು ಹೊಂದಿಸಿಕೊಳ್ಳಲು ವಿವಿಧ ದೇಶಗಳು ವಿವಿಧ ದಿನವನ್ನು ಆಯ್ದುಕೊಂಡಿವೆ. ಅದು ಡಿಎಸ್‌ಟಿಯನ್ನು ಪ್ರಾರಂಭಿಸುವ ಮತ್ತು ಕೊನೆಗೊಳಿಸುವ ದಿನಗಳನ್ನು ಆ ದೇಶಗಳೇ ನಿರ್ಧರಿಸಿಕೊಂಡಿವೆ. ಅದು ಟೈಮ್‌ ಝೋನ್‌ನ ಸಂಕೀರ್ಣ ವ್ಯವಸ್ಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳುತ್ತದೆ.

ಜಗತ್ತಿನಾದ್ಯಂತ ಟೈಮ್‌ ಝೋನ್‌ ಅನ್ನು ಅಳವಡಿಸಿಕೊಳ್ಳುವ ಮೊದಲು ಬಹಳಷ್ಟು ದೇಶಗಳು ಸ್ಥಳೀಯ ಸೌರ ಸಮಯವನ್ನು ಪಾಲಿಸುತ್ತಿದ್ದವು. ಇದು ಆಕಾಶದಲ್ಲಿ ಸೂರ್ಯನ ಸ್ಥಾನವನ್ನು ಆಧರಿಸಿದ ಸಮಯವಾಗಿತ್ತು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಲವಾರು ನಿಮಿಷ ಅಥವಾ ಗಂಟೆ ಬದಲಾಗುತ್ತಿತ್ತು. ಇದು ಪ್ರಯಾಣಿಕರಿಗೆ ಗೊಂದಲ ಸೃಷ್ಟಿಸುತ್ತಿತ್ತು. ಜೊತೆಗೆ ಕೆಲವು ತೊಂದರೆಗಳು ಉಂಟಾಗುತ್ತಿತ್ತು. ಅದು ಹೆಚ್ಚಿನದಾಗಿ ರೈಲ್ವೆ ಮತ್ತು ಟೆಲಿಗ್ರಾಫ್‌ ಬಳಕೆದಾರರಿಗೆ ಸಮಯದ ಪಾಲನೆ ಮಾಡುವಲ್ಲಿ ಅನಾನುಕೂಲ ಸಂದರ್ಭ ಎದುರಾಗುತ್ತಿತ್ತು. ಏಕೆಂದರೆ ಅವರಿಗೆ ನಿಖರವಾದ ಸಮಯ ಪಾಲನೆಯ ಅವಶ್ಯಕತೆ ಇರುತ್ತದೆ.

ಟೈಮ್‌ ಝೋನ್‌ ಅಳವಡಿಸಿಕೊಂಡ ಮೊದಲ ದೇಶಗಳೆಂದರೆ ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಅದರ ವಸಹಾತುಶಾಹಿ ದೇಶಗಳು. ಅವು 1880ರಲ್ಲಿಯೇ ಗ್ರೀನ್‌ವಿಚ್‌ ಮೀನ್‌ ಟೈಮ್‌ (GMT) ಯನ್ನು ಅಳವಡಿಸಿಕೊಂಡವು. ಜಿಎಮ್‌ಟಿ ಎಂಬುದು ಲಂಡನ್‌ನ ಗ್ರೀನ್‌ವಿಚ್‌ನಲ್ಲಿರುವ ರಾಯಲ್‌ ಆಬ್ಸರ್ವೇಟರಿಯಲ್ಲಿನ ಸಮಯವಾಗಿದೆ. ಇದು ಪ್ರೈಮ್‌ ಮೆರಿಡಿಯನ್‌ ಅಥವಾ ಝೀರೋ ಡಿಗ್ರಿ ರೇಖಾಂಶ ರೇಖೆಯ ಮೇಲಿದೆ. ನಂತರ ಅತಿ ಕಡಿಮೆ ಸಮಯದಲ್ಲಿ ಇತರ ದೇಶಗಳು ಇದನ್ನು ಅಳವಡಿಸಿಕೊಂಡವು. 1929 ರ ಹೊತ್ತಿಗೆ ಪ್ರಪಂಚದ ಬಹಳಷ್ಟು ದೇಶಗಳು ಇದನ್ನು ಅಳವಡಿಸಿಕೊಂಡವು.

ಟೈಮ್‌ ಝೋನ್‌ ಗುರುತಿಸುವುದು

ಪ್ರಸ್ತುತ ಪ್ರಪಂಚದಲ್ಲಿ ಸಮಯವನ್ನು ಗುರುತಿಸುವ ಟೈಮ್‌ ಝೋನ್‌ ನಕ್ಷೆಯು 39 ಟೈಮ್‌ ಝೋನ್‌ಗಳನ್ನು ಹೊಂದಿದೆ. ಅದರಲ್ಲಿ UTC -12 ರಿಂದ UTC +14 ರವರೆಗಿದೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಇಷ್ಟು ವ್ಯತ್ಯಾಸ ಕಾಣಬಹುದಾಗಿದೆ. ಅವುಗಳೆಂದರೆ ಬೇಕರ್‌ ಐಲ್ಯಾಂಡ್‌ನ ಸಮಯವು UTC-12 ಮತ್ತು ಲೈನ್‌ ಐಲ್ಯಾಂಡ್‌ನ ಸಮಯವು UTC +14 ಆಗಿದೆ. ಅತಿ ಹೆಚ್ಚು ಜನರು ಬಳಸುವ ಟೈಮ್‌ ಝೋನ್‌ ಅಂದರೆ ಅದು ಚೀನಾದ ಸ್ಟಾಂಡರ್ಡ್‌ ಟೈಮ್‌ (UTC+8). ಇದನ್ನು ಸುಮಾರು 1.4 ಶತಕೋಟಿ ಜನರು ಬಳಸುತ್ತಾರೆ.

ಪ್ರಪಂಚದಾದ್ಯಂತ ಒಂದೇ ರೀತಿಯ ಸಮಯವನ್ನು ಪಾಲಿಸಲು ಟೈಮ್‌ ಝೋನ್‌ಗಳು ಬಹಳ ಉಪಯುಕ್ತವಾಗಿದೆ. ಇದರಿಂದ ಎಷ್ಟು ಅನುಕೂಲವಿದೆಯೇ ಅದೇ ರೀತಿ ಕೆಲವು ಅನಾನುಕೂಲಗಳು ಇವೆ. ಅದರಲ್ಲಿ ಜೆಟ್‌ ಲಾಗ್‌ ಪ್ರಮುಖವಾಗಿದೆ. ಅಂದರೆ ವಿಮಾನದಲ್ಲಿ ಪ್ರಯಾಣಿಸಿದ ನಂತರ ಸಮಯ ವ್ಯತ್ಯಾಸದಿಂದಾಗಿ ಆಯಾಸದ ಭಾವನೆಯುಂಟಾಗಬಹುದು. ಇದು ಸಂವಹನ ಮತ್ತು ವ್ಯವಹಾರಕ್ಕೂ ತೊಂದರೆಗಳನ್ನುಂಟು ಮಾಡಬಹುದು. ಟೈಮ್‌ ಝೋನ್‌ಗಳು ಸ್ಥಿರವಾಗಿರುವುದಿಲ್ಲ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ಇದು ಮಾನವನೇ ಕಂಡುಕೊಂಡು ಅದನ್ನು ಅಳವಡಿಸಿಕೊಂಡದ್ದಾಗಿದೆ. ಜಾಗತಿಕ ಸಂಸ್ಕೃತಿ ಮತ್ತು ಅವಶ್ಯಕತೆಗಳನ್ನು ಇದು ಪ್ರತಿಬಿಂಬಿಸುತ್ತದೆ. ಪ್ರಪಂಚದ ಟೈಮ್‌ ಝೋನ್‌ನಲ್ಲಿ ವೈವಿಧ್ಯತೆಯಿದ್ದರೂ ಪರಸ್ಪರ ಸಮಯ ಪಾಲಿಸಲು ಅದು ಸಹಾಯ ಮಾಡುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)